More

  ಅಸಂಘಟಿತ ಕಾರ್ಮಿಕರ ಅಲೆದಾಟ!

  ಬೆಳಗಾವಿ: ಕರೊನಾ ತಂದಿಟ್ಟ ಸಂಕಷ್ಟ ಎದುರಿಸಲಾಗದೆ ಬಸವಳಿದಿರುವ ಶ್ರಮಿಕ ವರ್ಗದವರು ಸರ್ಕಾರದ ಸಹಾಯಧನಕ್ಕಾಗಿ ಎದುರು ನೋಡುತ್ತಿದ್ದಾರೆ. ರಾಜ್ಯ ಸರ್ಕಾರ ಘೋಷಿಸಿರುವ ವಿಶೇಷ ಪ್ಯಾಕೇಜ್‌ನಡಿ ಸಹಾಯ ಪಡೆಯಲು ಸಾವಿರಾರು ಅಸಂಘಟಿತ ಕಾರ್ಮಿಕರು ಚಾತಕ ಪಕ್ಷಿಯಂತೆ ಕಾಯುತ್ತಿದ್ದಾರೆ. ಆದರೆ, ಸದಸ್ಯತ್ವ ನೋಂದಣಿಯಾಗದಿರುವುದರಿಂದ ಎಲ್ಲಿ ತಮಗೆ ಪರಿಹಾರ ಕೈತಪ್ಪುವುದೋ ಎಂಬ ಆತಂಕ ಎದುರಿಸುತ್ತಿದ್ದಾರೆ.

  ಲಾಕ್‌ಡೌನ್‌ನಿಂದಾಗಿ ಆದಾಯವಿಲ್ಲದೆ ಸಂಕಷ್ಟದಲ್ಲಿರುವ ಕಾರ್ಮಿಕರು ಸರ್ಕಾರದ ಸಹಾಯಧನಕ್ಕಾಗಿ ಅರ್ಜಿ ಹಿಡಿದು ಕಾರ್ಮಿಕ ಇಲಾಖೆ, ಜಿಲ್ಲಾಡಳಿತ ಕಚೇರಿಗಳಿಗೆ ಅಲೆದಾಡುತ್ತಿದ್ದಾರೆ. ಸಹಾಯಧನ ಕುರಿತು ಯಾವುದೇ ಇಲಾಖೆ ಅಧಿಕಾರಿಗಳಿಗೂ ಇನ್ನೂ ಸರ್ಕಾರದಿಂದ ಸ್ಪಷ್ಟವಾದ ಮಾಹಿತಿ ಬಂದಿಲ್ಲ.

  ನೋಂದಣಿಯಾಗಿಲ್ಲ: ಕಾರ್ಮಿಕ ಇಲಾಖೆ ವ್ಯಾಪ್ತಿಯ ಬೆಳಗಾವಿ ಜಿಲ್ಲೆಯಲ್ಲಿ ಒಟ್ಟು 2.39 ಲಕ್ಷ ನೋಂದಾಯಿತ ಕಾರ್ಮಿಕರಿದ್ದಾರೆ. ಅವರಲ್ಲಿ 81 ಸಾವಿರ ಕಟ್ಟಡ, ವಾಣಿಜ್ಯ ಸಂಸ್ಥೆಗಳಲ್ಲಿ 39,319, ಕೈಗಾರಿಕೆಗಳಲ್ಲಿ 72,938, ವಾಣಿಜ್ಯ ಸಂಸ್ಥೆ ಸೇರಿ ಇತರ ಕಡೆ ಸಾರಿಗೆ ಚಾಲಕರಾಗಿ 46,741 ಕಾರ್ಮಿಕರು ಕಾರ್ಯನಿರ್ವಹಿಸುತ್ತಿದ್ದಾರೆ. ಅದೇ ರೀತಿ ಅಸಂಘಟಿತ ವಲಯದಲ್ಲಿ ಲಕ್ಷಕ್ಕೂ ಅಧಿಕ ಕಾರ್ಮಿಕರಿದ್ದು, ಬಹುತೇಕರು ಅಸಂಘಟಿತ ಕಾರ್ಮಿಕ ಕಲ್ಯಾಣ ಮಂಡಳಿಯಡಿ ನೋಂದಣಿ ಮಾಡಿಕೊಂಡಿಲ್ಲ. ಈ ವಿಷಯ ಕಾರ್ಮಿಕರಿಗೆ ತಲೆನೋವು ತಂದಿದೆ.

  ಅಧಿಕಾರಿಗಳಿಗೂ ಗೊಂದಲ: ಲಾಕ್‌ಡೌನ್‌ನಿಂದ ಸಂಕಷ್ಟಕ್ಕೊಳಗಾಗಿರುವ ಮಡಿವಾಳರು, ಹಡಪದ (ಕ್ಷೌರಿಕ), ಟೇಲರ್ಸ್ (ಸಿಂಪಿ ಸಮಾಜ), ಆಟೋ ಮತ್ತು ಟ್ಯಾಕ್ಸಿ ಚಾಲಕರು, ಕಾರ್ಮಿಕರು ಸೇರಿ ವಿವಿಧ ವಲಯಗಳಲ್ಲಿನ ಕಸುಬುದಾರರನ್ನು ಆರ್ಥಿಕವಾಗಿ ಉತ್ತೇಜಿಸುವ ಉದ್ದೇಶದಿಂದ ರಾಜ್ಯ ಸರ್ಕಾರವು 1,610 ಕೋಟಿ ರೂ.ಯ ವಿಶೇಷ ಪ್ಯಾಕೇಜ್ ಘೋಷಣೆ ಮಾಡಿದೆ. ಆದರೆ, ಇಲ್ಲಿಯವರೆಗೆ ಸರ್ಕಾರ ಅಧಿಕೃತ ಮಾರ್ಗಸೂಚಿ ಪ್ರಕಟಿಸಿಲ್ಲ. ಕಾರ್ಮಿಕ ಇಲಾಖೆ ಅಥವಾ ಹಿಂದುಳಿದ ಇಲಾಖೆಯಿಂದ ಸಹಾಯಧನ ನೀಡಬೇಕೇ ಎಂಬ ಕುರಿತು ಅಧಿಕಾರಿಗಳೂ ಗೊಂದಲಕ್ಕೆ ಒಳಗಾಗಿದ್ದಾರೆ.

  ಲಾನುಭವಿಗಳ ಅಸಮಾಧಾನ: ಈಗಾಗಲೇ ಆಟೋ, ಟ್ಯಾಕ್ಸಿ ಚಾಲಕರಿಗೆ ಸಹಾಯಧನ ಪಡೆಯಲು ಅರ್ಜಿ ಸಲ್ಲಿಸುವ ಸಂಬಂಧ ಸಾರಿಗೆ ಇಲಾಖೆಯು ಸೇವಾ ಸಿಂಧು ಆ್ಯಪ್ ಜಾರಿಗೆ ತಂದಿದೆ. ಚಾಲಕರು ಅನುಜ್ಞಾನ ಪತ್ರ, ಬ್ಯಾಡ್ಜ್ , ವಾಹನ ನೋಂದಣಿ ಸಂಖ್ಯೆ, ಆಧಾರ ಸಂಖ್ಯೆ, ಬ್ಯಾಂಕ್ ಖಾತೆ ಸೇರಿ ಅಗತ್ಯ ಮಾಹಿತಿ ನೀಡಲು ಮಾರ್ಗಸೂಚಿ ಹೊರಡಿಸಿದೆ. ಆದರೆ, ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಟೇಲರ್, ಮಡಿವಾಳರು, ಕ್ಷೌರಿಕರು ಸೇರಿ ಇತರರಿಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ. ಯಾವ ಇಲಾಖೆಯ ವ್ಯಾಪ್ತಿಯಲ್ಲಿ ಸಹಾಯಧನ ಪಡೆದುಕೊಳ್ಳಬೇಕೆಂದು ಸರ್ಕಾರ ಮಾಹಿತಿ ನೀಡುತ್ತಿಲ್ಲ ಎಂದು ಟೇಲರ್, ಕ್ಷೌರಿಕ ಸಮುದಾಯ ಮುಖಂಡರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

  ಸ್ವಂತ ಅಂಗಡಿ ಇಲ್ಲದಿರುವುದೇ ಬಡ ಕಾರ್ಮಿಕರಿಗೆ ಸಮಸ್ಯೆ

  ಅಸಂಘಟಿತ ವಲಯದಲ್ಲಿ ಗುರುತಿಸಿಕೊಂಡಿರುವ ಮಡಿವಾಳರು, ಹಡಪದ ಹಾಗೂ ಟೇಲರ್ ಸಮುದಾಯಗಳು ಕುಲ ಕಸುಬು ನಂಬಿಕೊಂಡು ಬದುಕು ಸಾಗಿಸುತ್ತಿವೆ. ಅದರಲ್ಲಿ ಕೆಲವರು ಸ್ವಂತ ಅಂಗಡಿ ಹೊಂದಿಲ್ಲ. ಬದಲಾಗಿ ಮತ್ತೊಬ್ಬರ ಬಳಿ ಕೂಲಿ ಆಧಾರದ ಮೇಲೆ ದುಡಿಯುತ್ತಿದ್ದಾರೆ. ಸ್ವಂತ ಅಂಗಡಿ ಇಲ್ಲದಿರುವುದೇ ಸರ್ಕಾರ ಸಹಾಯಧನ ಪಡೆಯಲು ದೊಡ್ಡ ಸಮಸ್ಯೆಯಾಗಿದೆ. ಅಂಗಡಿಗಳ ಮಾಲೀಕರು ಕಾರ್ಮಿಕರಿಗೆ ಪಿಎಫ್, ಇಎಸ್‌ಐ ಸೌಲಭ್ಯ ನೀಡಬೇಕಾಗುತ್ತದೆ ಎಂಬ ಕಾರಣಕ್ಕೆ ತಮ್ಮ ಬಳಿ ಕೆಲಸ ಮಾಡುತ್ತಿರುವವರ ಮಾಹಿತಿ ನೀಡುತ್ತಿಲ್ಲ. ಹಾಗಾಗಿ, ಬಡ ಕಾರ್ಮಿಕರು ಆತಂಕಕ್ಕೆ ಒಳಗಾಗಿದ್ದಾರೆ.

  ಸಹಾಯಧನಕ್ಕಾಗಿ ಫಲಾನುಭವಿಗಳ ಆಯ್ಕೆ ಸೇರಿ ಇತರ ವಿಷಯಗಳ ಕುರಿತು ಅಧಿಕೃತ ಆದೇಶ ಬಂದಿಲ್ಲ. ಯಾವ ಇಲಾಖೆಯಿಂದ ಸಹಾಯಧನ ನೀಡಬೇಕು ಎಂಬ ಕುರಿತು ಮಾಹಿತಿ ಇಲ್ಲ. ಆದರೂ, ನಾಲ್ಕೈದು ದಿನಗಳಿಂದ ದರ್ಜಿಗಳು, ಮಡಿವಾಳರು, ಹಡಪದ ಸಮುದಾಯವದರು ಅರ್ಜಿ ಹಿಡಿದು ಪ್ರತಿದಿನ ಕಾರ್ಮಿಕರ ಕಚೇರಿಗೆ ಬರುತ್ತಿದ್ದಾರೆ.
  | ವೆಂಕಟೇಶ ಶಿಂಧಿಹಟ್ಟಿ ಉಪ ಆಯುಕ್ತ, ಕಾರ್ಮಿಕ ಇಲಾಖೆ

  ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಲಕ್ಷಾಂತರ ಜನರು ದರ್ಜಿ ವೃತ್ತಿ ನಂಬಿಕೊಂಡು ಬದುಕು ಸಾಗಿಸುತ್ತಿದ್ದಾರೆ. ಆದರೆ, ಸರ್ಕಾರದಿಂದ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಇದೀಗ ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾಗಿರುವ ಟೇಲರ್‌ಗಳಿಗೆ ಸಹಾಯಧನ ಸೌಲಭ್ಯ ಕಲ್ಪಿಸಲು ಕಾರ್ಮಿಕ ಇಲಾಖೆ ಪ್ರಯತ್ನಿಸುತ್ತಿಲ್ಲ. ಹೀಗಾಗಿ ಜಿಲ್ಲಾ ಉಸ್ತುವಾರಿ ಸಚಿವರು, ಕಾರ್ಮಿಕ ಸಚಿವರಿಗೆ ಮನವಿ ಸಲ್ಲಿಸಲಿದ್ದೇವೆ.
  | ಕೃಷ್ಣ ಭಟ್ ರಾಜ್ಯ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಟೇಲರ್ಸ್ ಅಸೋಸಿಯೇಷನ್

  | ಮಂಜುನಾಥ ಕೋಳಿಗುಡ್ಡ ಬೆಳಗಾವಿ

  ಸಿನಿಮಾ

  ಲೈಫ್‌ಸ್ಟೈಲ್

  ಟೆಕ್ನಾಲಜಿ

  Latest Posts