More

    VIDEO: ‘ನಿರ್ಭಯಾ ಹೇ ಕೌನ್..’ ಬಲ್ಲಿಯಾ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯ ವ್ಯಂಗ್ಯದ ಪ್ರಶ್ನೆ!

    ಬಲ್ಲಿಯಾ: ಉತ್ತರ ಪ್ರದೇಶದ ಬಲ್ಲಿಯಾದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿಯೊಬ್ಬರು ನಿರ್ಭಯಾ ಸಂಬಂಧಿಕರ ಜತೆಗೆ ಅಸಭ್ಯವಾಗಿ ನಡೆದುಕೊಂಡ ಘಟನೆ ಚಿತ್ರೀಕರಣಗೊಂಡಿದ್ದು ವೈರಲ್ ಆಗಿದೆ.

    ದೆಹಲಿಯಲ್ಲಿ 2012ರಲ್ಲಿ ಅಮಾನವೀಯ ರೀತಿಯಲ್ಲಿ ಅತ್ಯಾಚಾರಕ್ಕೀಡಾಗಿ ಹತ್ಯೆಯಾದ ನಿರ್ಭಯಾ ಉತ್ತರ ಪ್ರದೇಶದ ಇದೇ ಜಿಲ್ಲೆಗೆ ಸೇರಿದವರು. ನಿರ್ಭಯಾ ಪ್ರಕರಣ ದೇಶಾದ್ಯಂತ ಸಂಚಲನ ಮೂಡಿಸಿತ್ತಲ್ಲದೆ, ಕಾನೂನು ತಿದ್ದುಪಡಿಗೂ ಕಾರಣವಾಗಿತ್ತು.

    ಎಎನ್​ಐ ಪ್ರಸಾರ ಮಾಡಿರುವ ವಿಡಿಯೋದಲ್ಲಿ, ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸವಲತ್ತುಗಳನ್ನು ಆಗ್ರಹಿಸಿ ಆ ಕೇಂದ್ರದ ಎದುರು ಗ್ರಾಮಸ್ಥರು ಪ್ರತಿಭಟನೆ ನಡೆಸುತ್ತಿದ್ದರು. ಆಗ ಸ್ಥಳಕ್ಕೆ ಆಗಮಿಸಿದ ಪ್ರಾಥಮಿಕ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ನಿರ್ಭಯಾ ಅವರ ಬಂಧು ಒಬ್ಬರ ಬಳಿ ಅಸಭ್ಯವಾಗಿ ಮಾತನಾಡಿರುವುದು ಕಂಡುಬಂದಿದೆ. ಡಾಕ್ಟರನ್ನು ತಯಾರಿಸಲು ಸಾಧ್ಯವಾಗದ ಗ್ರಾಮಕ್ಕೆ ಡಾಕ್ಟರ್​ಗಳನ್ನು ಕೇಳುವ ಅಧಿಕಾರವಿಲ್ಲ ಎಂಬ ಅರ್ಥದ ಮಾತುಗಳು ವೈದ್ಯಾಧಿಕಾರಿ ಬಾಯಿಯಲ್ಲಿ ಬಂದಿವೆ.

    ವಿಡಿಯೋದಲ್ಲಿ ಕೇಳಿಬಂದ ವೈದ್ಯಾಧಿಕಾರಿಯ ಮಾತುಗಳಿವು- ಈ ಗ್ರಾಮದಲ್ಲಿ ಕಳೆದ 70 ವರ್ಷದ ಅವಧಿಯಲ್ಲಿ ಎಂದಾದರೂ ಯಾರಾದರೂ ಡಾಕ್ಟರ್ ಆಗಿದ್ದಾರಾ? ಒಂದೊಮ್ಮೆ ಡಾಕ್ಟರನ್ನು ತಯಾರಿಸುವ ಸಾಮರ್ಥ್ಯ ಈ ಗ್ರಾಮಕ್ಕೆ ಇಲ್ಲ ಎಂದಾದರೆ, ಅವರು ಬೇಕು ಎಂದು ನಿರೀಕ್ಷಿಸುವುದಾದರೂ ಹೇಗೆ? ಎಂದು ಗ್ರಾಮಸ್ಥರನ್ನು ಕೇಳಿದ್ದಾರೆ.
    ಆಗ ಆ ಮಾತು ಕೇಳಿಸಿಕೊಂಡ ವಯಸ್ಸಾದವರೊಬ್ಬರು, ನಿರ್ಭಯಾ ಹೆಸರು ಪ್ರಸ್ತಾಪಿಸಿದ್ದಾರೆ. ಗ್ರಾಮಸ್ಥರೊಂದಿಗೆ ಧರಣಿ ನಡೆಸುತ್ತಿದ್ದ ಅವರು, ನಿರ್ಭಯಾ ಹೆಸರಿನಲ್ಲಿ ಆಸ್ಪತ್ರೆಯೊಂದನ್ನು ಕಟ್ಟಿಸಬೇಕು ಎಂದು ಆಗ್ರಸಿದ್ದರು.

    ಇದನ್ನು ಕೇಳಿಸಿಕೊಂಡ ವೈದ್ಯಾಧಿಕಾರಿ ನಗುತ್ತಾ, ಆಸ್ಪತ್ರೆ ನಿರ್ಮಾಣ ಡಾಕ್ಟರ್​ನ ಕೆಲಸವಲ್ಲ ಎಂದಿದ್ದಾರೆ. ಇದರಿಂದ ಘಾಸಿಗೊಂಡ ನಿರ್ಭಯಾ ಅವರ ಸಂಬಂಧಿ ವಯೋವೃದ್ಧರು, ನಿರ್ಭಯಾ ಹೆಸರಿನಲ್ಲಿ ಒಂದು ಆಸ್ಪತ್ರೆ ಕಟ್ಟಿಸಿದರೆ ಆಕೆಯ ಕನಸು ಪೂರ್ಣಗೊಳ್ಳುತ್ತದೆ ಎಂದು ಹೇಳುತ್ತಾರೆ.

    ಗ್ರಾಮಸ್ಥರೂ ವೃದ್ಧರ ಮಾತಿಗೆ ದನಿಗೂಡಿಸಿದಾಗ ವೈದ್ಯಾಧಿಕಾರಿ, ನಿರ್ಭಯಾ ಕೌನ್ ಹೇ? (ಯಾರು ಈ ನಿರ್ಭಯ) ಎಂದಿದ್ದಾರೆ. ಅಲ್ಲದೆ, ಅವಳು ಬಲ್ಲಿಯಾದವಳಾಗಿದ್ದರೆ ಮೆಡಿಸಿನ್ ಕಲಿಯಲು ಆಕೆಯನ್ನು ದೆಹಲಿಗೇಕೆ ಕಳುಹಿಸಿದಿರಿ? ಎಂದು ನಗುತ್ತಾ ಪ್ರಶ್ನಿಸಿದ್ದು ವಿಡಿಯೋದಲ್ಲಿ ಕಂಡುಬಂದಿದೆ. (ಏಜೆನ್ಸೀಸ್) 

     

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts