More

    ಗುಣಮಟ್ಟದ ಆರೋಗ್ಯ, ಶಿಕ್ಷಣದಿಂದ ಅಭಿವೃದ್ಧಿ

    ವಿಜಯವಾಣಿ ಸುದ್ದಿಜಾಲ ನೆಲಮಂಗಲ
    ಸಮಾಜದಲ್ಲಿ ಪ್ರತಿಯೊಬ್ಬರಿಗೂ ಆರೋಗ್ಯ ಮತ್ತು ಶಿಕ್ಷಣ ಅತ್ಯಂತ ಮುಖ್ಯವಾಗಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ತಿಳಿಸಿದರು.
    ಬೆಂಗಳೂರು ಉತ್ತರ ತಾಲೂಕಿನ ಸೊಂಡೇಕೊಪ್ಪದಲ್ಲಿ ನೂತನವಾಗಿ ನಿರ್ಮಾಣವಾದ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹೆರಿಗೆ ಕೇಂದ್ರವನ್ನು ಗುರುವಾರ ಉದ್ಘಾಟಿಸಿ ಮಾತನಾಡಿದರು.
    ದೇಶದಲ್ಲಿ ಬೃಹತ್ ಸೇತುವೆ, ರಸ್ತೆಯಂತಹ ವಿವಿಧ ಕಾಮಗಾರಿ ಮಾಡುವುದರಿಂದಲೇ ದೇಶ ಅಭಿವೃದ್ಧಿ ಹೊಂದುವುದಿಲ್ಲ. ಆರೋಗ್ಯ ಮತ್ತು ಶಿಕ್ಷಣ ಕ್ಷೇತ್ರ ಪ್ರಗತಿಯಾದರೆ ಮಾತ್ರ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ. ಸರ್ಕಾರವೂ ವಿಶೇಷವಾಗಿ ಈ ಕ್ಷೇತ್ರಗಳಿಗೆ ಹೆಚ್ಚಿನ ಆದ್ಯತೆ ನೀಡುತ್ತಿದೆ ಎಂದರು.
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು 8 ತಿಂಗಳಾಗಿದ್ದು, ಚುನಾವಣಾ ಪೂರ್ವ ನೀಡಿದ್ದ 5 ಗ್ಯಾರಂಟಿಗಳನ್ನು ಜಾರಿಗೊಳಿಸಲಾಗಿದೆ. ಜತೆಗೆ ಯಾವುದೇ ತಾರತಮ್ಯವಿಲ್ಲದೆ ಅರ್ಹರಿಗೆಲ್ಲರಿಗೂ ಸೌಲಭ್ಯ ತಲುಪಿಸಲಾಗುತ್ತಿದೆ. ಗೃಹಲಕ್ಷ್ಮಿ ಯೋಜನೆ ಹಣವನ್ನು ಏಕಕಾಲಕ್ಕೆ ಗೃಹಿಣಿಯರ ಬ್ಯಾಂಕ್ ಖಾತೆಗೆ ತಲುಪಿಸಿದ್ದು ಸರ್ಕಾರದ ಹೆಗ್ಗಳಿಕೆ ಎಂದರು.

    ಡಯಾಲೀಸಿಸ್ ಘಟಕ ಸ್ಥಾಪನೆ: ರಾಜ್ಯದಾದ್ಯಂತ ಸರ್ಕಾರಿ ಆಸ್ಪತ್ರೆಗಳಲ್ಲಿ 170 ಡಯಾಲೀಸಿಸ್ ಘಟಕಗಳಿದ್ದು, ಇವುಗಳನ್ನು ಮೇಲ್ದರ್ಜೆಗೇರಿಸುವ ನಿಟ್ಟಿನಲ್ಲಿ ಸುಮಾರು 42 ತಾಲೂಕು ಕೇಂದ್ರ ಒಳಗೊಂಡಂತೆ ಒಟ್ಟಾರೆ 224 ಡಯಾಲೀಸಿಸ್ ಘಟಕ ನಿರ್ಮಾಣ ಮಾಡಲಾಗಿದೆ. ಜ.27ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಂಗಳೂರಿನ ಕೆಸಿ ಜನರಲ್ ಆಸ್ಪತ್ರೆಯಲ್ಲಿ ಈ ಘಟಕಗಳಿಗೆ ಚಾಲನೆ ನೀಡುವರು. ಜತೆಗೆ ಆಂಬುಲೆನ್ಸ್ ಕೊರತೆ ನೀಗಿಸಲು ಸುಮಾರು 276 ಹೊಸ ವಾಹನ ಖರೀದಿ ಮಾಡಲಾಗಿದೆ. ಹಾಗೆಯೇ, ರೋಗಿಗಳಿಗೆ ಅಗತ್ಯ ಔಷಧಗಳನ್ನು ಸರಿಯಾದ ಸಮಯಕ್ಕೆ ನೀಡುವ ಮಹತ್ವದ ಯೋಜನೆಯನ್ನು ಸರ್ಕಾರ ರೂಪಿಸಿದೆ ಎಂದು ದಿನೇಶ್‌ಗುಂಡೂರಾವ್ ತಿಳಿಸಿದರು.
    ಶಾಸಕ ಎಸ್.ಆರ್.ವಿಶ್ವನಾಥ್ ಮಾತನಾಡಿ, ಆರೋಗ್ಯ ಇಲಾಖೆ ಸೂಕ್ಷ್ಮ ಹಾಗೂ ಅತ್ಯಂತ ಕ್ಲಿಷ್ಟಕರವಾಗಿದ್ದು, ಸಮಾಜಕ್ಕೆ ಅತ್ಯಂತ ಮುಖ್ಯವಾಗಿದೆ. ಕರೊನಾ ಸಮಯದಲ್ಲಿ ಆರೋಗ್ಯ ಇಲಾಖೆಯ ಸೇವೆ ಅಪಾರವಾಗಿದೆ ಎಂದರು.
    1955ರಲ್ಲಿ ಸೊಂಡೇಕೊಪ್ಪದಲ್ಲಿ ದಾನಿಯೊಬ್ಬರು ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ನಿರ್ಮಾಣ ಮಾಡಿ ಸರ್ಕಾರಕ್ಕೆ ಹಸ್ತಾಂತರ ಮಾಡಿದ್ದರು. ಈ ಕೇಂದ್ರ ಇತ್ತೀಚೆಗೆ ಶೀಥಿಲಗೊಂಡ ಹಿನ್ನೆಲೆಯಲ್ಲಿ ಭೂ ವಿಜ್ಞಾನ ಹಾಗೂ ಗಣಿ ಇಲಾಖೆಯಿಂದ 2 ಕೋಟಿ ರೂ. ವೆಚ್ಚದಲ್ಲಿ ಪ್ರಾಥಮಿಕ ಆರೋಗ್ಯ ಕೇಂದ್ರ ಹಾಗೂ ಹೆರಿಗೆ ಕೇಂದ್ರವನ್ನು ನಿರ್ಮಾಣ ಮಾಡಲಾಗಿದೆ ಎಂದರು.
    ಯಲಹಂಕ ಜಿಲ್ಲಾ ಆಸ್ಪತ್ರೆಯಲ್ಲಿ 15 ಐಸಿಯು ವ್ಯವಸ್ಥೆ, ನಿತ್ಯ 800ಕ್ಕೂ ಹೆಚ್ಚು ಮಂದಿ ತಪಾಸಣೆ, ಶಸ್ತ್ರಚಿಕಿತ್ಸೆ, ಅತಿಹೆಚ್ಚು ಹೆರಿಗೆ ಸೇರಿ ವಿವಿಧ ಸೇವೆ ನೀಡುತ್ತಿರುವ ಹಿನ್ನೆಲೆಯಲ್ಲಿ ಆಸ್ಪತ್ರೆ ರಾಜ್ಯ ಮತ್ತು ರಾಷ್ಟ್ರ ಪ್ರಶಸ್ತಿ ಪಡೆದುಕೊಂಡಿದೆ ಎಂದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts