More

    ಬದುಕಿಗೆ ಬೆಳಕು ಬೀರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ, ತೈಲಾಭಿಷೇಕ

     | ನಿರಂಜನ ದೇವರಮನೆ, ಚಿತ್ರದುರ್ಗ

    ಭಾರತೀಯ ಪರಂಪರೆಯ ಅನೇಕ ಆಚರಣೆಗಳು ತಮ್ಮ ಮಹತ್ವ ಪಡೆದುಕೊಂಡಿದ್ದು, ಇಂದಿಗೂ ಭಾವೈಕ್ಯ, ವಿಶ್ವಭ್ರಾತೃತ್ವ ಹಾಗೂ ಸರ್ವಧರ್ಮ ಸಮನ್ವಯತೆಯನ್ನು ಅನಾವರಣಗೊಳಿಸುವ ಮುಖೇನ ಅನೇಕ ಸಮಜೋಧಾರ್ಮಿಕ ಮೌಲ್ಯಗಳನ್ನು ಸಾರುವುದರೊಂದಿಗೆ ತಮ್ಮ ನೈಜತೆ ಹಾಗೂ ಜೀವಂತಿಕೆಯನ್ನು ಉಳಿಸಿಕೊಂಡಿವೆ. ಧಾರ್ಮಿಕ, ಶ್ರದ್ಧಾವರ್ಧನೆಗಾಗಿ, ಸಾಂಸ್ಕೃತಿಕ ಸಮೃದ್ಧಿಗಾಗಿ, ಸಾಹಿತ್ಯಿಕ ಸಂತಸಕ್ಕಾಗಿ ಹಾಗೂ ಸಾಮಾಜಿಕ ಸಂಘಟನೆಗಾಗಿ ದೇಶದೆಲ್ಲೆಡೆ ತಲತಲಾಂತರದಿಂದ ಅನೇಕ ದೇವರು-ದೇವತೆಗಳ, ಸಾಧು- ಸಂತರ, ಧಾರ್ಮಿಕ-ದಾರ್ಶನಿಕ ಮಾರ್ಗದರ್ಶಕರ ಜಾತ್ರೆ, ವಿವಿಧ ಆಚರಣೆ ಹಾಗೂ ಮಹಾರಥೋತ್ಸವಗಳನ್ನು ಅತ್ಯಂತ ಶ್ರದ್ಧಾಭಕ್ತಿ ಗೌರವಗಳೊಂದಿಗೆ ಆಚರಿಸಲಾಗುತ್ತದೆ. ಈ ಉತ್ಸವಗಳು ನಾಡಿನ ಜನತೆಗೆ ಸುಖ-ಶಾಂತಿ-ಸಮೃದ್ಧಿ ನೀಡುತ್ತವೆ ಹಾಗೂ ಆಯುರಾರೋಗ್ಯ ಭಾಗ್ಯವನ್ನು ಹೆಚ್ಚಿಸುತ್ತವೆ ಎಂಬ ಗಾಢನಂಬಿಕೆ ಮತ್ತು ಪ್ರಕೃತಿಯನ್ನು ಆರಾಧಿಸುವ ಮುಖೇನ ಅದು ನಮಗೆ ನೀಡಿದ ಫಲಕ್ಕೆ ಪ್ರತಿಫಲವಾಗಿ ಧನ್ಯತೆಯೊಂದಿಗೆ ಗೌರವಿಸುವ ಆತ್ಮವಿಶ್ವಾಸ ಜನತೆಯಲ್ಲಿ ಬೇರೂರಿದೆ. ರಥೋತ್ಸವಗಳಲ್ಲಿ ಸೇರಿದ ಜನತೆ ಜಾತಿ-ಮತ-ಪಂಥ ಎಲ್ಲವನ್ನು ಮರೆತು ಒಂದಾಗುತ್ತಾರೆ. ಪರಸ್ಪರ ಕಲೆತು ನವಚೈತನ್ಯದ ಸ್ಫೂರ್ತಿಯನ್ನು ಪಡೆದು ತಮ್ಮ ಭವಿಷ್ಯದ ಬಹುಮುಖಿ ಚಿಂತನೆಯೊಂದಿಗೆ ಭಾವೈಕ್ಯತೆ ಬೀರುವ ಬದುಕನ್ನು ರೂಢಿಸಿಕೊಂಡು ಜೀವನದಲ್ಲಿ ಉಲ್ಲಾಸಭರಿತರಾಗುತ್ತಾರೆ. ಎಲ್ಲಾ ದುಃಖ-ದುಮ್ಮಾನಗಳನ್ನು ಇಬ್ಬದಿಗೆ ಸರಿಸಿ ಬದುಕಿನ ಗುರಿ ಮುಟ್ಟಲು ಸಜ್ಜಾಗುತ್ತಾರೆ.

    ಬದುಕಿಗೆ ಬೆಳಕು ಬೀರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ, ತೈಲಾಭಿಷೇಕ

    ಜನಮನವನ್ನು ನಿತ್ಯವೂ ಹಸನುಗೊಳಿಸುತ್ತಾ ನಿತ್ಯ ನೂತನ ಬದುಕಿಗೆ ಕಾರಣವಾಗಿ ನೀತಿ-ನಿಯಮ ಪಾಲನೆಗೆ ಉನ್ನತ ಜೀವನ ಮೌಲ್ಯಗಳಿಗೆ ಸದಾ ಮಾರ್ಗದರ್ಶಿಗಳಾಗಿ ದೈವ ಸಾಕ್ಷಾತ್ಕಾರದ ಪರಮ ನೆಲೆಗಳಾಗಿ ಸಾಂಸ್ಕೃತಿಕ ಕಲಾ ಕೇಂದ್ರಗಳಾಗಿ, ಪುಣ್ಯ ಸಂಪಾದನ ಶ್ರೀನಿಧಿಗಳಾಗಿ ಸನ್ಮಾರ್ಗ ದರ್ಶನದ ಸಾಧನ ಸೌಧಗಳಾಗಿ ಕಾರ್ಯ ನಿರ್ವಹಿಸುತ್ತಿರುವ ಈ ದೇಶದ ಅನೇಕ ಧರ್ಮ ಪೀಠಗಳು ಮತ್ತು ದೇವ ಮಂದಿರಗಳು ಜನತೆಯ ಪಾಲಿಗೆ ಸದಾ ಜೀವನ್ಮುಕ್ತಿಯ ಪುಣ್ಯತಾಣಗಳಾಗಿ ಕಂಗೊಳಿಸುತ್ತಿವೆ.

    ಇಂಥ ಧರ್ಮ ಪೀಠಗಳಲ್ಲಿ ಒಂದಾದ ಶ್ರೀಮದುಜ್ಜಯಿನಿ ಸದ್ಧರ್ಮ ಪೀಠ ಸದಾ ವಿಶ್ವಮುಖಿ ಚಿಂತನೆಗಳೊಂದಿಗೆ ಭಾವೈಕ್ಯತೆ ಸಾರುವ ಅನೇಕ ಕಾರ್ಯ ಯೋಜನೆಗಳನ್ನು ಹಮ್ಮಿಕೊಂಡು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಅವುಗಳನ್ನು ಅನುಷ್ಠಾನಗೊಳಿಸುತ್ತ ಬಂದಿದೆ. ಈ ಪೀಠದ ಆಚರಣೆಯಲ್ಲಿ ಬಹುಮುಖ್ಯವಾದದ್ದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿ ಜಾತ್ರಾ ಮಹೋತ್ಸವ ಹಾಗೂ ತೈಲಾಭಿಷೇಕ ಬಹು ವಿಶಿಷ್ಟ ಹಾಗೂ ಅತ್ಯಂತ ವೈಭವ ಪೂರ್ಣವಾಗಿ ಜರುಗುವುದರೊಂದಿಗೆ ದೇಶದ ಭಾವೈಕ್ಯತೆಯ ಬೆಸುಗೆಯಾಗಿ ಸರ್ವಧರ್ಮ ಸಹಿಷ್ಣತೆಯ ಸಂಬಂಧಿಯಾಗಿ, ಸಾಮಾಜಿಕ ಸಂವೇದನೆಯ ಸೇತುಬಂಧುವಾಗಿ ತನ್ನ ಆಚರಣೆಯನ್ನು ಅನಾವರಣಗೊಳಿಸಿಕೊಂಡಿದೆ.

    ಬದುಕಿಗೆ ಬೆಳಕು ಬೀರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ, ತೈಲಾಭಿಷೇಕ

    ಉಜ್ಜಯಿನಿ ಸದ್ಧರ್ಮ ಪೀಠದ ಪ್ರಸ್ತುತ ಪರಮ ಪೀಠಾಚಾರ್ಯರಾದ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರು ತಮ್ಮ ಪೀಠ ಪರಂಪರೆಯೊಂದಿಗೆ ಜನಪರ ಕಾರ್ಯಶೀಲತೆಯನ್ನು ತಮ್ಮದಾಗಿಸಿಕೊಂಡು ಮಾನವಧರ್ಮವನ್ನು ಎತ್ತಿಹಿಡಿಯುವ ಕಾರ್ಯವನ್ನು ಅತ್ಯಂತ ಮೌಲಿಕವಾಗಿ ನೆರವೇರಿಸಿಕೊಂಡು ಬರುತ್ತಿದ್ದಾರೆ. ದೇಶ-ವಿಶ್ವ ಕಲ್ಯಾಣ ರಾಷ್ಟ್ರವಾಗಲಿ, ಜನತೆಯ ದುಃಖ ದೂರವಾಗಲಿ, ಸರ್ವರೂ ಸುಖಿಗಳಾಗಿ ಬದುಕಿ-ಬಾಳಲಿ ಎಂಬ ಮಹಾದಾಶಯ ಇಟ್ಟುಕೊಂಡು ಮಹಾರಥೋತ್ಸವದ ಕಾರ್ಯಕ್ರಮಗಳನ್ನು ನಡೆಸಿಕೊಡುತ್ತಾರೆ. ರಾಷ್ಟ್ರದ ಕ್ಷಾಮ-ಡಾಮರಗಳು ದೂರವಾಗಿ ಕ್ಷೇಮ ಸಂಪತ್ತುಗಳು ಸದಾ ನೆಲಸುವಂತಾಗಲಿ, ಭಕ್ತರು ವಾಸಿಸುವ ಊರು-ಕೇರಿಗಳು ಒಂದಾಗಿ ಧರ್ಮ-ಸಂಸ್ಕೃತಿಯ ನೆಲೆಗಳಾಗಲಿ, ಜನ ಸದ್ಗುಣಿ-ಸಜ್ಜನವಂತರಾಗಲಿ, ಸಮಾಜದಲಿ ್ಲ ಉತ್ತಮ ಬಾಂಧವ್ಯ, ಉದಾರತೆ, ಸಾಮರಸ್ಯ, ಸರ್ವಧರ್ಮ ಸಮನ್ವಯ ಮೂಡಲಿ, ಇಂದಿನ ಯುವಪೀಳಿಗೆಯಲ್ಲಿ ಆಸ್ತಿಕತೆಯಲ್ಲಿ ನೆಲೆಯೂರಲಿ ಎಂಬ ಪ್ರೇರಕ ಧರ್ಮ ಶಕ್ತಿ ಮಹಾರಥೋತ್ಸವದಲ್ಲಿ ಅಡಗಿರುತ್ತದೆ. ಹಾಗೇ ಈ ಜಾತ್ರಾ ಮಹೋತ್ಸವದಲ್ಲಿ ಸಂಸ್ಕೃತಿಯಿದೆ, ಭಕ್ತಿಯಿದೆ, ಧರ್ಮವಿದೆ, ಸದಾಚಾರವಿದೆ, ಪಾವಿತ್ರ್ಯತೆಯಿದೆ, ಮಂತ್ರಪುಷ್ಪವಿದೆ, ದೇವಗಾನವಿದೆ, ಇವೆಲ್ಲವುಗಳ ಸಮ್ಮಿಲನದಿಂದ ಜೀವನದಲ್ಲಿ ಸಾರ್ಥಕ್ಯವಿದೆ ಎಂಬ ಧೃಢ ನಿಲುವು ಭಕ್ತರ ವಿಶ್ವಾಸದಲ್ಲಿರುತ್ತದೆ.

    30-04-2022 ಅಕ್ಷಯ ತದಿಗೆ ಅಮವಾಸ್ಯೆಯಂದು ಶ್ರೀ ಮರುಳಸಿದ್ಧೇಶ್ವರ ಸ್ವಾಮಿಗೆ ಕಂಕಣಧಾರಣೆ ಮಾಡುವುದರೊಂದಿಗೆ ಪ್ರತಿ ದಿವಸ ವಿವಿಧ ವಾಹನೋತ್ಸವಗಳು ಜರುಗುವುದರೊಂದಿಗೆ ಧರ್ಮ-ಸಂಸ್ಕೃತಿಯನ್ನು ರಕ್ಷಿಸುವಂಥ ಕಾರ್ಯಕ್ರಮಗಳು ನಡೆಯುತ್ತವೆ. 06-05-2022ನೇ ಶುಕ್ರವಾರದಂದು ಶ್ರೀ ಜಗದ್ಗುರು ಮರುಳಸಿದ್ಧೇಶ್ವರ ಸ್ವಾಮಿಯ ಮಹಾರಥೋತ್ಸವ ನಾಡಿನ ವಿವಿಧ ಜಾತಿ-ಧರ್ಮ-ಪಂಥ- ಪಂಗಡದವರ ಉಪಸ್ಥಿತಿಯಲ್ಲಿ, ಸಾವಿರಾರು ಶಿವಾಚಾರ್ಯರ ನೇತೃತ್ವದಲಿ, ಹರಗುರು ಚರಮೂರ್ತಿಗಳ ಸಮ್ಮುಖದಲಿ ವಿವಿಧ ಜಾನಪದ ಕಲಾಮೇಳದೊಂದಿಗೆ ಶ್ರೀ ಮರುಳಸಿದ್ದೇಶ್ವರ ಸ್ವಾಮಿಯ ಉತ್ಸವಮೂರ್ತಿ ಹಾಗೂ ಪ್ರಸ್ತುತ ಶ್ರೀ ಜಗದ್ಗುರು ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದರ ದಿವ್ಯ ಸಾನಿಧ್ಯದಲ್ಲಿ ಸಾಲಾಂಕೃತ ವರ್ಣರಂಜಿತ ಭವ್ಯರಥ ಉಜ್ಜಯಿನಿ ಪೀಠದ ಪರಿಸರದಲ್ಲಿ ಶ್ರದ್ಧಾ ಭಕ್ತಿಯೊಂದಿಗೆ ಎಳೆಯಲ್ಪಡುತ್ತದೆ. ಆ ಸಂದರ್ಭದಲ್ಲಿ ಲಕ್ಷಾಂತರ ಭಕ್ತರ ಮನಸ್ಸು-ಭಾವನೆಗಳು ಅತ್ಯಂತ ಧನ್ಯತೆಯನ್ನು ಪಡೆಯುವ ದೃಶ್ಯ ಅತ್ಯಂತ ಚೇತೋಹಾರಿಯಾಗಿರುತ್ತದೆ. ಅಂದು ಸಂಜೆ ಶ್ರೀ ಜಗದ್ಗುರುಗಳ ದಿವ್ಯ ಸಾನಿಧ್ಯದಲಿ ಶ್ರೀ ದಾರುಕಾಚಾರ್ಯರ ಜಯಂತಿ ಯುಗಮಾನೋತ್ಸವ ಅತ್ಯಂತ ಅರ್ಥಪೂರ್ಣವಾಗಿ ಜರುಗುತ್ತದೆ. ಶ್ರೀ ದಾರುಕರು ಶಿವನ ಆಜ್ಞೆಯಂತೆ ಮಾಳವ ದೇಶದ ಕ್ಷಿಪ್ರಾ ನದಿಯ ದಡದಲ್ಲಿರುವ ಮಹಾಕಾಲ ಉಜ್ಜಯಿನಿಯ ವಟಕ್ಷೇತ್ರದ ಸುಪ್ರಸಿದ್ಧವಾದ ಶ್ರೀ ಸಿದ್ಧೇಶ್ವರ ಜ್ಯೋರ್ತಿಲಿಂಗ ಮುಖದಿಂದ ದಿವ್ಯದೇಹಿಯಾಗಿ ಅವತರಿಸಿ ಶಿವಾದ್ವೈತ ಸಿದ್ಧಾಂತವನ್ನು ಸಂಸ್ಥಾಪಿಸಿ ಶಿವನ ಸ್ವರೂಪವಾದ ಇಷ್ಟಲಿಂಗವನ್ನು ಎಲ್ಲಾ ಮಾನವರಿಗೂ ಅನುಗ್ರಹಿಸಿ ಶಿವ ಸೂತ್ರಾದಿ ರಹಸ್ಯಗಳನ್ನು ಉಪದೇಶಿಸಿ ಈ ನಾಡನ್ನು ಬೆಳಗಿದವರು.

    ಬದುಕಿಗೆ ಬೆಳಕು ಬೀರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ, ತೈಲಾಭಿಷೇಕ

    ನೈಮಿಕಾರಣ್ಯದ ಆಶ್ರಮದಲ್ಲಿ ತಪೋಮಗ್ನರಾದ ದಧೀಚಿ ಮಹರ್ಷಿಯನ್ನು ಎಚ್ಚರಿಸಿ, ಅವರನ್ನು ನಿಮಿತ್ತ ಮಾಡಿಕೊಂಡು ಸಹಸ್ರಾರು ತಪಸ್ವಿಗಳಿಗೆ ಶಿವಾದ್ವೈತ ಸಿದ್ಧಾಂತವನ್ನು ಉಪದೇಶ ಮಾಡಿ, ಲಿಂಗದೀಕ್ಷೆಯನ್ನು ಅನುಗ್ರಹಿಸಿ ಶಿವಜ್ಞಾನವನ್ನುಂಟು ಮಾಡುವ, ಶಿವಸಿದ್ಧಾಂತವನ್ನು ಬೋಧಿಸುವ ಮುಖೇನ ವೀರಶೈವ, ಅಷ್ಟಾವರಣ ಪಂಚಾಚಾರ, ಷಟ್‌ಸ್ಥಲ ಹಾಗೂ ಕಾಯಕ-ದಾಸೋಹದ ಮಹತ್ವ ಮತ್ತು ಶಿವಯೋಗದ ಶಕ್ತಿಯನ್ನು ಅರುಹಿದವರು. ಇಂಥ ಕಾರಣಿಕ ಯುಗ ಪುರುಷರನ್ನು ಸ್ಮರಣೆ ಮಾಡುವುದರೊಂದಿಗೆ ಅವರು ಸಾರಿದ ಸ್ತ್ರೀಯರಿಗೆ ಸಮಾನತೆ, ಸ್ವಾತಂತ್ರ್ಯತೆ, ಜಾತ್ಯಾತೀತತೆ ಹಾಗೂ ವಿಶ್ವ ಭ್ರಾತೃತ್ವ ಮುಂತಾದ ಮೌಲ್ಯಗಳ ಚಿಂತನೆ ಮಾಡಲಾಗುತ್ತದೆ.

    ಶ್ರೀ ದಾರುಕರು ವೈದಿಕ, ಪೌರಾಣಿಕ, ಹಿಂಸಾ ಧರ್ಮವನ್ನು ನಿರಾಕರಿಸಿ ಸದಾಚಾರಣೆಗಳನ್ನು ಬೋಧಿಸಿ ಜನರಲ್ಲಿನ ಕ್ರಿಯಾಶೀಲ ನೀತಿ-ಸಂಸ್ಕೃತಿ- ಮನೋಭಾವನೆಗಳನ್ನು ಬೆಳೆಸಿದವರು. ಭಕ್ತಿ-ಜ್ಞಾನ-ವೈರಾಗ್ಯಗಳೇ ಮಾನವನ ಕಲ್ಯಾಣಕ್ಕೆ ಅಗತ್ಯವಾದ ಮಾನವೀಯ ಸಾಧನೆಗಳೆಂದು ಸಾರಿದವರು ಇಂಥ ಮಹಾಮಹಿಮರ ಜಯಂತಿಯನ್ನು ಅತ್ಯಂತ ವಿಶಿಷ್ಟವಾಗಿ ಆಚರಿಸಲಾಗುತ್ತದೆ. 07-05-2022ನೇ ಶನಿವಾರ ಸಂಜೆ 4.00 ಗಂಟೆಗೆ ಸರಿಯಾಗಿ ಶ್ರೀ ಮರುಳಸಿದ್ದೇಶ್ವರ ಸ್ವಾಮಿ ದೇವಾಲಯದ ಗೋಪುರದ ಶಿಖರಕ್ಕೆ ತೈಲಾಭೀಷೇಕವನ್ನು ನೆರವೇರಿಸಲಾಗುತ್ತದೆ. ನಾಡಿನ ಮೂಲೆ-ಮೂಲೆಗಳಿಂದ ಆಗಮಿಸುವ ಭಕ್ತಾದಿಗಳು ಹಾಗೂ ಜರಿಮಲೆ ರಾಜವಂಶಸ್ಥರಿಂದ ಅತ್ಯಂತ ಶ್ರದ್ಧಾಪೂರ್ವಕವಾಗಿ ಶಿಖರಕ್ಕೆ ತೈಲವನ್ನು ಎರೆಯಲಾಗುತ್ತದೆ. ವೈಜ್ಞಾನಿಕ ತಳಹದಿಯ ಮೇಲೆ ಆಧ್ಯಾತ್ಮಿಕ ಭಾವನೆಗಳೊಂದಿಗೆ ಈ ಆಚರಣೆಯನ್ನು ಕೈಗೊಳ್ಳಲಾಗುತ್ತದೆ. 08-05-2022 ಭಾನುವಾರದಂದು ಜಂಗಮ ವಟುಗಳಿಗೆ ಹಾಗೂ ವೀರಶೈವ ಧರ್ಮ ಸಂಸ್ಕೃತಿ ಪ್ರಚಾರ ಮಾಡುವ ವೀರಮಾಹೇಶ್ವರರಿಗೆ ನಾಡಿನ ಹರಗುರುಚರ ಮೂರ್ತಿ ಸಮ್ಮುಖದಲಿ ಶಿವಾಚಾರ್ಯರ ನೇತೃತ್ವದಲಿ ಇಷ್ಟಲಿಂಗ ದೀಕ್ಷಾ ಕಾರ್ಯಕ್ರಮ ಮತ್ತು ಧರ್ಮೋಪದೇಶವನ್ನು ಅತ್ಯಂತ ಶಾಸ್ತ್ರೋಕ್ತವಾಗಿ ನೆರವೇರಿಸುವ ಮುಖೇನ ಶ್ರೀ ಜಗದ್ಗುರುಗಳು ವೀರಶೈವ ಧರ್ಮ ಪ್ರಚಾರ ಸಂಸ್ಕೃತಿ ಪರಂಪರೆಯನ್ನು ಸದಾ ಪಾಲಿಸಿಕೊಂಡು ಸಂಸ್ಕಾರವಂತರಾಗಿ ಬಾಳುವಂತೆ ಧರ್ಮ ಸಂದೇಶವನ್ನು ದಯಪಾಲಿಸುತ್ತಾರೆ.

    ಬದುಕಿಗೆ ಬೆಳಕು ಬೀರುವ ಶ್ರೀ ಉಜ್ಜಯಿನಿ ಮರುಳಸಿದ್ಧೇಶ್ವರ ಜಾತ್ರಾ ಮಹೋತ್ಸವ, ತೈಲಾಭಿಷೇಕ

    10-05-2022 ಮಂಗಳವಾರದಂದು ಶ್ರೀ ಮರುಳಸಿದ್ದೇಶ್ವರ ಸ್ವಾಮಿಗೆ ಆಘ್ರವಣೆ ನೀಡುವ ಮುಖೇನ ಕಂಕಣ ವಿಸರ್ಜನೆ ಹಾಗೂ ದೇವಾಲಯ ಶುದ್ಧೀಕರಣ ಮಾಡಲಾಗುತ್ತದೆ. ಈ ನಾಡಿನ ರೈತರಿಗೆ ಶ್ರೀ ಮರುಳಸಿದ್ದೇಶ್ವರ ಕೃಪೆ ಇದ್ದರೆ ಮಳೆ-ಬೆಳೆ ಸಮೃದ್ಧವಾಗಿ ಬರುತ್ತದೆ ಎಂಬ ಗಾಢ ನಂಬಿಕೆ ಬಹಳ ಹಿಂದಿನಿಂದಲೂ ಬಂದಿದೆ. ಅದರಂತೆ ಪ್ರತಿ ವರ್ಷವೂ ಬರುವ ಫಸಲಿನ ದವಸ-ಧಾನ್ಯಗಳನ್ನು ಶ್ರೀ ಸ್ವಾಮಿಗೆ ಅರ್ಪಿಸಿ ನಂತರ ಬಳಸುವುದು ರೈತರ ವಾಡಿಕೆಯಾಗಿದೆ ಆ ಪದ್ಧತಿ ಈಗಲೂ ಮುಂದುವರಿಯುತ್ತಿರುವುದರಿಂದ ಶ್ರೀ ಪೀಠಕ್ಕೆ ಲಕ್ಷಾಂತರ ರೈತರು ಮಹಾರಥೋತ್ಸವದಲ್ಲಿ ಭಾಗಿಗಳಾಗಿ ತಮ್ಮ ಅಸ್ಮಿತೆಯನ್ನು ಪ್ರದರ್ಶಿಸುತ್ತಾರೆ. ಹೀಗೆ ಹತ್ತಾರು ದಿನಗಳವರೆಗೆ ಜರಗುವ ಈ ಜಾತ್ರಾ ಮಹೋತ್ಸವ ಬಹುಮುಖಿ ಚಿಂತನೆಗಳನ್ನು ಇಟ್ಟುಕೊಂಡು ಈ ಮಹಾರಥೋತ್ಸವದ ನೆಪದಲ್ಲಿ ಹತ್ತಾರು ಪ್ರಗತಿಪರ ಕಾರ್ಯ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮುಖೇನ ಭಾವೈಕ್ಯತೆಯ ತತ್ವಗಳನ್ನು ಸಾರಿ ಸತ್ವಪೂರ್ಣ ಸಮೃದ್ಧಿ ಸದೃಢ ಸಮಾಜವನ್ನು ನಿರ್ಮಾಣ ಮಾಡುವಲ್ಲಿ ಬಹಳಷ್ಟು ಯಶಸ್ವಿಯಾಗುತ್ತಿದೆ.

    ಇಂದು ವಿಶ್ವಕ್ಕೆ ಅನೇಕ ಧಾರ್ಮಿಕ ಆಚರಣೆಗಳು ಹಾಗೂ ಬಹುಮುಖಿ ಕಾರ್ಯಗಳನ್ನು ತನ್ನ ಕೊಡುಗೆಯಾಗಿ ನೀಡಿರುವ ಶ್ರೀ ಉಜ್ಜಯಿನಿ ಸದ್ಧರ್ಮ ಪೀಠ ವರ್ಷದುದ್ದಕ್ಕೂ ಅನೇಕ ಧಾರ್ಮಿಕ-ಸಾಮಾಜಿಕ ಕಾರ್ಯಕ್ರಮಗಳನ್ನು ಆಯೋಜಿಸುವುದರೊಂದಿಗೆ ವಿಶ್ವದ ಜನತೆಯನ್ನು ಶ್ರೀಪೀಠದತ್ತ ಆಕರ್ಷಿಸುತ್ತಿದೆ. ಹಾಗೇ ಪ್ರಸುತ ಶ್ರೀ ಜಗದ್ಗುರು ಸಿದ್ದಲಿಂಗ ರಾಜದೇಶಿಕೇಂದ್ರ ಭಗವತ್ಪಾದರು ಶ್ರೀಪೀಠವನ್ನು ಪುನರುದ್ಧಾರಗೊಳಿಸುವಲ್ಲಿ ತಮ್ಮ ಸಾರ್ಥಕ್ಯವನ್ನು ಮೆರೆದಿದ್ದಾರೆ. ಅಲ್ಲದೇ ನಾಡಿನಾದ್ಯಂತ ಸಂಚರಿಸಿ ಪ್ರಸ್ತುತ ಸಮಾಜಕ್ಕೆ ಹಾಗೂ ಭಕ್ತರ ಬದುಕಿಗೆ ಬೆಳಕು ಬೀರುವ ಶಕ್ತಿಯಾಗಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts