More

    ಛತ್ತೀಸ್‌ಗಢ ಸಿಎಂ ಆಗಿ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಆಯ್ಕೆ ಮಾಡಿದ್ದೇಕೆ?

    ನವದೆಹಲಿ: ಬಿಜೆಪಿಯ ಪ್ರಮುಖ ಬುಡಕಟ್ಟು ನಾಯಕ ವಿಷ್ಣು ದೇವ್ ಸಾಯಿ ಅವರನ್ನು ಪಕ್ಷವು ಛತ್ತೀಸ್‌ಗಢದ ಹೊಸ ಮುಖ್ಯಮಂತ್ರಿಯಾಗಿ ಹೆಸರಿಸುವ ಮೂಲಕ ಕಳೆದೊಂದು ವಾರದ ಕುತೂಹಲಕ್ಕೆ ಅಂತ್ಯ ಹಾಡಿದೆ. 59 ವರ್ಷದ ಈ ನಾಯಕರು ಹಲವಾರು ಮೆಟ್ಟಿಲು ಏರಿ ರಾಜಕೀಯವಾಗಿ ಬೆಳೆದುಬಂದವರು.

    ಕಳೆದ ತಿಂಗಳು ನಡೆದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಕಾಂಗ್ರೆಸ್ ವಿರುದ್ಧ ಭರ್ಜರಿ ಗೆಲುವು ದಾಖಲಿಸಿದ ನಂತರ ಛತ್ತೀಸ್​ಗಢ ರಾಜ್ಯದ ಉನ್ನತ ಹುದ್ದೆಯನ್ನು ಯಾರು ವಹಿಸಿಕೊಳ್ಳುತ್ತಾರೆ ಎಂಬುದರ ಕುರಿತು ಕೆಲ ದಿನಗಳಿಂದ ತೀವ್ರ ಚರ್ಚೆಗಳನ್ನು ನಡೆದಿದ್ದವು.

    ಈಗ ಸಿಎಂ ಆಗಿ ಆಯ್ಕೆಯಾಗಿರುವ ವಿಷ್ಣು ದೇವ ಸಾಯಿ ಅವರು 1990 ರಿಂದ ಬಿಜೆಪಿಯ ಪ್ರಮುಖ ಬುಡಕಟ್ಟು ನಾಯಕ. ಛತ್ತೀಸ್‌ಗಢ ಬಿಜೆಪಿ ಮುಖ್ಯಸ್ಥರಾಗಿಯೂ ಸೇರಿದಂತೆ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದವರು. ಕೇಂದ್ರದಲ್ಲಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರದ ಮೊದಲ ಅಧಿಕಾರಾವಧಿಯಲ್ಲಿ ಅವರು ಕೇಂದ್ರ ಸಚಿವರಾಗಿಯೂ ಕಾರ್ಯನಿರ್ವಹಿಸಿದವರು.

    ರಾಜ್ಯದಲ್ಲಿ ಬುಡಕಟ್ಟು ಪ್ರಾಬಲ್ಯವಿರುವ ಪ್ರದೇಶಗಳಲ್ಲಿ ಬಿಜೆಪಿಯು ಉತ್ತಮ ಪ್ರದರ್ಶನ ತೋರಿದ ಹಿನ್ನೆಲೆಯಲ್ಲಿ ಛತ್ತೀಸ್‌ಗಢ ಮುಖ್ಯಮಂತ್ರಿಯಾಗಿ ವಿಷ್ಣು ದೇವ್ ಸಾಯಿ ಅವರನ್ನು ನೇಮಿಸುವ ನಿರ್ಧಾರಕ್ಕೆ ಪಕ್ಷ ಬಂದಿದೆ ಎಂದು ಹೇಳಲಾಗಿದೆ. ಕೇಸರಿ ಪಕ್ಷವು ಪರಿಶಿಷ್ಟ ಪಂಗಡಗಳಿಗೆ (ಎಸ್‌ಟಿ) ಮೀಸಲಾದ 29 ಕ್ಷೇತ್ರಗಳ ಪೈಕಿ 17ರಲ್ಲಿ ಗೆಲುವು ಸಾಧಿಸಿದೆ. ಇದು ಭೂಪೇಶ್ ಬಘೇಲ್ ನೇತೃತ್ವದ ಕಾಂಗ್ರೆಸ್ ಸರ್ಕಾರವನ್ನು ಅಧಿಕಾರದಿಂದ ಕಿತ್ತೆಸೆಯಲು ಇದು ಪ್ರಮುಖ ಪಾತ್ರ ವಹಿಸಿದೆ.

    59 ವರ್ಷದ ವಿಷ್ಣು ದೇವ್ ಸಾಯಿ ಅವರು ಛತ್ತೀಸ್‌ಗಢದ ನಾಲ್ಕನೇ ಮತ್ತು 2000ರಲ್ಲಿ ರಾಜ್ಯ ರಚನೆಯಾದ ನಂತರ ಬಿಜೆಪಿಯಿಂದ ಎರಡನೇ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ, ಅವರ ಜೀವನ ಮತ್ತು ಅವರ ರಾಜಕೀಯ ಪ್ರಯಾಣ ಕುತೂಹಲಕಾರಿಯಾಗಿದೆ.

    ವಿಷ್ಣು ದೇವ್ ಸಾಯಿ ಅವರು ಫೆಬ್ರವರಿ 21, 1964 ರಂದು ಛತ್ತೀಸ್​ಗಢದ ಜಶ್ಪುರ್ ಜಿಲ್ಲೆಯ ಬಾಗಿಯಾ ಗ್ರಾಮದಲ್ಲಿ ಜನಿಸಿದರು. ಅವರು ತಮ್ಮ ಉನ್ನತ ಮಾಧ್ಯಮಿಕ ಶಿಕ್ಷಣವನ್ನು ಜಶ್‌ಪುರದ ಕುಂಕೂರಿನಲ್ಲಿರುವ ಲೋಯೋಲಾ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಪೂರ್ಣಗೊಳಿಸಿದರು. ರಾಜಕೀಯಕ್ಕೆ ಸೇರುವ ಮೊದಲು ಅವರು ವೃತ್ತಿಯಲ್ಲಿ ಕೃಷಿಕರಾಗಿದ್ದರು.

    ಇವರ ರಾಜಕೀಯ ಪ್ರಯಾಣವು ತಮ್ಮ ಹಳ್ಳಿಯಾದ ಬಾಗಿಯಾದಲ್ಲಿ ಸರಪಂಚ್ ಆಗಿ ಆಯ್ಕೆಯಾಗುವುದರೊಂದಿಗೆ ಪ್ರಾರಂಭವಾಯಿತು. ಛತ್ತೀಸ್‌ಗಢವನ್ನು ಮಧ್ಯಪ್ರದೇಶದಿಂದ ಬೇರ್ಪಡಿಸುವ ಮೊದಲು 1990 ರಿಂದ 1998 ರವರೆಗೆ ಮಧ್ಯಪ್ರದೇಶ ವಿಧಾನಸಭೆಯ ಸದಸ್ಯರಾಗಿದ್ದರು. ತರುವಾಯ, ಅವರು ರಾಷ್ಟ್ರೀಯ ರಾಜಕೀಯಕ್ಕೆ ಕಾಲಿಟ್ಟರು, 1999 ರಿಂದ 2014 ರವರೆಗೆ ಛತ್ತೀಸ್‌ಗಢದ ರಾಯ್‌ಗಢ್ ಕ್ಷೇತ್ರವನ್ನು ಪ್ರತಿನಿಧಿಸುವ ಲೋಕಸಭೆಯಲ್ಲಿ ಸಂಸದರಾಗಿ ಸೇವೆ ಸಲ್ಲಿಸಿದರು.

    ಆದರೆ, 2018 ರಲ್ಲಿ ನಡೆದ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಸೋತ ನಂತರ ಯಾವುದೇ ಹಾಲಿ ಸಂಸದರಿಗೆ ಮತ್ತೆ ಟಿಕೆಟ್​ ನೀಡದಿರುವ ನಿರ್ಧಾರವನ್ನು ಪಕ್ಷ ಕೈಗೊಂಡಿತು. ಹೀಗಾಗಿ, ಸಾಯಿ ಅವರು 2019 ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿಯಿಂದ ಕಣಕ್ಕಿಳಿಯಲಿಲ್ಲ.

    ಸಾಯಿ ಅವರು ಛತ್ತೀಸ್‌ಗಢ ಬಿಜೆಪಿ ಅಧ್ಯಕ್ಷರಾಗಿ ಮೂರು ಬಾರಿ ಸೇವೆ ಸಲ್ಲಿಸಿದ್ದಾರೆ. ಮೊದಲು 2006 ರಿಂದ 2010 ರವರೆಗೆ, ನಂತರ 2014 ರಲ್ಲಿ ಅಲ್ಪಾವಧಿಗೆ ಮತ್ತು 2020 ರಿಂದ 2022 ರವರೆಗೆ.

    ಅವರು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಭಾಗವಾಗಿದ್ದರು, ಮೊದಲ ನರೇಂದ್ರ ಮೋದಿ ನೇತೃತ್ವದ ಸಚಿವ ಸಂಪುಟದಲ್ಲಿ 2014 ರಿಂದ 2019 ರವರೆಗೆ ಉಕ್ಕು, ಗಣಿ ಮತ್ತು ಕಾರ್ಮಿಕ ಮತ್ತು ಉದ್ಯೋಗದ ಕೇಂದ್ರ ಸಚಿವ ಸ್ಥಾನವನ್ನು ಹೊಂದಿದ್ದರು.

    ಕಳೆದ ತಿಂಗಳು ನಡೆದ ಛತ್ತೀಸ್‌ಗಢ ಚುನಾವಣೆಯಲ್ಲಿ ಕುಂಕುರಿ ವಿಧಾನಸಭೆ ಕ್ಷೇತ್ರದಿಂದ ಬಿಜೆಪಿಯಿಂದ ವಿಷ್ಣು ದೇವ್ ಸಾಯಿ ಕಣಕ್ಕಿಳಿದಿದ್ದರು. ಅವರು ಈ ಕ್ಷೇತ್ರದಿಂದ 87,604 ಮತಗಳಿಂದ ಗೆದ್ದರು. ಅವರ ಕಾಂಗ್ರೆಸ್ ಎದುರಾಳಿ ಯುಡಿ ಮಿಂಜ್ ಅವರನ್ನು 25,541 ಮತಗಳ ಅಂತರದಿಂದ ಸೋಲಿಸಿದರು.

    1991 ರಲ್ಲಿ, ವಿಷ್ಣು ದೇವ ಸಾಯಿ ಕೌಶಲ್ಯ ದೇವಿಯನ್ನು ವಿವಾಹವಾಗಿದ್ದು, ದಂಪತಿಗೆ ಒಬ್ಬ ಮಗ ಮತ್ತು ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ವಿಷ್ಣು ದೇವ ಸಾಯಿ ಕನ್ವರ್ ಬುಡಕಟ್ಟು ಜನಾಂಗಕ್ಕೆ ಸೇರಿದವರು, ಬುಡಕಟ್ಟು ಸಮುದಾಯವೇ ಛತ್ತೀಸ್‌ಗಢದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿದೆ. ರಾಜ್ಯದಲ್ಲಿ ಕನ್ವರ್ ಬುಡಕಟ್ಟು ಜನಾಂಗವನ್ನು ಎಸ್​ಟಿ ವರ್ಗಕ್ಕೆ ಸೇರಿಸಲಾಗಿದೆ.

    ರಾಜಕೀಯದ ಹೊರತುಪಡಿಸಿ ಸಾಯಿ ಅವರು ಬ್ಯಾಡ್ಮಿಂಟನ್ ಮತ್ತು ಫುಟ್‌ಬಾಲ್ ಆಡುತ್ತಾರೆ. ಪುಸ್ತಕ ಪ್ರಿಯರು. ಸಮಾಜ ಸೇವೆಯಲ್ಲೂ ಆಳವಾಗಿ ತೊಡಗಿಸಿಕೊಂಡಿದ್ದಾರೆ.

    ಅಮಾನವೀಯವಾಗಿ ನಾಯಿ ಮರಿ ಕೊಂದ; ಸಿಎಂ, ಸೆಂಟ್ರಲ್​ ಮಿನಿಸ್ಟರ್​ ಖಂಡಿಸಿದ್ದರಿಂದ ಆಗಿದ್ದೇನು?

    10 ವರ್ಷಗಳಲ್ಲಿ ವಾರ್ಷಿಕವಾಗಿ ಶೇ. 20ಕ್ಕೂ ಅಧಿಕ ಲಾಭ ತಂದುಕೊಟ್ಟಿವೆ ಈ 10 ಮ್ಯೂಚುವಲ್​ ಫಂಡ್​ಗಳು

    ಛತ್ತೀಸ್‌ಗಢದ ನೂತನ ಮುಖ್ಯಮಂತ್ರಿ ವಿಷ್ಣು ದೇವ್ ಸಾಯಿ: ಕೇಂದ್ರದ ಮಾಜಿ ಸಚಿವರಿಗೆ ಸಿಎಂ ಯೋಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts