More

    ರಸ್ತೆಯಲ್ಲೇ ಒಸರುತ್ತಿದೆ ಕೆಸರು, ಉದಯಗಿರಿ-ಬೇರಿಕೆ ರಸ್ತೆ ಅಭಿವೃದ್ಧಿ ಕೂಗು ಅರಣ್ಯರೋದನ

    ಈಶ್ವರಮಂಗಲ: 50ಕ್ಕೂ ಅಧಿಕ ಮನೆಗಳಿಗೆ ಸಂಪರ್ಕ ಕಲ್ಪಿಸುವ ಆರ್ಯಾಪು ಗ್ರಾಮ ವ್ಯಾಪ್ತಿಯ ರಸ್ತೆಯೊಂದು ಕೆಸರುಮಯವಾಗಿ ವಾಹನ ಸಂಚಾರಕ್ಕೆ ಬಿಡಿ, ಜನ ಸಂಚಾರಕ್ಕೂ ಹರಸಾಹಸ ಪಡುವ ಸ್ಥಿತಿಗೆ ತಲುಪಿದೆ. ಈ ಭಾಗದ ಜನರು ರಸ್ತೆ ದುರಸ್ತಿಗೆ ಆಗ್ರಹಿಸಿ ಹಲವಾರು ವರ್ಷಗಳಿಂದ ಕ್ಷೇತ್ರದ ಶಾಸಕರು ಸೇರಿದಂತೆ ಸಂಬಂಧಪಟ್ಟ ಜನಪ್ರತಿನಿಧಿ ಮತ್ತು ಅಧಿಕಾರಿಗಳಿಗೆ ಮನವಿ ಸಲ್ಲಿಸುತ್ತಾ ಬಂದಿದ್ದರೂ ಅವರ ಬೇಡಿಕೆಯ ಕೂಗು ಅರಣ್ಯರೋಧನವಾಗಿ ಉಳಿದಿದೆ.

    ಆರ್ಯಾಪು ಗ್ರಾಮ ವ್ಯಾಪ್ತಿಯಲ್ಲಿ ಹಾದು ಹೋಗುವ ಉದಯಗಿರಿ- ಬೇರಿಕೆ ರಸ್ತೆ ತೀರಾ ಹದಗೆಟ್ಟಿದೆ. ಸಂಪ್ಯ ಅನ್ನಪೂರ್ಣೇಶ್ವರಿ ದೇವಳದ ಸಮೀಪದಿಂದ ಬೇರಿಕೆಗೆ ಹೋಗುವ ಈ ರಸ್ತೆ ಒಸರಾಗಿ ಕೆಸರು ತುಂಬಿಕೊಂಡಿರುವ, ಮಳೆ ನೀರು ಹರಿದು ಹೋಗಿ ತೋಡಿನಂತಾಗಿರುವ, ಅಲ್ಲಲ್ಲಿ ದೊಡ್ಡ ಹೊಂಡ- ಗುಂಡಿಗಳು ಸೃಷ್ಟಿಯಾಗಿ ಹದಗೆಟ್ಟಿದೆ.

    ಮಳೆ ನೀರು ಹರಿದು ಹೋಗಲು ಚರಂಡಿ ವ್ಯವಸ್ಥೆ ಇಲ್ಲ. ಗುಡ್ಡದಿಂದ ಹರಿದು ಬರುವ ಮಳೆ ನೀರು ನೇರವಾಗಿ ರಸ್ತೆ ಮಧ್ಯೆಯೇ ಹರಿಯುತ್ತಿದೆ. ರಸ್ತೆಯಲ್ಲಿ ಕೆಲವೆಡೆ ಮೊಣಕಾಲು ಹೂತು ಹೋಗುವಷ್ಟು ಕೆಸರು ತುಂಬಿಕೊಂಡಿರುವುದರಿಂದ ಮಕ್ಕಳು, ವಯೋವೃದ್ಧರು ಸಂಕಟ ಅನುಭವಿಸಬೇಕಾಗಿ ಬಂದಿದೆ.

    ಈ ಭಾಗದ ಮಂದಿಗೆ ಈ ರಸ್ತೆ ಬಿಟ್ಟರೆ ಪರ್ಯಾಯ ವ್ಯವಸ್ಥೆ ಇಲ್ಲ. ನಡೆದುಕೊಂಡು ಹೋಗುವವರಿಗೆ ಹಾಗೂ ದ್ವಿಚಕ್ರ ವಾಹನಗಳಲ್ಲಿ ತೆರಳುವವರಿಗೆ ಕೆಸರು ಸಿಂಚನ ಖಚಿತ. ರಸ್ತೆ ಕೆಟ್ಟಿರುವ ಪರಿಣಾಮ ರಿಕ್ಷಾಗಳು ಈ ಭಾಗಕ್ಕೆ ಬರುತ್ತಿಲ್ಲ. ಇದರಿಂದಾಗಿ ಅನಾರೋಗ್ಯ ಸಮಸ್ಯೆಗೊಳಗಾದರೆ ಹೊತ್ತುಕೊಂಡು ಹೋಗಬೇಕಾದ ಸ್ಥಿತಿ ನಿರ್ಮಾಣವಾಗಿದೆ.
    ಸಂಪೂರ್ಣ ಹದಗೆಟ್ಟಿರುವ ರಸ್ತೆ ಭಾಗಕ್ಕೆ ಕಾಂಕ್ರೀಟ್ ಅಳವಡಿಸುವುದೇ ಸೂಕ್ತ ಪರಿಹಾರ. ಸದ್ಯ ಹದಗೆಟ್ಟ ರಸ್ತೆ ಭಾಗಕ್ಕೆ ಜಲ್ಲಿಹುಡಿ ಹಾಗೂ ಮರಳು ಹಾಕಿ, ಸೂಕ್ತ ಚರಂಡಿ ವ್ಯವಸ್ಥೆ ಮಾಡಿ ಸಂಚಾರಕ್ಕೆ ತಾತ್ಕಾಲಿಕವಾಗಿ ಅನುವು ಮಾಡಿಕೊಡಿ ಎಂಬುವುದು ಇಲ್ಲಿನ ಜನರ ಆಗ್ರಹ.

    ಕರೊನಾ ಕಾರಣದಿಂದ ಕ್ಷೇತ್ರ ವ್ಯಾಪ್ತಿಯ ಅನೇಕ ರಸ್ತೆ ಅಭಿವೃದ್ಧಿ ಕಾಮಗಾರಿಗಳು ಸೇರಿದಂತೆ ವಿವಿಧ ಕಾಮಗಾರಿಗಳು ಬಾಕಿಯಾಗಿವೆ. ಹಂತ ಹಂತವಾಗಿ ಬಾಕಿ ಉಳಿದಿರುವ ಎಲ್ಲ ರಸ್ತೆಗಳನ್ನು ಅಭಿವೃದ್ಧಿಪಡಿಸಲಾಗುವುದು. ಆರ್ಯಾಪು ಗ್ರಾಮದ ಉದಯಗಿರಿ- ಬೇರಿಕೆ ರಸ್ತೆ ಅಭಿವೃದ್ಧಿ ಬಗ್ಗೆ ಈಗಾಗಲೇ ಬರೆದುಕೊಂಡಿದ್ದೇನೆ. ಮುಂದಿನ ಹಂತದ ಅಭಿವೃದ್ಧಿ ಪಟ್ಟಿಯಲ್ಲಿ ಈ ರಸ್ತೆಯನ್ನು ಸೇರಿಸಲಾಗುವುದು. ಕಾಂಕ್ರೀಟ್ ರಸ್ತೆ ನಿರ್ಮಿಸಲಾಗುವುದು.
    -ಸಂಜೀವ ಮಠಂದೂರು, ಶಾಸಕರು, ಪುತ್ತೂರು

    ರಸ್ತೆ ಅಭಿವೃದ್ಧಿ ಮಾಡುವಂತೆ ನಾವು 2014ರಿಂದ ಶಾಸಕರಿಂದ ಹಿಡಿದು ಸಂಬಂಧಪಟ್ಟ ಎಲ್ಲರಿಗೂ ಮನವಿ ನೀಡುತ್ತಲೇ ಬಂದಿದ್ದೇವೆ. ಆದರೆ ಈ ತನಕ ಸ್ಪಂದನೆ ಲಭಿಸಿಲ್ಲ. 50ಕ್ಕಿಂತಲೂ ಅಧಿಕ ಮನೆಯವರು ಈ ರಸ್ತೆಯನ್ನು ಅವಲಂಬಿಸಿದ್ದಾರೆ. ಈಗ ರಸ್ತೆ ತೀರಾ ಹದಗೆಟ್ಟಿರುವುದರಿಂದ ವಾಹನ ಸಂಚಾರ ಕಷ್ಟದಾಯಕವಾಗಿದ್ದು, ಶೀಘ್ರದಲ್ಲೇ ರಸ್ತೆ ದುರಸ್ತಿ ಮಾಡಬೇಕು.
    -ದಯಾನಂದ ಶೆಟ್ಟಿ ಕರಿಮೊಗರು, ಸ್ಥಳೀಯರು

    ನಗರಸಭೆಯಿಂದ ಯಾವುದೇ ಅನುದಾನ ಇಲ್ಲ. ಶಾಸಕರ ಅನುದಾನದಲ್ಲಿ ರಸ್ತೆ ದುರಸ್ತಿ ಮಾಡಬೇಕಾಗಿದೆ. ರಸ್ತೆ ಹಾಳಾಗಿರುವ ಕುರಿತು ಪರಿಶೀಲನೆ ನಡೆಸಿದ್ದು, ರಸ್ತೆ ಅಭಿವೃದ್ಧಿಗೆ ಅನುದಾನ ಒದಗಿಸಲು ಪ್ರಯತ್ನಿಸಲಾಗುವುದು.
    -ಶೀನಪ್ಪ ನಾಯ್ಕ, ನಗರಸಭಾ ಸದಸ್ಯರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts