More

    ವರ್ತೂರು ಕಾಂಗ್ರೆಸ್ ಸೇರುವ ಆಸೆ ಬಿಡಲಿ, ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸಲಹೆ 

    ಕೋಲಾರ: ಮಾಜಿ ಶಾಸಕ ವರ್ತೂರು ಪ್ರಕಾಶ್ ಕಾಂಗ್ರೆಸ್ ಸೇರುವ ಆಸೆ ಬಿಟ್ಟು ಅವರೇ ಸ್ಥಾಪಿಸಿರುವ ನಮ್ಮ ಕಾಂಗ್ರೆಸ್‌ನಿಂದ ಕೋಲಾರ ಇಲ್ಲವೇ ಉತ್ತರ ಕರ್ನಾಟಕದಿಂದ ಸ್ಪರ್ಧಿಸಲಿ ಎಂದು ಮಾಜಿ ಸಂಸದ ಕೆ.ಎಚ್.ಮುನಿಯಪ್ಪ ಸಲಹೆ ನೀಡಿದರು.

    ವರ್ತೂರು ಕಾಂಗ್ರೆಸ್ ಸೇರಲು ತುದಿಗಾಲಿನಲ್ಲಿ ನಿಂತಿದ್ದಾರೆ. ಆದರೆ ಹೈಕಮಾಂಡ್ ಸಮ್ಮತಿಸುವುದಿಲ್ಲ, ಉತ್ತರ ಕರ್ನಾಟಕದಲ್ಲಿ ನಾನು ಸ್ಟ್ರಾಂಗ್ ಎಂದು ಹೇಳಿಕೊಳ್ಳುವ ಅವರು ಅಲ್ಲಿಗೇ ಹೋಗಿ ಸ್ಪರ್ಧಿಸಲಿ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಟಾಂಗ್ ನೀಡಿದರು.

    ಗ್ರಾಪಂ ಚುನಾವಣೆಗೆ ಮುಂಚೆಯೇ ಕಾಂಗ್ರೆಸ್ ಸೇರುವುದಾಗಿ ವರ್ತೂರು ಪ್ರಕಾಶ್ ಹೇಳಿಕೊಂಡಿದ್ದರು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ನಿರಾಕರಿಸಿ ಸ್ಪಷ್ಟನೆ ನೀಡಿದ್ದರೂ ಅನಗತ್ಯ ಗೊಂದಲ ಸೃಷ್ಟಿಸುತ್ತಿದ್ದಾರೆ. ಅವರಿಗೂ ಪಕ್ಷಕ್ಕೂ ಸಂಬಂಧವಿಲ್ಲ ಎಂದು ಸ್ಪಷ್ಟಪಡಿಸಿದರು.

    ಕೋಲಾರ ಕ್ಷೇತ್ರದಿಂದ ಸ್ಪರ್ಧಿಸಲು ಸ್ಥಳೀಯರಿಗೆ ಅವಕಾಶ ಕಲ್ಪಿಸಲು ರಾಜ್ಯ ನಾಯಕರು ನಿರ್ಧರಿಸಿದ್ದಾರೆ. ಸಂದರ್ಭಕ್ಕೆ ತಕ್ಕಂತೆ ಬೇರೆಯವರಿಗೆ ಟಿಕೆಟ್ ನೀಡಿದಲ್ಲಿ ಬೆಂಬಲಿಸುವುದಾಗಿ ಸೂಚ್ಯವಾಗಿ ನುಡಿದರು.

    ಗ್ರಾಪಂ ಚುನಾವಣೆ ಪಕ್ಷದ ಚಿಹ್ನೆಯ ಮೇಲೆ ನಡೆದಿಲ್ಲ, ಗೆದ್ದವರು ನಮ್ಮವರು ಎಂದು ಹೇಳುವ ಮೂಲಕ ವರ್ತೂರು ಕಾಂಗ್ರೆಸ್ ಕಾರ್ಯಕರ್ತರಲ್ಲಿ ಗೊಂದಲ ಮೂಡಿಸಲು ಯತ್ನಿಸುತ್ತಿದ್ದಾರೆ. ನಮ್ಮ ಸಹಾಯದಿಂದ ಗೆದ್ದಿರುವ ಸದಸ್ಯರು ಅಧಿಕಾರಕ್ಕಾಗಿ ಬೇರೆಡೆ ಹೋಗಿರಬಹುದು. ಆದರೆ ತಾಪಂ, ಜಿಪಂ ಚುನಾವಣೆ ವೇಳೆಗೆ ಪಕ್ಷಕ್ಕೆ ಮರಳುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

    ಕಾಂಗ್ರೆಸ್‌ನ ತತ್ವ-ಸಿದ್ಧಾಂತ ಒಪ್ಪಿ ಯಾರೇ ಬಂದರೂ ಸ್ವಾಗತಿಸುತ್ತೇವೆ. ಶಾಸಕ ಕೆ.ಶ್ರೀನಿವಾಸಗೌಡ ಕಾಂಗ್ರೆಸ್ ಸೇರುವುದಾಗಿ ಎಲ್ಲೂ ಹೇಳಿಲ್ಲ. ಪಕ್ಷಕ್ಕೆ ಬರಲು ಇಚ್ಛಿಸಿದಲ್ಲಿ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಗಳಿಗೆೆಗೊಂದು ಮಾತು ಆಡುತ್ತಿದ್ದಾನೆ. ಆತನನ್ನು ಪಕ್ಷಕ್ಕೆ ಸೇರಿಸಿಕೊಳ್ಳುವ ವಿಚಾರ ಚರ್ಚೆಗೆ ಬಂದಿಲ್ಲ ಎಂದರು.

    ಕಾಂಗ್ರೆಸ್ ಜಿಲ್ಲಾಧ್ಯಕ್ಷ ಕೆ.ಚಂದ್ರಾರೆಡ್ಡಿ ಮಾತನಾಡಿ, ಕೇಂದ್ರದ ಜನ ವಿರೋಧಿ ನೀತಿ ವಿರುದ್ಧ ಕೋಲಾರದಲ್ಲಿ ಬುಧವಾರ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದರು. ಜಿಲ್ಲೆಯಲ್ಲಿ ಪಕ್ಷ ಬಲಪಡಿಸುವ ಉದ್ದೇಶದಿಂದ ಬೂತ್‌ಮಟ್ಟದಲ್ಲಿ ಸಮಿತಿ ರಚಿಸಿ ಸಮಾವೇಶ ನಡೆಸುತ್ತೇವೆ, ಇದಕ್ಕೆ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಅವರನ್ನು ಆಹ್ವಾನಿಸಲು ಉದ್ದೇಶಿಸಿ ಅವರಿಬ್ಬರನ್ನು ಕರೆತರುವ ಜವಾಬ್ದಾರಿಯನ್ನು ಮುನಿಯಪ್ಪ ಅವರಿಗೆ ವಹಿಸಲಾಗಿದೆ ಎಂದರು.

    ಜಿಲ್ಲಾ ಕಾಂಗ್ರೆಸ್ ವಕ್ತಾರ ಎಲ್.ಎ.ಮಂಜುನಾಥ್, ಕಿಸಾನ್ ಖೇತ್ ಜಿಲ್ಲಾಧ್ಯಕ್ಷ ಊರುಬಾಗಿಲು ಶ್ರೀನಿವಾಸ್, ನಗರಸಭೆ ಸದಸ್ಯ ಬಿ.ಎಂ.ಮುಬಾರಕ್, ಕೋಲಾರ ಬ್ಲಾಕ್ ಅಧ್ಯಕ್ಷ ಎ.ಪ್ರಸಾದಬಾಬು, ಗ್ರಾಮಾಂತರ ಅಧ್ಯಕ್ಷ ಉದಯಶಂಕರ್, ಎಸ್ಸಿ ವಿಭಾಗದ ಜಿಲ್ಲಾಧ್ಯಕ್ಷ ಜಯದೇವ್, ಎಸ್‌ಟಿ ವಿಭಾಗದ ಅಧ್ಯಕ್ಷ ನಾಗರಾಜು, ಮುಖಂಡರಾದ ಇಕ್ಬಾಲ್ ಅಹಮದ್, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರತ್ಮಮ್ಮ ಉಪಸ್ಥಿತರಿದ್ದರು.

    ವರದಿ ಜಾರಿಯಾಗಲಿ: ಸಿಎಂ ಬಿ.ಎಸ್.ಯಡಿಯೂರಪ್ಪ ಅವರಿಗೆ ಬಸವಣ್ಣನವರ ಸಿದ್ಧಾಂತಗಳಲ್ಲಿ ನಂಬಿಕೆ, ವಿಶ್ವಾಸ ಇದ್ದರೆ ಮೊದಲು ಮೀಸಲಾತಿ ವರ್ಗೀಕರಣ ಮಾಡಲಿ. ಎರಡು ದಶಕಗಳಿಂದ ಮಾದಿಗ ಸಮುದಾಯ ಒಳಮೀಸಲಾತಿಗೆ ಹೋರಾಟ ಮಾಡುತ್ತಿದ್ದರೂ ಸರ್ಕಾರಕ್ಕೆ ಇವರ ಧ್ವನಿ ಕೇಳಿಸಿಲ್ಲ. ಯಡಿಯೂರಪ್ಪ ಅವರಲ್ಲಿ ಬಸವಣ್ಣನವರ ಚಿಂತನೆ ಮೈಗೂಡಿದ್ದರೆ, ಅವರ ಸಿದ್ಧಾಂತ, ನಂಬಿಕೆ ಬಗ್ಗೆ ವಿಶ್ವಾಸ ಇದ್ದರೆ ನ್ಯಾ. ಸದಾಶಿವ ಆಯೋಗದ ವರದಿಯನ್ವಯ ಮೀಸಲಾತಿ ವರ್ಗೀಕರಣ ಮಾಡಲಿ ಎಂದು ಮುನಿಯಪ್ಪ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts