More

    ಡಬ್ಲ್ಯುಎಚ್​ಒದಿಂದ ಹೊರಕ್ಕೆ ಟ್ರಂಪ್ ಎಚ್ಚರಿಕೆ

    ವಾಷಿಂಗ್ಟನ್: ಚೀನಾದ ಪ್ರಭಾವಕ್ಕೊಳಗಾಗಿ ಕಾರ್ಯ ನಿರ್ವಹಿಸುವುದರಿಂದ ಹೊರಬಂದು ಸ್ವತಂತ್ರವಾಗಿ ಕಾರ್ಯನಿರ್ವಹಿಸದಿದ್ದರೆ ವಿಶ್ವ ಆರೋಗ್ಯ ಸಂಸ್ಥೆಯಿಂದ (ಡಬ್ಲ್ಯುಎಚ್​ಒ) ಹೊರನಡೆಯುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ.

    ಡಬ್ಲ್ಯುಎಚ್​ಒ ಮುಂದಿನ 30 ದಿನದೊಳಗೆ ಸ್ವತಂತ್ರವಾಗಿ ಕೆಲಸ ಮಾಡುವ ಮನೋಭಾವ ಪ್ರದರ್ಶಿಸದಿದ್ದರೆ ಅದಕ್ಕೆ ಆರ್ಥಿಕ ನೆರವು ನೀಡುವುದನ್ನು ಕಾಯಂ ಸ್ಥಗಿತಗೊಳಿಸುವುದಾಗಿಯೂ ಗುಡುಗಿದ್ದಾರೆ. ಡಬ್ಲ್ಯುಎಚ್​ಒಗೆ ನೀಡಬೇಕಾದ 500 ಮಿಲಿಯನ್ ಡಾಲರ್ ವಾರ್ಷಿಕ ನೆರವನ್ನು ಟ್ರಂಪ್ ಕಳೆದ ತಿಂಗಳು ತಡೆಹಿಡಿದಿದ್ದಾರೆ. ಜಿನೀವಾದಲ್ಲಿ ನಡೆಯುತ್ತಿರುವ ವಿಶ್ವ ಆರೋಗ್ಯ 73ನೇ ಅಧಿವೇಶನದ ಸಂದರ್ಭದಲ್ಲೇ ಡಬ್ಲ್ಯುಎಚ್​ಒ ಮಹಾ ನಿರ್ದೇಶಕ ಟೆಡ್ರೋಸ್ ಅಧಾನೊಮ್ ಘಬ್ರಿಯೆಸಸ್​ರಿಗೆ ಮೇ 18ರಂದು ಬರೆದ ನಾಲ್ಕು ಪುಟಗಳ ಪತ್ರದಲ್ಲಿ ಟ್ರಂಪ್ ಈ ನಿಲುವನ್ನು ಸ್ಪಷ್ಟಪಡಿಸಿದ್ದಾರೆ.

    ಇದನ್ನೂ ಓದಿ    ಭಾರತಕ್ಕೆ ವಿಶ್ವ ಆರೋಗ್ಯ ಸಂಸ್ಥೆಯ ಕಾರ್ಯಕಾರಿ ಮಂಡಳಿ ನೇತೃತ್ವ

    ಡಬ್ಲ್ಯುಎಚ್​ಒ ಸುಧಾರಣೆಗೆ ತಮ್ಮೊಂದಿಗೆ ಚರ್ಚೆ ಆರಂಭಿಸಿದ್ದು ತುರ್ತಾಗಿ ಕ್ರಮಕೈಗೊಳ್ಳಬೇಕಾಗಿದೆ ಎಂದು ಮಹಾನಿರ್ದೇಶಕರಿಗೆ ಟ್ರಂಪ್ ಹೇಳಿದ್ದಾರೆ. ಡಬ್ಲ್ಯುಎಚ್​ಒ ಸಾಂಕ್ರಾಮಿಕವನ್ನು ಸರಿಯಾಗಿಯೇ ನಿಭಾಯಿಸಿದೆ. ಇದನ್ನು ರಾಜಕೀಯಗೊಳಿಸಬಾರದು. ಎಲ್ಲರೂ ಒಗ್ಗಟ್ಟಾಗುವುದೇ ರೋಗ ಸೋಲಿಸಲು ಇರುವ ಏಕೈಕ ಮಾರ್ಗ ಎಂದು ಟೆಡ್ರೋಸ್ ಕಳೆದ ತಿಂಗಳು ಟ್ರಂಪ್ ಟೀಕೆಗೆ ಉತ್ತರಿಸಿದ್ದರು.

    ಇತರ ದೇಶಗಳ ಅಭಯ: ಅಮೆರಿಕದ ಬೆದರಿಕೆಯಿಂದ ಆತಂಕಕ್ಕೆ ಈಡಾಗಿರುವ ವಿಶ್ವ ಆರೋಗ್ಯ ಸಂಸ್ಥೆಯ ನೆರವಿಗೆ ಫ್ರಾನ್ಸ್, ದಕ್ಷಿಣ ಕೊರಿಯಾ, ದಕ್ಷಿಣ ಆಫ್ರಿಕಾ ಮತ್ತು ಜರ್ಮನಿ ಬಂದಿವೆ. ಸಂಸ್ಥೆಯ ಕಾರ್ಯ ನಿರ್ವಹಣೆಗೆ ಅಡ್ಡಿಯಾಗದಂತೆ ನೋಡಿಕೊಳ್ಳುವುದಾಗಿ ಈ ರಾಷ್ಟ್ರಗಳು ಚುನಾಯಿತ ಮುಖ್ಯಸ್ಥರು ಅಭಯ ನೀಡಿದ್ದಾರೆ.

    ಸದ್ಯದ ಸನ್ನಿವೇಶದಲ್ಲಿ ಅಮೆರಿಕದ ಹಿತ ಕಾಯಲು ಏನನ್ನೂ ಮಾಡದ ಡಬ್ಲ್ಯುಎಚ್​ಒಗೆ ದೇಶದ ತೆರಿಗೆದಾರರ ಹಣವನ್ನು ನೀಡಲು ನನ್ನ ಸಮ್ಮತಿಯಿಲ್ಲ. 

    | ಡೊನಾಲ್ಡ್ ಟ್ರಂಪ್ ಅಮೆರಿಕ ಅಧ್ಯಕ್ಷ

    ಕರೊನಾ ವೈರಸ್ ನಮ್ಮ ಆಧುನಿಕ ಯುಗದ ತಪ್ಪುಗಳು, ಅಸಮಾನತೆಗಳು, ಅನ್ಯಾಯಗಳು ಮತ್ತು ವೈರುಧ್ಯಗಳನ್ನು ಎತ್ತಿ ತೋರಿಸಿದೆ. ಒಂದು ಅತಿ ಸಣ್ಣ ವೈರಾಣುನಿಂದ ನಾವೆಲ್ಲ ತಲೆತಗ್ಗಿಸುವಂತೆ ಆಗಿದೆ.

    | ಟೆಡ್ರೋಸ್ ಅಧಾನೊಮ್ ಘಬ್ರಿಯೆಸಸ್, ಡಬ್ಲ್ಯುಎಚ್​ಒ ಮಹಾ ನಿರ್ದೇಶಕ

    ಎಚ್​ಸಿಕ್ಯೂ ಮಾತ್ರೆ ತೆಗೆದುಕೊಳ್ಳುತ್ತಿರುವ ಟ್ರಂಪ್

    ಕರೊನಾಗೆ ಸದ್ಯ ಪರಿಣಾಮಕಾರಿಯಾಗಿರುವ ಹೈಡ್ರಾಕ್ಸಿಕ್ಲೋರೊಕ್ವಿನ್ (ಎಚ್​ಸಿಕ್ಯೂ) ಮಾತ್ರೆಯನ್ನು ತೆಗೆದುಕೊಳ್ಳುತ್ತಿರುವುದಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ. ಕರೊನಾ ಪರೀಕ್ಷೆಯಲ್ಲಿ ನೆಗಟಿವ್ ಬಂದಿದ್ದು, ರೋಗದ ಯಾವುದೇ ಗುಣಲಕ್ಷಣವಿಲ್ಲ ಆದರೂ ಮುಂಜಾಗ್ರತಾ ಕ್ರಮವಾಗಿ ಮಾತ್ರೆ ಸೇವಿಸುತ್ತಿರುವೆ. ಇದಕ್ಕೆ ಶ್ವೇತಭವನದ ವೈದ್ಯರ ಸಮ್ಮತಿಯೂ ಇದೆ ಎಂದು ಟ್ರಂಪ್ ಹೇಳಿದ್ದಾರೆ. ಆದರೆ ಟ್ರಂಪ್​ರ ಈ ನಡೆಗೆ ಸ್ಪೀಕರ್ ಸೇರಿದಂತೆ ಅನೇಕರು ಅಸಾಮಾಧಾನ ವ್ಯಕ್ತಪಡಿಸಿದ್ದಾರೆ. ದೇಶದ ವಿಜ್ಞಾನಿಗಳು ಎಚ್​ಸಿಕ್ಯೂ ಸೇವನೆ ಸುರಕ್ಷಿತವಲ್ಲ ಎಂದು ಎಚ್ಚರಿಸಿದ್ದಾರೆ. ಆದರೆ ಟ್ರಂಪ್ ಅವರು ಈ ವಯಸ್ಸಿನಲ್ಲಿ ಅದರ ಸೇವನೆ ಮಾಡುತ್ತಿರುವುದು ಸರಿಯಲ್ಲ ಎಂದು ಹೇಳಿದ್ದಾರೆ.

    ಸ್ವತಂತ್ರ ತನಿಖೆಗೆ ಅಸ್ತು

    ಕರೊನಾ ಸೋಂಕಿನ ಹಾವಳಿಗೆ ಡಬ್ಲ್ಯುಎಚ್​ಒ ಹೇಗೆ ಪ್ರತಿಕ್ರಿಯಿಸಿತು ಮತ್ತು ನಿಭಾಯಿಸಿತು ಎನ್ನುವ ಬಗ್ಗೆ ಸ್ವತಂತ್ರ ತನಿಖೆ ನಡೆಸಬೇಕೆಂಬ ಸದಸ್ಯ ದೇಶಗಳ ಒತ್ತಾಯಕ್ಕೆ ಮಣಿದಿರುವ ಡಬ್ಲ್ಯುಎಚ್​ಒ ತನಿಖೆಗೆ ಸೋಮವಾರ ಸಮ್ಮತಿಸಿದೆ. ಭಾರತ ಸೇರಿದಂತೆ ಸುಮಾರು 123 ದೇಶಗಳು ತಮ್ಮ ಆಗ್ರಹವುಳ್ಳ ಗೊತ್ತುವಳಿಯೊಂದನ್ನು ಮಂಡಿಸಿದ್ದವು. ಆಫ್ರಿಕಾ ದೇಶಗಳ ಒಕ್ಕೂಟ, ಐರೋಪ್ಯ ಒಕ್ಕೂಟ ಮತ್ತು ಇತರ ದೇಶಗಳು ತನಿಖೆಗೆ ಒಕ್ಕೊರಲ ದನಿಯೆತ್ತಿದ್ದವು. ಸೋಂಕು ನಿರ್ವಹಣೆ ಬಗೆಗಿನ ತನಿಖೆಗೆ ಒಪ್ಪಿರುವ ಜಾಗತಿಕ ಆರೋಗ್ಯ ವೇದಿಕೆ, ವೈರಸ್ ಮೂಲದ ಬಗ್ಗೆ ತನಿಖೆ ನಡೆಸುವ ಬಗ್ಗೆ ಮಾತ್ರ ಮೌನವಾಗಿದೆ. ಈ ವಿಷಯವೇ ಅತ್ಯಂತ ಮಹತ್ವದ್ದಾಗಿದ್ದು ವೈರಾಣು ಮೂಲದ ಬಗ್ಗೆ ಚೀನಾ ಮತ್ತು ಅಮೆರಿಕ ಪರಸ್ಪರರ ವಿರುದ್ಧ ದೋಷಾರೋಪ ಮಾಡಿ ಕಚ್ಚಾಡುತ್ತಿವೆ. ಚೀನಾದ ಪ್ರಯೋಗಾಲಯದಲ್ಲಿ ವೈರಸ್ ಸೃಷ್ಟಿಯಾಗಿರುವುದಕ್ಕೆ ತಮ್ಮ ಬಳಿ ಸಾಕ್ಷ್ಯವಿದೆ ಎಂದು ಟ್ರಂಪ್ ಬಲವಾಗಿ ಪ್ರತಿಪಾದಿಸುತ್ತಿದ್ದಾರೆ.

    ಜೂನ್​ 1ರಿಂದ ದೇಶದಲ್ಲಿ ರೈಲು ಸಂಚಾರವೂ ಸಾಮಾನ್ಯ ಸ್ಥಿತಿಗೆ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts