More

    ತುಮಕೂರು ತಾಪಂ ಅಧ್ಯಕ್ಷ ಗಂಗಾಂಜನೇಯ ರಾಜೀನಾಮೆ ; ಸುರೇಶಗೌಡ, ಹುಚ್ಚಯ್ಯ ರಾಜಕೀಯ ಒತ್ತಡ

    ತುಮಕೂರು : ರಾಜಕೀಯ ಒತ್ತಡಕ್ಕೆ ಸಿಲುಕಿ ಕೊನೆಗೂ ತಾಲೂಕು ಪಂಚಾಯಿತಿ ಅಧ್ಯಕ್ಷ ಗಂಗಾಂಜನೇಯ ರಾಜೀನಾಮೆ ನೀಡಿದ್ದಾರೆ. ಜಿಪಂ ಸದಸ್ಯ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ವೈ.ಎಚ್.ಹುಚ್ಚಯ್ಯ ಬೆದರಿಕೆ ತಂತ್ರ ಒಡ್ಡಿದ ಹಿನ್ನೆಲೆಯಲ್ಲಿ ಅನಿವಾರ್ಯವಾಗಿ ಪಕ್ಷದ ಹಿತದೃಷ್ಟಿಯಿಂದ ಗಂಗಾಂಜನೇಯ ಅಧ್ಯಕ್ಷ ಸ್ಥಾನದಿಂದ ಕೆಳಗಿಳಿದಿದ್ದಾರೆ.

    ಮಾದಿಗ ಸಮುದಾಯವನ್ನು ಕಡೆಗಣಿಸಿದ್ದು, ವೈ.ಎಚ್.ಹುಚ್ಚಯ್ಯ ರಾಜೀನಾಮೆ ಬೆದರಿಕೆ ಹಿನ್ನೆಲೆಯಲ್ಲಿ ಗುರುವಾರ ಕರೆಯಲಾಗಿದ್ದ ತುಮಕೂರು ಗ್ರಾಮಾಂತರ ಕ್ಷೇತ್ರ ಬಿಜೆಪಿ ಘಟಕದ ಕಚೇರಿಯಲ್ಲಿ ಮಾಜಿ ಶಾಸಕ ಬಿ.ಸುರೇಶಗೌಡ ನೇತೃತ್ವದಲ್ಲಿ ಪಕ್ಷದ ತಾಪಂ ಹಾಗೂ ಜಿಪಂ ಸದಸ್ಯರ ಸಭೆಯಲ್ಲಿ ರಾಜೀನಾಮೆ ನೀಡಲು ಒಲ್ಲದ ಮನಸ್ಸಿನಿಂದಲೇ ಗಂಗಾಂಜನೇಯ ಒಪ್ಪಿಕೊಂಡಿದ್ದಾರೆ. ಹುಚ್ಚಯ್ಯ ಆಪ್ತಬಳಗದ ಅರಕೆರೆ ಕ್ಷೇತ್ರದ ಎನ್.ಇ.ಕವಿತಾ ಅವರನ್ನು ಉಳಿದ ಅವಧಿಗೆ ಅಧ್ಯಕ್ಷರನ್ನಾಗಿ ಮಾಡಲು ಸಹ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನ ತೆಗೆದುಕೊಳ್ಳಲಾಗಿದೆ ಎನ್ನಲಾಗಿದೆ. ಆದರೆ, ಗಂಗಾಂಜನೇಯ ರಾಜೀನಾಮೆ ಅಂಗೀಕಾರಗೊಂಡು ಹೊಸ ಅಧ್ಯಕ್ಷರ ಚುನಾವಣೆ ವೇಳೆ ‘ಬಿಜೆಪಿ ಭಿನ್ನಮತ’ ಸ್ಫೋಟಗೊಳ್ಳುವ ಸಾಧ್ಯತೆ ತಳ್ಳಿಹಾಕುವಂತಿಲ್ಲ.

    ತಾಪಂನಲ್ಲಿ 17 ಬಿಜೆಪಿ ಸದಸ್ಯರಿದ್ದು, ಗುರುವಾರದ ಸಭೆಯಲ್ಲಿ ಗಂಗಾಂಜನೇಯ ಸೇರಿ 16 ಮಂದಿ ಹಾಜರಾಗಿದ್ದರು. ಕೋರಾ ತಾಪಂ ಕ್ಷೇತ್ರದ ಸದಸ್ಯೆ ಕವಿತಾ ರಮೇಶ್ ಸಭೆಯಿಂದ ದೂರ ಉಳಿದಿದ್ದು ಪಕ್ಷ ತೆಗೆದುಕೊಳ್ಳುವ ತೀರ್ಮಾನಕ್ಕೆ ಬದ್ಧ ಎಂದು ತಿಳಿಸಿದ್ದಾರೆ ಎನ್ನಲಾಗಿದೆ. ಸಭೆಯ ತೀರ್ಮಾನದಂತೆ ಸ್ವ-ಇಚ್ಛೆಯಿಂದ, ವೈಯಕ್ತಿಕ ಕಾರಣದಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿರುವುದಾಗಿ ಒಂದೇ ವಾಕ್ಯದ ರಾಜೀನಾಮೆ ಪತ್ರವನ್ನು ಗಂಗಾಂಜನೇಯ ಜಿಲ್ಲಾಧಿಕಾರಿ ಡಾ.ಕೆ.ರಾಕೇಶ್ ಕುಮಾರ್‌ಗೆ ಸಲ್ಲಿಸಿದ್ದಾರೆ.
    ಜಿಪಂ ಸದಸ್ಯರಾದ ಜಿ.ಎಸ್.ಶಿವಕುಮಾರ್, ನರಸಿಂಹಮೂರ್ತಿ ಹಾಗೂ ಹುಚ್ಚಯ್ಯ ಸಹ ಡಿಸಿ ಕಚೇರಿಗೆ ತೆರಳಿದ್ದರು.

    ರಾಜೀನಾಮೆ ಪತ್ರ ಬರೆದ ಹುಚ್ಚಯ್ಯ!: ಕೈ ಬರಹದಲ್ಲೇ ರಾಜೀನಾಮೆ ಪತ್ರ ನೀಡಬೇಕಾಗಿದ್ದರಿಂದ ಗಂಗಾಂಜನೇಯ ಬದಲು ವೈ.ಎಚ್.ಹುಚ್ಚಯ್ಯ ಅವರೇ ಒಂದು ವಾಕ್ಯದ ರಾಜೀನಾಮೆ ಪತ್ರ ಬರೆದಿದ್ದು, ಅದಕ್ಕೆ ಗಂಗಾಂಜನೇಯ ಸಹಿ ಹಾಕಿದ್ದಾರೆ ಎಂದು ಪಕ್ಷದ ಮೂಲಗಳು ತಿಳಿಸಿವೆ. ರಾಜೀನಾಮೆ ಅಂಗೀಕರಿಸಲು 15ದಿನಗಳ ಕಾಲಾವಕಾಶವಿದ್ದು ಉಪಾಧ್ಯಕ್ಷ ಶಾಂತಕುಮಾರ್ ಮುಂದಿನ ಪ್ರಕ್ರಿಯೆವರೆಗೆ ಪ್ರಭಾರ ಅಧ್ಯಕ್ಷರಾಗಿರಲಿದ್ದಾರೆ.

    ಆಪರೇಷನ್ ಜೆಡಿಎಸ್ ?: ರಾಜಕೀಯ ತಂತ್ರಗಾರಿಕೆ, ಒತ್ತಡದ ಮೂಲಕ ಗಂಗಾಂಜನೇಯ ಅವರನ್ನು ಅಧಿಕಾರ ಗದ್ದುಗೆಯಿಂದ ಇಳಿಸುವಲ್ಲಿ ಯಶಸ್ವಿಯಾದ ಗ್ರಾಮಾಂತರ ಕ್ಷೇತ್ರದ ಮಾಜಿ ಶಾಸಕ ಸುರೇಶಗೌಡ ವಿರುದ್ಧ ಹಲವು ಸದಸ್ಯರು ಒಳಗೊಳಗೆ ಅಸಮಾಧಾನಗೊಂಡಿದ್ದು, ಈ ಅತೃಪ್ತಿ ಯನ್ನು ಅಸ್ತ್ರವನ್ನಾಗಿಟ್ಟುಕೊಂಡು ಅಧ್ಯಕ್ಷರ ರಾಜೀನಾಮೆ ಅಂಗೀಕಾರದ ಬಳಿಕ ‘ಜೆಡಿಎಸ್’ ಅಖಾಡಕ್ಕೆ ಇಳಿಯುವ ಸಾಧ್ಯತೆ ಇದೆ. ಕುರುವೇಲು ಕ್ಷೇತ್ರದ ಬಿಜೆಪಿ ಸದಸ್ಯೆ ಸುಧಾ ಕೂಡ ಅಧ್ಯಕ್ಷ ಪದವಿ ಆಕಾಂಕ್ಷಿಗಳಲ್ಲೊಬ್ಬರು.

    ಪಕ್ಷದ ವರಿಷ್ಠರು ಮಾದಿಗ ಸಮುದಾಯದ ಕವಿತಾ ಅವರನ್ನು ತಾಪಂ ಅಧ್ಯಕ್ಷರನ್ನಾಗಿ ಮಾಡಲು ಒಪ್ಪಿಕೊಂಡಿದ್ದು ಜಿಪಂ ಸ್ಥಾನಕ್ಕೆ ನೀಡಿದ್ದ ರಾಜೀನಾಮೆ ಪತ್ರವನ್ನು ಹಿಂಪಡೆದಿದ್ದೇನೆ. ಬ್ಲಾಕ್‌ಮೇಲ್ ತಂತ್ರ ಅನುಸರಿಸಿಲ್ಲ. ಎಲ್ಲವೂ ಸುಖಾಂತ್ಯವಾಗಿದೆ.
    ವೈ.ಹೆಚ್.ಹುಚ್ಚಯ್ಯ ಜಿಪಂ ಸದಸ್ಯ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts