More

    ಭಾಷಾ ವಿಜ್ಞಾನಿ ಡಾ.ಯು.ಪಿ. ಉಪಾಧ್ಯಾಯ ನಿಧನ

    ಉಡುಪಿ: ಕಾಪು ಮಜೂರು ಗ್ರಾಮದ ಉಳಿಯಾರಿನ ನಿವಾಸಿಯಾಗಿದ್ದ ಡಾ.ಉಪಾಧ್ಯಾಯ(88) ಶನಿವಾರ ಮಣಿಪಾಲ ಆಸ್ಪತ್ರೆಯಲ್ಲಿ ನಿಧನರಾಗಿದ್ದಾರೆ. ಕೆಲದಿನಗಳ ಹಿಂದೆ ಹೃದ್ರೋಗ ಸಹಿತ ವಿವಿಧ ಆರೋಗ್ಯ ಸಮಸ್ಯೆಗಳಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಗಂಟಲದ್ರವ ಮಾದರಿ ಪರೀಕ್ಷೆ ವರದಿಯಲ್ಲಿ ಶುಕ್ರವಾರ ಕರೊನಾ ಪಾಸಿಟಿವ್ ಬಂದಿದೆ. ಅಂದೇ ರಾತ್ರಿ 11.30ಕ್ಕೆ ನಿಧನರಾಗಿದ್ದಾರೆ. ಜಿಲ್ಲಾಡಳಿತದ ಮೂಲಕ ಕೋವಿಡ್ ಮಾರ್ಗಸೂಚಿ ಅನುಸಾರ ಅಂತ್ಯಕ್ರಿಯೆ ನೆರವೇರಿಸಲಾಗಿದೆ. ಅವರು ಪುತ್ರ, ಪುತ್ರಿಯನ್ನು ಅಗಲಿದ್ದಾರೆ.

    ಉಳಿಯಾರು ಪದ್ಮನಾಭ ಉಪಾಧ್ಯಾಯ (ಡಾ.ಯು.ಪಿ. ಉಪಾಧ್ಯಾಯ) ಅವರನ್ನು ಹೀಗೆ ಅಂತ ಬಣ್ಣಿಸುವುದು ಸ್ವಲ್ಪ ಕಷ್ಟದ ಕೆಲಸ. ಅವರು ಮಾಡಿರುವ ಸಾಧನೆ ಅಂಥದ್ದು. ಭಾಷಾ ವಿಜ್ಞಾನಿಯಾಗಿ, ಸಂಶೋಧಕರಾಗಿ, ತುಳು ನಿಘಂಟು ರಚನೆಕಾರರಾಗಿ ಡಾ.ಉಪಾಧ್ಯಾಯ ಸಲ್ಲಿಸಿರುವ ಕೊಡುಗೆ ಅಪರೂಪದ್ದು.

    ತಿರುವಾಂಕೂರಿನ ರಾಜನ ಆಸ್ಥಾನದಲ್ಲಿ ವಿದ್ವಾಂಸರಾಗಿದ್ದ ಸೀತಾರಾಮ ಉಪಾಧ್ಯಾಯರ ಪುತ್ರ ಡಾ.ಉಪಾಧ್ಯಾಯರು. 1932ರಲ್ಲಿ ಜನನ, ಮಜೂರು ಕರಂದಾಡಿ ಶ್ರೀರಾಮ ಪ್ರಾಥಮಿಕ ಶಾಲೆಯಲ್ಲಿ ಓದು, ಮದ್ರಾಸ್ ಮೆಟ್ರಿಕ್ಯುಲೇಶನ್, ಉಡುಪಿ ಎಂಜಿಎಂ ಕಾಲೇಜಿನಲ್ಲಿ ಇಂಟರ್‌ಮೀಡಿಯೇಟ್ ಮುಗಿಸಿದ್ದರು. ಸಂಸ್ಕೃತ, ಕನ್ನಡ ಹಾಗೂ ಭಾಷಾ ವಿಜ್ಞಾನದಲ್ಲಿ ಸ್ನಾತಕೋತ್ತರ ಪದವಿ, ಭಾಷಾ ವಿಜ್ಞಾನದಲ್ಲಿ ಪಿಎಚ್.ಡಿ, ಹಿಂದಿಯಲ್ಲಿ ವಿದ್ವಾನ್, ಫ್ರೆಂಚ್ ಭಾಷೆಯಲ್ಲಿ ಡಿಪ್ಲೊಮಾ ಪದವಿ ಪಡೆದಿದ್ದರು.

    ಮದ್ರಾಸಿನ ಪ್ರಾಚ್ಯ ಸಂಶೋಧನಾಲಯ, ಬೆಂಗಳೂರಿನ ಸೇಂಟ್ ಜೋಸೆಫ್ ಕಾಲೇಜು, ಪುಣೆಯ ಡೆಕ್ಕನ್ ಕಾಲೇಜು ಸಂಶೋಧನಾ ಕೇಂದ್ರ, ಮೈಸೂರಿನ ಮಾನಸ ಗಂಗೋತ್ರಿ ಭಾರತೀಯ ಭಾಷಾ ಸಂಸ್ಥಾನ, ಅಮೆರಿಕದ ಶಾಂತಿದಳ ಸಂಸ್ಥೆಗಳಲ್ಲಿ 15 ವರ್ಷ ಪ್ರಾಧ್ಯಾಪಕ, ಪ್ರಾಂಶುಪಾಲ ಹುದ್ದೆಗಳಲ್ಲಿ ಸೇವೆ ಸಲ್ಲಿಸಿದ್ದರು. ಪಶ್ಚಿಮ ಆಫ್ರಿಕಾದ ಡಕಾರ್ ವಿಶ್ವವಿದ್ಯಾಲಯದಲ್ಲಿ ಎಂಟು ವರ್ಷ ಪ್ರಾಧ್ಯಾಪಕರಾಗಿ, ಲಂಡನ್ – ಪ್ಯಾರಿಸ್ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸಿದ್ದರು.
    ಬಳಿಕ ಭಾರತ ಪ್ರಾದೇಶಿಕ ಭಾಷೆಗಳ ಹೆಚ್ಚಿನ ಅಧ್ಯಯನ ಮತ್ತು ತುಳು ನಿಘಂಟು ರಚನೆ ಯೋಜನೆಗಾಗಿ ಸ್ವದೇಶಕ್ಕೆ ವಾಪಸಾಗಿದ್ದರು. ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರದಲ್ಲಿ ಪ್ರಾಧ್ಯಾಪಕ ಹಾಗೂ ಸಂಶೋಧನಾ ಮಾರ್ಗದರ್ಶಕರಾಗಿ ತುಳು ನಿಘಂಟಿನ ಪ್ರಧಾನ ಸಂಪಾದಕರಾಗಿ ಕಾರ್ಯ ನಿರ್ವಹಿಸಿದರು.

    ಅಂತಾರಾಷ್ಟ್ರೀಯ ಮಾನ್ಯತೆ: ಆಂಗ್ಲ ಭಾಷೆಗಳಲ್ಲಿ ಪ್ರಕಟವಾದ ಕನ್ನಡದ ಉಪಭಾಷೆಗಳ ತೌಲನಿಕ ಅಧ್ಯಯನ, ಪ್ರಾದೇಶಿಕ ರೂಪಗಳು, ದ್ರಾವಿಡ ಹಾಗೂ ನೀಗ್ರೋ ಸಂಸ್ಕೃತಿಗಳ ತುಲನಾತ್ಮಕ ಅಧ್ಯಯನ, ಕನ್ನಡ, ಸಂಸ್ಕೃತ, ತಮಿಳು ಭಾಷೆಗಳನ್ನು ವಿದೇಶಿಯರಿಗೆ ಕಲಿಸುವ ಸಲುವಾಗಿ ತಯಾರಿಸಿದ ಆಕರ ಗ್ರಂಥಗಳ ಸಹಿತ ಹಲವಾರು ಸಂಶೋಧನಾ ಬರಹಗಳಿಂದ ಅಂತಾರಾಷ್ಟ್ರೀಯ ಮಾನ್ಯತೆ ಪಡೆದಿದ್ದರು.

    ನಿಘಂಟು ರಚನೆಗೆ 18 ವರ್ಷ ಶ್ರಮ: ತುಳು ಭಾಷೆಗೆ 3,400 ಪುಟಗಳ ಆರು ಸಂಪುಟಗಳ ಬೃಹತ್ ನಿಘಂಟು ರಚಿಸಿ ಶಬ್ದಕೋಶಗಳ ನಿರ್ಮಾಣದಲ್ಲಿ ಮಹತ್ತರ ಸಾಧನೆ ಮಾಡಿದವರು ಉಪಾಧ್ಯಾಯರು. ಈ ಮೂಲಕ 18 ವರ್ಷ ಹಗಲಿರುಳು ಶ್ರಮಿಸಿ ತುಳುಭಾಷೆಗೆ ವಿಶ್ವಮಾನ್ಯತೆ ತಂದುಕೊಟ್ಟಿದ್ದರು. ತುಳು ಜಾನಪದ ಕ್ಷೇತ್ರದಲ್ಲಿ ಭೂತ ವರ್ಷಿಪ್, ಫೋಕ್ ಎಪಿಕ್ಸ್ ಆಫ್ ತುಳುನಾಡು, ಕೋಸ್ಟಲ್ ಕರ್ನಾಟಕ, ಫೋಕ್ ರಿಚುವಲ್ಸ್ ಸಂಶೋಧನಾ ಬರಹಗಳಿಂದ ತೌಳವ ಸಂಸ್ಕೃತಿಯ ಹಿರಿಮೆಯನ್ನು ದೇಶ ವಿದೇಶಗಳ ವಿದ್ವಾಂಸರು ಅರಿಯುವಂತೆ ಮಾಡಿದ್ದರು. ತುಳು ಕಲಿಕೆಗಾಗಿ ತುಳು ಕೈಪಿಡಿ ಗ್ರಂಥ ರಚನೆ, ತುಳು ನಿಘಂಟಿನ ಸಂಕ್ಷಿಪ್ತರೂಪ ತುಳು ಕಿಸೆಕೋಶ ರಚಿಸಿದ್ದರು.

    ಬಹುಭಾಷಾ ಪಂಡಿತ: ಯು.ಪಿ.ಉಪಾಧ್ಯಾಯರು ಬಹುಭಾಷಾ ವಿದ್ವಾಂಸರಾಗಿದ್ದು, ಆಫ್ರಿಕಾ ಭಾಷೆ ಮತ್ತು ನಾಗರಿಕತೆ ಕುರಿತ ಸಂಶೋಧನೆ ಮಹತ್ವದ್ದಾಗಿದೆ. ಹಿಂದಿ, ಕನ್ನಡ, ತುಳು, ಮಲಯಾಳಂ, ತಮಿಳು, ಇಂಗ್ಲಿಷ್, ಫ್ರೆಂಚ್, ಆಫ್ರಿಕಾದ ಸೆನೆಗಲ್ನ ಒಲೊಫ್ ಭಾಷಾ ತಜ್ಞರಾಗಿದ್ದರು. ಬ್ಯಾರಿ ಭಾಷೆ ಒಂದು ಸ್ವತಂತ್ರ ಭಾಷೆ ಎಂದು ಸಾಧಿಸಿ ತೋರಿಸಿದವರು. ಸಿದ್ಧ ಸಮಾಧಿ ಯೋಗದ ಶಿಕ್ಷಕರಾಗಿ ಜನರ ಆರೋಗ್ಯ ಹಾಗೂ ನೈತಿಕ ಸುಧಾರಣೆಗಾಗಿ ಶ್ರಮಿಸಿದ್ದರು. ಭಾಷಾವಿಜ್ಞಾನ ಜಾನಪದದೊಂದಿಗೆ ಧಾರ್ಮಿಕ ವಿಷಯಗಳ ಮೇಲೆಯೂ ಇವರ ಬರಹ ಪ್ರಕಟವಾಗಿವೆ.
    ಉಪಾಧ್ಯಾಯರ ಜೊತೆಯಲ್ಲಿ ಅವರ ಎಲ್ಲ ಸಂಶೋಧನೆ , ಸಾಹಿತ್ಯಕ ಚಟುವಟಿಕೆಯಲ್ಲಿ ಬೆನ್ನೆಲುಬಾಗಿ ನಿಂತಿದ್ದವರು ಪತ್ನಿ ದಿ.ಸುಶೀಲಾ ಉಪಾಧ್ಯಾಯ. ಭಾಷಾ ವಿಜ್ಞಾನ, ಜಾನಪದ ಹಾಗೂ ಧಾರ್ಮಿಕ ಕ್ಷೇತ್ರದಲ್ಲಿ ಅನೇಕ ಸಂಶೋಧನಾ ಗ್ರಂಥಗಳನ್ನು ಇವರ ಜತೆಗೂಡಿ ಬರೆದಿದ್ದಾರೆ. ಹಾರ್ಮೋನಿಯಂ, ವಯಲಿನ್, ಕೊಳಲು ವಾದನ, ನಾಟಕಾಭಿನಯ, ನಾಟಕ ನಿರ್ದೇಶನ, ರಚನೆ ಮುಂತಾದುವುಗಳಲ್ಲೂ ತೊಡಗಿಸಿಕೊಂಡಿದ್ದ ಅವರು ವೇದಾಧ್ಯಯನ, ಪೌರೋಹಿತ್ಯ ಶಿಕ್ಷಣ ಪಡೆದು ಸಣ್ಣಪುಟ್ಟ ಪೌರೋಹಿತ್ಯಗಳ ನಿರ್ವಹಣೆ ಮಾಡುತ್ತಿದ್ದರು. ಉಳಿಯಾರು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಆಡಳಿತ ಮೊಕ್ತೇಸರರಾಗಿದ್ದರು.

    ಹಲವು ಪ್ರಶಸ್ತಿಗಳ ಗರಿ: ದ್ರಾವಿಡ ಭಾಷಾ ವಿಜ್ಞಾನ, ಪರಿಷತ್ತಿನ ಗುಂಡರ್ಟ್, ಕಾರಂತ, ಸೇಡಿಯಾಪು, ಜಿಲ್ಲಾ ರಾಜ್ಯೋತ್ಸವ, ಕನ್ನಡ ಸಾಹಿತ್ಯ ಸಮ್ಮೇಳನ, ವಿಶ್ವ ತುಳು ಸಮ್ಮೇಳನ, ಕರ್ನಾಟಕ ರಾಜ್ಯ ಪ್ರಶಸ್ತಿ, ಶಂ.ಬಾ. ಜೋಷಿ ಸಹಿತ ಹಲವು ಪ್ರಶಸ್ತಿಗಳು ಡಾ.ಉಪಾಧ್ಯಾಯರಿಗೆ ಲಭಿಸಿವೆ.

    ಶಬ್ದ ಪುರುಷ: ಡಾ.ಉಪಾಧ್ಯಾಯರು ಶಬ್ದ ಪುರುಷ. ಅವರ ತುಳು ನಿಘಂಟು ‘ತುಳು- ಕನ್ನಡ- ಇಂಗ್ಲಿಷ್’ ಬಹುಭಾಷಾ ನಿಘಂಟು ಆಗಿದ್ದು, ಅದು ಬರಿಯ ಶಬ್ದ ಕೋಶವಷ್ಟೇ ಅಲ್ಲ; ಅದೊಂದು ಸಾಂಸ್ಕೃತಿಕ ನಿಘಂಟು. ತುಳುವಿನ ವಿಶ್ವಕೋಶವೂ ಹೌದು. ತುಳು ನಿಘಂಟಿನ ಮೊದಲ ಸಂಪುಟವನ್ನು ನೋಡಿದ ಅಮೆರಿಕದ ಹಿರಿಯ ಭಾಷಾ ವಿಜ್ಞಾನಿ, ನಿಘಂಟು ತಜ್ಞ ಡಾ.ಟಿ. ಬರೊ ಅವರು, ‘ಈ ನಿಘಂಟು ನೋಡಿದ ಮೇಲೆ ನನ್ನ ದ್ರಾವಿಡ ವ್ಯತ್ಪತ್ತಿ ಕೋಶದಲ್ಲಿ ಅನೇಕ ಬದಲಾವಣೆ ಆಗಬೇಕು’ ಎಂದಿರುವುದು ಉಪಾಧ್ಯಾಯರ ಪಾಂಡಿತ್ಯಕ್ಕೆ ಸಾಕ್ಷಿ ಎನ್ನುತ್ತಾರೆ ತುಳು ನಿಘಂಟು ರಚನೆ ಸಂದರ್ಭ ಅವರ ಜತೆ ಮೂರು ವರ್ಷ ದುಡಿದ ಹಿರಿಯ ಸಾಹಿತಿ ಪ್ರೊ.ಎ.ವಿ.ನಾವಡ .

    — ಫೋಟೋ —
    ಯುಡಿಪಿ-18-ಜುಲೈ- ಉಪಾಧ್ಯಾಯ
    ಡಾ.ಯು.ಪಿ ಉಪಾಧ್ಯಾಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts