More

    ತುಂಬೆ ನೀರು ಏರಿಕೆಗೆ ಸರ್ವೇ

    ಪ್ರಕಾಶ್ ಮಂಜೇಶ್ವರ ಮಂಗಳೂರು

    ಮಹಾನಗರ ಪಾಲಿಕೆ ವ್ಯಾಪ್ತಿ ಹಾಗೂ ಉಳ್ಳಾಲದ ನಿರ್ದಿಷ್ಟ ಪ್ರದೇಶಗಳಿಗೆ ನೀರು ಪೂರೈಸುವ ತುಂಬೆ ಕಿಂಡಿ ಅಣೆಕಟ್ಟಿನ ಜಲ ಸಂಗ್ರಹ ಮಟ್ಟವನ್ನು 6ರಿಂದ ದಿಢೀರ್ 7 ಮೀಟರ್‌ಗೆ ಏರಿಸುವ ಬದಲು ಅರ್ಧ ಮೀಟರ್ ಮಾತ್ರ ಏರಿಸಲು ಸರ್ವೇ ನಡೆಯುತ್ತಿದೆ.

    ಕಳೆದ ಮಳೆಗಾಲ ಪಶ್ಚಿಮ ಘಟ್ಟದಲ್ಲಿ ಸಂಭವಿಸಿದ ಭೂ ಕುಸಿತ, ದಾಖಲೆ ಪ್ರಮಾಣದ ತಾಪಮಾನ ಬೆನ್ನಲ್ಲೇ ಕರಾವಳಿಯಲ್ಲಿ ನೀರಿನ ಕ್ಷಾಮ ತಲೆದೋರಿದೆ. ಈ ಹಿನ್ನೆಲೆಯಲ್ಲಿ ಪಾಲಿಕೆ ಆಡಳಿತ ಅಣೆಕಟ್ಟಿನ ನೀರಿನ ಸಂಗ್ರಹವನ್ನು ಹಂತಹಂತವಾಗಿ ಏರಿಸಲು ಮುಂದಾಗಿದೆ. ವಾರದೊಳಗೆ ಸಮೀಕ್ಷೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಸಂತ್ರಸ್ತ ಕುಟುಂಬಗಳಿಂದ ಪ್ರಥಮ ಹಂತದಲ್ಲಿ ಬಾಡಿಗೆ ರೂಪದಲ್ಲಿ ಜಮೀನು ಪಡೆದು ನಿರ್ದಿಷ್ಟ ಅವಧಿಯ ಬಳಿಕ ಪೂರ್ಣ ಪ್ರಮಾಣದ ಪರಿಹಾರ ವಿತರಣೆ ಮಾಡುವ ಸಾಧ್ಯತೆ ಕಂಡುಬಂದಿದೆ.

    2 ಎಂಸಿಎಂ ಹೆಚ್ಚುವರಿ ನೀರು: ಅಣೆಕಟ್ಟಿನಲ್ಲಿ ಅರ್ಧ ಮೀಟರ್ ನೀರಿನ ಸಂಗ್ರಹ ಹೆಚ್ಚಿಸಿದರೆ ಸಂಗ್ರಹವಾಗುವ ನೀರಿನ ಪ್ರಮಾಣ ಎರಡು ಮಿಲಿಯ ಕ್ಯುಬಿಕ್ ಮೀ. ಏರಿಕೆಯಾಗಲಿದೆ. ಈಗ ಆರು ಮೀ. ನೀರಿನಲ್ಲಿ ಸಂಗ್ರಹವಾಗುವ ನೀರು 10.71 ಮಿಲಿಯ ಕ್ಯು.ಮೀಟರ್ ಆಗಿದ್ದು, ನೀರಿನ ಮಟ್ಟ 6.5 ಮೀಟರ್‌ಗೆ ಏರಿಕೆಯಾದರೆ ಅಣೆಕಟ್ಟಿನಲ್ಲಿ ಸಂಗ್ರಹವಾಗುವ ನೀರಿನ ಮಟ್ಟ 12.5 ಮಿ. ಕ್ಯು.ಮೀಟರ್‌ಗೆ ಏರಿಕೆ ಆಗಬಹುದು ಎಂದು ನಿರೀಕ್ಷಿಸಲಾಗಿದೆ.

    ಸದ್ಯದ ಜಲಮಟ್ಟ 6 ಮೀಟರ್: ಪ್ರಸ್ತುತ ಅಣೆಕಟ್ಟಿನಲ್ಲಿ ಆರು ಮೀಟರ್‌ವರೆಗೆ ನೀರು ನಿಂತಿದ್ದು, ಹೆಚ್ಚುವರಿ ನೀರು ಹರಿದು ಹೋಗಲು ಒಂದು ಗೇಟ್ ತೆರೆಯಲಾಗಿದೆ. ಕೆಲವು ದಿನಗಳ ಹಿಂದೆ ಶಿರಾಡಿ, ಸುಬ್ರಹ್ಮಣ್ಯ, ಕಡಬ ಸುತ್ತಮುತ್ತ ಉತ್ತಮ ಮಳೆಯಾದ ಸಂದರ್ಭ ಹೆಚ್ಚುವರಿ ನೀರು ಹರಿದುಹೋಗಲು ಅಣೆಕಟ್ಟಿನ ಎರಡು ಗೇಟು ತೆರೆಯಲಾಗಿತ್ತು. ಸದ್ಯ ಅಣೆಕಟ್ಟಿಗೆ ಒಳ ಹರಿವಿನ ಪ್ರಮಾಣ ಉತ್ತಮವಾಗಿದೆ. ಲಭ್ಯ ನೀರು ಮುಂದಿನ ಸುಮಾರು ಎರಡು ತಿಂಗಳು ಎಂದಿನಂತೆ ಬಳಸಲು ಆತಂಕ ಎದುರಾಗದು. ನೀರಿನ ಒಳ ಹರಿವು ನಿಂತು ಹೋದರೆ ಬಳಿಕ ನೀರಿನ ಬಳಕೆಗೆ ಕಡಿವಾಣ ಅಗತ್ಯವಾಗಬಹುದು ಎನ್ನುತ್ತವೆ ಅಧಿಕೃತ ಮೂಲಗಳು.

    ಹೂಳೆತ್ತುವ ಕಾಮಗಾರಿ ಶೇ.50 ಪೂರ್ಣ: ಅಣೆಕಟ್ಟಿನ ಭಾಗದಲ್ಲಿ ನೀರಿನ ಸಂಗ್ರಹ ಸಾಮರ್ಥ್ಯ ಹೆಚ್ಚಿಸುವ ಉದ್ದೇಶದಿಂದ ನಡೆಯುತ್ತಿರುವ ಹೂಳೆತ್ತುವ ಕಾಮಗಾರಿ ಶೇ.50 ಪೂರ್ಣಗೊಂಡಿದೆ. 42 ಸಾವಿರ ಟನ್ ಮರಳು ತೆಗೆಯಲಾಗಿದೆ. ಹೂಳೆತ್ತುವ ಉಳಿದ ಕಾಮಗಾರಿ ಪೂರ್ಣಗೊಳಿಸಲು ನಾಲ್ಕರಿಂದ ಐದು ತಿಂಗಳಿನಷ್ಟು ಕಾಲಾವಕಾಶ ಬೇಕಾಗಬಹುದು ಎಂದು ಗಣಿ ಮತ್ತು ಭೂವಿಜ್ಞಾನ ಇಲಾಖೆ ಉಪ ನಿರ್ದೇಶಕ ನಿರಂಜನ್ ‘ವಿಜಯವಾಣಿ’ಗೆ ತಿಳಿಸಿದ್ದಾರೆ.

    ಸದ್ಯ ತುಂಬೆ ಅಣೆಕಟ್ಟಿನಲ್ಲಿ ನೀರಿನ ಒಳಹರಿವು ಇದೆ. ನೀರು ಸಂಗ್ರಹ ಪ್ರಮಾಣ ತೃಪ್ತಿಕರವಾಗಿದೆ. ನೀರಿನ ಸಂಗ್ರಹ 6.5 ಮೀ.ಗೆ ಏರಿಸಲು ಸರ್ವೇ ನಡೆಯುತ್ತಿದೆ. ವಾರದೊಳಗೆ ಈ ಸರ್ವೇ ಪೂರ್ಣಗೊಳ್ಳಲಿದ್ದು, ಬಳಿಕ ಮುಂದಿನ ಯೋಜನೆ ರೂಪಿಸಲಾಗುವುದು.

    ಶಾನಾಡಿ ಅಜಿತ್ ಕುಮಾರ್ ಹೆಗ್ಡೆ ಆಯುಕ್ತರು, ಮಂಗಳೂರು ಮಹಾನಗರ ಪಾಲಿಕೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts