More

    ಜಿಪಂ ಸಿಇಒ ಹುದ್ದೆ ನಿರ್ವಹಿಸಿದ ವಿದ್ಯಾರ್ಥಿನಿ!

    ಉಡುಪಿ: ಬ್ರಹ್ಮಾವರ ಸರ್ಕಾರಿ ಪದವಿಪೂರ್ವ ಕಾಲೇಜಿನ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ವರ್ಷಾ ಶನಿವಾರ ಅರ್ಧ ಗಂಟೆ ಉಡುಪಿ ಜಿಲ್ಲಾ ಪಂಚಾಯಿತಿಯ ಸಿಇಒ ಆಗಿ ಕರ್ತವ್ಯ ನಿರ್ವಹಿಸಿದರು!

    ಹೌದು ಇದು ನಿಜ. ಹೆಣ್ಣುಮಕ್ಕಳ ದಿನದ ಅಂಗವಾಗಿ ಏರ್ಪಡಿಸಲಾದ ಕಾರ್ಯಾಗಾರದಲ್ಲಿ ವಿದ್ಯಾರ್ಥಿನಿಯ ಸಾಮಾಜಿಕ ಕಳಕಳಿ ಗಮನಿಸಿ ಜಿಪಂ ಸಿಇಒ ಈ ಅವಕಾಶ ಕಲ್ಪಿಸಿ ಪ್ರೋತ್ಸಾಹ ನೀಡಿದ್ದಾರೆ. ಜಿಲ್ಲಾ ಪಂಚಾಯಿತಿ ಸಭಾಂಗಣದಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನದ ಅಂಗವಾಗಿ ಪ್ರತಿಭಾನ್ವಿತ ವಿದ್ಯಾರ್ಥಿನಿಯರಿಗೆ ಕಾರ್ಯಾಗಾರ ಏರ್ಪಡಿಸಲಾಗಿತ್ತು. ಜಿಪಂ ಕಾರ್ಯನಿರ್ವಹಣಾಧಿಕಾರಿ ಡಾ.ನವೀನ್ ಭಟ್ ಮತ್ತು ಅಧಿಕಾರಿಗಳು ಜಿಲ್ಲಾ ಪಂಚಾಯಿತಿ ಕಾರ್ಯನಿರ್ವಹಣೆ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು.

    ಕಾರ್ಯಾಗಾರದಲ್ಲಿ ಸಾಮಾಜಿಕ ಕಳಕಳಿಯ ಪ್ರಶ್ನೆಗಳನ್ನು ಕೇಳಿದ ವಿದ್ಯಾರ್ಥಿನಿ ವರ್ಷಾಗೆ ಸಿಇಒ ನವೀನ್ ಭಟ್ ತಮ್ಮ ಹುದ್ದೆಯನ್ನು ಅರ್ಧ ಗಂಟೆ ಕಾಲ ಬಿಟ್ಟುಕೊಟ್ಟರು. ಸಿಇಒ ಕುರ್ಚಿಯಲ್ಲಿ ಕುಳಿತ ವರ್ಷಾ, ಪ್ಲಾಸ್ಟಿಕ್ ತ್ಯಾಜ್ಯ ವಿಲೇವಾರಿ, ಗ್ರಾಮಗಳಲ್ಲಿ ಚರಂಡಿ ವ್ಯವಸ್ಥೆ, ನಿರುದ್ಯೋಗ ಸಮಸ್ಯೆ ಬಗ್ಗೆ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದು ಚರ್ಚಿಸಿದರು.

    ವಿದ್ಯಾರ್ಥಿನಿಯನ್ನು ಶ್ಲಾಘಿಸಿದ ಡಾ.ನವೀನ್ ಭಟ್, ಮುಂದೆ 10 ವರ್ಷಗಳ ನಂತರ ಐಎಎಸ್ ಪರೀಕ್ಷೆ ಉತ್ತೀರ್ಣಳಾಗಿ ಈ ಹುದ್ದೆಗೆ ಬರುವಂತೆ ಹಾರೈಸಿದರು. ಜಿಪಂ ಉಪ ಕಾರ್ಯದರ್ಶಿ ಕಿರಣ್ ಫಡ್ನೇಕರ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಇದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts