More

    ಉಡುಪಿಗೆ ಮಹಾ ಕಂಟಕ, ಕೃಷ್ಣ ನಗರಿಯಲ್ಲಿ 26 ಮಂದಿಗೆ ಸೋಂಕು

    ಉಡುಪಿ/ಮಂಗಳೂರು: ಉಡುಪಿ ಜಿಲ್ಲೆಯಲ್ಲಿ 16 ಮಕ್ಕಳ ಸಹಿತ 26 ಮಂದಿ ಹಾಗೂ ದ.ಕ.ಜಿಲ್ಲೆಯಲ್ಲಿ 6 ಮಂದಿ ಕರೊನಾ ಸೋಂಕಿಗೆ ಒಳಗಾಗುವ ಮೂಲಕ ಕರಾವಳಿಯಲ್ಲಿ ಗುರುವಾರ ಒಂದೇ ದಿನ, 32 ಪ್ರಕರಣಗಳು ಪತ್ತೆಯಾಗಿವೆ.

    ಉಡುಪಿಗೆ ಮಹಾರಾಷ್ಟ್ರದಿಂದ ಬಂದ 21 ಮಂದಿ, ತೆಲಂಗಾಣದಿಂದ ಆಗಮಿಸಿದ್ದ ಮೂವರು, ಕೇರಳ ಮತ್ತು ವಿದೇಶದಿಂದ (ಯು ಎಇ) ಆಗಮಿಸಿದ್ದ ತಲಾ ಒಬ್ಬರಿಗೆ ಕರೊನಾ ಪಾಸಿಟಿವ್ ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ತಿಳಿಸಿದ್ದಾರೆ.

    ಗುರುವಾರ ಬೆಳಗ್ಗೆ ಜಿಲ್ಲಾಡಳಿತ ಸ್ವೀಕರಿಸಿದ 199 ವರದಿಯಲ್ಲಿ 25 ವರದಿ ಪಾಸಿಟಿವ್ ಇತ್ತು. ಈ ಪೈಕಿ ಹೆಚ್ಚಿನ ಪ್ರಮಾಣದಲ್ಲಿ ಮಕ್ಕಳಲ್ಲೇ ಸೋಂಕು ಕಂಡು ಬಂದಿರುವುದು ಆತಂಕ್ಕೆ ಕಾರಣವಾಗಿತ್ತು. ಗಂಡಸರು 6, ಹೆಂಗಸರು 5 ಮಂದಿ ಜತೆಗೆ 2 ವರ್ಷದ ಗಂಡು, 9 ವರ್ಷದ ಗಂಡು, 4 ವರ್ಷದ ಹೆಣ್ಣು, 6 ವರ್ಷದ ಗಂಡು, 4 ವರ್ಷದ ಗಂಡು, 6 ವರ್ಷದ ಗಂಡು, 7 ವರ್ಷದ ಹೆಣ್ಣು, 10 ವರ್ಷದ ಗಂಡು, 6 ವರ್ಷದ ಗಂಡು, 3 ವರ್ಷದ ಹೆಣ್ಣು, 5 ವರ್ಷದ ಹೆಣ್ಣು, 1 ವರ್ಷದ ಗಂಡು, 1 ವರ್ಷದ ಹೆಣ್ಣು, 2 ವರ್ಷದ ಗಂಡು ಮಕ್ಕಳಲ್ಲಿ ಸೋಂಕು ಕಂಡು ಬಂದಿದೆ.

    ಪತ್ನಿಗೆ ಪಾಸಿಟಿವ್, ಪತಿ ನೆಗೆಟಿವ್! : 21 ಸೋಂಕಿತರು ಮಹಾರಾಷ್ಟ್ರದ ಥಾಣೆ, ಪುಣೆ, ಔರಂಗಾಬಾದ್, ಮುಂಬೈ, ಪಲ್‌ಘರ್, ಮಲ್ಲಚಾಂದಿವಲ್ಲಿ ಭಾಗದಿಂದ, ಮೂವರು ತೆಲಂಗಾಣದಿಂದ ಜಿಲ್ಲೆಗೆ ಆಗಮಿಸಿದ್ದರು. ಬೈಂದೂರಿನ 15, ಕುಂದಾಪುರದ 5, ಕಾರ್ಕಳದ 3, ಉಡುಪಿಯವರು ಇಬ್ಬರು ಎನ್ನಲಾಗಿದೆ. ಇವರೆಲ್ಲರೂ ಸರ್ಕಾರಿ ಕ್ವಾರಂಟೈನ್‌ನಲ್ಲಿದ್ದವರು. ಇವರಲ್ಲಿ ಕೇರಳದಿಂದ ಮಣಿಪಾಲ ಆಸ್ಪತ್ರೆಗೆ ಆಗಮಿಸಿದವರಲ್ಲಿಯೂ ಸೋಂಕು ಪತ್ತೆಯಾಗಿದೆ. ಪತಿಗೆ ಚಿಕಿತ್ಸೆ ಕೊಡಿಸಲು ಬಂದಿದ್ದ ಪತ್ನಿಯಲ್ಲಿ ಸೋಂಕು ಕಂಡು ಬಂದಿದೆ. ಆದರೆ ಪತಿಗೆ ನಡೆಸಿದ ಗಂಟಲ ದ್ರವ ಪರೀಕ್ಷೆಯಲ್ಲಿ ಕರೊನಾ ನೆಗೆಟಿವ್ ಬಂದಿದೆ. ಗುರುವಾರ ಸಾಯಂಕಾಲ ಸ್ವೀಕರಿಸಿದ ವರದಿಯಲ್ಲಿ ದುಬೈನಿಂದ ಬಂದಿದ್ದ 37 ವರ್ಷದ ವ್ಯಕ್ತಿಗೆ ಸೋಂಕು ಪತ್ತೆಯಾಗಿದೆ. ಸೋಂಕಿತ ಎಲ್ಲರನ್ನು ಕೊವಿಡ್-19 ವಿಶೇಷ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಮುಂದುವರೆದಿದೆ. ಕಾರವಾರದಲ್ಲಿ ಕ್ವಾರಂಟೈನ್ ಇದ್ದ ಉಡುಪಿ ಜಿಲ್ಲೆ ಬೈಂದೂರು ತಾಲೂಕು ವ್ಯಾಪ್ತಿಯ 35 ವರ್ಷದ ತಾಯಿ ಮತ್ತು 1 ವರ್ಷದ ಗಂಡು ಮಗುವಿಗೆ ಕರೊನಾ ಪಾಸಿಟಿವ್ ಪತ್ತೆಯಾಗಿದೆ. ಮುಂಬೈನಿಂದ ಬಂದಿದ್ದ ಇವರು ಕಾರವಾರದಲ್ಲಿ ಕ್ವಾರಂಟೈನ್‌ನಲ್ಲಿದ್ದರು. ಉತ್ತರ ಕನ್ನಡ ಜಿಲ್ಲಾಡಳಿತ ಇವರಿಬ್ಬರ ಗಂಟಲ ದ್ರವ ಪರಿಕ್ಷೀಸಿದಾಗ ಸೋಂಕು ಪತ್ತೆಯಾಗಿದೆ. ಇಬ್ಬರನ್ನು ಕಾರವಾರದ ಕೋವಿಡ್ ಆಸ್ಪತ್ರೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

    ಹೆಚ್ಚುತ್ತಿರುವ ಆತಂಕ! : ಮುಂಬೈ, ವಿದೇಶದಿಂದ ಬರುತ್ತಿರುವ ಕರಾವಳಿಗರಲ್ಲಿ ಸೋಂಕು ಹೆಚ್ಚುತ್ತಿರುವುದರಿಂದ ಜಿಲ್ಲೆ ಜನರಲ್ಲಿ ಆತಂಕ ಹೆಚ್ಚಳವಾಗುವಂತೆ ಮಾಡಿದೆ. ಜಿಲ್ಲೆಯಲ್ಲಿ ಕಳೆದ ಮಾ.29ರವರೆಗೆ ಕಾಣಿಸಿಕೊಂಡಿದ್ದು ಮೂರು ಪ್ರಕರಣಗಳು ಮಾತ್ರ. ಅನಂತರ ಮೇ 15ರವರೆಗೆ ಪಾಸಿಟಿವ್ ಪತ್ತೆಯಾಗಿರಲಿಲ್ಲ. ಮೇ 15ರಂದು ದುಬೈಯಿಂದ ಆಗಮಿಸಿದ ಆರು ಮಂದಿಯಲ್ಲಿ ಕೊರೊನಾ ಪಾಸಿಟಿವ್ ಕಾಣಿಸಿಕೊಂಡ ಬಳಿಕ ಮೇ 20ರವರೆಗೆ ಮತ್ತೆ ಹೊಸದಾಗಿ 18 ಪ್ರಕರಣಗಳು ವರದಿಯಾಗಿದ್ದವು. ಇದೀಗ 26 ಪ್ರಕರಣ ಸೇರಿದಂತೆ ಸೋಂಕಿತರ ಸಂಖ್ಯೆ 47ಕ್ಕೆ ಏರಿಕೆಯಾಗಿದೆ.

    128 ಮಂದಿಯದು ನೆಗೆಟಿವ್ : ಜಿಲ್ಲೆಯಲ್ಲಿ 128 ಮಂದಿಯ ಶಂಕಿತ ಕರೊನಾ ಪ್ರಕರಣಗಳ ವರದಿ ನೆಗೆಟಿವ್ ಬಂದಿದೆ. ಉಸಿರಾಟದ ತೊಂದರೆ 12, ಇಲ್‌ನೆಸ್‌ಗೆ ಸಂಬಂಧಿಸಿ 10, ಕೊವಿಡ್-19 ಸಂಪರ್ಕ 64, ಹಾಟ್‌ಸ್ಪಾಟ್‌ನಿಂದ ಬಂದವರು 567 ಮಂದಿ ಸೇರಿದಂತೆ ಒಟ್ಟು 653 ಮಂದಿಯ ಮಾದರಿಯನ್ನು ಗುರುವಾರ ಸಂಗ್ರಹಿಸಲಾಗಿದೆ. ಇನ್ನೂ 1487 ಮಂದಿಯ ವರದಿ ಬರಲು ಬಾಕಿ ಇದೆ. ಐಸೊಲೇಶನ್ ವಾರ್ಡ್‌ನಿಂದ 9 ಮಂದಿ ಡಿಸ್ಚಾರ್ಜ್ ಆಗಿದ್ದಾರೆ ಎಂದು ಜಿಲ್ಲಾಧಿಕಾರಿ ಜಿ.ಜಗದೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

    ದುಬೈ ವಿಮಾನವೂ ಕರೊನಾತಂಕವೂ!:
    ಮಂಗಳೂರು: ದುಬೈಯಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರಲ್ಲಿ ಕರೊನಾ ಸೋಂಕು ಪತ್ತೆಯಾಗುತ್ತಿರುವ ಕಾರಣ ಕರಾವಳಿಯಲ್ಲಿ ಆತಂಕ ಸೃಷ್ಟಿಯಾಗಿದೆ. ದ.ಕ.ಜಿಲ್ಲೆಯಲ್ಲಿ ಗುರುವಾರ ಕಲಬುರ್ಗಿಯ ಓರ್ವ ವ್ಯಕ್ತಿ ಸೇರಿದಂತೆ 6 ಮಂದಿಗೆ ಕರೊನಾ ಸೋಂಕು ದೃಢಪಟ್ಟಿದೆ. 6 ಮಂದಿಯೂ ಪುರುಷರಾಗಿದ್ದು ಮೇ 18 ರಂದು ದುಬೈಯಿಂದ ಆಗಮಿಸಿದವರು.

    ದುಬೈಯಿಂದ ಮೇ 18ರಂದು ಮಂಗಳೂರು ವಿಮಾನ ನಿಲ್ದಾಣಕ್ಕೆ ಆಗಮಿಸಿದ 178 ಪ್ರಯಾಣಿಕರ ಪೈಕಿ 110 ಮಂದಿಯನ್ನು ಮಂಗಳೂರು ನಗರದ ಹೋಟೆಲ್‌ಗಳು ಸೇರಿದಂತೆ 10 ಕಡೆಗಳಲ್ಲಿ ಕ್ವಾರಂಟೈನ್‌ಗೆ ಒಳಪಡಿಸಲಾಗಿತ್ತು. ವಿಮಾನ ನಿಲ್ದಾಣದಲ್ಲಿ ಎಲ್ಲರನ್ನೂ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿತ್ತು. ಈ ಪೈಕಿ ದ.ಕ. ಜಿಲ್ಲೆಯ 60, 44, 42, 44, 35 ವರ್ಷ ಪ್ರಾಯದ ಪುರುಷರು ಮತ್ತು ಕಲಬುರ್ಗಿಯ 29 ವರ್ಷದ ಓರ್ವ ಯುವಕನಿಗೆ ಕರೊನಾ ಸೋಂಕು ಇರುವುದು ದೃಢವಾಗಿದೆ. ಸೋಂಕು ದೃಢಪಟ್ಟ 6 ಮಂದಿಯನ್ನು ನಗರದ ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ.

    ಓರ್ವ ಬಿಡುಗಡೆ: ಏ.23ರಂದು ಕೋವಿಡ್ ಆಸ್ಪತ್ರೆಗೆ ದಾಖಲಾಗಿದ್ದ ಮಂಗಳೂರು ನಗರದ ಕುಲಶೇಖರ ನಿವಾಸಿ 45 ವರ್ಷದ ಗಂಡಸು ಗುಣಮುಖರಾಗಿ ಗುರುವಾರ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಗುರುವಾರ 25 ಮಂದಿಯನ್ನು ಸ್ಕ್ರೀನಿಂಗ್ ಮಾಡಲಾಗಿದೆ. 333 ಸ್ಯಾಂಪಲ್ ಕಳುಹಿಸಲಾಗಿದ್ದು, ಲಭ್ಯವಾದ 502 ಸ್ಯಾಂಪಲ್ ಟೆಸ್ಟ್ ವರದಿಯಲ್ಲಿ 6 ಪಾಸಿಟಿವ್, 496 ನೆಗೆಟಿವ್. ಇನ್ನೂ 408 ಸ್ಯಾಂಪಲ್ ವರದಿ ಬರಲು ಬಾಕಿ ಇದೆ. ಗುರುವಾರ ಉಸಿರಾಟದ ತೊಂದರೆ ಇರುವ 21 ಪ್ರಕರಣ ಪತ್ತೆಯಾಗಿದೆ. 15 ಮಂದಿಯನ್ನು ತೀವ್ರ ನಿಗಾ ವಹಿಸಲು ಆಸ್ಪತೆಗೆ ದಾಖಲಿಸಲಾಗಿದೆ.

    ಮೊದಲ ವಿಮಾನದಲ್ಲಿ 15 ಮಂದಿಗೆ ಸೋಂಕು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಮೇ 12ರಂದು ಆಗಮಿಸಿದ 179 ಮಂದಿ ಪ್ರಯಾಣಿಕರಲ್ಲಿ 125 ಮಂದಿ ದ.ಕ. ಜಿಲ್ಲೆಯಲ್ಲಿ ಕ್ವಾರಂಟೈನ್‌ಗೆ ಒಳಗಾಗಿದ್ದಾರೆ. ಈ ಪೈಕಿ 15ಮಂದಿಗೆ ಕರೊನಾ ಸೋಂಕು ದೃಢಪಟ್ಟಿತ್ತು. ಅದೇ ದಿನ ಸುರತ್ಕಲ್‌ನ ಓರ್ವ ಮಹಿಳೆಗೂ ಸೋಂಕು ದೃಢಪಟ್ಟು ಒಟ್ಟು ಸಂಖ್ಯೆ 16ಕ್ಕೇರಿತ್ತು. ಆ ಬಳಿಕ ದ.ಕ.ಜಿಲ್ಲೆಯಲ್ಲಿ ಮೇ 17, 18ರಂದು ತಲಾ 2 ಹಾಗೂ ಮೇ 20ರಂದು ಒಂದು ಪಾಸಿಟಿವ್ ಪ್ರಕರಣ ಪತ್ತೆಯಾಗಿತ್ತು. ದ.ಕ.ಜಿಲ್ಲಾಡಳಿತದ ಕಟ್ಟೆಚ್ಚರದಿಂದ ನಿಯಂತ್ರಣದಲ್ಲಿದ್ದ ಸೋಂಕು ಪ್ರಕರಣ ಲಾಕ್‌ಡೌನ್ ಸಡಿಲಿಕೆಯ ಬಳಿಕ ಹೆಚ್ಚಳವಾಗಿದೆ. ಹೊರ ರಾಜ್ಯ ಮತ್ತು ವಿದೇಶದಿಂದ ಆಗಮಿಸಿದವರಲ್ಲಿ ಸೋಂಕು ಪತ್ತೆಯಾಗುತ್ತಿರುವುದು ಜಿಲ್ಲಾಡಳಿತಕ್ಕೆ ಹೊಸ ಸಮಸ್ಯೆ ಸೃಷ್ಟಿಸಿದೆ.

    61ಕ್ಕೇರಿದ ಸೋಂಕಿತರ ಸಂಖ್ಯೆ: ದ.ಕ. ಜಿಲ್ಲೆಯಲ್ಲಿ ಇದುವರೆಗೆ ಪತ್ತೆಯಾದ ಸೋಂಕಿತರ ಒಟ್ಟು ಸಂಖ್ಯೆ 61ಕ್ಕೇರಿದೆ.( ದ.ಕ.49,ಉತ್ತರ ಕನ್ನಡ 2, ಮುಂಬೈ 2, ಕಾರ್ಕಳ 3, ಕಲಬುರಗಿ 1 ಹಾಗೂ ಕಾಸರಗೋಡು ಜಿಲ್ಲೆಯ 4 ಪ್ರಕರಣಗಳು) ಈ ಪೈಕಿ 21 ಮಂದಿ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ ಹೊಂದಿದ್ದಾರೆ. ಐವರು ಮೃತಪಟ್ಟಿದ್ದಾರೆ.

    ಕಾಸರಗೋಡಲ್ಲಿ ಓರ್ವನಿಗೆ ಸೋಂಕು
    ಕಾಸರಗೋಡು: ಜಿಲ್ಲೆಯಲ್ಲಿ ಗುರುವಾರ ಓರ್ವನಲ್ಲಿ ಕೋವಿಡ್ ಸೋಂಕು ಪತ್ತೆಯಾಗಿದೆ. ಚೆಂಗಳ ಗ್ರಾಮ ಪಂಚಾಯಿತಿಯ 41 ವರ್ಷದ ವ್ಯಕ್ತಿಗೆ ಸೋಂಕು ಖಚಿತವಾಗಿದೆ. ಇವರು ಪರಿಯಾರಂ ವೈದ್ಯಕೀಯ ಕಾಲೇಜಿನಲ್ಲಿ ದಾಖಲಾಗಿದ್ದಾರೆ. ಮೇ 18ರಂದು ದುಬೈಯಿಂದ ಆಗಮಿಸಿದ್ದರು. ಜಿಲ್ಲೆಯಲ್ಲಿ 2460 ಮಂದಿ ನಿಗಾದಲ್ಲಿದ್ದಾರೆ. ಮನೆಗಳಲ್ಲಿ 2007 ಮಂದಿ, ಆಸ್ಪತ್ರೆಗಳಲ್ಲಿ 453 ಮಂದಿ ನಿಗಾದಲ್ಲಿದ್ದಾರೆ. ಗುರುವಾರ ನೂತನವಾಗಿ ಇಬ್ಬರು ಐಸೊಲೇಷನ್ ವಾರ್ಡಿಗೆ ದಾಖಲಾಗಿದ್ದಾರೆ. ಕೇರಳ ರಾಜ್ಯದಲ್ಲಿ ಗುರುವಾರ 24 ಮಂದಿಯಲ್ಲಿ ಸೋಂಕು ಕಾಣಿಸಿಕೊಂಡಿದೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts