More

    21 ಆಸ್ಪತ್ರೆಗಳಲ್ಲಿ 1200 ಬೆಡ್ ವ್ಯವಸ್ಥೆ, ಉಡುಪಿ ಜಿಲ್ಲಾಧಿಕಾರಿ ಮಾಹಿತಿ

    ಉಡುಪಿ: ನಗರದಲ್ಲಿ ಮಾಸ್ಕ್ ಧರಿಸುವುದು ಮತ್ತು ಪರಸ್ಪರ ಅಂತರ ಕಾಯ್ದುಕೊಳ್ಳುವ ಬಗ್ಗೆ ಜಿಲ್ಲಾಧಿಕಾರಿ ಜಿ.ಜಗದೀಶ್ ಮಂಗಳವಾರ ವಿವಿಧ ಅಂಗಡಿಗಳಿಗೆ ತೆರಳಿ ಪರಿಶೀಲಿಸಿದರು.

    ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಈ ಹಿಂದೆ ಶೇ.98ರಷ್ಟು ರೋಗ ಗುಣಲಕ್ಷಣವಿಲ್ಲದ ಪ್ರಕರಣ ಕಂಡುಬರುತ್ತಿತ್ತು. ಈಗ ಕರೊನಾ ಲಕ್ಷಣ ಹೊಂದಿರುವ ರೋಗಿಗಳ ಸಂಖ್ಯೆ ಶೇ.50ಕ್ಕೆ ಏರಿಕೆಯಾಗಿದೆ. ಸಾರಿ ಹಾಗೂ ಐಎಲ್‌ಐ ಪ್ರಕರಣಗಳೂ ಹೆಚ್ಚುತ್ತಿವೆ. ಹೆಚ್ಚಿನ ಆಸ್ಪತ್ರೆಗಳ ಅಗತ್ಯವಿದ್ದು, ಜಿಲ್ಲೆಯ 21 ಖಾಸಗಿ ಆಸ್ಪತ್ರೆಗಳಲ್ಲಿ 1200 ಹೆಚ್ಚುವರಿ ಬೆಡ್‌ಗಳ ವ್ಯವಸ್ಥೆ ಮಾಡಿಕೊಳ್ಳಲಾಗಿದೆ. ಆರೋಗ್ಯ ಇಲಾಖೆ ಶಿಫಾರಸು ಮಾಡುವ ರೋಗಿಗಳಿಗೆ ಅಲ್ಲಿ ಚಿಕಿತ್ಸೆ ನೀಡಬೇಕು. ಹೀಗಾಗಿ ವೆಂಟಿಲೇಟರ್ ಹಾಗೂ ಆಕ್ಸಿಜನ್ ಬೆಡ್‌ಗಳನ್ನು ಸುಸ್ಥಿತಿಯಲ್ಲಿಟ್ಟುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದರು.

    ಹೈಫ್ಲೋಆಕ್ಸಿಜನ್‌ನ 400 ಬೆಡ್: ಕರೊನಾ ಚಿಕಿತ್ಸೆಗಾಗಿ ಕೆಎಂಸಿಯಲ್ಲಿ 150 ಬೆಡ್‌ಗಳ ಪ್ರತ್ಯೇಕ ವಿಭಾಗ ತೆರೆಯಲಾಗಿದೆ. ಜತೆಗೆ ಟಿಎಂಎ ಪೈ ಆಸ್ಪತ್ರೆಯಲ್ಲಿ 140 ಬೆಡ್‌ಗಳಿವೆ. ವೆಂಟಿಲೇಟರ್ ಕೊರತೆ ಇಲ್ಲ. ಸರ್ಕಾರಿ ಆಸ್ಪತ್ರೆಗಳಲ್ಲಿ 50 ವೆಂಟಿಲೇಟರ್ ಇದೆ. ಇದರಲ್ಲಿ 6 ಮಾತ್ರ ಬಳಕೆಯಾಗುತ್ತಿದೆ. ಹೈಫ್ಲೋಆಕ್ಸಿಜನ್‌ನ 400 ಬೆಡ್‌ಗಳಿವೆ. ಇದರಲ್ಲೂ 6 ಮಂದಿ ಮಾತ್ರ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಾರ್ಕಳ ಮತ್ತು ಕುಂದಾಪುರ ತಾಲೂಕು ಆಸ್ಪತ್ರೆಯಲ್ಲೂ ಐಸಿಯು ವ್ಯವಸ್ಥೆ ಮಾಡಲಾಗಿದೆ. ಜಿಲ್ಲೆಯಲ್ಲಿ ಒಟ್ಟು 2400 ಬೆಡ್‌ಗಳನ್ನು ಕಾಯ್ದಿರಿಸಲಾಗಿದೆ ಎಂದು ತಿಳಿಸಿದರು.

    ಜಿಲ್ಲಾಧಿಕಾರಿ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಒಟ್ಟು 14 ಪ್ರಕರಣ ದಾಖಲಿಸಿ, 2100 ರೂ. ದಂಡ ವಸೂಲಿ ಮಾಡಲಾಯಿತು.
    ಎಡಿಸಿ ಸದಾಶಿವ ಪ್ರಭು, ಪ್ರೊಬೆಷನರಿ ಅಧಿಕಾರಿ ನಯನಾ, ನಗರಸಭೆ ಇಂಜಿನಿಯರ್ ಮೋಹನ್‌ರಾಜ್, ಇಂಜಿನಿಯರ್ ದುರ್ಗಾಪ್ರಸಾದ್, ಕಂದಾಯ ಅಧಿಕಾರಿ ಧನಂಜಯ, ಮ್ಯಾನೇಜರ್ ವೆಂಕಟರಮಣಯ್ಯ, ಸಮುದಾಯ ಆರೋಗ್ಯ ವಿಭಾಗದ ನಾರಾಯಣ್, ಆರೋಗ್ಯ ನಿರೀಕ್ಷಕ ಪ್ರಸನ್ನ ಮತ್ತಿತರರು ಉಪಸ್ಥಿತರಿದ್ದರು.

    ಹೋಂ ಐಸೋಲೇಶನ್ ಪ್ಯಾಕೇಜ್: ಹೋಂ ಐಸೋಲೇಶನ್ ಪ್ಯಾಕೇಜ್ ತಯಾರಿ ಬಗ್ಗೆ ಕೆಎಂಸಿ ಆಡಳಿತದೊಂದಿಗೆ ಮಾತುಕತೆ ನಡೆಯುತ್ತಿದೆ. ಹೋಂ ಐಸೋಲೇಶನ್ ರೋಗಿಗಳಿಗೆ ಅವರದ್ದೇ ವೈದ್ಯರು ಚಿಕಿತ್ಸೆ ನೀಡುತ್ತಾರೆ. ಔಷಧವನ್ನೂ ಅವರೇ ಪೂರೈಸಬೇಕು. ನಮ್ಮ ಜಿಲ್ಲೆಯಲ್ಲಿ 15 ಜನರಿಗೆ ವೆಂಟಿಲೇಟರ್‌ನಲ್ಲಿ ಚಿಕಿತ್ಸೆ ನೀಡಿದ್ದು, ಈ ಪೈಕಿ 14 ಮಂದಿ ಗುಣಮುಖರಾಗಿರುವುದು ಸಂತಸದ ವಿಷಯ. ಇದಕ್ಕಾಗಿ ಕೋವಿಡ್ ನಿಗದಿತ ಆಸ್ಪತ್ರೆ ವೈದ್ಯಾಧಿಕಾರಿ ಡಾ.ಶಶಿಕಿರಣ್ ತಂಡದ ಕಾರ್ಯ ಶ್ಲಾಘನೀಯ ಎಂದು ಜಿಲ್ಲಾಧಿಕಾರಿ ಹೇಳಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts