More

    ನೀರು ಪೋಲಾದರೆ ಮೂರು ದಿನಕ್ಕೊಮ್ಮೆ ಪೂರೈಕೆ

    ಗಂಗಾವತಿ: ಕುಡಿವ ನೀರು ರಕ್ಷಣೆ ವಿಚಾರದಲ್ಲಿ ಮೈ ಮರೆತರೆ ಮುಂದಿನ ದಿನಗಳಲ್ಲಿ ಮೂರು ದಿನಕ್ಕೊಮ್ಮೆ ನೀರು ಪಡೆಯುವ ಸ್ಥಿತಿ ಬರಲಿದೆ ಎಂದು ತಹಸೀಲ್ದಾರ್ ಯು.ನಾಗರಾಜ್ ಹೇಳಿದರು.

    ನಗರದ ತಾಲೂಕಾಡಳಿತ ಸೌಧದ ಕಚೇರಿಯಲ್ಲಿ ಗುರುವಾರ ಹಮ್ಮಿಕೊಂಡಿದ್ದ ಕುಡಿವ ನೀರು ನಿರ್ವಹಣೆ ಕುರಿತ ತಾಲೂಕು ಮಟ್ಟದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು. ಬೇಸಿಗೆ ಶುರುವಾಗುವ ಮುನ್ನವೇ ನದಿ ಪಾತ್ರದಲ್ಲಿ ನೀರು ಬತ್ತಿಹೋಗಿದ್ದು, ತುಂಗಭದ್ರಾ ಜಲಾಶಯದಲ್ಲೂ ನೀರಿಲ್ಲ. ಬಿಸಿಲಿನ ಪ್ರಖರತೆಯಿಂದ ಬೋರ್‌ವೆಲ್‌ಗಳಲ್ಲೂ ನೀರಿನ ಪ್ರಮಾಣ ಕಡಿಮೆಯಾಗುತ್ತಿದೆ.

    ಅಲ್ಪಪ್ರಮಾಣದ ನೀರಿನ ಮೂಲದಿಂದಲೇ ಜೂನ್‌ವರೆಗೂ ಕುಡಿವ ನೀರಿನ ವ್ಯವಸ್ಥೆ ಕೈಕೊಳ್ಳಬೇಕಿದೆ. ಅನ್ಯ ಜಿಲ್ಲೆಯಲ್ಲಿ ಈಗಾಗಲೇ ಎರಡು, ಮೂರುದಿನಕ್ಕೊಮ್ಮೆ ನೀರು ಬರುತ್ತಿದ್ದು, ಕೆಲವೆಡೆ ವಾರಕ್ಕೊಮ್ಮೆ ನೀರು ಪಡೆಯುವ ಸ್ಥಿತಿ ಬಂದಿದೆ. ಸಾರ್ವಜನಿಕರು ಕುಡಿವ ನೀರಿನ ವಿಚಾರದಲ್ಲಿ ಗಂಭೀರವಾಗಿ ಪರಿಗಣಿಸಬೇಕಿದ್ದು, ಪೋಲಾಗದಂತೆ ಎಚ್ಚರಿಕೆ ವಹಿಸಬೇಕು. ದಿನಕ್ಕೊಮ್ಮೆ ನೀರು ಬಿಡಲಾಗುತ್ತಿದ್ದು, ನೀರು ಪೋಲಾದರೆ ಇನ್ನು ಮುಂದೆ 3ದಿನಕ್ಕೊಮ್ಮೆ ನೀರು ಪೂರೈಸಿದರೂ ಅಚ್ಚರಿಪಡಬೇಕಿಲ್ಲ ಎಂದರು.

    ತಾಪಂ ಇಒ ಲಕ್ಷ್ಮೀದೇವಿ ಯಾದವ್ ಮಾತನಾಡಿ, ಸಮಸ್ಯಾತ್ಮಕ ಗ್ರಾಮಗಳ ಪಟ್ಟಿ ಮಾಡಲಾಗಿದ್ದು, ನೀರಿನ ಮೂಲ ಕಡಿಮೆಯಾದ ಪ್ರದೇಶದಲ್ಲಿ ಖಾಸಗಿ ಬೋರ್‌ವೆಲ್‌ಗಳಿಂದಲೂ ನೀರು ಪಡೆಯಲು ಯೋಜನೆ ರೂಪಿಸಲಾಗಿದೆ. ದಿನಕ್ಕೆ ಒಂದು ಗಂಟೆ ಮಾತ್ರ ನೀರು ಪೂರೈಸುವ ವ್ಯವಸ್ಥೆ ಮಾಡಬೇಕಿದ್ದು, ನೀರಿನ ರಕ್ಷಣೆ ಬಗ್ಗೆ ಗ್ರಾಮಸ್ಥರಲ್ಲೂ ಜಾಗೃತಿ ಮೂಡಿಸುವಂತೆ ಸಲಹೆ ನೀಡಿದರು. ಸಭೆಯಲ್ಲಿ ನೀರಿನ ಸಮಸ್ಯೆ ಎದುರಿಸುತ್ತಿರುವ ಗ್ರಾಮಗಳ ಸ್ಥಿತಿಗತಿ ಬಗ್ಗೆ ವಿಎ ಮತ್ತು ಪಿಡಿಒಗಳಿಂದ ಮಾಹಿತಿ ಪಡೆಯಲಾಯಿತು. ಆರ್‌ಒ ಪ್ಲಾಂಟ್‌ಗಳ ನಿರ್ವಹಣೆ ಮತ್ತು ಹೊಸ ಬೋರ್‌ವೆಲ್ ಕೊರೆಯಿಸುವ ಬಗ್ಗೆ ಚರ್ಚಿಸಲಾಯಿತು. ಗ್ರಾಮೀಣ ಕುಡಿವ ನೀರು ನಿರ್ವಹಣೆ ಇಇ ಕೆ.ವಿಜಯಕುಮಾರ, ಉಪತಹಸೀಲ್ದಾರ್ ಮಹೆಬೂಬ್‌ಅಲಿ, ನಗರಸಭೆ ವ್ಯವಸ್ಥಾಪಕ ಷಣ್ಮುಖಪ್ಪ, ಕೃಷಿ ಸಹಾಯಕ ನಿರ್ದೇಶಕ ಸಂತೋಷ ಪಟ್ಟದಕಲ್, ಆರ್‌ಐಗಳಾದ ಮಂಜುನಾಥ ಹಿರೇಮಠ, ಮಹೇಶ ದಲಾಲ್ ಇತರರಿದ್ದರು.

    ಮುಖ್ಯಕಾಲುವೆ ಪರಿಶೀಲನೆ

    ಕುಡಿವ ನೀರಿಗಾಗಿ ತುಂಗಭದ್ರಾ ಜಲಾಶಯದಿಂದ ಎಡದಂಡೆ ಮುಖ್ಯ ಕಾಲುವೆಗೆ ನೀರು ಹರಿಸಲಾಗಿದ್ದು, ಕಾಲುವೆಯುದ್ದಕ್ಕೂ 144 ಸೆಕ್ಷನ್ ಜಾರಿಗೆ ತರಲಾಗಿದೆ. ನೀರನ್ನು ಹೊಲಗದ್ದೆಗಳಿಗೆ ಹರಿಸದಂತೆ ಎಚ್ಚರಿಕೆವಹಿಸಲು ಪೊಲೀಸ್ ಪಡೆ ನಿಯೋಜಿಸಲಾಗಿದೆ. ತಹಸೀಲ್ದಾರ್ ಯು.ನಾಗರಾಜ್ ನೇತೃತ್ವದ ಅಧಿಕಾರಿಗಳು ತಾಲೂಕಿನ ದಾಸನಾಳ ಬಳಿ 17ನೇ ಮುಖ್ಯ ಕಾಲುವೆಗೆ ತೆರಳಿ ಪರಿಶೀಲನೆ ನಡೆಸಿದರು. ಕುಡಿವ ನೀರಿಗಾಗಿ ಹರಿಸುತ್ತಿರುವ ನೀರನ್ನು ಯಾವುದೇ ಕಾರಣಕ್ಕೂ ರೈತರ ಹೊಲಗದ್ದೆಗಳಿಗೆ ಹೋಗದಂತೆ ಎಚ್ಚರಿಕೆವಹಿಸುವಂತೆ ನಿಯೋಜಿತ ಪೊಲೀಸ್ ಸಿಬ್ಬಂದಿಗೆ ಸೂಚಿಸಿದರು. ಉಪತಹಸೀಲ್ದಾರ್ ಮಹೆಬೂಬ್‌ಅಲಿ, ಆರ್‌ಐ ಮಹೇಶದಲಾಲ್ ಇತರರಿದ್ದರು. ಗ್ರಾಮಗಳಲ್ಲಿನ ಕುಡಿವ ನೀರು, ಜಾನುವಾರುಗಳಿಗೆ ಮೇವಿನ ಸಮಸ್ಯೆ ಪರಿಹಾರಕ್ಕೆ ತಾಲೂಕಾಡಳಿತ ಸೌಧದಲ್ಲಿ ಸಹಾಯವಾಣಿ ಕೇಂದ್ರ ತೆರೆದಿದ್ದು, 08533-230929, 97407 93877 ಕರೆ ಮಾಡುವಂತೆ ತರಹಸೀಲ್ದಾರ್ ಯು.ನಾಗರಾಜ್ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts