More

    ಇನ್ನೂ 1 ತಿಂಗಳು ಕಾಲುವೆಗೆ ನೀರು ಹರಿಸಲು ಆಗ್ರಹ; ರೈತ ಸಂಘದ ಕಾರ್ಯಕರ್ತರಿಂದ ಪ್ರತಿಭಟನೆ

    ರಾಣೆಬೆನ್ನೂರ: ತಾಲೂಕಿನಲ್ಲಿರುವ ತುಂಗಾ ಮೇಲ್ದಂಡೆ ಯೋಜನೆ (ಯುಟಿಪಿ) ಕಾಲುವೆಗಳಿಗೆ ಇನ್ನೂ ಒಂದು ತಿಂಗಳ ಕಾಲ ಭದ್ರಾ ಜಲಾಶಯದಿಂದ ನೀರು ಹರಿಸಬೇಕು ಎಂದು ಒತ್ತಾಯಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ತಾಲೂಕು ಘಟಕದ ಕಾರ್ಯಕರ್ತರು ನಗರದ ಮಾಗೋಡ ರಸ್ತೆಯ ಯುಟಿಪಿ ಕಚೇರಿ ಎದುರು ಸೋಮವಾರ ಪ್ರತಿಭಟನೆ ನಡೆಸಿದರು.
    ನೇತೃತ್ವ ವಹಿಸಿದ್ದ ರೈತ ಸಂಘದ ತಾಲೂಕು ಅಧ್ಯಕ್ಷ ಹನುಮಂತಪ್ಪ ಕಬ್ಬಾರ ಮಾತನಾಡಿ, ತಾಲೂಕಿನಲ್ಲಿ ಬರಗಾಲ ಎದುರಾದ ಕಾರಣ ಈಗಾಗಲೇ ಕೆರೆಕಟ್ಟೆಗಳು ನೀರಿಲ್ಲದೆ ಬತ್ತುತ್ತಿವೆ. ಸದ್ಯ ತಾಲೂಕಿನಲ್ಲಿರುವ ಯುಟಿಪಿ ಕಾಲುವೆಯಲ್ಲಿ ನೀರು ಹರಿಯುತ್ತಿರುವ ಕಾರಣ ರೈತರು ಅಲ್ಪಸ್ವಲ್ಪ ಬೆಳೆಗಳನ್ನು ಆ ನೀರಿನಿಂದ ಉಳಿಸಿಕೊಂಡಿದ್ದಾರೆ.
    ಅಲ್ಲದೆ ತಾಲೂಕಿನ ಪ್ರಾಣಿ, ಪಕ್ಷಿ ಹಾಗೂ ಜಾನುವಾರುಗಳಿಗೆ ಯುಟಿಪಿ ಕಾಲುವೆ ನೀರು ಬಹಳ ಅನುಕೂಲವಾಗಿದೆ. ಆದರೆ, ಅಧಿಕಾರಿಗಳು ಇನ್ನೂ ಎರಡು ದಿನದಲ್ಲಿ ಭದ್ರಾ ಜಲಾಶಯದಿಂದ ಯುಟಿಪಿ ಕಾಲುವೆ ನೀರು ಹರಿಸುವುದನ್ನು ಸ್ಥಗಿತಗೊಳಿಸಲಿದ್ದಾರೆ ಎಂಬ ಮಾಹಿತಿ ನೀಡಿದ್ದಾರೆ.
    ಈ ಸಮಯದಲ್ಲಿ ಕಾಲುವೆಗೆ ನೀರು ಹರಿಸುವುದನ್ನು ನಿಲ್ಲಿಸಿದರೆ ಜಾನುವಾರುಗಳಿಗೆ ಹಾಗೂ ರೈತರಿಗೆ ತೀವ್ರ ಸಂಕಷ್ಟದ ಪರಿಸ್ಥಿತಿ ಎದುರಾಗಲಿದೆ. ಆದ್ದರಿಂದ ಇನ್ನೂ ಒಂದು ತಿಂಗಳ ಕಾಲವಾದರೂ ನೀರು ಹರಿಸಬೇಕು. ಈ ಬಗ್ಗೆ ಸ್ಥಳೀಯ ಅಧಿಕಾರಿಗಳು ಭದ್ರಾ ಜಲಾಶಯದ ಅಧಿಕಾರಿಗಳಿಗೆ ಮನವರಿಕೆ ಮಾಡಿಕೊಡಬೇಕು. ಇಲ್ಲವಾದರೆ ಮುಂದಿನ ದಿನದಲ್ಲಿ ತೀವ್ರತರನಾದ ಹೋರಾಟ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು. ಯುಟಿಪಿ ಎಇ ಬಸವರಾಜ ಅವರಿಗೆ ಮನವಿ ಸಲ್ಲಿಸಿದರು.
    ಪ್ರಮುಖರಾದ ಪರಮೇಶಪ್ಪ ಹಲಗೇರಿ, ಮಹದೇವಪ್ಪ ಮಾಳಮ್ಮನವರ, ಚಂದ್ರಶೇಖರ ಪಾಟೀಲ, ಮಹದೇವಪ್ಪ ಬಣಕಾರ, ಹನುಮಂತಪ್ಪ ಪರಸಣ್ಣನವರ, ಕೆ.ಆರ್. ಉಮೇಶ, ಸಿದ್ದಪ್ಪ ಚಳಗೇರಿ, ನಿಂಗಪ್ಪ ಪರಸಣ್ಣನವರ, ಮಂಜಪ್ಪ ಬಿದರಿ, ದೇವರಾಜ ಹಿರೇಕೆರೂರ, ವಿಶ್ವನಾಥ ರಡ್ಡೇರ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts