More

    ಜಿಲ್ಲಾಧಿಕಾರಿ ನಡೆ ಹೆದ್ದಾರಿ ಕಡೆ

    ಕಾರವಾರ:
    ಕೆಲ ತಿಂಗಳ ಹಿಂದೆ ಅಧಿಕಾರಿಗಳೆಲ್ಲ ಸೇರಿ ಗ್ರಾಮವೊಂದಕ್ಕೆ ತೆರಳಿ ಅಲ್ಲಿನ ಜನರ ಸಮಸ್ಯೆ ಆಲಿಸಿ ಪರಿಹಾರ ಕಲ್ಪಿಸುವ `ಜಿಲ್ಲಾಧಿಕಾರಿ ನಡೆ ಹಳ್ಳಿಯ ಕಡೆ ಕಾರ್ಯಕ್ರಮ ಜಾರಿಯಲ್ಲಿತ್ತು. ಈಗ ಉತ್ತರ ಕನ್ನಡ ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಅವರು, ವಿವಿಧ ಇಲಾಖೆ ಅಧಿಕಾರಿಗಳೊಡನೆ ಹೆದ್ದಾರಿ ಪ್ರಯಾಣ ನಡೆಸಿದರು.
    ರಾಷ್ಟ್ರೀಯ ಹೆದ್ದಾರಿ-66 ವಿಸ್ತರಣೆಯಿಂದ ಪ್ರಯಾಣಿಕರಿಗೆ ಹಾಗೂ ಹೆದ್ದಾರಿ ಪಕ್ಕದ ನಿವಾಸಿಗಳಿಗೆ ಉಂಟಾಗುತ್ತಿರುವ ತೊಂದರೆಗಳ ಬಗ್ಗೆ ಅಧ್ಯಯನ ನೆಡೆಸುವ ಸಲುವಾಗಿ ಕಾರವಾರದ ಗೋವಾ ಗಡಿಯಿಂದ ಭಟ್ಕಳದ ಗೊರಟೆಯವರೆಗೆ ಶನಿವಾರ ಬಸ್ ಒಂದರಲ್ಲಿ ಅವರು ಪ್ರಯಾಣ ಬೆಳೆಸಿದರು.

    ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಹರಿಕೃಷ್ಣ, ಲೋಕೋಪಯೋಗಿ ಇಲಾಖೆಯ ಇಇ ದುರ್ಗಾದಾಸ್, ಎಆರ್‌ಟಿಒ ರವಿ, ಡಿವೈಎಸ್‌ಪಿ ವ್ಯಾಲೆಂಟೇನ್ ಡಿಸೋಜಾ, ಹೆಸ್ಕಾಂ, ಗಣಿ ಮತ್ತು ಭೂ ವಿಜ್ಞಾನ, ನಗರ ನೀರು ಸರಬರಾಜು ಮಂಡಳಿ, ಸಂಬಂಧಪಟ್ಟ ತಹಸೀಲ್ದಾರ್‌ಗಳು, ತಾಪಂ ಇಒಗಳು, ಐಆರ್‌ಬಿ ಅಧಿಕಾರಿಗಳು ಜಿಲ್ಲಾಧಿಕಾರಿಗಳ ಜತೆ ಬಸ್‌ನಲ್ಲಿದ್ದರು.

    ಕುಮಟಾ, ಮಾದನಗೇರಿ, ಭಟ್ಕಳ ಸೇರಿ ವಿವಿಧೆಡೆ ಸಾರ್ವಜನಿಕರ ಅಹವಾಲು ಆಲಿಸಿದರು. ಗುಡ್ಡ ಕುಸಿತದ ಸ್ಥಳಗಳು, ನೀರು ತುಂಬುವುದು, ಬಸ್ ನಿಲ್ದಾಣಗಳ ನಿರ್ವಹಣೆ ಹೀಗೆ ವಿವಿಧ ಸಮಸ್ಯೆಗಳ ಬಗ್ಗೆ ಅವರು ಪರಿಶೀಲಿಸಿದರು.
    ಸರ್ಕಾರಕ್ಕೆ ವರದಿ:
    ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಮಾಧ್ಯಮಗಳ ಜತೆ ಮಾತನಾಡಿ, 2013 ರಲ್ಲಿ ರಾಷ್ಟ್ರೀಯ ಹೆದ್ದಾರಿ 66 ರ ವಿಸ್ತರಣೆ ಕಾಮಗಾರಿ ಆರಂಭಿಸಿದ ಐಆರ್‌ಬಿ 10 ವರ್ಷವಾದರೂ ಕಾಮಗಾರಿ ಮುಗಿಸಿಲ್ಲ.

    ಇದನ್ನೂ ಓದಿ:ಎನ್‌ಎಚ್‌-66 ಪಕ್ಕದ ನಿವಾಸಿಗಳಿಗೊಂದು ಮಾಹಿತಿ

    ಒಟ್ಟು 187 ಕಿಮೀ ಉದ್ದದ ಹೆದ್ದಾರಿ ವಿಸ್ತರಣೆ ಇದಾಗಿದ್ದು, ಇದುವರೆಗೆ 170 ಕಿಮೀ ಕಾಮಗಾರಿ ಮುಗಿದಿದೆ. 7.89 ಕಿಮೀ ಜಮೀನಿನ ನೇರ ಖರೀದಿ ಪ್ರಕ್ರಿಯೆ ನಡೆದಿದೆ. ಇನ್ನು 2.5 ಕಿಮೀ ವಿವಿಧೆಡೆ ಕಾಮಗಾರಿಯಾಗಬೇಕಿದೆ.
    ಈ ಹೆದ್ದಾರಿ ವಿಸ್ತರಣೆಯಲ್ಲಿ ವಿವಿಧೆಡೆ ಮಾರ್ಗಸೂಚಿ ಫಲಕ ಹಾಕಿಲ್ಲ. ಗುಡ್ಡ ಕುಸಿಯುವ ಕಾರಣ ನೀಡಿ, ಕೆಲವೆಡೆ ರಸ್ತೆ ಆಗಿದ್ದರೂ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಗಿದೆ.

    ಬಸ್ ನಿಲ್ದಾಣ ನಿರ್ಮಾಣ ಮಾಡಿಲ್ಲ. ನಗರ ನೀರು ಸರಬರಾಜು ಮಂಡಳಿಯ ಪೈಪ್‌ಗಳನ್ನು ಒಡೆದು ಹಾಕಿದ್ದು, ಮರು ನಿರ್ಮಾಣ ಮಾಡಿಲ್ಲ. ಇಂಥ ಹಲವು ಆರೋಪಗಳು ಗುತ್ತಿಗೆ ಕಂಪನಿಯ ಬಗ್ಗೆ ಇದ್ದು, ಬಗ್ಗೆ ನಮ್ಮ ರಾಜ್ಯ ಸರ್ಕಾರದ ವಿವಿಧ ಇಲಾಖೆ ಅಧಿಕಾರಿಗಳು ಪರಿಶೀಲಿಸಿ ಅಧಿಕೃತ ವರದಿ ನೀಡುವರು. ಅದನ್ನು ಸಿದ್ಧ ಮಾಡಿ ರಾಜ್ಯ ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು ಎಂದು ತಿಳಿಸಿದರು.

    ಸುರಂಗ ಪರಿಶೀಲನೆಗೆ ತಜ್ಞರ ತಂಡ

    ನೀರು ಸೋರಿಕೆ ಇರುವುದರಿಂದ ಸುರಕ್ಷತೆಯ ಕಾರಣ ನೀಡಿ ಕಾರವಾರ-ಬಿಣಗಾ ನಡುವೆ ಸುರಂಗದಲ್ಲಿ ವಾಹನ ಸಂಚಾರಕ್ಕೆ ತಡೆ ನೀಡಲಾಗಿದೆ. ಶೀಘ್ರದಲ್ಲಿ ಎನ್‌ಎಚ್‌ಎಐ ತಜ್ಞರ ತಂಡ ಆಗಮಿಸಿ ಪರಿಶೀಲನೆ ಡನೆಸಲಿದೆ ಎಂದು ಎನ್‌ಎಚ್‌ಎಐ ಯೋಜನಾ ನಿರ್ದೇಶಕ ಹರಿಕೃಷ್ಣ ತಿಳಿಸಿದರು. ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಅವರು ಪ್ರಯಾಣಿಕರ ಸುರಕ್ಷತೆ ಎನ್‌ಎಚ್‌ಎಐ ಆದ್ಯತೆ ನೀಡಲಿದೆ. ಹೆದ್ದಾರಿಯಲ್ಲಿ ಸಮಸ್ಯೆ ಉಂಟಾಗುತ್ತಿರುವ ಬಗ್ಗೆ ರಾಜ್ಯ ಸರ್ಕಾರದ ಅಽಕಾರಿಗಳ ಜತೆ ಪರಿಶೀಲನೆ ನಡೆಸಿದ್ದು, ಅವುಗಳನ್ನು ಪರಿಶೀಲಿಸಿ ಕ್ರಮ ವಹಿಸಲಾಗುವುದು ಎಂದು ತಿಳಿಸಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts