More

    ಕರೊನಾ ಕಾರ್ಮೋಡಕ್ಕೆ ಬೆಚ್ಚಿಬಿದ್ದ ಜನ

    ತುಮಕೂರು: ಜಿಲ್ಲೆಯಲ್ಲಿ ಶುಕ್ರವಾರ ಬರೋಬ್ಬರಿ 9 ಪಾಸಿಟಿವ್ ಪ್ರಕರಣ ದಾಖಲಾಗಿದ್ದು, ಸೋಂಕಿತರ ಸಂಖ್ಯೆ 24ಕ್ಕೆ ಏರಿಕೆಯಾಗಿದೆ.
    ಮುಂಬೈ ಪ್ರಯಾಣದ ಹಿನ್ನೆಲೆ ಹೊಂದಿರುವ 6 ಹಾಗೂ ಇನ್ನುಳಿದ ಮೂವರಲ್ಲಿ ಪಾಸಿಟಿವ್ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಜನರು ಭಯದಲ್ಲಿ ಓಡಾಡುವಂತಾಗಿದೆ. ಪ್ರಕರಣಗಳ ಸಂಖ್ಯೆ ಹೆಚ್ಚಾಗಿದ್ದೇ ತಡ ರಸ್ತೆಗಳಲ್ಲಿ ವಾಹನಗಳು ತನ್ನಿಂತಾನೆ ಕಡಿಮೆಯಾಗಿವೆ.

    ಮುಂಬೈನಿಂದ ಆಗಮಿಸಿ ತುರುವೇಕೆರೆಯಲ್ಲಿ ಕ್ವಾರಂಟೈನ್‌ನಲ್ಲಿದ್ದ 4 ಜನರಿಗೂ ಸೋಂಕು ದೃಢವಾಗಿದೆ, ತುಮಕೂರಿನ ಕ್ವಾರಂಟೈನ್ ಕೇಂದ್ರದಲ್ಲಿದ್ದ ಇಬ್ಬರಿಗೂ ಚಿಕಿತ್ಸೆ ನೀಡಲಾಗುತ್ತಿದೆ. ಸೋಂಕಿತರನ್ನು ಪಿ-1611, ಪಿ-1612, ಪಿ-1613, ಪಿ-1614, ಪಿ-1615, ಪಿ-1623 ಎಂದು ಹೆಸರಿಸಲಾಗಿದೆ.

    ವೃದ್ಧನಿಗೆ ಬಂದಿದ್ದೇ ಆಶ್ಚರ್ಯ!: ದೀರ್ಘ ಅನಾರೋಗ್ಯದ ಕಾರಣಕ್ಕೆ ನಗರದ ಸಿದ್ಧಗಂಗಾ ಆಸ್ಪತ್ರೆಗೆ ದಾಖಲಾಗಿದ್ದ ಮಾಯಮ್ಮನಪಾಳ್ಯದ (ಪಿ-1688) 66 ವರ್ಷದ ವೃದ್ಧನಿಗೆ ಕೋವಿಡ್-19 ಪರೀಕ್ಷೆಯಲ್ಲಿ ಸೋಂಕು ದೃಢವಾಗಿರುವುದು ಆಶ್ಚರ್ಯದ ಜತೆಗೆ ಭಯವನ್ನೂ ಹುಟ್ಟುಹಾಕಿದೆ. ಹೆಬ್ಬೂರು ಹೋಬಳಿಯಲ್ಲಿ ಸಾಕಷ್ಟು ಸಂಬಂಧಿಕರು ಹಾಗೂ ಚಿರಪರಿಚಿತರಿರುವ ಈ ವೃದ್ಧ ಕೆಲವು ದಿನಗಳಿಂದ ಅನಾರೋಗ್ಯಕ್ಕೆ ತುತ್ತಾಗಿದ್ದ ಹಿನ್ನೆಲೆಯಲ್ಲಿ ಬಹುಸಂಖ್ಯೆಯ ಜನರು ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದು ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.

    ದಾಬಸ್‌ಪೇಟೆ ಮಹಿಳೆಗೂ ಕರೊನಾ: ಕ್ವಾರಂಟೈನ್‌ನಲ್ಲಿದ್ದ ನೆಲಮಂಗಲ ತಾಲೂಕು ದಾಬಸ್‌ಪೇಟೆಯ 55 ವರ್ಷದ ಮಹಿಳೆಗೂ ಸೋಂಕು ದೃಢವಾಗಿರುವ ಕಾರಣಕ್ಕೆ ಚಿಕಿತ್ಸೆ ನೀಡಲಾಗುತ್ತಿದೆ. ಹೊರ ರಾಜ್ಯಗಳಿಂದ ಜಿಲ್ಲೆಗೆ ಆಗಮಿಸುವವರ ಸಂಖ್ಯೆ ಹೆಚ್ಚಾಗಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕರೊನಾ ಶಂಕಿತರ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದ್ದು, ಜನರು ಓಡಾಟ ಕಡಿಮೆಗೊಳಿಸಿದ್ದಾರೆ. ಲಾಕ್‌ಡೌನ್ ಸಡಿಲಿಕೆಯ ನಂತರ ಭಯಮುಕ್ತವಾಗಿ ರಸ್ತೆಗಿಳಿಯುತ್ತಿದ್ದ ಜನರು ಶುಕ್ರವಾರ ಮಧ್ಯಾಹ್ನದಿಂದಲೇ ಮನೆಯಲ್ಲಿಯೇ ಉಳಿಯಲಾರಂಭಿಸಿದರು. ಪರಸ್ಪರ ಅಂತರ ಕಾಪಾಡಿಕೊಂಡರಷ್ಟೇ ಸೋಂಕು ತಡೆಯಲು ಸಾಧ್ಯವಿದ್ದು ಎಲ್ಲರೂ ಎಚ್ಚರಿಕೆಯಿಂದ ನಡೆಯಬೇಕಿದೆ.

    ಮಗುವಿಗೆ ಜನ್ಮ ನೀಡಿದ ಸೋಂಕಿತೆ!: ಜಿಲ್ಲಾಸ್ಪತ್ರೆಯಲ್ಲಿ ಕ್ವಾರಂಟೈನ್ ಆಗಿದ್ದ ನಗರದ ಸದಾಶಿವ ನಗರದ (ಪಿ-1685) 24 ವರ್ಷದ ಗರ್ಭಿಣಿಗೆ ಸೋಂಕು ದೃಢವಾಗಿದೆ. ಗುರುವಾರ ರಾತ್ರಿ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ಆಕೆಯನ್ನು ಬೆಂಗಳೂರಿಗೆ ಸ್ಥಳಾಂತರಿಸಲಾಗಿತ್ತು. ಸೋಂಕಿನ ನಡುವೆಯೂ ಆಕೆಗೆ ಗುರುವಾರ ರಾತ್ರಿಯೇ ಹೆರಿಗೆಯಾಗಿದ್ದು ತಾಯಿ, ಮಗು ಆರೋಗ್ಯವಾಗಿದ್ದಾರೆ. ಮಗುವಿಗೂ ಪರೀಕ್ಷೆ ನಡೆಸಲಾಗಿದ್ದು ವರದಿಗಾಗಿ ಕಾಯಲಾಗುತ್ತಿದೆ. ಸೋಂಕು ದೃಢವಾದ ಹಿನ್ನೆಲೆಯಲ್ಲಿ ಸದಾಶಿವನಗರದ 100ಮೀ ವ್ಯಾಪ್ತಿಯನ್ನು ಸಂಪೂರ್ಣ ಸೀಲ್‌ಡೌನ್ ಮಾಡಲಾಗಿದೆ.

    ಜಿಲ್ಲೆಯಲ್ಲಿ 9 ಪ್ರಕರಣ ದಾಖಲಾಗಿರುವ ಹಿನ್ನೆಲೆಯಲ್ಲಿ ಹೆಬ್ಬೂರು, ಸದಾಶಿವನಗರವನ್ನು ಕಂಟೇನ್ಮೆಂಟ್ ವಲಯ ಎಂದು ಗುರುತಿಸಲಾಗಿದೆ. ಅವಶ್ಯಕತೆ ಇದ್ದವರು ಮನೆಯಿಂದ ಹೊರಬನ್ನಿ, ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು, ಹೊರರಾಜ್ಯದಿಂದ ಬಂದವರ ಮಾಹಿತಿ ನೀಡಬೇಕು.
    ಡಾ.ಕೆ.ರಾಕೇಶ್‌ಕುಮಾರ್ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts