More

    ನೀರಿನ ಸಮಸ್ಯೆ ದೂರಿಗೆ ಸಬೂಬು ಹೇಳಿದರೆ ಕ್ರಮ: ತಹಸೀಲ್ದಾರ್ ರೇಹಾನಾ ಪಾಷಾ ಎಚ್ಚರಿಕೆ

    ಚಳ್ಳಕೆರೆ: ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಗ್ರಾಮೀಣ ಪ್ರದೇಶದಿಂದ ದೂರುಗಳು ಬಂದರೆ ಚುನಾವಣೆ ಕರ್ತವ್ಯದಲ್ಲಿದ್ದೇವೆ, ಯಾವುದೇ ಅನುದಾನ ಇಲ್ಲ ಎನ್ನುವ ಉತ್ತರ ಕೊಟ್ಟರೆ ಶಿಸ್ತು ಕ್ರಮ ಎದುರಿಸಬೇಕಾಗುತ್ತದೆ ಎಂದು ತಹಸೀಲ್ದಾರ್ ರೇಹಾನಾ ಪಾಷಾ ತಾಲೂಕು ಮಟ್ಟದ ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

    ನಗರದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಬುಧವಾರ ಆಯೋಜಿಸಿದ್ದ ಬರ ನಿರ್ವಹಣೆ ತುರ್ತು ಸಭೆಯಲ್ಲಿ ಪಿಡಿಓಗಳು, ನೋಡಲ್ ಅಧಿಕಾರಿಗಳನ್ನುದ್ದೇಶಿಸಿ ಮಾತನಾಡಿದರು.

    ಸರ್ಕಾರ ಈಗಾಗಲೇ ಬರಪೀಡಿತ ತಾಲೂಕು ಘೋಷಣೆ ಮಾಡಿದೆ. ತಾಲೂಕಿನ ಕುಡಿಯುವ ನೀರಿನ ಪರಿಸ್ಥಿತಿ, ಜಾನುವಾರುಗಳ ಪೋಷಣೆ, ಗೋಶಾಲೆಗಳ ನಿರ್ವಹಣೆಗೆ ನಿಗಾ ವಹಿಸಲಾಗಿದೆ. ತಾಲೂಕಿನಲ್ಲಿ ಎರಡು ವಾರಕ್ಕಾಗುವಷ್ಟು ಮಾತ್ರ ಮೇವು, ಕೆಲ ಗ್ರಾಮಗಳಲ್ಲಿ ನೀರಿನ ಸಮಸ್ಯೆ ಇದೆ ಎನ್ನುವ ವರದಿ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಮುಂದಿನ ಕ್ರಮಕ್ಕೆ ಸೂಚಿಸಿದೆ. ಪಂಚಾಯಿತಿ ಹಂತದಲ್ಲಿ ನೀರಿನ ಸಮಸ್ಯೆ ಪರಿಹಾರಕ್ಕೆ ಪ್ರಾಮಾಣಿಕ ಪ್ರಯತ್ನ ಮಾಡಬೇಕು ಎಂದು ತಾಕೀತು ಮಾಡಿದರು.

    ತಾಪಂ ಇಒ ಬಿ.ಎಸ್.ಲಕ್ಷ್ಮಣ್ ಮಾತನಾಡಿ, ತಾಲೂಕಿನ ಎನ್.ದೇವರಹಳ್ಳಿ, ವರವು, ಬಂಡೆಕಟ್ಟೆ, ಪಾಲನಾಯಕನಕೋಟೆ, ಬೆಲ್ಲದಹಟ್ಟಿ, ಓಬಣ್ಣನಹಳ್ಳಿ, ಚಿಕ್ಕಉಳ್ಳಾರ್ತಿ, ಕೆರೆಹಿಂದಲಹಟ್ಟಿ, ಕಾಟವ್ವನಹಳ್ಳಿಗಳಲ್ಲಿ ನೀರಿನ ಸಮಸ್ಯೆ ನಿವಾರಣೆಗೆ ರೈತರ ಜಮೀನುಗಳಿಂದ ನೀರು ಪಡೆಯಲಾಗುತ್ತಿದೆ. ಅದೇ ರೀತಿ ಸಮಸ್ಯೆಗಳಿರುವ ಕಡೆ ಸಮೀಪದ ರೈತರ ಜಮೀನುಗಳಿಂದ ನೀರಿನ ಒಪ್ಪಂದ ಮಾಡಿಕೊಳ್ಳಬೇಕು. ರೈತರ ಒಪ್ಪಿಗೆ ಪತ್ರದೊಂದಿಗೆ ಅಗತ್ಯ ದಾಖಲೆಗಳನ್ನು ಇಲಾಖೆಗೆ ಸಲ್ಲಿಸಬೇಕು ಎಂದು ಸೂಚಿಸಿದರು.

    ನೀರಿನ ಲಭ್ಯತೆ ಕಡಿಮೆಯಾಗಿರುವ ಕೊಳವೆಬಾವಿಗಳಿಗೆ ಹೆಚ್ಚುವರಿ ಪೈಪ್‌ಗಳ ಅಳವಡಿಕೆಗೆ ಕ್ರಮ ಕೈಗೊಳ್ಳಬೇಕು. ನೀರಿನ ಲಭ್ಯತೆ ಇಲ್ಲದಿದ್ದರೆ ಟ್ಯಾಂಕರ್ ಮೂಲಕ ವ್ಯವಸ್ಥೆ ಮಾಡಿಕೊಳ್ಳಬೇಕು. ಸರ್ಕಾರದ ಆದೇಶ ಪಾಲನೆಯಾಗಬೇಕು. 1 ಕಿ.ಮೀ.ಗೆ 90 ರೂ.ನಂತೆ 10 ಕಿ.ಮೀ. ವ್ಯಾಪ್ತಿಯೊಳಗೆ ಅನುಕೂಲ ಮಾಡಿಕೊಳ್ಳಬೇಕು ಎಂದು ತಿಳಿಸಿದರು.

    ಬರನಿರ್ವಹಣೆ ತಾಲೂಕು ನೋಡಲ್ ಅಧಿಕಾರಿ ಬಿ.ರಾಮಾಂಜಿನೇಯ ಮಾತನಾಡಿ, ಸರ್ಕಾರದ ಮಾರ್ಗಸೂಚಿಯಂತೆ ಪಂಚಾಯಿತಿ ಹಂತದಲ್ಲಿ ಬರನಿರ್ವಹಣೆೆ ಕೆಲಸ ಆಗಬೇಕು. ತಾಲೂಕಿನ 341 ಗ್ರಾಮಗಳ ಪೈಕಿ ಈಗಾಗಲೇ 50ಕ್ಕೂ ಹೆಚ್ಚು ಹಳ್ಳಿಗಳಲ್ಲಿ ನೀರಿನ ಸಮಸ್ಯೆ ಇರುವ ಬಗ್ಗೆ ಮಾಹಿತಿ ಇದೆ. ಪ್ರತಿ ಹಳ್ಳಿಯ ವಾಸ್ತವ ಪರಿಸ್ಥಿತಿ ಮಾಹಿತಿ ಸಂಗ್ರಹಿಸಿ ಪರಿಹಾರ ಕ್ರಮ ಕೈಗೊಳ್ಳಬೇಕು ಎಂದು ಸೂಚಿಸಿದರು.

    ಪಶು ಇಲಾಖೆ ಸಹಾಯಕ ನಿರ್ದೇಶಕ ಟಿ.ಎಸ್.ರೇವಣ್ಣ, ಬಿಇಒ ಕೆ.ಎಸ್.ಸುರೇಶ್, ಸಂಪತ್‌ಕುಮಾರ್, ಶಿವರಾಜ್ ಇತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts