More

    ತಿರುಮಲ ಬೆಟ್ಟವೇ ಹನುಮಂತನ ಜನ್ಮಸ್ಥಳ: ಟಿಟಿಡಿ ಹೊಸ ವಾದಕ್ಕೆ ಪುರಾತತ್ವ ಇತಿಹಾಸಕಾರರ ವಿರೋಧ

    ತಿರುಪತಿ: ಕರ್ನಾಟಕದ ಹಂಪಿಯ ಅಂಜನಾದ್ರಿ ಬೆಟ್ಟದಲ್ಲಿ ಹನುಮಂತ ಜನಿಸಿದ್ದ ಎಂಬ ಪುರಾಣಗಳ ಉಲ್ಲೇಖ ಹಾಗೂ ಕೋಟ್ಯಂತರ ಭಕ್ತರ ನಂಬಿಕೆಯ ಹೊರತಾಗಿಯೂ, ತಿರುಪತಿ ದೇವಸ್ಥಾನ ಮಂಡಳಿ ಹೊಸ ವಾದ ಮುಂದಿಟ್ಟಿದೆ. ತಿರುಮಲ ಬೆಟ್ಟದ ಆಕಾಶಗಂಗಾ ಜಲಪಾತದ ಬಳಿಯಿರುವ ಜಪಾಲಿ ತೀರ್ಥಂ ಎಂಬ ಸ್ಥಳದಲ್ಲಿ ಹನುಮಂತ ಜನ್ಮ ತಳೆದಿದ್ದ ಎಂದು ತಿರುಮಲ ತಿರುಪತಿ ದೇವಸ್ಥಾನಂ (ಟಿಟಿಡಿ) ಮಂಡಳಿ ಘೊಷಿಸಿದೆ. ಶ್ರೀರಾಮ ನವಮಿಯಾದ ಬುಧವಾರವೇ ಈ ಪ್ರತಿಪಾದನೆ ಮುಂದಿಟ್ಟಿರುವುದು ಗಮನಾರ್ಹ.

    ಏಳು ಬೆಟ್ಟಗಳ (ತಿರುಮಲ ಬೆಟ್ಟಗಳ) ಪೈಕಿ ಒಂದಾಗಿರುವ ಅಂಜನಾದ್ರಿ ಬೆಟ್ಟವನ್ನು ಆಂಜನೇಯನ ಜನ್ಮಸ್ಥಳ ಎಂದು ಗುರುತಿಸುವ ಸಂಬಂಧ ಟಿಟಿಡಿ ಅಧ್ಯಯನ ಸಮಿತಿಯನ್ನು ರಚನೆ ಮಾಡಿತ್ತು. ನಾಲ್ಕು ತಿಂಗಳ ಸಂಶೋಧನೆ ಮತ್ತು ವಿವಿಧ ಸಾಕ್ಷ್ಯಗಳನ್ನು ಸಂಗ್ರಹಿಸಿ ಈ ಸತ್ಯ ಕಂಡುಕೊಂಡಿದ್ದೇವೆ ಎಂದು ಸಮಿತಿ ಮುಖ್ಯಸ್ಥ, ರಾಷ್ಟ್ರೀಯ ಸಂಸ್ಕೃತ ವಿಶ್ವವಿದ್ಯಾಲಯದ ಉಪಕುಲಪತಿ ವಿ. ಮುರಳೀಧರ ಶರ್ಮಾ ಹೇಳಿದ್ದಾರೆ. ಹನುಮಂತನ ಜನ್ಮಸ್ಥಳ ಕುರಿತ 20 ಪುಟಗಳ ತೆಲುಗು ಭಾಷೆಯ ಕಿರುಪುಸ್ತಕವನ್ನು ತಿರುಮಲದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮವೊಂದರಲ್ಲಿ ಬಿಡುಗಡೆ ಮಾಡಿದ್ದಾರೆ. ತಮಿಳುನಾಡು ರಾಜ್ಯಪಾಲ ಬನ್ವಾರಿಲಾಲ್ ಪುರೋಹಿತ್ ಈ ಕಾರ್ಯಕ್ರಮದಲ್ಲಿ ಇದ್ದರು.

    12 ಪುರಾಣಗಳ ಸಾಕ್ಷ್ಯ
    ವೆಂಕಟಾಚಲ ಮಹಾತ್ಯಂ, ವರಾಹ ಪುರಾಣ ಮತ್ತು ಬ್ರಹ್ಮಾಂಡ ಸೇರಿ 12 ಪುರಾಣಗಳ ಸಾಕ್ಷ್ಯವನ್ನು ಹನುಮಂತನ ಜನನಕ್ಕೆ ಪುರಾವೆಯಾಗಿ ಮುರಳೀಧರ ಶರ್ಮಾ ನೀಡಿದ್ದಾರೆ. ಹನುಮನ ತಾಯಿ ಅಂಜನಾದೇವಿ ತನಗೆ ಮಕ್ಕಳು ಬೇಕೆಂದು ಕೋರಿ ಮಾತಂಗ ಋಷಿಗಳಲ್ಲಿ ಆಶೀರ್ವಾದ ಬೇಡುತ್ತಾಳೆ. ಇದನ್ನು ವೆಂಕಟಾಚಲ ಮಹಾತ್ಯಂ ಮತ್ತು ಸ್ಕಂದ ಪುರಾಣದಲ್ಲಿ ವಿವರಿಸಲಾಗಿದೆ. ಮಕ್ಕಳನ್ನು ಪಡೆಯಲು ವೆಂಕಟಾಚಲಂನಲ್ಲಿ ತಪಸ್ಸು ಮಾಡಬೇಕೆಂದು ಆಕೆಗೆ ಋಷಿಗಳು ಸಲಹೆ ನೀಡಿದ್ದರಿಂದ ಹಲವಾರು ವರ್ಷಗಳ ತಪಸ್ಸಿನ ಫಲವಾಗಿ ಹನುಮಂತ ಜನಿಸುತ್ತಾನೆ. ನಂತರ ಆಕೆ ತಪಸ್ಸು ಮಾಡಿದ ಸ್ಥಳ ಮತ್ತು ಆಂಜನೇಯ ಜನಿಸಿದ ಸ್ಥಳ ಅಂಜನಾದ್ರಿ ಎಂದು ಪ್ರಸಿದ್ಧಿಯಾಯಿತು. ಹನುಮಂತನಿಗೆ ಜನನದ ನಂತರ ಹಸಿವಾಗಿರುತ್ತದೆ. ಉದಯಿಸುತ್ತಿರುವ ಸೂರ್ಯನನ್ನು ಹಣ್ಣೆಂದು ಭಾವಿಸಿ ಆತ ಆಕಾಶಕ್ಕೆ ನೆಗೆಯುತ್ತಾನೆ. ಹನುಮಂತ ಯಾವ ಸ್ಥಳದಿಂದ ಜಿಗಿದನೋ ಅದು ವೆಂಕಟಗಿರಿ. ಆಗ ಬ್ರಹ್ಮ ಮತ್ತು ಇಂದ್ರ ಶಸ್ತ್ರಾಸ್ತ್ರಗಳಿಂದ ದಾಳಿ ಮಾಡಿದ ಪರಿಣಾಮ ಹನುಮಂತ ಕೆಳಗೆ ಬೀಳುತ್ತಾನೆ. ಇದನ್ನು ಕಂಡು ತಾಯಿ ಅಂಜನಾದೇವಿ ರೋದಿಸುತ್ತಾಳೆ. ಆಕೆಯನ್ನು ಸಮಾಧಾನಪಡಿಸಲು, ದೇವತೆಗಳು ವೆಂಕಟಾಚಲಂಗೆ ಬಂದಿಳಿದು ಹನುಮಂತನಿಗೆ ಹಲವು ವರಗಳನ್ನು ನೀಡುತ್ತಾರೆ ಮತ್ತು ಈ ಸ್ಥಳವನ್ನು ಅಂಜನಾದ್ರಿ ಎಂದು ಕರೆಯಲಾಗುವುದೆಂದು ತಿಳಿಸಲಾಗಿದೆ ಎಂದು ಶರ್ಮಾ ವಿವರಿಸಿದ್ದಾರೆ.

    ಸಾಹಿತ್ಯಕ, ಭೌಗೋಳಿಕ ಪುರಾವೆ
    ಕಂಬ ರಾಮಾಯಣಂ ಮತ್ತು ಅನ್ನಮಾಚಾರ್ಯ ಸಂಕೀರ್ತನಗಳಲ್ಲಿರುವ ಆಂಜನೇಯನ ಕುರಿತ ಮಾಹಿತಿಯನ್ನು ಸಾಹಿತ್ಯಕ ಪುರಾವೆಗಳನ್ನಾಗಿ ಪರಿಗಣಿಸಿದ್ದೇವೆ. 12 ಮತ್ತು 13ನೇ ಶತಮಾನದಲ್ಲಿ ವೆಂಕಟಾಚಲ ಮಹಾತ್ಯಂ ಅನ್ನು ತಿರುಮಲ ದೇವಸ್ಥಾನದಲ್ಲಿ ಪಠಿಸಲಾಗಿರುವ ಬಗ್ಗೆ ದೇವಸ್ಥಾನದಲ್ಲಿ ದೊರೆತ ಶಾಸನಗಳು ಹೇಳುತ್ತವೆ. ಭೌಗೋಳಿಕ ವಿವರಗಳಿಗೆ ಸಂಬಂಧಿಸಿದಂತೆ, ಸ್ಕಂದ ಪುರಾಣದಲ್ಲಿ ವೆಂಕಟಾಚಲಂ ಎಲ್ಲಿದೆ ಎಂದು ಅಂಜನಾದೇವಿ ಋಷಿ ಮಾತಂಗರನ್ನು ಕೇಳುತ್ತಾಳೆ. ಇದು ಸ್ವರ್ಣಮುಖಿ ನದಿಯ ಉತ್ತರದಲ್ಲಿದೆ ಎಂದು ಸ್ಪಷ್ಟವಾಗಿ ವಿವರಿಸುತ್ತಾರೆ ಎಂದು ಮುರಳೀಧರ ಶರ್ಮಾ ಮಾಹಿತಿ ಹಂಚಿಕೊಂಡಿದ್ದಾರೆ.

    ಹನುಮನ ಜನ್ಮಸ್ಥಳ ಹಂಪಿಯಲ್ಲ
    ಕರ್ನಾಟಕದ ಹಂಪಿ ಹನುಮನ ಜನ್ಮಸ್ಥಳ ಎಂಬುದು ನಿಜವಲ್ಲ. ಹಂಪಿ ಕಿಷ್ಕಿಂದೆಯಾಗಿದ್ದು ಮತ್ತು ವೆಂಕಟಾಚಲಂ ಅಂಜನಾದ್ರಿಯಾಗಿದೆ. ಈ ವಿಷಯ ಅಂಜನಾದ್ರಿಯಿಂದ ವಾನರರನ್ನು ಕರೆತರುವ ಬಗ್ಗೆ ಸುಗ್ರೀವ ಮತ್ತು ಹನುಮಂತನ ನಡುವಿನ ಸಂಭಾಷಣೆಯಲ್ಲೂ ಕಂಡುಬರುತ್ತದೆ. ಅಂಜನಾದ್ರಿ ಕಿಷ್ಕಿಂದೆಯಲ್ಲಿದ್ದರೆ ಹನುಮಂತ ಸುಗ್ರೀವನಲ್ಲಿ ಈ ರೀತಿ ಕೇಳುತ್ತಿರಲಿಲ್ಲ ಎನ್ನುವ ತರ್ಕವನ್ನು ಶರ್ಮಾ ಪುಸ್ತಕದಲ್ಲಿ ಮಂಡಿಸಿದ್ದಾರೆ.

    ಟಿಟಿಡಿ ಹೇಳಿಕೆಗೆ ವಿರೋಧ
    ಕೆಲವು ಪುರಾತತ್ವ ಮತ್ತು ಇತಿಹಾಸ ವಿದ್ವಾಂಸರು, ವಿಶ್ವ ಹಿಂದು ಪರಿಷದ್​ನ ಕರ್ನಾಟಕ ಘಟಕ ಟಿಟಿಡಿ ಪ್ರತಿಪಾದನೆಯನ್ನು ತಳ್ಳಿಹಾಕಿದೆ. ಈ ತೀರ್ವನಕ್ಕೆ ಬರುವ ಮುನ್ನ ವಿದ್ವಾಂಸರು ಮತ್ತು ಧಾರ್ವಿುಕ ಮುಖ್ಯಸ್ಥರೊಂದಿಗೆ ಚರ್ಚೆ ನಡೆಸಬೇಕು ಎಂದು ಹೇಳಿದ್ದಾರೆ. ಕೆಲವರ ಪ್ರಕಾರ, ಜಾರ್ಖಂಡ್​ನ ಗುಮ್ಲಾ ಜಿಲ್ಲೆಯ ಗುಹೆಯೊಂದರಲ್ಲಿ ಹನುಮಂತ ಜನಿಸಿದ. ಮತ್ತೆ ಕೆಲವರು ಮಹಾರಾಷ್ಟ್ರದ ನಾಸಿಕ್​ನ ಅಂಜನೇರಿ ಬೆಟ್ಟ ಹನುಮಂತನ ಜನ್ಮಸ್ಥಳ ಎಂದಿದ್ದಾರೆ.

    ಪುರಾಣ ಸಂಕಲನ, ಸಾಹಿತ್ಯಕ ಪುರಾವೆ, ಶಿಲಾಶಾಸನ ಪುರಾವೆ, ಭೌಗೋಳಿಕ ವಿವರಗಳನ್ನು ಆಧರಿಸಿ ಸಂಶೋಧನಾ ವರದಿ ಸಿದ್ಧಪಡಿಸಿದ್ದೇವೆ. ಅಂಜನಾದ್ರಿ ಬೆಟ್ಟವನ್ನು ವೆಂಕಟಾಚಲಂ ಸೇರಿ 19 ಹೆಸರುಗಳಿಂದ ಕರೆಯಲಾಗುತ್ತದೆ. ಭಗವಾನ್ ಹನುಮಂತನು ತ್ರೇತಾಯುಗದಲ್ಲಿ ಅಂಜನಾದ್ರಿ ಬೆಟ್ಟದಲ್ಲಿ ಜನಿಸಿದನು.
    | ವಿ.ಮುರಳೀಧರ ಶರ್ವ, ರಾಷ್ಟ್ರೀಯ ಸಂಸ್ಕೃತ ವಿವಿ ಉಪಕುಲಪತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts