More

    ವಿಶ್ವಕಪ್​ ಫೈನಲ್​ನಲ್ಲಿ ಸಿಗದ ಅವಕಾಶ! ರೋಹಿತ್​ ಬಗ್ಗೆ ಅಶ್ವಿನ್ ಮಾತುಗಳನ್ನು ಮೆಚ್ಚಲೇಬೇಕು…​

    ನವದೆಹಲಿ: ವಿಶ್ವಕಪ್​ ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಹನ್ನೊಂದರ ಬಳಗದಲ್ಲಿ ತನಗೆ ಅವಕಾಶ ನೀಡದಿದ್ದಕ್ಕೆ ನಾಯಕ ರೋಹಿತ್​ ಶರ್ಮ ಮೇಲೆ ನನಗೆ ಯಾವುದೇ ರೀತಿಯ ಅಸಮಾಧಾನ ಇಲ್ಲ ಎಂದು ಟೀಮ್​ ಇಂಡಿಯಾದ ಸ್ಪಿನ್​ ಮಾಂತ್ರಿಕ ರವಿಚಂದ್ರನ್​ ಅಶ್ವಿನ್​ ತಿಳಿಸಿದ್ದಾರೆ.

    ಟೀಮ್​ ಇಂಡಿಯಾದ ಮಾಜಿ ಆಟಗಾರ ಎಸ್​. ಬದ್ರಿನಾಥ್​ ಅವರ ಯೂಟ್ಯೂಬ್​ ಚಾನೆಲ್​ನಲ್ಲಿ ಮಾತನಾಡಿರುವ ಅಶ್ವಿನ್​, ಆಸ್ಟ್ರೇಲಿಯಾದ ಫೈನಲ್​ ಪಂದ್ಯಕ್ಕೆ ರೋಹಿತ್​ ಶರ್ಮ ಅವರ ಮನಸ್ಥಿತಿಯನ್ನು ನಾನು ಚೆನ್ನಾಗಿ ಅರ್ಥ ಮಾಡಿಕೊಂಡಿದ್ದೆ ಎಂದು ಹೇಳಿದ್ದಾರೆ. ಆಟಗಾರರ ಸಂಯೋಜನೆಯ ಬಗ್ಗೆ ರೋಹಿತ್​ ನೂರು ಬಾರಿ ಯೋಚಿಸುತ್ತಿದ್ದರು. ಆದರೆ, ಇಡೀ ಟೂರ್ನಿಯಲ್ಲಿ ಉತ್ತಮ ಪ್ರದರ್ಶನ ತೋರಿದ್ದರಿಂದ ಅದೇ ಹನ್ನೊಂದರ ಬಳಗವನ್ನು ರೋಹಿತ್​ ಉಳಿಸಿಕೊಂಡರು. ಆ ಸ್ಥಾನದಲ್ಲಿ ಯಾರೇ ಇದ್ದಿದ್ದರೂ ಇದನ್ನೇ ಮಾಡುತ್ತಿದ್ದರು ಎಂದರು.

    ಅಂದಹಾಗೆ ಇತ್ತೀಚೆಗಷ್ಟೇ ಮುಕ್ತಾಯಗೊಂಡ ವಿಶ್ವಕಪ್​ನಲ್ಲಿ ಆಸ್ಟ್ರೇಲಿಯಾ ವಿರುದ್ಧ ನಡೆದ ಭಾರತದ ಮೊದಲ ಲೀಗ್​ ಪಂದ್ಯದಲ್ಲಿ ಆಡುವ ಹನ್ನೊಂದರ ಬಳಗ ಸೇರಿದ್ದ ಅಶ್ವಿನ್​, 34 ರನ್​ ನೀಡಿ 1 ವಿಕೆಟ್​ ಪಡೆದಿದ್ದರು. ಆ ಬಳಿಕ ಅಶ್ವಿನ್​ರನ್ನು ಬೆಂಚ್​ ಕಾಯಿಸಲಾಯಿತು. ಫೈನಲ್​ನಲ್ಲೂ ಅವಕಾಶ ನೀಡಲಿಲ್ಲ. ಏಕೆಂದರೆ, ಭಾರತ ಫೈನಲ್​ಗೂ ಮುಂಚೆ ಆರು ಪಂದ್ಯಗಳಲ್ಲಿ ಅಮೋಘ ಪ್ರದರ್ಶನ ನೀಡಿತ್ತು. ಹೀಗಾಗಿ ಅದೇ ತಂಡವನ್ನು ಉಳಿಸಿಕೊಳ್ಳಲು ರೋಹಿತ್​ ನಿರ್ಧರಿಸಿದರು.

    ಪ್ರಾಮಾಣಿಕವಾಗಿ ಹೇಳಬೇಕೆಂದರೆ, ನಾನು ರೋಹಿತ್ ಶರ್ಮ ಅವರ ಚಿಂತನೆಯ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳಬಲ್ಲೆ. ಫೈನಲ್​ನಲ್ಲಿ ಆಡುವುದು ಒಂದು ದೊಡ್ಡ ಅವಕಾಶ. ಅದಕ್ಕಾಗಿ ನಾನು 3 ದಿನಗಳ ಕಾಲ ಭರ್ಜರಿ ತಯಾರಿ ನಡೆಸಿದ್ದೆ. ಆದರೂ ಅವಕಾಶ ಸಿಗಲಿಲ್ಲ. ಹೀಗಾಗಿ ನನ್ನನ್ನು ಸಾಕಷ್ಟು ಮಂದಿ ಪ್ರಶ್ನೆ ಮಾಡಿದರು. ವಾಟ್ಸ್​ಆ್ಯಪ್​ನಲ್ಲಿ ಸಾಕಷ್ಟು ಮೆಸೇಜ್​ಗಳನ್ನು ನಾನು ಓದಿದ್ದೇನೆ. ಇದರಿಂದ ನಾನು ನನ್ನ ಫೋನ್​ ಅನ್ನೇ ಸ್ವಿಚ್​ ಆಫ್​ ಮಾಡಿದ್ದೆ. ನಿಜ ಹೇಳಬೇಕೆಂದರೆ, ಒಂದು ಅವಕಾಶಕ್ಕಾಗಿ ನಾನು ನನ್ನನ್ನು ಚೆನ್ನಾಗಿ ತಯಾರಿ ನಡೆಸಿದ್ದೆ ಮತ್ತು ಅದೇ ಸಮಯದಲ್ಲಿ, ಅವಕಾಶ ಸಿಗದಿದ್ದರೂ ನಾನು ತಂಡವನ್ನು ಹುರಿದುಂಬಿಸಲು ಸಿದ್ಧನಾಗಿದ್ದೆ ಎಂದು ಅಶ್ವಿನ್​ ತಿಳಿಸಿದರು.

    ವಿಶ್ವಕಪ್​ ಸೋಲು
    ನ. 19ರಂದು ಗುಜರಾತಿನ ಅಹಮಾಬಾದ್​ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆದ ವಿಶ್ವಕಪ್​ ಟೂರ್ನಿಯ ಮಹತ್ವದ ಫೈನಲ್​ ಪಂದ್ಯದಲ್ಲಿ ಭಾರತ ನೀಡಿದ 241 ರನ್​ಗಳ ಸಾಧಾರಣ ಗುರಿ ಬೆನ್ನತ್ತಿದ ಆಸಿಸ್ ಕೇವಲ​ 43 ಓವರ್​ಗಳಲ್ಲಿ 4 ವಿಕೆಟ್​ ನಷ್ಟಕ್ಕೆ 241 ರನ್​ ಗಳಿಸುವ ಮೂಲಕ ಸುಲಭವಾಗಿ ಗುರಿ ಮುಟ್ಟಿತು. ಕೇವಲ 47 ರನ್​ಗಳಿಗೆ ಪ್ರಮುಖ 3 ವಿಕೆಟ್​ ಕಳೆದುಕೊಂಡ ಸಂಕಷ್ಟಕ್ಕೆ ಸಿಲುಕಿದ ಆಸಿಸ್​​ಗೆ ಟ್ರಾವಿಸ್​ ಹೆಡ್ ಆಪತ್ಭಾಂದವರಾದರು. ನಿರ್ಣಾಯಕ ಪಂದ್ಯದಲ್ಲಿ ಅಮೋಘ ಶತಕ ಸಿಡಿಸಿದ ಹೆಡ್ ( 137 ರನ್​ 120 ಎಸೆತ 15 ಬೌಂಡರಿ, 4ಸಿಕ್ಸರ್​) ​, ಆಸಿಸ್​ಗೆ ಸುಲಭ ಗೆಲುವು ತಂದುಕೊಟ್ಟರು. ಹೆಡ್​ ಜತೆಗೆ ಮಾರ್ನಸ್​ ಲಬುಶೇನ್​ ಉತ್ತಮ ಸಾಥ್​ ನೀಡಿದರು. ಈ ಜೋಡಿ ನಿರ್ಣಾಯಕ ಪಂದ್ಯದಲ್ಲಿ 192 ರನ್​ಗಳ ಅಮೋಘ ಜತೆಯಾಟವಾಡಿದರು. ತಾಳ್ಮೆಯ ಆಟವಾಡಿದ ಲಬುಶೇನ್ 110​ ಎಸೆತಗಳಲ್ಲಿ 4 ಬೌಂಡರಿಯೊಂದಿಗೆ 58 ರನ್​ಗಳ ಅರ್ಧಶತಕ ಸಿಡಿಸಿ ಮಿಂಚಿದರು. ಈ ಮೂಲಕ ಆಸೀಸ್​ ಪಡೆ 6ನೇ ಬಾರಿಗೆ ವಿಶ್ವಕಪ್​ ಟ್ರೋಫಿಯನ್ನು ಜಯಿಸಿ ಕ್ರಿಕೆಟ್​ ಜಗತ್ತಿನ ಅಧಿಪತಿ ಎನಿಸಿಕೊಂಡಿದೆ. (ಏಜೆನ್ಸೀಸ್​)

    IPL 2024| ಗುಜರಾತ್​ ಬಿಟ್ಟು ಮುಂಬೈಗೆ ಬರಲಿಲ್ಲ ಹಾರ್ದಿಕ್​! ರೋಹಿತ್​-ರಿತಿಕಾ ವಿರುದ್ಧ ನೆಟ್ಟಿಗರ ಆಕ್ರೋಶ

    ಇಂಗ್ಲೆಂಡ್ ಎದುರು ಭಾರತ ಎ ಮಹಿಳಾ ತಂಡಕ್ಕೆ ರೋಚಕ ಗೆಲುವು ತಂದ ಆರ್‌ಸಿಬಿ ಆಲ್ರೌಂಡರ್

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts