More

    ತುಂಗಭದ್ರೆ ಮರಳು ದಂಧೆಕೋರರ ಪಾಲು

    ಕೇಶವಮೂರ್ತಿ ವಿ.ಬಿ. ಹಾವೇರಿ

    ಜಿಲ್ಲೆಯಲ್ಲಿ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ತುಂಗಭದ್ರಾ ಹಾಗೂ ವರದಾ ನದಿ ಪಾತ್ರದಲ್ಲಿ ಹಾಡಹಗಲಲ್ಲೇ ಅಕ್ರಮ ದಂಧೆಕೋರರು ತಮ್ಮ ಕಾರ್ಯವನ್ನು ಮುಂದುವರಿಸಿದ್ದಾರೆ. ನದಿಗಳ ಸಂಗಮ ಸ್ಥಳ ಹಾಗೂ ಪುರಾತನ ಗಳಗೇಶ್ವರ ದೇವಸ್ಥಾನದ ಎದುರಲ್ಲೇ ಮರಳು ದಂಧೆ ಎಗ್ಗಿಲ್ಲದೇ ನಡೆಯುತ್ತಿದೆ.

    ದಂಧೆಕೋರರು ಸರ್ಕಾರದಿಂದ ಯಾವುದೇ ಅನುಮತಿ ಪಡೆಯದೇ ರಾಜಾರೋಷವಾಗಿ ಮರಳನ್ನು ತೆಗೆದು ಸಾಗಾಟ ಮಾಡುತ್ತಿದ್ದಾರೆ. ಜೆಸಿಬಿ ಮೂಲಕ ಹಗಲಲ್ಲಿ ನದಿಯೊಡಲಿಗೆ ಕನ್ನ ಹಾಕಿ, ಅಲ್ಲಿಯೇ ಮರಳಿನ ಗುಡ್ಡೆ ಮಾಡಿ, ರಾತ್ರೋರಾತ್ರಿ ಅದನ್ನು ಟ್ರ್ಯಾಕ್ಟರ್, ಟಿಪ್ಪರ್​ಗಳಿಗೆ ತುಂಬಿಸಿ ಸಾಗಿಸುತ್ತಿದ್ದಾರೆ.

    ದಂಧೆಕೋರರು ಗಳಗೇಶ್ವರ ಪ್ರಾಚೀನ ಸ್ಮಾರಕದ ಕಾಂಪೌಂಡ್​ಗೆ ತಾಗಿಕೊಂಡೇ ಮರಳು ಸಂಗ್ರಹಿಸುತ್ತಿದ್ದರೂ ಸರ್ಕಾರ ತಲೆಕೆಡಿಸಿಕೊಳ್ಳುತ್ತಿಲ್ಲ. ದೇಗುಲ ಪ್ರವೇಶಿಸುವ ಮುಖ್ಯದ್ವಾರದ ಬಳಿಯಲ್ಲೇ ಅಕ್ರಮವಾಗಿ ಮರಳು ಸಂಗ್ರಹಿಸಿರುವುದು ಕಂಡುಬರುತ್ತದೆ. ಇಷ್ಟೆಲ್ಲ ಅಕ್ರಮ ದಂಧೆ ನಡೆಯುತ್ತಿದ್ದರೂ ಜಿಲ್ಲಾಡಳಿತ, ಪೊಲೀಸ್ ಇಲಾಖೆ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಯಾವುದೇ ಕ್ರಮ ಕೈಗೊಳ್ಳದಿರುವುದು ವಿಪರ್ಯಾಸ. ಇನ್ನೂ ವಿಳಂಬ ಮಾಡಿದರೆ, ತುಂಗಭದ್ರೆಯ ಪಾತ್ರವೇ ಮುಂದಿನ ದಿನಗಳಲ್ಲಿ ಬದಲಾಗಿ ಭಯಂಕರ ಅನಾಹುತಗಳಿಗೆ ದಾರಿಯಾಗುವ ಸಾಧ್ಯತೆಗಳಿವೆ.

    ಸಿಎಂ ಸೂಚನೆಗೂ ಬೆಲೆ ಇಲ್ಲ

    ಫೆ. 18ರಂದು ಜಿಲ್ಲೆಗೆ ಭೇಟಿ ನೀಡಿದ್ದ ಸಿಎಂ ಸಿದ್ದರಾಮಯ್ಯ, ಅಕ್ರಮ ಮರಳು ದಂಧೆ ತಡೆಯುವಂತೆ ಜಿಲ್ಲೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದರು. ಜಿಲ್ಲೆಯ ತುಂಗಭದ್ರಾ ನದಿ ವ್ಯಾಪ್ತಿಯಲ್ಲಿ ಅಕ್ರಮ ಮರಳುಗಾರಿಕೆ ನಡೆಸಬಾರದು. ಬಡವರಿಗೆ ಕಡಿಮೆ ಬೆಲೆಯಲ್ಲಿ ಮರಳು ಸಿಗುವಂತೆ ಕ್ರಮ ಕೈಗೊಳ್ಳಬೇಕು. ಅಕ್ರಮ ದಂಧೆಕೋರರ ಮೇಲೆ ಕ್ರಮ ಜರುಗಿಸಿ ಎಂದು ಸೂಚಿಸಿದ್ದರು. ಸಿಎಂ ಸೂಚನೆಗೂ ಬೆಲೆ ನೀಡದ ಅಧಿಕಾರಿಗಳು, ಜನಪ್ರತಿನಿಧಿಗಳು ಮರಳು ಅಕ್ರಮಕ್ಕೆ ಪರೋಕ್ಷವಾಗಿ ಬೆಂಬಲ ನೀಡುತ್ತಿದ್ದಾರೆ ಎನ್ನುವ ಆರೋಪ ಸಾಮಾನ್ಯವಾಗಿದೆ.

    ಬೇಸಿಗೆಯಲ್ಲಿ ದಂಧೆಕೋರರಿಗೆ ಹಬ್ಬ

    ಬೇಸಿಗೆ ಸಂದರ್ಭದಲ್ಲಿ ನದಿಯಲ್ಲಿ ನೀರಿನ ಪ್ರಮಾಣ ಕಡಿಮೆ ಇರುತ್ತದೆ. ಈ ಬಾರಿ ಬರಗಾಲ ಹಿನ್ನೆಲೆಯಲ್ಲಿ ನದಿ ತಿಂಗಳುಗಟ್ಟಲೇ ಬತ್ತಿ ಹೋಗಿತ್ತು. ಸದ್ಯಕ್ಕೆ ಭದ್ರಾ ಡ್ಯಾಮ್ಂದ ನೀರು ಬಿಡಲಾಗಿದೆಯಾದರೂ ಅಷ್ಟೊಂದು ಪ್ರಮಾಣದ ನೀರಿಲ್ಲ. ಎರಡು, ಮೂರು ವಾರದಲ್ಲಿ ಅದೂ ಖಾಲಿ ಆಗುತ್ತದೆ. ಮರಳು ದಂಧೆಕೋರರಿಗೆ ಬೇಸಿಗೆ ಹಾಗೂ ಬರಗಾಲ ಎಂದರೆ ಹಬ್ಬವೇ ಸರಿ. ನದಿಯಲ್ಲಿ ನೀರಿಲ್ಲ ಎಂದು ರೈತರು ಸಂಕಟ ಪಡುತ್ತಿದ್ದರೆ, ದಂಧೆಕೋರರು ಮಾತ್ರ ಹಬ್ಬ ಆಚರಿಸುತ್ತಿದ್ದಾರೆ. ಸರ್ಕಾರಕ್ಕೆ ಕೋಟ್ಯಂತರ ರೂ. ವಂಚಿಸುತ್ತಿದ್ದಾರೆ.

    ಸ್ಮಾರಕಕ್ಕೆ ಬೇಕಿದೆ ರಕ್ಷಣೆ

    ಗಳಗೇಶ್ವರ ದೇಗುಲವನ್ನು ಸಂರಕ್ಷಿತ ಸ್ಮಾರಕ, ರಾಷ್ಟ್ರೀಯ ಮಹತ್ವದ ಸ್ಮಾರಕವೆಂದು ಕೇಂದ್ರ ಪುರಾತತ್ವ ಇಲಾಖೆ ಘೊಷಿಸಿದೆ. ಪ್ರಾಚೀನ ಸ್ಮಾರಕ, ಪುರಾತತ್ವ ಸ್ಥಳ ಹಾಗೂ ಅವಶೇಷಗಳ ಅಧಿನಿಯಮ 2010ರ ಪ್ರಕಾರ ಸ್ಮಾರಕವನ್ನು ದುರುಯೋಗಪಡಿಸಿಕೊಳ್ಳುವಂತಿಲ್ಲ. ಹಾನಿ ಮಾಡುವಂತಿಲ್ಲ. ಆದರೆ, ಮರಳು ದಂಧೆಕೋರರು ಸ್ಮಾರಕಕ್ಕೆ ಅಂಟಿಕೊಂಡೇ ದಂಧೆ ನಡೆಸುತ್ತಿರುವುದು, ಜೆಸಿಬಿ, ಟಿಪ್ಪರ್ ಗರ್ಜನೆ ನಡೆಸುತ್ತಿರುವುದು ಮೇಲ್ನೋಟಕ್ಕೆ ಅಪರಾಧ ಎಂದು ಕಂಡುಬರುತ್ತದೆ. ಸರ್ಕಾರ, ಜಿಲ್ಲಾಡಳಿತ ಸ್ಮಾರಕವನ್ನು ರಕ್ಷಿಸುತ್ತದೆಯೋ ಅಥವಾ ಕರ್ತವ್ಯದ ನಿರ್ಲಕ್ಷ್ಯ ಮುಂದುವರೆಯುತ್ತದೆಯೋ ಎಂದು ಜನ ಕಾದು ನೋಡುತ್ತಿದ್ದಾರೆ.

    ನದಿ ಒಡಲಲ್ಲೇ ಸಂಗ್ರಹ

    ತುಂಗಭದ್ರಾ ನದಿಯ ಮರಳಿಗೆ ಭಾರಿ ಬೇಡಿಕೆ ಇದೆ. ಬೇರೆ ನದಿ ಉಸುಕಿಗಿಂತ ತುಂಗಭದ್ರೆಯ ಮರಳು ಹೆಚ್ಚಿನ ಗುಣಮಟ್ಟ ಹೊಂದಿದ್ದರಿಂದ ಕಟ್ಟಡ ನಿರ್ವಣಕ್ಕೆ ಸೂಕ್ತವಾಗಿದೆ. ಹಾಗಾಗಿ, ಇದಕ್ಕೆ ಹೆಚ್ಚಿನ ಬೇಡಿಕೆ ಇದೆ. ಹೀಗಾಗಿ, ದಂಧೆಕೋರರು ತುಂಗಭದ್ರೆಯ ಒಡಲಿಗೆ ಕನ್ನ ಹಾಕುತ್ತಿದ್ದಾರೆ. ನದಿಯಲ್ಲಿ ನೀರು ಇಲ್ಲದ ಸಂದರ್ಭದಲ್ಲಿ ಮರಳನ್ನು ಸಂಗ್ರಹಿಸಿ ನದಿಯೊಳಗೇ ಅಲ್ಲಲ್ಲಿ ಗುಡ್ಡೆ ಹಾಕುತ್ತಾರೆ. ರಾತ್ರಿವೇಳೆಯಲ್ಲಿ ಮರಳಿಗೆ ಪ್ರಯಾಣ ಯೋಗ ಬರುವಂತೆ ನೋಡಿಕೊಳ್ಳಲಾಗುತ್ತದೆ.

    ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾನು ಇತ್ತೀಚೆಗಷ್ಟೇ ವರ್ಗಾವಣೆಯಾಗಿ ಬಂದಿದ್ದೇನೆ. ಹಾವೇರಿ ತಾಲೂಕಿನಲ್ಲಿ ಅಕ್ರಮ ಮರಳು ದಂಧೆ ನಡೆಸುತ್ತಿರುವವರ ವಿರುದ್ಧ ಪ್ರಕರಣ ದಾಖಲಿಸಿ ಸೂಕ್ತ ಕ್ರಮ ಜರುಗಿಸುತ್ತೇನೆ.

    | ನಾಗರಾಜ ಎನ್.ಜೆ., ತಹಸೀಲ್ದಾರ್, ಹಾವೇರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts