More

    ವೈಜ್ಞಾನಿಕ ಶಿಕ್ಷಣದಿಂದ ಸಮಾಜ ಅಭಿವೃದ್ಧಿ: ಬೃಹತ್ ಉದೋಗ ಮೇಳದಲ್ಲಿ ಶಾಸಕ ಪ್ರಿಯಾಂಕಾ ಖರ್ಗೆ ಹೇಳಿಕೆ

    ಹೊಸಕೋಟೆ: ವೈಜ್ಞಾನಿಕ ಮನೋಭಾವ ಹಾಗೂ ಉತ್ತಮ ಶಿಕ್ಷಣಕ್ಕೆ ಆದ್ಯತೆ ನೀಡಿದಾಗ ದೇಶದಲ್ಲಿ ಸಂಪನ್ಮೂಲ ಹೆಚ್ಚಳ ಮತ್ತು ಅಭಿವೃದ್ಧಿ ಸಾಧ್ಯವಾಗುತ್ತದೆ ಎಂದು ಮಾಜಿ ಸಚಿವ, ಶಾಸಕ ಪ್ರಿಯಾಂಕ್ ಖರ್ಗೆ ಹೇಳಿದರು.


    ನಗರದ ಶ್ರೀ ವಿವೇಕಾನಂದ ವಿದ್ಯಾ ಕೇಂದ್ರದಲ್ಲಿ ಶಾಸಕ ಶರತ್ ಬಚ್ಚೇಗೌಡ ನೇತೃತ್ವದ ಸಮಸ್ತ ಫೌಂಡೇಷನ್‌ನಿಂದ ಶನಿವಾರ ಏರ್ಪಡಿಸಿದ್ದ ಬೃಹತ್ ಉದ್ಯೋಗ ಮೇಳ ಉದ್ಘಾಟಿಸಿ ಮಾತನಾಡಿದರು.


    ವೈಜ್ಞಾನಿಕ ಮನೋಭಾವುಳ್ಳ ಶಾಸಕರು ಕ್ಷೇತ್ರದ ಅಭಿವೃದ್ಧಿಗೆ ಒತ್ತು ನೀಡುವ ಜತೆಗೆ ಉದ್ಯೋಗ ಮೇಳ ಆಯೋಜಿಸಿ ಜನರ ಸಮಸ್ಯೆ ನೀಗಿಸಲು ಶ್ರಮಿಸುತ್ತಿದ್ದಾರೆ ಎಂದರು.
    ದೇಶದ ಜನಸಂಖ್ಯೆಯಲ್ಲಿ ಶೇ.60 ಮಂದಿ 18 ರಿಂದ 25 ವರ್ಷದ ಯುವಕರಿದ್ದಾರೆ. ಅವರಿಗೆ ಬೇಕಾಗಿರುವುದು ವಿದ್ಯೆ ಮತ್ತು ಅದಕ್ಕೆ ತಕ್ಕ ಉದ್ಯೋಗ. ಕಾಂಗ್ರೆಸ್ ಅಧಿಕಾರದಲ್ಲಿದ್ದಾಗ ಎರಡಕ್ಕೂ ಒತ್ತು ನೀಡಿದೆ. 1947ರಿಂದ ಭಾರತದಲ್ಲಿ ಇಸ್ರೋ, ಐಟಿಐ, ಎಚ್‌ಎಎಲ್, ಬಿಎಚ್‌ಇಎಲ್, ಬಿಎಸ್‌ಎನ್‌ಎಲ್ ನಂತಹ ನೂರಾರು ಸರ್ಕಾರಿ ಸೌಮ್ಯದ ಸಂಸ್ಥೆಗಳನ್ನು ತೆರೆಯುವ ಮೂಲಕ ಉದ್ಯೋಗ ಸೃಷ್ಟಿ ಮಾಡಿತ್ತು. ಆದರೆ ಈಗಿನ ಸರ್ಕಾರ ಇರುವ ಸಂಸ್ಥೆಗಳನ್ನು ಮುಚ್ಚಿ ನಿರುದ್ಯೋಗ ಸೃಷ್ಟಿಸಿದೆ ಎಂದರು.

    ಡಬಲ್ ಇಂಜಿನ್ ಕಮಿಷನ್ ಸರ್ಕಾರ: ಈ ಡಬಲ್ ಇಂಜಿನ್ ಸರ್ಕಾರ ಮೇಕ್ ಇನ್‌ಇಂಡಿಯಾ ಎಂದು ಹೇಳಿ, ಶೇ40 ಮನಿ ಮೇಕಿಂಗ್ ಸರ್ಕಾರವಾಗಿ ಜನರ ಹಣವನ್ನು ಲೂಟಿ ಹೊಡೆಯುತ್ತಿದೆ. ಅರ್ಹರಿಗೆ ಉದ್ಯೋಗ ನೀಡದೆ ಅಕ್ರಮವಾಗಿ ಪಿಎಸ್‌ಐ ಹಾಗೂ ಕೆಪಿಟಿಸಿಎಲ್‌ನ ಹುದ್ದೆಗಳಿಗೆ ಕೋಟಿಗಟ್ಟಲೇ ಲಂಚ ತಗೆದುಕೊಂಡ ವಿಚಾರ ಎಲ್ಲರಿಗೂ ಗೊತ್ತಿದೆ. ಪರಿಣಾಮ ಇಂಜಿನಿಯರಿಂಗ್ ಮಾಡಿರುವ ಯುವಕರು ಡೆಲಿವರಿ ಬಾಯ್‌ಗಳಾಗಿ ಕೆಲಸ ಮಾಡುವಂತಾಗಿದೆ. ಇಂತಹ ಸರ್ಕಾರವನ್ನು ಕಿತ್ತೆಸೆಯಬೇಕು ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

    ಯುವಜನಾಂಗವನ್ನು ದಿಕ್ಕು ತಪ್ಪಿಸುತ್ತಿದೆ ಬಿಜೆಪಿ: ರಾಜ್ಯ ಸರ್ಕಾರ ಯುವಕರಿಗೆ ಉದ್ಯೋಗ ಕೊಡುವುದನ್ನು ಬಿಟ್ಟು ಕೇಸರಿ ಶಾಲು ಹಾಕಿ ಧರ್ಮರಕ್ಷಣೆ ಹೆಸರಿನಲ್ಲಿ ದಾರಿ ತಪ್ಪಿಸುವ ಮೂಲಕ ಯುವ ಸಮುದಾಯವನ್ನು ಅದರಲ್ಲೂ ಬಡವರ ಮಕ್ಕಳನ್ನು ಉಪಯೋಗಿಸುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿದರು.

    ಶಾಸಕ ಶರತ್ ಬಚ್ಚೇಗೌಡ ಮಾತನಾಡಿ, ಕೇಂದ್ರ ಸರ್ಕಾರ ವರ್ಷಕ್ಕೆ 2 ಲಕ್ಷ ಉದ್ಯೋಗ ಸೃಷ್ಟಿಸುವ ಭರವಸೆ ನೀಡಿತ್ತು. ಆದರೆ, 8 ವರ್ಷಗಳಲ್ಲಿ ಉದ್ಯೋಗ ನೀಡಿಲ್ಲ. ಇರುವ ಉದ್ಯೋಗಗಳನ್ನು ಕಳೆದುಕೊಂಡವರೇ ಹೆಚ್ಚು ಎಂದು ಬೇಸರ ವ್ಯಕ್ತಪಡಿಸಿದರು. ತಾಲೂಕಿನ ಯುವಕರು ಪ್ರತಿಭಾವಂತರಾಗಿದ್ದು, ಅವರ ನೆರವಿಗಾಗಿ 2 ವರ್ಷದ ಹಿಂದೆ ಉದ್ಯೋಗ ಮೇಳ ನಡೆಸಲಾಗಿತ್ತು. ಬಳಿಕ ಕರೊನಾ ಕಾರಣದಿಂದ ನಡೆಸಲಾಗಲಿಲ್ಲ. ಈ ಬಾರಿಯ ಮೇಳದಲ್ಲಿ 105 ಕಂಪನಿಗಳು ಭಾಗವಹಿಸಿವೆ ಎಂದರು.

    ಉದ್ಯೋಗ ಮೇಳದಲ್ಲಿ ಒಟ್ಟು 1780 ಜನರು ಅರ್ಜಿ ಸಲ್ಲಿಸಿದ್ದರು. ಒಟ್ಟು 1407 ಜನರು ಉದ್ಯೋಗ ಪಡೆದರು. ಕಾರ್ಯಕ್ರಮಕ್ಕೂ ಮುನ್ನ ಬೈಕ್ ರ‌್ಯಾಲಿ ನಡೆಸಲಾಯಿತು. ಕೆಪಿಸಿಸಿ ಜಿಲ್ಲಾ ಅಧ್ಯಕ್ಷ ಮುನಿಶಾಮಣ್ಣ, ಬ್ಲಾಕ್‌ಕಾಂಗ್ರೆಸ್ ಅಧ್ಯಕ್ಷ ಸಗೀರ್ ಅಹ್ಮದ್, ಮುಖಂಡರಾದ ಡಾ.ಎಚ್.ಎಂ.ಸುಬ್ಬರಾಜು, ವೈ.ಎಸ್.ಎಂ.ಮಂಜುನಾಥ್, ಸಿ.ಮುನಿಯಪ್ಪ, ನಗರಸಭೆ ಸದಸ್ಯರಾದ ಕೇಶವಮೂರ್ತಿ, ಗೌತಮ್, ಎಸ್‌ಬಿಜಿ ಟೀಂ ಸಂಚಾಲಕಿ ಪ್ರತಿಭಾ ಶರತ್, ಸುರೇಶ್, ಡಾ.ಡಿ.ಟಿ.ವೆಂಕಟೇಶ್, ಬಚ್ಚೇಗೌಡ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts