More

    ಟ್ರಂಪ್​ಗೆ ಬೀಸ್ಟ್ ಭದ್ರತೆ

    ನವದೆಹಲಿ: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತ ಭೇಟಿ ವೇಳೆ ತಮ್ಮ ಅಧಿಕೃತ ಕಾರು ‘ದಿ ಬೀಸ್ಟ್’ ಬಳಕೆ ಮಾಡಲಿದ್ದಾರೆ. ‘ಬೀಸ್ಟ್’ ಕಾರು ಫೆ. 24ರಂದು ಗುಜರಾತ್​ನ ಅಹಮದಾಬಾದ್​ಗೆ ಬರಲಿದೆ. ವಿಮಾನ ನಿಲ್ದಾಣದಿಂದ ಮೊಟೆರಾ ಕ್ರೀಡಾಂಗಣಕ್ಕೆ ಟ್ರಂಪ್ ಇದೇ ಕಾರಿನಲ್ಲಿ ಆಗಮಿಸಲಿದ್ದಾರೆ. ವಿಶೇಷ ವಿನ್ಯಾಸದ ಮತ್ತು ಐಷಾರಾಮಿ ಸೌಲಭ್ಯಗಳಿರುವ ಲಿಮೋಸಿನ್ ಕಾರನ್ನು ಕ್ಯಾಡಿಲಾಕ್ ಕಂಪನಿ ತಯಾರಿಸಿದ್ದು, ಶಸ್ತ್ರಸಜ್ಜಿತ ಮಾದರಿಯಾದ್ದಾಗಿದೆ. ಅಮೆರಿಕ ಅಧ್ಯಕ್ಷರ ಬಳಕೆಗೆ 2018ರ ಸೆಪ್ಟೆಂಬರ್ 24ರಂದು ಈ ಕಾರು ನಿಯೋಜನೆ ಆಗಿದೆ. ಬರಾಕ್ ಒಬಾಮ ಅಧ್ಯಕ್ಷರಾಗಿದ್ದಾಗ ‘ಕ್ಯಾಡಿಲಾಕ್ ಒನ್’ ಕಾರನ್ನು ಬಳಕೆ ಮಾಡುತ್ತಿದ್ದರು.

    ಕಾರಿನ ವಿಶೇಷ: ಕಾರಿನ ಕವಚವನ್ನು (ಬಾಡಿ) ಮಿಲಿಟರಿ ದರ್ಜೆಯ ಉಕ್ಕು, ಟೈಟಾನಿಯಂ, ಅಲ್ಯೂಮಿನಿಯಂ ಮತ್ತು ಪಿಂಗಾಣಿ ಸಾಮಗ್ರಿಗಳಿಂದ ತಯಾರಾದ ಐದು ಇಂಚು ದಪ್ಪದ ಶೀಟ್​ನಿಂದ ನಿರ್ವಿುಸಲಾಗಿದೆ. ಕಾರಿನ ಕಿಟಕಿ ಗಾಜು ಐದು ಪದರದ್ದಾಗಿದೆ. ಈ ಗಾಜಿಗೆ ಪಾಲಿಕಾಬೋನೆಟ್ ಬಳಕೆ ಮಾಡಲಾಗಿದ್ದು, ಗುಂಡು ನಿರೋಧಕವಾಗಿದೆ. ಕಾರಿನ ಇಂಧನ ಟ್ಯಾಂಕ್​ಗೆ ಸ್ಫೋಟ ನಿಯಂತ್ರಣ ಹೊಂದಿರುವ ಫೋಮ್ ರಕ್ಷಣೆ ಇರುತ್ತದೆ. ನೇರವಾಗಿ ಇಂಧನ ಟ್ಯಾಂಕ್ ಮೇಲೆ ದಾಳಿ ಮಾಡಿದರೂ ಸ್ಪೋಟಗೊಳ್ಳುವುದಿಲ್ಲ. ಎಂಟು ಇಂಚಿನ ದಪ್ಪ ಬಾಗಿಲು ಕಾರಿಗೆ ಇರಲಿದ್ದು, ಇದು ಬೋಯಿಂಗ್ 757 ವಿಮಾನದ ಬಾಗಿಲಿನ ಗುಣಮಟ್ಟದ್ದೇ ಆಗಿರುತ್ತದೆ. ಈ ಬಾಗಿಲು ರಾಸಾಯನಿಕ ಅಸ್ತ್ರಗಳಿಂದ ಸುರಕ್ಷತೆ ಒದಗಿಸುತ್ತದೆ. ಕೆವ್ಲರ್ ಬಲವರ್ಧಿತ ಉಕ್ಕಿನ ರಿಮ್ ಪಂಚರ್ ನಿರೋಧಕ ಟೈರ್​ಗಳು ಇರುತ್ತವೆ. ಟೈರ್ ಸ್ಪೋಟಗೊಂಡರೂ ಅಪಾಯದಿಂದ ಪಾರಾಗುವ ತಂತ್ರಜ್ಞಾನವನ್ನು ಕಾರು ಹೊಂದಿದೆ. ಕಾರಿನ ಚಾಸಿಯನ್ನು ಬಾಂಬ್ ನಿರೋಧಕ ಸಾಮಗ್ರಿಯಿಂದ ನಿರ್ವಿುಸಲಾಗಿದೆ.

    ರಕ್ಷಣಾ ವ್ಯವಸ್ಥೆ: ಕಾರಿನ ಮುಂಭಾಗದಲ್ಲಿ ಶಾಟ್​ಗನ್​ಗಳು, ಅಶ್ರುವಾಯು ಅನಿಲದ ಸಿಲಿಂಡರ್, ಗ್ರೆನೇಡ್ ಲಾಂಚರ್, ಅಗ್ನಿ ಶಾಮಕ ವ್ಯವಸ್ಥೆ, ಹೊಗೆ ನಿರೋಧಕಗಳು, ರಾತ್ರಿ ಹೊತ್ತು ಕಾರ್ಯನಿರ್ವಹಿಸುವಂತಹ ಬಲಶಾಲಿ ಕ್ಯಾಮರಾ ಇರಲಿದೆ. ಟ್ರಂಪ್ ಅವರ ರಕ್ತದ ಗುಂಪಿನ ರಕ್ತದ ಚೀಲಗಳು ಇರಿಸಲಾಗಿರುತ್ತದೆ. ಕಾರಿನ ಚಾಲಕನ ಕ್ಯಾಬಿನ್ ಮತ್ತು ಹಿಂಬದಿಯ ಕಕ್ಷೆಗಳು ಪ್ರತ್ಯೇಕ. ಚಾಲಕನ ಜತೆ ಸಂವಹನಕ್ಕೆ ಆಂತರಿಕ ವ್ಯವಸ್ಥೆ ಇರುತ್ತದೆ ಮತ್ತು ಕಾರಿಗೆ ಜಿಪಿಎಸ್ ವ್ಯವಸ್ಥೆ ಅಳವಡಿಕೆ ಆಗಿರುತ್ತದೆ. ಕಾರಿನ ಚಾಲಕನಿಗೆ ವಿಶೇಷ ತರಬೇತಿಯನ್ನು ಅಮೆರಿಕ ಸೀಕ್ರೆಟ್ ಸರ್ವೀಸ್ ನೀಡಿರುತ್ತದೆ. ಗರಿಷ್ಠ ಸವಾಲನ್ನು ಎದುರಿಸುವ ಚಾಕಚಕ್ಯತೆ ಈ ಚಾಲಕನಿಗೆ ಇರುತ್ತದೆ. 180 ಡಿಗ್ರಿ ಕೋನದಲ್ಲಿ ಕಾರು ತಿರುಗಿಸುವಿಕೆಯನ್ನು ಕಲಿಸಲಾಗಿರುತ್ತದೆ. ತುರ್ತು ನಿರ್ಗಮನದ ತರಬೇತಿ ನೀಡಲಾಗಿರುತ್ತದೆ.

    ಕ್ಯಾಟ್ ಬೆಂಗಾವಲು: ಈ ವಾಹನದಲ್ಲಿ ಪೊಲೀಸ್ ಸೈರನ್ (ಲೈಟ್) ಇರಲಿದ್ದು, ಈ ವಾಹನದ ಹಿಂಬದಿಯ ಬಾಗಿಲು ತೆರದೇ ಇರುತ್ತದೆ. ಶಸ್ತ್ರ ಸಜ್ಜಿತ ಕಮಾಂಡೋಗಳು ಇಲ್ಲಿ ಅಸೀನರಾಗಿರುತ್ತಾರೆ. ಇದನ್ನು ‘ಕ್ಯಾಟ್’ ವಾಹನವೆಂದು ಕರೆಯಲಾಗುತ್ತದೆ. ಅಧ್ಯಕ್ಷರ ಕಾರು ಮತ್ತು ಬೆಂಗಾವಲು ವಾಹನಗಳಿಗೆ ರಕ್ಷಣೆ ನೀಡುವುದು ಕ್ಯಾಟ್ ಉದ್ದೇಶ. ಹಾಫ್​ಬ್ಯಾಂಕ್ ಎಂಬುದು ಅಧ್ಯಕ್ಷ ಕಾರಿನ ನಂತರದಲ್ಲಿರುವ ವಾಹನ, ಇದನ್ನು ಸ್ಟೇಜ್ ಕೋಚ್ ಎಂದೂ ಕರೆಯಲಾಗುತ್ತದೆ. ಸೀಕ್ರೆಟ್ ಸರ್ವೀಸ್ ಸಂಬಂಧಿಸಿದ ಅತ್ಯಂತ ಗೋಪ್ಯ ಮಾಹಿತಿ ಇದರಲ್ಲಿ ಇರಲಿದೆ.

    ಅಧ್ಯಕ್ಷರ ಕಾರಿನ ಬೆಂಗಾವಲು: ಅಧ್ಯಕ್ಷರ ಕಾರಿಗೆ ಬೆಂಗಾವಲು ಪಡೆ ಕೂಡ ಇರಲಿದೆ. ಶಸ್ತ್ರಾಸ್ತ್ರ, ಅಣ್ವಸ್ತ್ರ, ರಾಸಾಯನಿಕ, ಜೈವಿಕ ಬಾಂಬ್​ಗಳನ್ನು ಗುರುತಿಸುವಂತಹ ಸೂಕ್ಷ್ಮ ಸೆನ್ಸರ್​ಗಳನ್ನು ಬ್ಲಾ್ಯಕ್ ಟ್ರಕ್ ಹೊಂದಿರಲಿದೆ. ಅಪಾಯದ ಸೂಚನೆ ನೀಡುವ ವಿಶೇಷ ಗೇರ್ ಇರಲಿದ್ದು, ಅಗತ್ಯ ಬಿದ್ದರೆ ಅಧ್ಯಕ್ಷರ ಕಾರಿನ ರಕ್ಷಣಾ ಸಾಧನವನ್ನು ದ್ವಿಗುಣಗೊಳಿಸುವ ದಾಸ್ತಾನು ಇದರಲ್ಲಿ ಇರಲಿದೆ. ಅಧ್ಯಕ್ಷರ ಕಾರಿನ ಹಿಂದೆ-ಮುಂದೆ ಸಾಗುವ ಎಸ್​ಯುುವಿ ವಾಹನಗಳು ಸಾಟಲೈಟ್ ಸಂವಹನ ಸಾಧನಗಳನ್ನು ಹೊಂದಿರಲಿದೆ. ಅಧ್ಯಕ್ಷರು ಮತ್ತು ಶ್ವೇತಭವನದ ಅಧಿಕಾರಿಗಳನ್ನು ಇದು ಸಂರ್ಪಸುತ್ತದೆ. ಸಿಗ್ನಲ್ ಜಾಮರ್ ವಾಹನ ಕೂಡ ಅಧ್ಯಕ್ಷರ ಕಾರನ್ನು ಹಿಂಬಾಲಿಸುತ್ತದೆ. ಅಧ್ಯಕ್ಷರು ಮತ್ತವರ ಭದ್ರತಾ ಸಿಬ್ಬಂದಿ ಹೊರತಾಗಿ ಬೇರೆಯವರ ಸಂವಹನ ಸಾಧನಗಳನ್ನು ಇದು ನಿರರ್ಥಕಗೊಳಿಸುತ್ತದೆ. ಜತೆಗೆ ಮಾನವ ರಹಿತ ವಾಯು ಮಾರ್ಗದ ವಾಹನಗಳನ್ನೂ ಇದು ಗುರುತಿಸಲಿದೆ.

    ನೇರ ಸಂಪರ್ಕ: ಚಾಲಕನ ಹಿಂಬದಿಯ ಸೀಟಿನಲ್ಲಿ ಸಾಟಲೈಟ್ ಫೋನ್ ಇದ್ದು, ಇದು ನೇರವಾಗಿ ಅಮೆರಿಕದ ಉಪಾಧ್ಯಕ್ಷ ಮತ್ತು ರಕ್ಷಣಾ ಇಲಾಖೆ ಪ್ರಧಾನ ಕಚೇರಿ ಪೆಂಟಗನ್​ಗೆ ಸಂಪರ್ಕ ಹೊಂದಿರುತ್ತದೆ. ತುರ್ತು ಸಂದರ್ಭದ ಬಳಕೆಗಾಗಿ ಆಮ್ಲಜನಕ ಪೂರೈಕೆ ವ್ಯವಸ್ಥೆ ಮತ್ತು ಪ್ಯಾನಿಕ್ ಬಟನ್ (ಎಚ್ಚರಿಕೆ ಗಂಟೆ) ಕೂಡ ಇರಲಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts