More

    ಒಣತ್ಯಾಜ್ಯ ಘಟಕ ಕಾರ್ಯಾರಂಭ

    ಅನ್ಸಾರ್ ಇನೋಳಿ ಉಳ್ಳಾಲ

    ಸ್ವಚ್ಛತೆ ಬಗ್ಗೆ ಭಾಷಣ ಮಾಡುವವರು ಒಂದು ಕಡೆ, ಭರವಸೆ ನೀಡುವವರು ಮತ್ತೊಂದು ಕಡೆ. ಇವರೆಡರ ಮಧ್ಯೆ ಕಾರ್ಯ ಸಾಧನೆಗೆ ಹೊರಟವರೇ ನಿಜವಾದ ಶೂರರು. ಅಂಥ ಸಾಹಸಕ್ಕೆ ಬಾಳೆಪುಣಿ ಪಂಚಾಯಿತಿ ಮುಂದಾಗಿದೆ. ಇದಕ್ಕೆ ಬಲ ತುಂಬಿರುವ ಐವರು ಮಹಿಳಾಮಣಿಗಳು ಸ್ವಚ್ಛತೆಗಾಗಿ ತರಬೇತಿ ಪಡೆದು ಕಾರ್ಯರೂಪಕ್ಕಿಳಿಸಿದ್ದಾರೆ.

    ಘನ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ, ನಿರ್ವಹಣೆ ನಿಟ್ಟಿನಲ್ಲಿ ದ.ಕ. ಜಿಲ್ಲೆಯಲ್ಲೇ ಪ್ರಥಮ ಘಟಕ ಆರಂಭಗೊಂಡಿದ್ದು ಬಾಳೆಪುಣಿ ಗ್ರಾಮದಲ್ಲಾದರೂ ಅದನ್ನು ಆರಂಭಿಸಿದ್ದು ಕುರ್ನಾಡು ಗ್ರಾಮ ಪಂಚಾಯಿತಿ. ಕೆಲವು ವರ್ಷಗಳಿಂದ ಈ ಘಟಕದ ನಿರ್ವಹಣೆ ಸೊರಗಿದ್ದು ಸ್ಥಳೀಯರ ಪಾಲಿಗೆ ಸಮಸ್ಯೆಯಾಗಿ ಕಾಡುತ್ತಿದೆ. ನಿರ್ವಹಣೆಯ ಸಮರ್ಪಕ ತರಬೇತಿ ಸಿಬ್ಬಂದಿಗೆ ಇಲ್ಲದಿರುವುದೇ ಇದಕ್ಕೆ ಪ್ರಮುಖ ಕಾರಣ.
    ಈ ನಡುವೆ ಜನಶಿಕ್ಷಣ ಟ್ರಸ್ಟ್‌ನ ನಿರಂತರ ಪ್ರೇರಣೆಯ ಫಲವಾಗಿ ಬಾಳೆಪುಣಿ ಗ್ರಾಮ ಪಂಚಾಯಿತಿ ಘನತ್ಯಾಜ್ಯ ಘಟಕ ಆರಂಭಿಸಲು ಮುಂದಾಗಿದೆ. ಆದರೆ ಸೂಕ್ತ ಯೋಜನೆಯಿಲ್ಲದೆ ನೂರರಲ್ಲಿ ಒಂದಾಗುವ ಭೀತಿ, ಗ್ರಾಮಸ್ಥರ ಸಹಕಾರದ ಅನುಮಾನ ಕಾಡುವುದು

    ಸಾಮಾನ್ಯ. ಆ ನಿಟ್ಟಿನಲ್ಲಿ ಉಡುಪಿ ಜಿಲ್ಲೆಯ ಅತ್ಯಂತ ಸಣ್ಣ ಗ್ರಾಮ ಆಗಿರುವ ವಂಡ್ಸೆ ಮಾದರಿಗೆ ಮೊರೆ ಹೋಗಿದೆ.
    ಈಗಾಗಲೇ ಕುರ್ನಾಡು ಗ್ರಾಮ ಪಂಚಾಯಿತಿ ಅಧಿಕಾರಿಗಳು, ಜನಪ್ರತಿನಿಧಿಗಳು ಶೀನ ಶೆಟ್ಟಿ ಮತ್ತು ಕೃಷ್ಣ ಮೂಲ್ಯ ಅವರ ಜತೆ ಹಿಂದೆಯೇ ವಂಡ್ಸೆಗೆ ಹೋಗಿ ಅಲ್ಲಿನ ಘಟಕ, ನಿರ್ವಹಣಾ ರೀತಿ ನೋಡಿ ಬಂದಿದ್ದಾರೆ. ಅದರಿಂದೇನೂ ಪ್ರಯೋಜನ ಆಗಿಲ್ಲ. ಅಂಥ ಸ್ಥಿತಿ ಬಾಳೆಪುಣಿಗೆ ಬರಬಾರದು ಎಂಬ ಸಂಕಲ್ಪ ತೊಟ್ಟ ಪಂಚಾಯಿತಿ ಆಡಳಿತ ಮತ್ತು ಅಧಿಕಾರಿ ವರ್ಗ ವಂಡ್ಸೆ ಮಾದರಿಯನ್ನು ವೀಕ್ಷಣೆಗೆ ಮಾತ್ರ ಸೀಮಿತಗೊಳಿಸದೆ ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗಿದೆ.

    ಈಗಾಗಲೇ ಸ್ಥಳೀಯ ದಾನಿಗಳ ಸಭೆ ನಡೆದಿದ್ದು ಘಟಕ ಮುನ್ನಡೆಸಲು ಅಗತ್ಯ ಸಹಕಾರ ನೀಡುವ ಭರವಸೆ ನೀಡಿದ್ದಾರೆ. ಬಾಳೆಪುಣಿ ಮತ್ತು ಕೈರಂಗಳ ಗ್ರಾಮದ ಎರಡು ವಾರ್ಡುಗಳಲ್ಲಿ ಮನೆ, ಅಂಗಡಿಗಳಿಂದ ಮಾತ್ರವೇ ಒಣಕಸ ಸಂಗ್ರಹಿಸಿ ಘಟಕಕ್ಕೆ ತರಲಾಗುತ್ತಿದ್ದು, ಬಾಡಿಗೆ ವಾಹನ ಗೊತ್ತುಪಡಿಸಲಾಗಿದೆ. ಮುಂದಕ್ಕೆ ವರ್ತಕರ ಸಭೆಯೂ ನಡೆಯಲಿದ್ದು ಘಟಕ ವಿಸ್ತರಣೆ ಆಗಲಿದೆ. ಅದರೊಂದಿಗೆ ಹಸಿಕಸ ಸಂಗ್ರಹ ಆರಂಭಿಸಿ ಎರಡೂ ಗ್ರಾಮಗಳಿಗೆ ವಿಸ್ತರಿಸುವ ಯೋಜನೆ ಹಮ್ಮಿಕೊಳ್ಳಲಾಗಿದೆ.

    ಸಿದ್ಧರಾದ ಪಂಚ ಮಾತೆಯರು
    ಜನಶಿಕ್ಷಣ ಟ್ರಸ್ಟ್ ಕಾರ್ಯಾಚರಿಸುತ್ತಿರುವ ಪರಿಸರದಲ್ಲೇ ಇರುವ ಕುರ್ನಾಡು ಘಟಕ ಪ್ರಸ್ತುತ ಕೋಮಾ ಸ್ಥಿತಿಯಲ್ಲಿದೆ. ಹೀಗಿರುವಾಗ ತಮ್ಮ ಕಚೇರಿ ಆಸುಪಾಸಿನ ಯಾವುದಕ್ಕಾದರೂ ಒಂದು ಗ್ರಾಮ ಸ್ವಚ್ಛತೆ ವಿಷಯದಲ್ಲಿ ಮಾದರಿಯಾಗಬೇಕು ಎಂಬ ಹಂಬಲ ಟ್ರಸ್ಟ್‌ನದ್ದು. ನಿರಂತರ ಕಾರ್ಯಕ್ರಮದ ಫಲ ಎಂಬಂತೆ ಟ್ರಸ್ಟ್ ಕಾರ್ಯಾಚರಿಸುತ್ತಿರುವ ಬಾಳೆಪುಣಿ ಗ್ರಾಮದಲ್ಲೇ ನಳಿನಿ, ಜಯಂತಿ, ಜಾನಕಿ, ಕಮಲಾಕ್ಷಿ, ವಿಜಯ ಎಂಬ ಐವರು ಮಹಿಳೆಯರು ತ್ಯಾಜ್ಯ ವಿಂಗಡನೆಗೆ ರೆಡಿ ಎಂದರು. ಇವರಿಗೆ ಪಂಚಾಯಿತಿ ಸದಸ್ಯೆ ಉಷಾ ನಾಯಕಿಯಾಗಿ ನೇತೃತ್ವ ಕೊಟ್ಟರು. ಪಂಚಾಯಿತಿಯೂ ಒಂದು ಹೆಜ್ಜೆ ಮುಂದಕ್ಕೆ ಇಟ್ಟ ಕಾರಣ ಪ್ರಥಮ ಹಂತದ ಒಣತ್ಯಾಜ್ಯ ಘಟಕ ಜನವರಿ ಒಂದರಿಂದಲೇ ಆರಂಭಗೊಂಡಿದೆ. ಒಂದು ವಾರ ವಂಡ್ಸೆಯಲ್ಲಿ ತರಬೇತಿ ಪಡೆದು ಬಂದಿರುವ ತಂಡ ಒಣ ಕಸ ಬೇರ್ಪಡಿಸುವ ಕಾಯಕ ಅದಾಗಲೇ ಆರಂಭಿಸಿದ್ದಾರೆ.

    ಜನಶಿಕ್ಷಣ ಟ್ರಸ್ಟ್ ಪ್ರೇರಣೆಯಂತೆ ಘನತ್ಯಾಜ್ಯ ನಿರ್ವಹಣೆಗೆ ಮುಂದಾಗಿದ್ದು ವಂಡ್ಸೆಯಲ್ಲಿ ತರಬೇತಿ ತೆಗೆದುಕೊಂಡು ಬಂದಿದ್ದೇವೆ. ಈ ಕೆಲಸ ಸ್ವಲ್ಪ ಕಷ್ಟ ಎನಿಸಿದರೂ ಪರಿಸರ ಸಂರಕ್ಷಣೆ ಮಾಡುವ ನಿಟ್ಟಿನಲ್ಲಿ ಇದೊಂದು ಪುಣ್ಯದ ಕೆಲಸ ಎಂದು ಭಾವಿಸಿದ್ದೇವೆ.
    ಉಷಾ, ತಂಡದ ನಾಯಕಿ

    ಸ್ಥಳೀಯ ಪ್ರದೇಶದಲ್ಲಿರುವ ಮನೆ, ಅಂಗಡಿಗಳನ್ನು ಕೇಂದ್ರವಾಗಿಟ್ಟುಕೊಂಡು ಬಾಡಿಗೆ ವಾಹನದಲ್ಲಿ ಘಟಕಕ್ಕೆ ತಂದು, ಮೂರ್ನಾಲ್ಕು ತಿಂಗಳು ಸ್ಥಳೀಯ ಸಂಪನ್ಮೂಲದಿಂದಲೇ ದಾನಿಗಳ ನೆರವು ಪಡೆದು ನಿರ್ವಹಿಸಲಾಗುವುದು.
    ಶೀನ ಶೆಟ್ಟಿ ಜಿಲ್ಲಾ ಸ್ವಚ್ಛತಾ ರಾಯಭಾರಿ

    ಪ್ರಥಮ ಹಂತವಾಗಿ ಎರಡು ಗ್ರಾಮಗಳ ಎರಡು ವಾರ್ಡುಗಳಲ್ಲಿ ಮಾತ್ರ ಒಣಕಸ ಸಂಗ್ರಹಿಸಿ ವಿಂಗಡಿಸಲಾಗುತ್ತಿದೆ. ಮುಂದಕ್ಕೆ ಘಟಕ ವಿಸ್ತರಿಸುವ ಯೋಜನೆಯಿದೆ. ಇದಕ್ಕೆ ವರ್ತಕರು ಸರ್ವ ಗ್ರಾಮಸ್ಥ ಸಹಕಾರ ಯಾಚಿಸಲಾಗಿದೆ.
    ಸುನೀಲ್
    ಬಾಳೆಪುಣಿ ಗ್ರಾಪಂ ಅಭಿವೃದ್ಧಿ ಅಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts