More

    ಇಬ್ಬರ ಜೀವ ತೆಗೆದ ಸೈಡ್ ​ಸ್ಟ್ಯಾಂಡ್​, ಒಬ್ಬನ ಪ್ರಾಣ ಉಳಿಸಿದ ಹೆಲ್ಮೆಟ್​: ಆದ್ರೆ ತಪ್ಪು ಮೂವರದ್ದೂ…

    ಬೆಂಗಳೂರು: ಬೈಕೊಂದರಲ್ಲಿ ಹೋಗುವಾಗ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸಾವಿಗೀಡಾಗಿದ್ದಾರೆ, ಇನ್ನೊಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ. ಈ ಅಪಘಾತದಲ್ಲಿ ಸೈಡ್​ಸ್ಟ್ಯಾಂಡ್​​ನಿಂದಾಗಿ ಇಬ್ಬರು ಸಾವಿಗೀಡಾದರೆ, ಇನ್ನೊಬ್ಬ ಹೆಲ್ಮೆಟ್​ನಿಂದಾಗಿ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಆದರೆ ಈ ಮೂವರ ತಪ್ಪಿನಿಂದಾಗಿ ಈ ಅಪಘಾತ ಸಂಭವಿಸಿದೆ. ಯಲಹಂಕ ಸಂಚಾರ ಠಾಣೆ ವ್ಯಾಪ್ತಿಯಲ್ಲಿ ಶನಿವಾರ ಈ ಅಪಘಾತ ಸಂಭವಿಸಿದೆ.

    ಎಚ್‌ಎಸ್‌ಆರ್ ಲೇಔಟ್ ನಿವಾಸಿಗಳಾದ ಅಮಿತ್ ಸಿಂಗ್ (29) ಮತ್ತು ಅಮೋಲ್ ಪ್ರಮೋದ್ ಆಮ್ಟೆ (29) ಸಾವಿಗೀಡಾದ ಹಿಂಬದಿ ಸವಾರರು. ಸವಾರ ಸೌರವ್ ದೇ (29) ಎಂಬಾತನ ಎಡಗೈ ಹಾಗೂ ತಲೆಗೆ ಗಾಯಗಳಾಗಿದ್ದು, ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಶನಿವಾರ ಬೆಳಗ್ಗೆ 10.45ರ ಸುಮಾರಿಗೆ ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್ ಮೇಲೆ ಈ ಅಪಘಾತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    ಮಹಾರಾಷ್ಟ್ರದ ಅಮೋಲ್ ಪ್ರಮೋದ್ ಆಮ್ಟೆ, ದೆಹಲಿಯ ಅಮಿತ್ ಸಿಂಗ್ ಹಾಗೂ ರಾಜಸ್ಥಾನದ ಸೌರವ್ ದೇ ನಗರದ ಎಚ್‌ಎಸ್‌ಆರ್ ಲೇಔಟ್‌ನ ಕಾಲೇಜೊಂದರಲ್ಲಿ ಎಂಟೆಕ್ ವ್ಯಾಸಂಗ ಮಾಡುತ್ತಿದ್ದರು. ನಂದಿ ಬೆಟ್ಟಕ್ಕೆ ಹೋಗುತ್ತಿರುವುದಾಗಿ ಸ್ನೇಹಿತರ ಬಳಿ ತಿಳಿಸಿ ಶನಿವಾರ ಮುಂಜಾನೆ ಮೂವರೂ ಒಂದೇ ದ್ವಿಚಕ್ರ ವಾಹನದಲ್ಲಿ ನಂದಿ ಬೆಟ್ಟಕ್ಕೆ ಹೋಗಿದ್ದರು. ಬಳಿಕ ನಂದಿ ಬೆಟ್ಟದ ಜಾಲಿ ರೈಡ್ ಮುಗಿಸಿಕೊಂಡು ನಗರಕ್ಕೆ ವಾಪಸಾಗುತ್ತಿದ್ದರು.

    ಹೆಲ್ಮೆಟ್ ಧರಿಸಿದಕ್ಕೆ ಬದುಕುಳಿದ ಸವಾರ: ಬಳ್ಳಾರಿ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ ರೈತರ ಸಂತೆ ಬಳಿ ಫ್ಲೈ ಓವರ್‌ನಲ್ಲಿ ಬರುವಾಗ ತೆಗೆಯದೇ ಇದ್ದ ಸೈಡ್ ಸ್ಟ್ಯಾಂಡ್​ ರಸ್ತೆ ಪಕ್ಕದ ಸಿಮೆಂಟ್ ಬ್ಲಾಕ್‌ಗೆ ತಗುಲಿದೆ. ಪರಿಣಾಮವಾಗಿ ಸವಾರ ಸೌರವ್ ದೇನ ನಿಯಂತ್ರಣ ತಪ್ಪಿದ ದ್ವಿಚಕ್ರ ವಾಹನ ರಭಸವಾಗಿ ಫ್ಲೈ ಓವರ್‌ನ ತಡೆಗೋಡೆಗೆ ಡಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಹಿಂಬದಿ ಕುಳಿತಿದ್ದ ಅಮಿತ್ ಸಿಂಗ್ ಮತ್ತು ಪ್ರಮೋದ್ ಆಮ್ಟೆ ಫ್ಲೈ ಓವರ್‌ನಿಂದ ನೆಗೆದು ಕೆಳಗಿನ ರಸ್ತೆಗೆ ಬಿದ್ದಿದ್ದಾರೆ. ಈ ವೇಳೆ ಇಬ್ಬರ ತಲೆಗೆ ಗಂಭೀರ ಗಾಯಯವಾಗಿದೆ. ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಸೌರವ್ ದೇ ಹೆಲ್ಮೆಟ್ ಧರಿಸಿದ್ದ ಪರಿಣಾಮ ಕೈ ಹಾಗೂ ತಲೆಗೆ ಸಣ್ಣ ಪ್ರಮಾಣದ ಗಾಯವಾಗಿದೆ. ಈ ವೇಳೆ ಸ್ಥಳೀಯರು ಕೂಡಲೇ ಮೂವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಈ ವೇಳೆ ಅಮೋಲ್ ಪ್ರಮೋದ್ ಆಮ್ಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಮೃತಪಟ್ಟಿದ್ದಾನೆ. ಅಮಿತ್ ಸಿಂಗ್ ಚಿಕಿತ್ಸೆ ಫಲಿಸದೆ ಮಧ್ಯಾಹ್ನ 12.50ರ ಸುಮಾರಿಗೆ ಮೃತಪಟ್ಟಿದ್ದಾನೆ. ಸವಾರ ಸೌರವ್ ದೇಗೆ ಚಿಕಿತ್ಸೆ ಮುಂದುವರಿದಿದ್ದು, ಸದ್ಯಕ್ಕೆ ಪ್ರಾಣಾಪಾಯದಿಂದ ಪಾರಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

    ದ್ವಿಚಕ್ರ ವಾಹನದ ಅತಿಯಾದ ವೇಗ ಹಾಗೂ ಅಜಾಗರೂಕತೆಯ ಚಾಲನೆಯೇ ಅಪಘಾತಕ್ಕೆ ಕಾರಣ ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಈ ಸಂಬಂಧ ಸವಾರ ಸೌರವ್ ದೇ ವಿರುದ್ಧ ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದು, ತನಿಖೆ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

    2022-23ನೇ ಸಾಲಿನ ಎಸ್ಎಸ್ಎಲ್‌ಸಿ ಪರೀಕ್ಷೆ ತಾತ್ಕಾಲಿಕ ವೇಳಾಪಟ್ಟಿ ಬಿಡುಗಡೆ; ಇಲ್ಲಿದೆ ವಿವರ..

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts