More

    ಹೇಮಾವತಿ ನದಿ ಅರ್ಭಟಕ್ಕೆ ಉಗ್ಗೆಹಳ್ಳಿ ಜಲಾವೃತ

    ಮೂಡಿಗೆರೆ: ತಾಲೂಕಿನಲ್ಲಿ ಕಳೆದ ಒಂದು ವಾರದಿಂದ ಮಳೆ ಸುರಿಯುತ್ತಿದ್ದು, ಸೋಮವಾರವೂ ಮುಂದುವರಿದಿದೆ. ಅಲ್ಲಲ್ಲಿ ಹಾನಿ ಉಂಟಾಗಿದೆ.
    ಹೇಮಾವತಿ, ಜಪಾವತಿ, ಚಿಕ್ಕಳ್ಳ, ದೊಡ್ಡಳ್ಳ, ಸುಂಡೆಕೆರೆ ನದಿ, ಸುಣ್ಣದಹಳ್ಳ ಸೇರಿ ತಾಲೂಕಿನಲ್ಲಿ ಹರಿಯುವ 8 ನದಿಗಳು ಅಪಾಯ ಮಟ್ಟದಲ್ಲಿ ಹರಿಯುತ್ತಿವೆ. ಮಳೆ ಇನ್ನೂ ಹೆಚ್ಚಾದರೆ ಉಗ್ಗೆಹಳ್ಳಿ ಕಾಲನಿಯ ತಡೆಗೋಡೆವರೆಗೂ ಹೇಮಾವತಿ ನದಿ ನೀರು ವ್ಯಾಪಿಸುವ ಆತಂಕ ಎದುರಾಗಿದೆ. 2019ರಲ್ಲಿ ತಡೆಗೋಡೆಯನ್ನು ದಾಟಿ ನೀರು ನುಗ್ಗಿದ್ದರಿಂದ ಈ ಕಾಲನಿ ಜಲಾವೃತವಾಗಿತ್ತು. ಈ ಬಾರಿಯೂ ಕಾಲನಿ ನಿವಾಸಿಗಳು ಜಲಾವೃತವಾಗುವ ಭಯದಲ್ಲಿದ್ದಾರೆ.
    ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಕಂಬಗಳು ಧರೆಗುರುಳಿವೆ. ಗ್ರಾಮೀಣ ಭಾಗದಲ್ಲಿ ವಿದ್ಯುತ್‌ಪೂರೈಕೆ ಸಂಪೂರ್ಣ ಅಸ್ತವ್ಯಸ್ತವಾಗಿದೆ. ಭಾನುವಾರ ರಾತ್ರಿ ಪಟ್ಟಣದಲ್ಲಿ ವಿದ್ಯುತ್ ಕಡಿತಗೊಂಡಿತ್ತು. ಪಟ್ಟಣದ ಹೊಯ್ಸಳ ಕ್ರೀಡಾಂಗಣದ ಪ್ರೇಕ್ಷಕರ ಗ್ಯಾಲರಿಯ ಹೊರಭಾಗ ಕುಸಿದಿದೆ.
    ಚಕ್ಕುಡಿಗೆ ಗ್ರಾಮದಲ್ಲಿ ಭಾನುವಾರ ಮರ ಬಿದ್ದು ಯು.ಎ.ಸುದರ್ಶನ್ ಎಂಬುವವರ ಮನೆ ಸಂಪೂರ್ಣ ಜಖಂ ಆಗಿದೆ. ಅದೃಷ್ಟವಶಾತ್ ಮನೆಯಲ್ಲಿ ಯಾರೂ ಇರಲಿಲ್ಲ. ಬೆಟ್ಟಗೆರೆ ಗ್ರಾಮದಲ್ಲಿ ಸುರೇಶ್ ಎಂಬುವವರ ಮನೆ ಕುಸಿದಿದೆ. ತ್ರಿಪುರ ಗ್ರಾಮದ ರಾಧಮ್ಮ ಎಂಬುವರ ಮನೆಯ ಛಾವಣಿಗೆ ಹಾನಿಯಾಗಿದೆ.
    ಹಂತೂರು, ದೇವರುಂದ, ಜಿ.ಅಗ್ರಹಾರ, ಬೆಟ್ಟದಮನೆ, ಉದುಸೆ, ಹೆಗ್ಗರವಳ್ಳಿ ಗ್ರಾಮದ ಹೇಮಾವತಿ ನದಿ ಪಾತ್ರದಲ್ಲಿ ಹಾಕಿದ್ದ ಭತ್ತದ ಸಸಿಮಡಿಗಳು ಕೊಚ್ಚಿಹೋಗಿವೆ. ಹ್ಯಾರಗುಡ್ಡೆ, ಬಕ್ಕಿ, ಕಿತ್ತಲೆಗಂಡಿ, ಉಗ್ಗೇಹಳ್ಳಿ, ಡೋಣಗೋಡು ಗ್ರಾಮಗಳಲ್ಲಿ ಕಾಫಿ ತೋಟಗಳು ಜಲಾವೃತವಾಗಿವೆ. ಕಾಫಿ, ಕಾಳುಮೆಣಸು, ಅಡಕೆ, ಬಾಳೆ ಬೆಳೆಗಳು ಹಾನಿಗೀಡಾಗಿವೆ. ಕಾಫಿ ತೋಟ, ಭತ್ತದ ಗದ್ದೆಗಳಲ್ಲಿ ಕೃಷಿ ಚಟುವಟಿಕೆ ಸ್ಥಗಿತಗೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts