More

    ಇಂದಿನಿಂದ ಯುಎಸ್ ಓಪನ್ ಟೆನಿಸ್, ಕ್ಯಾಲೆಂಡರ್ ಸ್ಲಾಂ ಕನಸಿನಲ್ಲಿ ಜೋಕೋ

    ನ್ಯೂಯಾರ್ಕ್: ವರ್ಷದ ಕೊನೆಯ ಗ್ರಾಂಡ್ ಸ್ಲಾಂ ಟೆನಿಸ್ ಹಬ್ಬ ಯುಎಸ್ ಓಪನ್‌ಗೆ ಸೋಮವಾರ ಚಾಲನೆ ಸಿಗಲಿದೆ. ವರ್ಷದ ಮೊದಲ 3 ಗ್ರಾಂಡ್ ಸ್ಲಾಂ ಟೂರ್ನಿಗಳ ವಿಜೇತ ನೊವಾಕ್ ಜೋಕೊವಿಕ್ 4ನೇ ಟೂರ್ನಿಯಲ್ಲೂ ಇದೇ ಸಾಧನೆ ಪುನರಾವರ್ತಿಸಿ ‘ಕ್ಯಾಲೆಂಡರ್ ಗ್ರಾಂಡ್​ ಸ್ಲಾಂ’ ಸಾಧಿಸುವ ಕನಸಿನಲ್ಲಿದ್ದಾರೆ.

    1969ರ ಬಳಿಕ ಅಂದರೆ ರಾಡ್ ಲೆವರ್ ಬಳಿಕ ಈ ಸಾಧನೆ ಮಾಡಿದ ಮೊದಲ ಆಟಗಾರ ಎನಿಸುವ ಹಂಬಲದಲ್ಲಿರುವ ವಿಶ್ವ ನಂ. 1 ಜೋಕೋ, ಇದರಲ್ಲಿ ಯಶಸ್ವಿಯಾದರೆ ಪುರುಷರ ಟೆನಿಸ್‌ನಲ್ಲಿ ಸರ್ವಾಧಿಕ 21 ಗ್ರಾಂಡ್ ಸ್ಲಾಂ ಗೆದ್ದ ಇತಿಹಾಸವನ್ನೂ ನಿರ್ಮಿಸಲಿದ್ದಾರೆ. ಸದ್ಯ ಅವರು 20 ಗ್ರಾಂಡ್ ಸ್ಲಾಂ ಗೆದ್ದಿರುವ ಸಮಕಾಲೀನ ದಿಗ್ಗಜರಾದ ರೋಜರ್ ಫೆಡರರ್ ಮತ್ತು ರಾಫೆಲ್ ನಡಾಲ್ ಜತೆಗೆ ದಾಖಲೆ ಹಂಚಿಕೊಂಡಿದ್ದಾರೆ. ಕಳೆದ ವರ್ಷದ ಟೂರ್ನಿಯಲ್ಲಿ ಆಕಸ್ಮಿಕವಾಗಿ ಚೇರ್ ಅಂಪೈರ್‌ಗೆ ಚೆಂಡು ಹೊಡೆದು ಅನರ್ಹಗೊಂಡಿದ್ದ 34 ವರ್ಷದ ಜೋಕೋ, ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಪದಕ ಕೈತಪ್ಪಿದ್ದ ನಿರಾಸೆಯನ್ನೂ ನಿವಾರಿಸುವ ಛಲದಲ್ಲಿದ್ದಾರೆ. ಅನುಭವಿ ಆಟಗಾರರ ಗೈರಿನಲ್ಲಿ ಸೆರ್ಬಿಯಾ ಸ್ಟಾರ್‌ಗೆ ಯುವ ಆಟಗಾರರಿಂದ ಪ್ರಶಸ್ತಿ ಪೈಪೋಟಿ ಎದುರಿಸಲಿದ್ದಾರೆ.

    ಮಹಿಳೆಯರಲ್ಲಿ ಒಸಾಕಾ ಫೇವರಿಟ್: ಮಾನಸಿಕ ಆರೋಗ್ಯದ ಕಾರಣದಿಂದಾಗಿ ಫ್ರೆಂಚ್ ಓಪನ್‌ನಿಂದ ಹೊರನಡೆದು, ವಿಂಬಲ್ಡನ್‌ನಿಂದಲೂ ಹೊರಗುಳಿದಿದ್ದ ಹಾಲಿ ಚಾಂಪಿಯನ್ ಜಪಾನ್ ತಾರೆ ನವೊಮಿ ಒಸಾಕ ಒಲಿಂಪಿಕ್ಸ್ ನಿರಾಸೆಯನ್ನು ಬದಿಗೊತ್ತಿ, ಟೂರ್ನಿಯಲ್ಲಿ ಟ್ರೋಫಿ ಉಳಿಸಿಕೊಳ್ಳಲು ಸಜ್ಜಾಗಿದ್ದಾರೆ. 23 ವರ್ಷದ ಒಸಾಕಗೆ ವಿಶ್ವ ನಂ. 1 ಆಶ್ಲೆಗ್ ಬಾರ್ಟಿ, ನಂ. 2 ಅರಿನಾ ಸಬಲೆಂಕಾ, ನಂ. 5 ಎಲಿನಾ ಸ್ವಿಟೋಲಿನಾ, ಸಿಮೋನಾ ಹಲೆಪ್, ಬಿಯಾಂಕಾ ಆಂಡ್ರೆಸ್ಕುರಿಂದ ಪೈಪೋಟಿ ಎದುರಾಗಲಿದೆ.

    ಆರಂಭ: ರಾತ್ರಿ 8.30
    ನೇರಪ್ರಸಾರ: ಸ್ಟಾರ್ ಸ್ಪೋರ್ಟ್ಸ್.

    ಒಟ್ಟು ಬಹುಮಾನ ಏರಿಕೆ
    ಟೂರ್ನಿಯ ಸಿಂಗಲ್ಸ್ ವಿಜೇತರಿಗೆ ನೀಡಲಾಗುವ ಬಹುಮಾನ ಮೊತ್ತವನ್ನು 2019ಕ್ಕಿಂತ (ಪ್ರೇಕ್ಷಕರಿದ್ದ ಕೊನೇ ಆವೃತ್ತಿ) ಶೇ. 35 ಕಡಿತಗೊಳಿಸಿದ್ದರೂ, ಟೂರ್ನಿಯ ಒಟ್ಟು ಬಹುಮಾನ ಮೊತ್ತ 422 ಕೋಟಿ ರೂ.ಗೆ ಏರಿಕೆಯಾಗಿದೆ. ಅರ್ಹತಾ ಮತ್ತು ಮೊದಲ 2 ಸುತ್ತಿನಲ್ಲಿ ನಿರ್ಗಮಿಸುವ ಆಟಗಾರರಿಗೆ ನೀಡುವ ಬಹುಮಾನವನ್ನು ಏರಿಸಿರುವುದು ಇದಕ್ಕೆ ಕಾರಣವಾಗಿದೆ. 2019ರಲ್ಲಿ ಒಟ್ಟು 420 ಕೋಟಿ ರೂ. ಬಹುಮಾನ ವಿತರಿಸಲಾಗಿದ್ದರೆ, 2020ರಲ್ಲಿ ಕರೊನಾದಿಂದಾಗಿ ಪ್ರೇಕ್ಷಕರು ಗೈರಾಗಿದ್ದ ಕಾರಣ ಬಹುಮಾನ ಮೊತ್ತವನ್ನು 392 ಕೋಟಿ ರೂ.ಗೆ ಇಳಿಸಲಾಗಿತ್ತು. ಸಿಂಗಲ್ಸ್ ವಿಜೇತರಿಗೆ ತಲಾ 18.37 ಕೋಟಿ ರೂ. ನೀಡಲಾಗುವುದು. ಇದು 2012ರ ಬಳಿಕ ಟೂರ್ನಿಯ ಸಿಂಗಲ್ಸ್ ವಿಜೇತರಿಗೆ ಕನಿಷ್ಠ ಬಹುಮಾನವಾಗಿದೆ. 2020ರಲ್ಲಿ 22 ಕೋಟಿ ರೂ. ಮತ್ತು 2019ರಲ್ಲಿ 28 ಕೋಟಿ ರೂ. ನೀಡಲಾಗಿತ್ತು.

    ಸ್ಟಾರ್ ಆಟಗಾರರ ಗೈರು
    ದಿಗ್ಗಜರಾದ ರೋಜರ್ ಫೆಡರರ್, ರಾಫೆಲ್ ನಡಾಲ್, ಆತಿಥೇಯ ತಾರೆಯರಾದ ಸೆರೇನಾ-ವೀನಸ್ ವಿಲಿಯಮ್ಸ್ ಸಹಿತ ಹಲವು ಪ್ರಮುಖರಿಲ್ಲದ ಟೂರ್ನಿ ಇದಾಗಿದ್ದು, ಸ್ಥಿತ್ಯಂತರದ ಬೆಳಕು ಚೆಲ್ಲಲಿದೆ. ಗಾಯದಿಂದಾಗಿ ಟೂರ್ನಿ ತಪ್ಪಿಸಿಕೊಂಡಿರುವ ಈ ಸ್ಟಾರ್‌ಗಳು ಮುಂಬರುವ ದಿನಗಳಲ್ಲಿ ನಿವೃತ್ತಿಯಾದ ಬಳಿಕ ಟೆನಿಸ್ ಜಗತ್ತು ಹೇಗಿರಲಿದೆ ಎಂಬುದರ ಝಲಕ್ ಈ ಟೂರ್ನಿಯಲ್ಲಿ ಕಾಣಬಹುದಾಗಿದೆ. 1997ರ ಆಸ್ಟ್ರೇಲಿಯನ್ ಓಪನ್ ಬಳಿಕ ಈ ನಾಲ್ವರು ದಿಗ್ಗಜರ ಪೈಕಿ ಒಬ್ಬರೂ ಇಲ್ಲದ ಮೊದಲ ಗ್ರಾಂಡ್ ಸ್ಲಾಂ ಟೂರ್ನಿ ಇದಾಗಿರಲಿದೆ.

    ಪ್ರೇಕ್ಷಕರಿಗೆ ಕೊನೇಕ್ಷಣದಲ್ಲಿ ಕಟ್ಟುನಿಟ್ಟು
    ಕಳೆದ ವರ್ಷ ಕರೊನಾ ಹಾವಳಿಯಿಂದಾಗಿ ಖಾಲಿ ಕ್ರೀಡಾಂಗಣದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಈ ವರ್ಷ ಶೇ. 100 ಪ್ರೇಕ್ಷಕರಿಗೆ ಪ್ರವೇಶ ನೀಡಲಾಗಿದೆ. ಪ್ರೇಕ್ಷಕರು ಮಾಸ್ಕ್ ಧರಿಸುವ ಜತೆಗೆ ಲಸಿಕೆ ಪ್ರಮಾಣಪತ್ರ ತೋರಿಸುವ ಅಗತ್ಯವೂ ಇಲ್ಲ ಎಂದು ಮೊದಲಿಗೆ ಹೇಳಲಾಗಿತ್ತು. ಬಳಿಕ ಕನಿಷ್ಠ ಒಂದಾದರೂ ಕೋವಿಡ್ ಲಸಿಕೆಯ ಡೋಸ್ ಹಾಕಿಸಿಕೊಂಡಿರುವ ಸಾಕ್ಷ್ಯ ತೋರಿಸಬೇಕೆಂದು ಟೂರ್ನಿಗೆ 72 ಗಂಟೆ ಮುನ್ನ ನಿಯಮ ಬಿಗಿಗೊಳಿಸಲಾಗಿದೆ. ಅಮೆರಿಕದಲ್ಲಿ ಒಂದೇ ದಿನ ಒಂದೂವರೆ ಲಕ್ಷ ಹೊಸ ಕರೊನಾ ಪ್ರಕರಣ ದಾಖಲಾಗಿದ್ದು ಇದಕ್ಕೆ ಕಾರಣ.

    ಮಗಳಿಗೆ ಕೃಷ್ಣನ ವೇಷ ಹಾಕಿಸಿದ್ದಷ್ಟೇ ಅಲ್ಲ, ತಾವೂ ವೇಷ ತೊಟ್ಟ ನಟಿ ಶ್ವೇತಾ ಶ್ರೀವಾತ್ಸವ್​​

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts