More

    ಉತ್ತರಕಾಶಿ ಸುರಂಗಕ್ಕೆ ಮೊದಲ ರಕ್ಷಣಾ ಪೈಪ್ ಅಳವಡಿಕೆ: ಕೆಲವೇ ಕ್ಷಣಗಳಲ್ಲಿ 41 ಕಾರ್ಮಿಕರು ಹೊರಕ್ಕೆ

    ಡೆಹ್ರಾಡೂನ್​: ಉತ್ತರಾಖಂಡದ ಉತ್ತರಕಾಶಿ ಜಿಲ್ಲೆಯ ಸಿಲ್ಕ್ಯಾರಾ ಸುರಂಗದೊಳಗೆ ಸಿಲುಕಿ, ಕಳೆದ 12 ದಿನಗಳಿಂದ ಜೀವ ಕೈಯಲ್ಲಿ ಹಿಡಿದುಕೊಂಡು ರಕ್ಷಣೆಗಾಗಿ ಎದುರು ನೋಡುತ್ತಿರುವ ಕಾರ್ಮಿಕರು ಕೊನೆಗೂ ಸುರಂಗದ ಹೊರಗೆ ಬರುವ ಕ್ಷಣ ಬಂದಿದೆ. ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ ತಲುಪಿದ್ದು, ಮೊದಲ ರಕ್ಷಣಾ ಪೈಪ್​ ಅನ್ನು ಸುರಂಗದೊಳಗೆ ಅಳವಡಿಸಲಾಗಿದೆ.

    ಸುರಂಗದ ಒಳಗೆ ಕುಸಿದಿರುವ ಅವಶೇಷಗಳ ಮೂಲಕ ಸುಮಾರು 45 ಮೀಟರ್​ ಆಳದವರೆಗೆ ಪೈಪ್ ಅನ್ನು ಅಳವಡಿಸುವಲ್ಲಿ ರಕ್ಷಣಾ ತಂಡ ಯಶಸ್ವಿಯಾಗಿದ್ದು, ಕಾರ್ಮಿಕರು ಸುರಕ್ಷಿತವಾಗಿ ಹೊರ ಬರಲು ಪಾರು ಮಾರ್ಗವನ್ನು ಮಾಡಲಾಗಿದೆ. ಬುಧವಾರ ರಾತ್ರಿ ಡ್ರಿಲ್ಲಿಂಗ್​ ಸಮಯದಲ್ಲಿ ಕಬ್ಬಿಣದ ಸರಳುಗಳು ಉರುಳಿ ಮಾರ್ಗ ಬಂದ್​ ಆಗಿತ್ತು. ಇದರಿಂದ ರಕ್ಷಣಾ ಕಾರ್ಯಕ್ಕೆ ಅಡ್ಡಿಯಾಗಿತ್ತು. ನಿನ್ನೆ ಸಂಜೆ 6 ಗಂಟೆಯ ಬಳಿಕ ಅವಶೇಷಗಳನ್ನು ಅಡ್ಡಲಾಗಿ ಕೊರೆದು 44 ಮೀಟರ್‌ಗಳಷ್ಟು ಎಸ್ಕೇಪ್​ ಪೈಪ್ ಅಳವಡಿಸುವಾಗ ಪೈಪ್​ ಕುಸಿಯಿತು. ಅವಶೇಷಗಳ ಇನ್ನೊಂದು ಬದಿಯಲ್ಲಿ ಸಿಲುಕಿರುವ ಕಾರ್ಮಿಕರನ್ನು ತಲುಪಲು ರಕ್ಷಣಾ ತಂಡ ಒಟ್ಟು 57 ಮೀಟರ್‌ಗಳವರೆಗೆ ಕೊರೆಯಬೇಕಾಗಿದ್ದು, 12 ದಿನಗಳ ನಿರಂತರ ಕೊರೆಯುವಿಕೆಯ ಬಳಿಕ ಇನ್ನೂ ಕೆಲವೇ ಮೀಟರ್​ಗಳು ಬಾಕಿ ಇದೆ.

    ಉತ್ತರಾಖಂಡದ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಆಸ್ಪತ್ರೆಯನ್ನು ಸ್ಥಾಪಿಸಲಾಗಿದ್ದು, ಉತ್ತರಕಾಶಿ ಸುರಂಗದಿಂದ ಕಾರ್ಮಿಕರನ್ನು ರಕ್ಷಣೆ ಮಾಡಿದ ಬೆನ್ನಲ್ಲೇ ಅವರಿಗೆ ವೈದ್ಯಕೀಯ ಪರೀಕ್ಷೆ ಮತ್ತು ಚಿಕಿತ್ಸೆಯನ್ನು ನೀಡಲಾಗುತ್ತದೆ. ಪಾರು ಮಾರ್ಗವನ್ನು ಪೂರ್ಣಗೊಳಿಸಲು ತಲಾ ಆರು ಮೀಟರ್‌ಗಳ ಇನ್ನೂ ಎರಡು ಪೈಪ್‌ಗಳನ್ನು ಅವಶೇಷಗಳ ಮೂಲಕ ಅಳವಡಿಸಬೇಕಿದೆ ಎಂದು ಸಿಲ್ಕ್ಯಾರಾದಲ್ಲಿ ರಕ್ಷಣಾ ಕಾರ್ಯಾಚರಣೆಯಲ್ಲಿ ಸಹಾಯ ಹಸ್ತ ನೀಡುತ್ತಿರುವ ಜೋಜಿಲಾ ಸುರಂಗದ ಯೋಜನಾ ಮುಖ್ಯಸ್ಥರು ಮಾಧ್ಯಮಗಳಿಗೆ ತಿಳಿಸಿದರು.

    ರಕ್ಷಣಾ ಕಾರ್ಯಾಚರಣೆಯ ನಡುವೆ ಉತ್ತರಾಖಂಡ ಸಿಎಂ ಪುಷ್ಕರ್​ ಸಿಂಗ್​ ಧಾಮಿ ಅವರು ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರ ಜತೆ ಮಾತನಾಡಿ ಧೈರ್ಯ ತುಂಬಿದ್ದಾರೆ. 41 ಕಾರ್ಮಿಕರಲ್ಲಿ ಇಬ್ಬರ ಜೊತೆ ಮಾಡಿದ್ದೇನೆ. ಅವರ ಆರೋಗ್ಯವನ್ನು ವಿಚಾರಿಸಿದ್ದೇನೆ ಮತ್ತು ಧೈರ್ಯ ತುಂಬಿದ್ದೇನೆ ಎಂದು ತಿಳಿಸಿದರು. ಅಲ್ಲದೆ, ಕಾರ್ಮಿಕರ ಬಗ್ಗೆ ಪ್ರಧಾನಿ ಮೋದಿ ಅವರಿಗೂ ನಿರಂತರವಾಗಿ ಮಾಹಿತಿ ನೀಡುತ್ತಿದ್ದೇವೆ ಎಂದು ತಿಳಿಸಿದರು.

    ಸುರಂಗ ಮಾರ್ಗದ ಉದ್ದೇಶವೇನು?
    ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ ಉತ್ತರಕಾಶಿ ಮತ್ತು ಯಮುನೋತ್ರಿಯನ್ನು ಸಂಪರ್ಕಿಸಲು ಉದ್ದೇಶಿಸಿರುವ ರಸ್ತೆಯಲ್ಲಿದೆ. ಇದರ ಕಾಮಗಾರಿ ಭರದಿಂದ ಸಾಗಿತ್ತು. ಆದರೆ, ಮಣ್ಣು ಕುಸಿತದಿಂದಾಗಿ ನ.12 ರಂದು 41 ಕಾರ್ಮಿಕರು ಸುರಂಗದಲ್ಲಿ ಸಿಲುಕಿಕೊಂಡಿದ್ದಾರೆ.

    ಒಂದೆಡೆ ರಕ್ಷಣಾ ಕಾರ್ಯ ಮುಂದುವರಿದಿದ್ದರೆ, ಇನ್ನೊಂದೆಡೆ ಬೇಯಿಸಿದ ಆಹಾರ ಮತ್ತು ಔಷಧಿಗಳನ್ನು 6 ಮತ್ತು 4 ಇಂಚಿನ ಪೈಪ್​ಲೈನ್​ ಮೂಲಕ ಸರಬರಾಜು ಮಾಡಲಾಗುತ್ತಿದೆ. ಕಳೆದ ರಾತ್ರಿ ವೆಜ್ ಪಲಾವ್, ಮಟರ್-ಪನೀರ್ ಮತ್ತು ಬೆಣ್ಣೆಯೊಂದಿಗೆ ಚಪಾತಿಗಳನ್ನು ಒಳಗೊಂಡಿರುವ ಬಿಸಿ ಊಟವನ್ನು ನೀಡಲಾಗಿದೆ. ಸುಲಭವಾಗಿ ಜೀರ್ಣಕ್ರಿಯೆ ಖಚಿತಪಡಿಸಿಕೊಳ್ಳಲು ವೈದ್ಯಕೀಯ ಮೇಲ್ವಿಚಾರಣೆಯಲ್ಲಿ ಈ ಊಟವನ್ನು ತಯಾರಿಸಲಾಗುತ್ತದೆ. 6-ಇಂಚಿನ ಅಗಲದ ಪೈಪ್‌ಲೈನ್ ಮೂಲಕ ಆಹಾರವನ್ನು ವಿತರಿಸಲಾಗಿದೆ. ಈ ಪೈಪ್​ಲೈನ್​ ಮೂಲಕವೇ ಹಣ್ಣುಗಳನ್ನು ಕಳುಹಿಸಲು ಮತ್ತು ಕಾರ್ಮಿಕರೊಂದಿಗೆ ಸಂವಹನ ನಡೆಸಲಾಗುತ್ತಿದೆ. ಕಾರ್ಮಿಕರು ಸಿಲುಕಿರುವ ಸುರಂಗದೊಳಗೆ ಸಾಕಷ್ಟು ನೀರು, ಆಮ್ಲಜನಕ, ವಿದ್ಯುತ್ ಮತ್ತು ಬೆಳಕು ಇದೆ ಎಂದು ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರ (ಎನ್‌ಡಿಎಂಎ) ಖಚಿತಪಡಿಸಿದೆ. (ಏಜೆನ್ಸೀಸ್​)

    ಜಾತಿಗಣತಿ ವರದಿ ಸಲ್ಲಿಕೆಯಾಗುವವರೆಗೂ ಊಹೆಗಳ ಮೇಲೆ ಮಾತನಾಡುವುದು ಅರ್ಥಹೀನ : ಸಿದ್ದರಾಮಯ್ಯ

    ಊರು ಬಿಟ್ಟು ಬೆಂಗಳೂರು ಕಂಬಳಕ್ಕೆ ಬರುವ ಕೋಣಗಳಿಗೆ ಮಂಗಳೂರಿಂದಲೇ ಬರುತ್ತೆ ಕುಡಿಯುವ ನೀರು;ಯಾಕೆ ಗೊತ್ತಾ?

    ವೆಜ್‌ ಪಲಾವ್‌, ಮಟರ್ ಪನೀರ್, ಬೆಣ್ಣೆ ಚಪಾತಿ… ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರಿಗೆ ಕಳುಹಿಸಲಾದ ಆರೋಗ್ಯಕಾರಿ ಆಹಾರಗಳಿವು!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts