More

    ಸಹೋದ್ಯೋಗಿಗಳಿಗೆ ನಿರಂತರ ಪ್ರೋತ್ಸಾಹ ಮಾದರಿ: ಪ್ರೊ.ಎಸ್.ಪ್ರಭಾಕರ್

    ಬೆಳ್ತಂಗಡಿ: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಪ್ರಾಂಶುಪಾಲ ಡಾ.ಪಿ.ಎನ್.ಉದಯಚಂದ್ರ ಸೇವಾನಿವೃತ್ತಿ ಹೊಂದಿದ ಹಿನ್ನೆಲೆಯಲ್ಲಿ ಕಾಲೇಜಿನ ಬೋಧಕರ ಸಂಘದ
    ವತಿಯಿಂದ ಬುಧವಾರ ಬೀಳ್ಕೊಡುಗೆ ಸಮಾರಂಭ ಉದಯಾಭಿನಂದನ ನಡೆಯಿತು.

    ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಉಪಾಧ್ಯಕ್ಷ ಪ್ರೊ.ಎಸ್.ಪ್ರಭಾಕರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಡಾ.ಪಿ.ಎನ್. ಉದಯಚಂದ್ರರು ವಿದ್ಯಾರ್ಥಿಗಳಿಗೆ ಹಾಗೂ ಸಹೋದ್ಯೋಗಿಗಳಿಗೆ ಎಲ್ಲ
    ರೀತಿಯ ಪ್ರೋತ್ಸಾಹ, ಸಹಕಾರ ನೀಡಿದ್ದಾರೆ. ಇದು ಅವರ ದೊಡ್ಡತನ. ಇನ್ನೊಬ್ಬರಿಗೆ ಒಳ್ಳೆಯದಾಗಲಿ ಎಂದು ಆಶಿಸುವ ದೊಡ್ಡ ಗುಣ ಅವರಲ್ಲಿದೆ ಎಂದರು.

    ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ ಡಾ.ಸತೀಶ್ಚಂದ್ರ ಎಸ್. ಮಾತನಾಡಿ, ವ್ಯಕ್ತಿಯ ಜೀವನದಲ್ಲಿ ದೌರ್ಬಲ್ಯಗಳಿರುವುದಿಲ್ಲ. ಮತ್ತೊಬ್ಬರ ದೃಷ್ಟಿಯಲ್ಲಿ ಅದು ದೌರ್ಬಲ್ಯವಾಗಿರಬಹುದು ಅಷ್ಟೇ. ಜೀವನದಲ್ಲಿ ನಿರುತ್ತೇಜಕ ಮಾತುಗಳು ಕೇಳಿಬಂದಾಗ ನಮ್ಮ ಸ್ವಪ್ರಯತ್ನ ಹಾಗೂ ಆತ್ಮವಿಶ್ವಾಸ ಮುಖ್ಯವಾಗುತ್ತದೆ. ಪ್ರತಿಯೊಬ್ಬರೂ ಸ್ವಪ್ರಯತ್ನದಿಂದ ಸಮಾಜ ಹಾಗೂ ಸಂಸ್ಥೆಗೆ ಪ್ರಯೋಜನಕಾರಿಯಾಗಿರಬಹುದು ಎಂದರು.
    ನೂತನ ಪ್ರಾಂಶುಪಾಲ ಡಾ.ಎ.ಜಯಕುಮಾರ ಶೆಟ್ಟಿ, ಪದವಿಪೂರ್ವ ಕಾಲೇಜು ಪ್ರಾಂಶುಪಾಲ ಪ್ರೊ.ದಿನೇಶ್ ಚೌಟ, ವಾಣಿಜ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಲಕ್ಷ್ಮೀನಾರಾಯಣ ಶುಭ ಹಾರೈಸಿದರು. ಡಾ.ಪಿ.ಎನ್.ಉದಯಚಂದ್ರ ಕುರಿತು ಸಂಸ್ಥೆ ಸಿಬ್ಬಂದಿ ಹೊರತಂದ ಸಾಕ್ಷೃಚಿತ್ರ ಪ್ರದರ್ಶಿಸಲಾಯಿತು. ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯನಿರ್ವಹಣಾಧಿಕಾರಿ ಎಂ.ವೈ.ಹರೀಶ್, ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಬಿ.ಸೋಮಶೇಖರ ಶೆಟ್ಟಿ, ಕಾಲೇಜಿನ ಸೂಪರಿಂಟೆಂಡೆಂಟ್ ಯುವರಾಜ್ ಪೂವಣಿ, ವಿವಿಧ ವಿಭಾಗಗಳ ಮುಖ್ಯಸ್ಥರು, ಪ್ರಾಧ್ಯಾಪಕರು, ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ವಿಶ್ವನಾಥ್ ಪಿ. ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು. ಬೋಧಕರ ಸಂಘದ ಕಾರ್ಯದರ್ಶಿ ಡಾ.ಭಾಸ್ಕರ ಹೆಗ್ಡೆ ಸ್ವಾಗತಿಸಿದರು. ಸಂಘದ ಪದಾಧಿಕಾರಿ ಸುವೀರ್ ಜೈನ್ ಕಾರ್ಯಕ್ರಮ ನಿರೂಪಿಸಿದರು.

    ನಾಯಕರು ಬಂದು ಹೋಗ್ತಾರೆ ಉಳಿಯುವುದು ನಾಯಕತ್ವ: ಸನ್ಮಾನ ಸ್ವೀಕರಿಸಿ ಮಾತನಾಡಿ ಡಾ.ಪಿ.ಎನ್.ಉದಯಚಂದ್ರ, ಎಸ್‌ಡಿಎಂ ಕಾಲೇಜಿನಲ್ಲಿ 37 ವಷರ್ಗಳ ಸೇವಾವಧಿಯ ದಿನಗಳನ್ನು ನೆನಪಿಸಿಕೊಂಡರು. ನೂತನ ಪ್ರಾಂಶುಪಾಲರಾಗಿ ಅಧಿಕಾರ ಸ್ವೀಕರಿಸಿದ ಡಾ.ಎ.ಜಯಕುಮಾರ ಶೆಟ್ಟಿ ಅವರನ್ನು ಅಭಿನಂದಿಸಿ ಇಂಗ್ಲಿಷ್ ಕವಿ ಆಲ್ಫ್ರೆಡ್ ಲಾರ್ಡ್ ಟೆನಿಸನ್‌ನ ಕವಿತೆಯ ‘ಮೆನ್ ಮೇ ಕಮ್ ಆ್ಯಂಡ್ ಮೆನ್ ಮೇ ಗೋ, ಬಟ್ ಐ ಗೋ ಆನ್ ಫಾರ್ ಎವರ್’ ಸಾಲನ್ನು ಉಲ್ಲೇಖಿಸಿದ ಅವರು, ನಾಯಕರು ಬರುತ್ತಾರೆ, ಹೋಗುತ್ತಾರೆ. ಆದರೆ ನಾಯಕತ್ವ ಮಾತ್ರ ಹಾಗೆಯೇ ಉಳಿಯುತ್ತದೆ. ಪ್ರಾಂಶುಪಾಲ ಸ್ಥಾನವೂ ಅದೇ ರೀತಿಯಾಗಿದ್ದು, ಸವಾಲುಗಳು, ಅನಿಶ್ಚಿತತೆಗಳು ಇರುತ್ತವೆ. ಎಲ್ಲರ ಸಹಕಾರದಿಂದ ಕಾಲಾನುಸಾರ ಎಲ್ಲವೂ ಸುಗಮವಾಗಿ ಸಾಗುತ್ತದೆ ಎಂದರು.

    ಡಾ.ಪಿ.ಎನ್.ಉದಯಚಂದ್ರ ದೊಡ್ಡ ವಿದ್ವಾಂಸರಾಗಿದ್ದು, ಸಂಶೋಧಕರೂ ಆಗಿದ್ದಾರೆ. ಅವರ ಈ ಎರಡೂ ಸಾಮರ್ಥ್ಯಗಳು ಮುಂದೆಯೂ ಕೂಡ ವಿದ್ಯಾರ್ಥಿಗಳಿಗೆ, ಯುವಕರಿಗೆ ಪ್ರಯೋಜನವಾಗಲಿ. ಸಂಶೋಧನಾ ಮಾರ್ಗದರ್ಶಿಯಾಗಿರುವ ಅವರು ನಮ್ಮ ಕಾಲೇಜಿನ ಸಂಶೋಧನಾ ಕೇಂದ್ರದಲ್ಲಿ ಸಂಶೋಧನಾ ಮಾರ್ಗದರ್ಶಿಯಾಗಿ ಸೇವೆ ಸಲ್ಲಿಸಲು ಅವಕಾಶವಿದೆ.
    ಡಾ.ಸತೀಶ್ಚಂದ್ರ ಎಸ್.
    ಎಸ್‌ಡಿಎಂ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts