More

    ತುಂಗಭದ್ರಾ ನದಿಗೆ ನೀರು ಹರಿಸಲು ರೈತರ ಒತ್ತಾಯ

    ರಾಣೆಬೆನ್ನೂರ: ತಾಲೂಕಿನಲ್ಲಿ ಸಂಪೂರ್ಣ ಬತ್ತಿ ಹೋಗಿರುವ ತುಂಗಭದ್ರಾ ನದಿಗೆ ಭದ್ರಾ ಜಲಾಶಯದಿಂದ ನೀರು ಹರಿಸಿ ಜನ ಜಾನುವಾರುಗಳಿಗೆ ಬಂದೊದಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಬೇಕು ಎಂದು ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶನಿವಾರ ತಾಲೂಕಿನ ಮಾಕನೂರು ಕ್ರಾಸ್ ಬಳಿ ಉಪ ವಿಭಾಗಾಧಿಕಾರಿ ಚನ್ನಪ್ಪ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
    ರೈತ ಸಂಘದ ಸಂಘಟನಾ ಕಾರ್ಯದರ್ಶಿ ರವೀಂದ್ರಗೌಡ ಪಾಟೀಲ ಮಾತನಾಡಿ, ತುಂಗಭದ್ರಾ ನದಿ ಸಂಪೂರ್ಣವಾಗಿ ಬರಿದಾಗಿದೆ. ಜಾನುವಾರುಗಳು, ಜಲಚರ ಜೀವಿಗಳು, ವನ್ಯಜೀವಿಗಳು, ಪಶುಪಕ್ಷಿಗಳು ಕುಡಿಯುವ ನೀರಿಲ್ಲದೆ ಪರದಾಡುತ್ತಿವೆ. ಈ ಸಮಸ್ಯೆ ನಿವಾರಣೆಗಾಗಿ ಶೇಖರಣೆ ಇರುವ ಭದ್ರಾ ಜಲಾಶಯದಿಂದ ಕನಿಷ್ಠ 2 ಟಿ.ಎಂ.ಸಿ. ನೀರನ್ನು ಕೂಡಲೇ ಜೀವಜಲ ತುರ್ತು ಪರಿಸ್ಥಿತಿ ಘೋಷಿಸಿ ತುಂಗಭದ್ರಾ ನದಿಗೆ ನೀರು ಹರಿಸಬೇಕು.
    ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯ ರಾಜಕಾರಣಿಗಳು ಅಲ್ಲಿನ ರೈತರ ಅಡಿಕೆ ಬೆಳೆಗಳಿಗೆ ತೊಂದರೆಯಾಗಬಾರದೆಂದು ಬಹಳಷ್ಟು ನೀರನ್ನು ಶೇಖರಣೆ ಮಾಡಿಕೊಂಡು ಕೆಳಭಾಗದಲ್ಲಿರುವ ನಮಗೆ ತೊಂದರೆ ಮಾಡುತ್ತಿರುವುದು ಸರಿಯಲ್ಲ. ನಮ್ಮ ಜಿಲ್ಲೆಯ ಜನರ ಹಿತ ಕಾಯಲು ಸರ್ಕಾರ ಮತ್ತು ಸಂಬಂಧಿಸಿದ ಅಧಿಕಾರಿಗಳ ಮೇಲೆ ಒತ್ತಡ ತಂದು ಈ ಸಂದರ್ಭದಲ್ಲಿ ನೀರು ಹರಿಸಿ ಜೀವ ಸಂಕುಲದ ನೆರವಿಗೆ ಧಾವಿಸಬೇಕು ಎಂದು ಒತ್ತಾಯಿಸಿದರು.
    ರೈತ ಮುಖಂಡರಾದ ಈರಣ್ಣ ಹಲಗೇರಿ, ಸುರೇಶ ಮಲ್ಲಾಪುರ, ಚಂದ್ರಪ್ಪ ಬೇಡರ, ಬಸವರಾಜ ಹಲಗೇರಿ, ಭೀಮಪ್ಪ ಪೂಜಾರ, ರಾಜು ಬಾತಿ, ಶಿವಪ್ಪ ಬಾರ್ಕಿ ಮತ್ತಿತರರು ಪಾಲ್ಗೊಂಡಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts