More

    ಉಜ್ಜಿನಿ ವ್ಯಾಪ್ತಿಯಲ್ಲಿ ಜೀವಜಲದ ಕೊರತೆ

    ಗಡ್ಡೇರ ರವಿಕುಮಾರ ನಿಂಬಳಗೆರೆ ಉಜ್ಜಿನಿ
    ಉಜ್ಜಿನಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬೇಸಿಗೆ ಮುನ್ನವೇ ನೀರಿನ ಕೊರತೆ ಎದ್ದು ಕಾಣುತ್ತಿದ್ದು, ಪಂಚಾಯಿತಿ ವ್ಯಾಪ್ತಿಯಲ್ಲಿ ಉಜ್ಜನಿ, ಬೆಕನಹಳ್ಳಿ ಹಾಗೂ ಬೈರದೇವರಗುಡ್ಡ ಗ್ರಾಮಗಳು ಬರುತ್ತಿವೆ. ಇವುಗಳಲ್ಲಿ ಬೈರದೇವರಗುಡ್ಡದಲ್ಲಿ ಅತಿ ಹೆಚ್ಚು ನೀರಿನ ಬರ ಎದುರಿಸುತ್ತಿದೆ.

    ಉಜ್ಜಿನಿ ಗ್ರಾಮವೊಂದರಲ್ಲೇ 18 ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಇವುಗಳಲ್ಲಿ ಮೂರು ಕೊಳವೆ ಬಾವಿಗಳು ಸ್ಥಗಿತವಾಗಿವೆ. ಕೊಳವೆ ಬಾವಿಯಲ್ಲಿ ನೀರಿದ್ದರೂ ಪದೇಪದೆ ಕೈಕೊಡುವ ವಿದ್ಯುತ್‌ನಿಂದ ನಿರಂತರ ನೀರು ಪೂರೈಕೆಗೆ ಅಡ್ಡಿಯಾಗಿದೆ. ಇನ್ನೂ ಮೂರು ಕೊಳವೆ ಬಾವಿಗಳ ನೀರು ಬಳಕೆಗೆ ಯೋಗ್ಯವಾಗಿಲ್ಲ ಎಂದು ಸ್ಥಗಿತ ಮಾಡಲಾಗಿದೆ.

    ಬೆನಕನಹಳ್ಳಿಯಲ್ಲಿ 300 ಮನೆಗಳಿದ್ದು, ಸಾವಿರಕ್ಕೂ ಹೆಚ್ಚು ಜನಸಂಖ್ಯೆ ಹೊಂದಿದೆ. ಈ ಗ್ರಾಮಕ್ಕೆ 5 ಕಿಮೀ ದೂರದಲ್ಲಿರುವ ಬೆಳೆದೇರಿ ಗ್ರಾಮದ ಬಳಿಯಿಂದ ಬೆನಕಹಳ್ಳಿ ಗ್ರಾಮಕ್ಕೆ ನೀರು ಪೂರೈಕೆ ಮಾಡಲಾಗುತ್ತಿದೆ. ಗ್ರಾಮದಲ್ಲಿ ಶುದ್ಧ ನೀರಿನ ಘಟಕವಿದ್ದು, ಜನರು ಬಳಕೆ ಮಾಡಿಕೊಳ್ಳಬೆಕಾಗಿದೆ.
    ಇನ್ನು ಪರಿಶಿಷ್ಟ ಪಂಗಡ ಹಾಗೂ ಜಾತಿಯವರೇ ಹೆಚ್ಚಾಗಿರುವ ಬೈರದೇವಗುಡ್ಡದಲ್ಲಿ ಕುಡಿಯುವ ನೀರಿಗಾಗಿ ಮೂರು ಕೊಳವೆ ಬಾವಿಗಳನ್ನು ಕೊರೆಸಲಾಗಿದೆ. ಆದರೆ, ಸಮರ್ಪಕವಾಗಿ ನಿರ್ವಹಣೆ ಮಾಡದ ಹಿನ್ನೆಲೆಯಲ್ಲಿ ಗ್ರಾಮದಲ್ಲಿ ಜನರು ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಜನರು ತಮ್ಮ ಕೆಲಸ ಕಾರ್ಯಗಳನ್ನು ಬಿಟ್ಟು ನೀರಿಗಾಗಿ ಅಲೆಯಬೇಕಾಗಿದೆ.

    ಉಜ್ಜಿನಿ ವ್ಯಾಪ್ತಿಯಲ್ಲಿ ಜೀವಜಲದ ಕೊರತೆ
    ಉಜ್ಜಿನಿ ಗ್ರಾಮದ 1ನೇ ವಾರ್ಡಿನಲ್ಲಿ ನೀರಿಗಾಗಿ ಕಾದಿರುವ ಸ್ಥಳೀಯ ನಿವಾಸಿಗಳು.

    ಸಮಸ್ಯೆ ಬಗ್ಗೆ ಪಂಚಾಯಿತಿ ಅಧಿಕಾರಿಗಳು, ನೀರು ಗಂಟಿ ಸೇರಿ ಯಾರು ಕೂಡ ಸ್ಪಂದನೆ ಮಾಡುತ್ತಿಲ್ಲ. ಅಲ್ಲದೆ, ಗ್ರಾಮದಲ್ಲಿ ಸ್ಥಾಪನೆ ಮಾಡಿರುವ ಶುದ್ಧ ನೀರಿನ ಘಟಕ ಕೆಟ್ಟು ನಿಂತು ವರ್ಷವೇ ಕಳೆದು ಹೋಗಿದೆ. ಗ್ರಾಮಕ್ಕೆ ಸರಿಯಾಗಿ ನೀರು ಪೂರೈಕೆ ಮಾಡದ ಅಧಿಕಾರಿಗಳು ಶುದ್ಧ ನೀರಿನ ಘಟಕವನ್ನು ಹೇಗೆ ನಿರ್ವಹಣೆ ಮಾಡುತ್ತಾರೆಂದು ಪ್ರಶ್ನಿಸುವ ಗ್ರಾಮಸ್ಥರು, ಈ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದ್ದರೂ ಕ್ರಮಕ್ಕೆ ಮುಂದಾಗುತ್ತಿಲ್ಲ ಎಂದು ಆರೋಪಿಸುತ್ತಾರೆ.
    ನೀರಿನ ಪೂರೈಕೆ ಸಮಸ್ಯೆ ಒಂದು ಕಡೆಯಾದರೆ ನೀರು ಪೂರೈಕೆ ಮಾಡುವ ಪೈಪುಗಳ ದುರಸ್ತಿ ಮಾಡದೇ ಇರುವುದರಿಂದ ಅಲ್ಲಲ್ಲಿ ಪೈಪ್ ಮೇಲೆಯೇ ನೀರು ನಿಂತು ದುರ್ನಾತ ಬೀರುತ್ತಿವೆ. ಓವರ್‌ಹೆಡ್ ಟ್ಯಾಂಕ್‌ಗಳ ಬಳಿ ವಾಲ್ವ್‌ಗಳಲ್ಲಿ ನೀರು ನಿಂತು ಪಾಚಿ ಕಟ್ಟಿದೆ. ಈ ಬಗ್ಗೆ ಪಂಚಾಯಿತಿ ಅಧಿಕಾರಿಗಳು ಯಾವುದೇ ಕ್ರಮ ಕೈಗೊಳ್ಳದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

    ಉಜ್ಜಿನಿ ವ್ಯಾಪ್ತಿಯಲ್ಲಿ ಜೀವಜಲದ ಕೊರತೆ
    ಉಜ್ಜಿನಿ ಗ್ರಾಮದ ಟ್ಯಾಂಕ್ ಬಳಿ ವಾಲ್ ಜಾಗದಲ್ಲಿ ನೀರು ನಿಂತು ಪಾಚಿಗಟ್ಟಿರುವುದು.

    ನಾನು ಹೊಸದಾಗಿ ಇಲ್ಲಿಗೆ ಬಂದಿದ್ದೇನೆ. ಎಲ್ಲೆಲ್ಲಿ ನೀರಿನ ಸಮಸ್ಯೆ ಇದೆ ಎಂದು ತಿಳಿದುಕೊಂಡು ಹಂತ-ಹಂತವಾಗಿ ಬಗೆಹರಿಸಲಾಗುವುದು.
    ಸಿ.ಎಚ್.ಎಂ.ಗಂಗಾಧರಯ್ಯ, ಉಜ್ಜಿನಿ ಗ್ರಾಪಂ ಪಿಡಿಒ

    ಗ್ರಾಮದಲ್ಲಿರುವ ವಿದ್ಯುತ್ ಉಪ ಕೇಂದ್ರದಿಂದ ಹೆಚ್ಚು ಗ್ರಾಮಗಳಿಗೆ ವಿದ್ಯುತ್ ಪೂರೈಕೆ ಮಾಡಲಾಗುತ್ತಿದೆ. ಇದರಿಂದ ಲೊಡ್ ಶೆಡ್ಡಿಂಗ್ ಸಮಸ್ಯೆ ಇದ್ದು, ನೀರಿನ ಪೂರೈಕೆಗೆ ಸಮಸ್ಯೆಯಾಗುತ್ತಿದೆ. ಗಾಣಗಟ್ಟೆ ವಿದ್ಯುತ್ ಉಪ ಕೇಂದ್ರ ಆರಂಭವಾದರೆ ಸಮಸ್ಯೆ ಬಗೆಹರಿಯಬಹುದು.
    ಸಿದ್ದಪ್ಪ, ಜೆಇ, ಜೆಸ್ಕಾಂ ಉಪ ಕೇಂದ್ರ, ಉಜ್ಜಿನಿ

    ಗ್ರಾಮದಲ್ಲಿ ರೈತರು ಹಾಗೂ ಪರಿಶಿಷ್ಟರೇ ಹೆಚ್ಚಾಗಿದ್ದಾರೆ. ಗ್ರಾಮದಲ್ಲಿ ಸಮರ್ಪಕವಾಗಿ ನೀರು ಪೂರೈಕೆ ಮಾಡದೇ ಇರುವುದರಿಂದ ಗ್ರಾಮಸ್ಥರು ಸಂಕಟ ಅನುಭವಿಸಬೇಕಾಗಿದೆ.
    ವೈ.ಮಾರೇಶ್, ಬೈರದೇವರಗುಡ್ಡ ಗ್ರಾಮಸ್ಥ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts