More

    ಶುದ್ಧ ಕುಡಿಯುವ ನೀರಿಗೆ ಪರದಾಟ

    ರಟ್ಟಿಹಳ್ಳಿ: ಪ್ರಸ್ತುತ ಎಲ್ಲಡೆ ಮುಂಗಾರು ಮಳೆ ಕೊರತೆ, ಅಂತರ್ಜಲ ಕುಸಿತದಿಂದಾಗಿ ಕುಡಿಯುವ ನೀರಿನ ಸಮಸ್ಯೆ ಉದ್ಭವಿಸಿದೆ. ಕೆರೆ, ಕಟ್ಟೆಗಳು ನೀರಿಲ್ಲದೆ ಬಣಗುಡುತ್ತಿದ್ದು, ಜನ, ಜಾನುವಾರುಗಳು ನೀರಿಗಾಗಿ ಪರಿತಪಿಸುತ್ತಿದ್ದಾರೆ. ಇದರ ನಡುವೆ ಶುದ್ಧ ಕುಡಿಯುವ ನೀರಿನ ಘಟಕಗಳೂ ಬಂದ್ ಆಗಿರುವುದು ಸಾರ್ವಜನಿಕರು ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ.

    ಪಟ್ಟಣದ ಕೋಟೆ ಭಾಗದ ಟಿಪ್ಪು ನಗರದಲ್ಲಿರುವ ಶುದ್ಧ ಕುಡಿಯುವ ನೀರಿನ ಘಟಕವನ್ನು 7 ಲಕ್ಷ ರೂ ಅನುದಾನದಲ್ಲಿ ನಿರ್ಮಿಸಲಾಗಿತ್ತು. 2018ರಲ್ಲಿ ಕಾರ್ಯಾರಂಭ ಮಾಡಿದ ಘಟಕ ಗ್ರಾಮ ಪಂಚಾಯಿತಿ ನಿರ್ವಹಣೆಯಡಿ ಶುದ್ಧ ನೀರು ಪೂರೈಸುತ್ತಿತ್ತು. ಜನರು ಮೊದಲು 2 ರೂಪಾಯಿ, ನಂತರ 4 ರೂ., ಬಳಿಕ 5 ರೂಪಾಯಿ ನೀಡಿ ಶುದ್ಧ ನೀರು ಪಡೆಯುತ್ತಿದ್ದರು. ಸರ್ಕಾರದ ಮಟ್ಟದಲ್ಲಿ ಶುದ್ಧ ನೀರಿನ ಘಟಕಗಳನ್ನು ನಿರ್ವಹಿಸಲು ಟೆಂಡರ್ ಮೂಲಕ ವಿವಿಧ ಏಜೆನ್ಸಿಗಳಿಗೆ ವಹಿಸಲಾಗಿದೆ. ಪ್ರಾರಂಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದ್ದ ಘಟಕ, ಕ್ರಮೇಣ ಪದೇಪದೆ ತಾಂತ್ರಿಕ ಸಮಸ್ಯೆ ಮತ್ತು ನಿರ್ವಹಣೆ ಕೊರತೆಯಿಂದಾಗಿ ಈಗ ನೀರಿನ ಘಟಕ ಸಂಪೂರ್ಣ ಸ್ಥಗಿತವಾಗಿದೆ.

    ತಪ್ಪದ ಅಲೆದಾಟ: ಟಿಪ್ಪುನಗರ, ಕದಂಬ ನಗರ, ಕೋಟೆ ಭಾಗ, ಉಪ್ಪಾರ ಓಣಿ, ಸೇರಿದಂತೆ ವಿವಿಧೆಡೆ ಸಾವಿರಾರು ಜನರು ಈ ನೀರಿನ ಘಟಕದಿಂದ ಶುದ್ಧ ನೀರು ಪಡೆಯುತ್ತಿದ್ದರು. ಕಳೆದ ವರ್ಷದಿಂದ ಇಲ್ಲಿನ ಘಟಕವೂ ಸ್ಥಗಿತವಾಗಿದೆ. ಹೀಗಾಗಿ ಸ್ಥಳೀಯರು ದೂರದೂರಿನಿಂದ ನೀರನ್ನು ತರುತ್ತಿದ್ದಾರೆ. ಏಕಾಏಕಿ ನೀರಿನ ಬದಲಾವಣೆಯಿಂದ ಮಕ್ಕಳಿಗೆ ಶೀತ, ಜ್ವರ ಆರೋಗ್ಯದ ಸಮಸ್ಯೆ ತಲೆದೋರುತ್ತಿದೆ. ಈ ಬಗ್ಗೆ ಶೀಘ್ರವೇ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕವನ್ನು ದುರಸ್ತಿಗೊಳಿಸಿ ಸಾರ್ವಜನಿಕರಿಗೆ ಶುದ್ಧ ನೀರು ದೊರಕುವಂತೆ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.

    ಕಳೆದ ವರ್ಷದಿಂದ ಇಲ್ಲಿನ ಶುದ್ಧ ಕುಡಿಯುವ ನೀರಿನ ಘಟಕ ಸ್ಥಗಿತವಾಗಿದೆ. ಪ್ರಾರಂಭದಲ್ಲಿ ಉತ್ತಮವಾಗಿ ಕಾರ್ಯ ನಿರ್ವಹಿಸಿದ್ದ ಘಟಕ ಸಾವಿರಾರು ಜನರಿಗೆ ನೀರು ಪೂರೈಸುತ್ತಿತ್ತು. ಪ್ರಸ್ತುತ ಒಂದು ವರ್ಷದಿಂದ ಸ್ಥಗಿತವಾಗಿದೆ. ಅನಿವಾರ್ಯವಾಗಿ ದೂರದ ಘಟಕಗಳಿಗೆ ಹೋಗಿ ನೀರು ಬರಬೇಕಾಗಿದೆ.
    I ಪ್ರವೀಣ ನಾಯಕವಾಡಿ, ಸ್ಥಳೀಯ ನಿವಾಸಿ

    ಕೋಟೆ ಭಾಗದ ಶುದ್ಧ ನೀರಿನ ಘಟಕದಲ್ಲಿರುವ ಬೋರ್‌ವೆಲ್ ನೀರು ಕಪ್ಪು ಬಣದಿಂದ ಕೂಡಿದ್ದು, ನೀರು ಕಲುಷಿತವಾಗಿದೆ. ಇದರಿಂದ ಘಟಕದ ಯಂತ್ರಗಳು ಪದೇಪದೆ ರಿಪೇರಿಗೆ ಬರುತ್ತಿವೆ. ನೀರು ಬಳಕೆಗೆ ಯೋಗ್ಯವಲ್ಲ ಎಂದು ಪಂಚಾಯಿತಿಗೆ ತಿಳಿಸಲಾಗಿದೆ. ಬೇರೆ ನೀರಿನ ವ್ಯವಸ್ಥೆ ಮಾಡಿ ಎಂದು ತಿಳಿಸಿದ್ದರೂ ಅವರು, ಘಟಕವನ್ನು ನಮಗೆ ಹಸ್ತಾಂತರಿಸಿ ಎಂದು ತಿಳಿಸಿದ್ದಾರೆ. ಇತ್ತೀಚೆಗೆ ಶಾಸಕ ಯು.ಬಿ. ಬಣಕಾರ ಸಹ ಈ ಘಟಕವನ್ನು ಪಂಚಾಯಿತಿಗೆ ಹಸ್ತಾಂತರಿಸಿ, ಅವರು ನಿರ್ವಹಣೆ ಮಾಡುತ್ತಾರೆ ಎಂದು ತಿಳಿಸಿದ್ದು, ಸೋಮವಾರ ಸ್ಥಳೀಯ ಪಟ್ಟಣ ಪಂಚಾಯಿತಿಗೆ ನೀರಿನ ಘಟಕದ ಜವಾಬ್ದಾರಿ ವಹಿಸಲಾಗುವುದು.
    I ಸಂದೀಪ, ನ್ಯಾಚುರಲ್ ಇಕೋ ಏಜೆನ್ಸಿ ನೌಕರ

    ಕೋಟೆ ಭಾಗದಲ್ಲಿರುವ ನೀರನ್ನು ಈಗಾಗಲೇ ಪರೀಕ್ಷೆ ಮಾಡಲಾಗಿದ್ದು, ನೀರು ಬಳಸಲು ಯೋಗ್ಯವಾಗಿದೆ ಮತ್ತು ನೆಗೆಟಿವ್ ವರದಿ ಸಹ ಬಂದಿದೆ. ಘಟಕವನ್ನು ಪಂಚಾಯಿತಿ ವತಿಯಿಂದ ನಿರ್ವಹಣೆ ಮಾಡಲಾಗುವುದು, ನಮಗೆ ಹಸ್ತಾಂತರಿಸಿ ಎಂದು ಸಂಬಂಧಿಸಿದ ಏಜೆನ್ಸಿಗೆ ತಿಳಿಸಲಾಗಿದೆ. ನಮಗೆ ಹಸ್ತಾಂತರಿಸಿದ ಬಳಿಕ ಘಟಕ ಚಾಲನೆಗೆ ಕ್ರಮ ಕೈಗೊಳ್ಳಲಾಗುವುದು.
    I ರಾಜಶೇಖರ ಚೌಗಲಾ, ಪಪಂ ಮುಖ್ಯಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts