More

    ದರ್ಜಿಗಳ ಕಲ್ಯಾಣ ಮಂಡಳಿ ಜಾರಿಗೊಳಿಸಿ

    ದಾವಣಗೆರೆ: ಟೈಲರ್‌ಗಳ ಕಲ್ಯಾಣ ಮಂಡಳಿ ಜಾರಿಗಾಗಿ ಆಗ್ರಹಿಸಿ ಕರ್ನಾಟಕ ಟೈಲರ್ಸ್ ಮತ್ತು ಸಹಾಯಕರ ಫೆಡರೇಷನ್‌ನ ರಾಜ್ಯ ಸಮಿತಿ ವತಿ ಉಪ ವಿಭಾಗಾಧಿಕಾರಿ ಕಚೇರಿ ಬಳಿಯ ಪಿಬಿ ರಸ್ತೆಯಲ್ಲಿ ಸೋಮವಾರ ಪ್ರತಿಭಟನೆ ನಡೆಸಿ, ನಂತರ ಎಸಿ ಮಮತಾ ಹೊಸಗೌಡರ್ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿತು.

    ರಾಜ್ಯದಲ್ಲಿ 20 ಲಕ್ಷ ಜನರು ಟೈಲರ್ ವೃತ್ತಿ ಅವಲಂಭಿಸಿದ್ದಾರೆ. ಅಸಂಘಟಿತ ವಲಯದಲ್ಲಿರುವ ದರ್ಜಿಗಳಿಗೆ ಯಾವುದೇ ಸೌಲಭ್ಯಗಳಿಲ್ಲ. ಟೈಲರ್ ವೃತ್ತಿ ನಂಬಿದ ಬಹುತೇಕ ಮಹಿಳೆಯರು ಮನೆ, ಅಂಗಡಿಗಳಲ್ಲಿ ಬಟ್ಟೆ ಹೊಲೆಯುತ್ತಿದ್ದಾರೆ. ಕಾರ್ಮಿಕ ಕಾಯ್ದೆ ಅನ್ವಯಿಸದ ಸಣ್ಣ ಗಾರ್ಮೆಂಟ್ಸ್ ಘಟಕಗಳಲ್ಲೂ ಟೈಲರಿಂಗ್ ಮಾಡುವವರಿದ್ದಾರೆ. ಸರ್ಕಾರಿ ಉದ್ಯೋಗ ನೆಚ್ಚಿಕೊಳ್ಳದೇ ಸ್ವಯಂ ಉದ್ಯೋಗದ ಹಾದಿ ಕಂಡುಕೊಂಡಿದ್ದಾರೆ.

    ಸರ್ಕಾರದ ಸೌಲಭ್ಯಗಳಿಲ್ಲದೇ ಟೈಲರ್‌ಗಳು ಜೀವನ ನಡೆಸುವುದು ದುಸ್ತರವಾಗಿದೆ. ನೆರೆಯ ರಾಜ್ಯಗಳಲ್ಲಿ ಟೈಲರ್‌ಗಳ ಕಲ್ಯಾಣ ಮಂಡಳಿ ಜಾರಿಯಲ್ಲಿದೆ. ನಮ್ಮ ರಾಜ್ಯದಲ್ಲೂ ಅನುಷ್ಠಾನಗೊಳಿಸಬೇಕು. ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯಿಂದ ನೀಡುತ್ತಿರುವ ಎಲ್ಲ ಬಗೆಯ ನೆರವು, ಪರಿಹಾರಗಳನ್ನು ಟೈಲರ್‌ಗಳಿಗೂ ವಿಸ್ತರಿಸಬೇಕೆಂದು ಆಗ್ರಹಿಸಿದರು.

    ಕಟ್ಟಡ ಕಾರ್ಮಿಕರ ಮಂಡಳಿಗೆ ಕಟ್ಟಡ ಮತ್ತು ಇತರೆ ನಿರ್ಮಣ ಮಾಲೀಕರಿಂದ ಸೆಸ್ ಮೂಲಕ ಹಣ ಸಂಗ್ರಹ ಮಾಡಲಾಗುತ್ತಿದೆ. ಟೈಕ್ಸ್‌ಟೈಲ್ ಮಿಲ್, ಗಾರ್ಮೆಂಟ್ಸ್, ಬಟ್ಟೆಯಂಗಡಿ, ಬಟ್ಟೆ ಹೊಲಿಗೆಗೆ ಪೂರಕ ಉತ್ಪನ್ನಗಳ ಉತ್ಪಾದಕರಿಂದ ಸೆಸ್ ಸಂಗ್ರಹಿಸಿ ನೆರವಿಗೆ ಬರಬೇಕು. ಕೋವಿಡ್-19 ಸಂಕಷ್ಟದ ಈ ದಿನದಲ್ಲಿ ಟೈಲರ್ ವೃತ್ತಿ ನಡೆಸುವವರ ಜೀವನೋಪಾಯಕ್ಕಾಗಿ ತಲಾ 5 ಸಾವಿರ ರೂ.ಗಳ ಧನಸಹಾಯ ನೀಡಬೇಕೆಂದು ಆಗ್ರಹಿಸಿದರು.

    ಸಂಘಟನೆಯ ರಾಜ್ಯ ಸಮಿತಿ ಅಧ್ಯಕ್ಷ ಎಚ್.ಕೆ.ರಾಮಚಂದ್ರಪ್ಪ, ರಾಜ್ಯ ಖಜಾಂಚಿ ಆನಂದರಾಜ್, ರಾಜ್ಯ ಪ್ರಧಾನ ಕಾರ್ಯದರ್ಶಿ ಆವರಗೆರೆ ಚಂದ್ರು, ಉಪಾಧ್ಯಕ್ಷರಾದ ಬೊಮ್ಮಕ್ಕ, ಶಾಂತಕುಮಾರ್, ಸಿ.ರಮೇಶ್, ಮಂಜುಳಾ, ಜಿಲ್ಲಾ ಸಂಚಾಲಕಿ ಯಶೋದ, ಜಿಲ್ಲಾ ಉಪಾಧ್ಯಕ್ಷೆ ಸರೋಜಾ, ದರ್ಜಿಗಳಾದ ಆಶಾ, ಸ್ಮಿತಾ, ನಾಗರತ್ನಮ್ಮ ಇತರರು ಪ್ರತಿಭಟನೆಯಲ್ಲಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts