More

    ಒತ್ತುವರಿ ತೆರವು ಆಮೆಗತಿ

    ಒತ್ತುವರಿ ತೆರವು ಆಮೆಗತಿ

    ತರೀಕೆರೆ: ಜನರು, ರೈತರಿಗಾಗಿ ರಾಜರ ಕಾಲದಲ್ಲಿ ನಿರ್ವಿುಸಲ್ಪಟ್ಟ ಕೆರೆಗಳು ಒತ್ತುವರಿಯಾಗುತ್ತಿವೆ. ತಾಲೂಕಿನ ಬಹುತೇಕ ಕೆರೆಗಳು ಭೂಗಳ್ಳರ ಪಾಲಾಗುತ್ತಿದ್ದು, ಅತಿಕ್ರಮಣ ತೆರವು ಆಮೆಗತಿಯಲ್ಲಿ ಸಾಗಿದೆ.

    ಪಟ್ಟಣದ ದಳವಾಯಿ ಕೆರೆ, ರಾಮನಾಯಕನ ಕೆರೆ, ಚಿಕ್ಕೆರೆ, ದೊಡ್ಡಕೆರೆ ಸೇರಿ ತಾಲೂಕಿನಲ್ಲಿರುವ ಸಾಮಾನ್ಯ ಕೆರೆಗಳನ್ನು ಸಂರಕ್ಷಿಸಲು ಜನಪ್ರತಿನಿಧಿಗಳು, ಅಧಿಕಾರಿಗಳು ನಿರ್ಲಕ್ಷಿಸುತ್ತಿರುವುದರಿಂದ ರಾಜಾರೋಷವಾಗಿ ಒತ್ತುವರಿ ಮುಂದುವರಿದಿದೆ.

    ಸಣ್ಣ ನೀರಾವರಿ ಇಲಾಖೆಯ 29, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 131 ಸಣ್ಣ, ಅತಿಸಣ್ಣ ಕೆರೆಗಳು, ಕರ್ನಾಟಕ ನೀರಾವರಿ ನಿಗಮದ 40 ಕೆರೆಗಳು ಲಕ್ಕವಳ್ಳಿ ಹೋಬಳಿ ವಿವಿಧ ಗ್ರಾಮಗಳಲ್ಲಿವೆ.

    ಕೆರೆಕಟ್ಟೆಗಳು ಬರಿದಾದಾಗಲೆಲ್ಲ ಕೆರೆಯಂಗಳ ಅತಿಕ್ರಮಣ ನಡೆಯುತ್ತದೆ. ಸುಂದರ ತಾಣವಾಗಿ ಮಾರ್ಪಾಡುಗೊಳ್ಳಬೇಕಾದ ದಳವಾಯಿ ಕೆರೆ, ರಾಮನಾಯಕನ ಕೆರೆ, ಚಿಕ್ಕೆರೆ, ದೊಡ್ಡಕೆರೆ, ರಂಗೇನಹಳ್ಳಿ ಸಮೀಪದ ಮಡುಗೋಡು ಕೆರೆ, ಹಲಸೂರು ಕೆರೆ, ಲಕ್ಕವಳ್ಳಿ ಕೆರೆಗಳು ಅತಿಕ್ರಮಣವಾಗಿರುವುದು ಮಾತ್ರವಲ್ಲ, ಕೊಳಚೆ ನೀರು ಸೇರಿ ಬಳಸಲು ಯೋಗ್ಯವಿಲ್ಲದಂತಾಗಿದೆ.

    ರಾಮನಾಯಕನ ಕೆರೆ ಬಿಟ್ಟರೆ ಉಳಿದ ಕೆರೆಗಳಿಗೆ ಪಟ್ಟಣದ ಮನೆಯ ಶೌಚಗೃಹ, ಚರಂಡಿ ನೀರು ಸೇರ್ಪಡೆಯಾಗುತ್ತಿದೆ. ಅಡಕೆ ಸಿಪ್ಪೆಯನ್ನೂ ಹಾಕುತ್ತಿದ್ದಾರೆ. ಒಂದು ಕಾಲದಲ್ಲಿ ಪಟ್ಟಣದ ಜನತೆಗೆ ಸಿಹಿ ನೀರು ಪೂರೈಸುತ್ತಿದ್ದ ಚಿಕ್ಕೆರೆ ಅಧೋಗತಿಗೆ ತಲುಪಿದೆ.

    18 ಎಕರೆ ವಿಸ್ತೀರ್ಣ ಹೊಂದಿದ್ದ ಸಾಲೇಬೋರನಹಳ್ಳಿ ಗೋಪಸಮುದ್ರ ಕೆರೆ ಒತ್ತುವರಿಯಾಗಿ ಈಗ ಉಳಿದಿರುವುದು ಒಂದೂವರೆ ಎಕರೆಯಷ್ಟು ಮಾತ್ರ. 53.26 ಎಕರೆ ವಿಸ್ತೀರ್ಣದ ಮುಡುಗೋಡು ಊರ ಮುಂದಿನ ಕೆರೆ, ಹಿರಗಾಪುರ ಕೆರೆ, 26 ಎಕರೆ ವಿಸ್ತೀರ್ಣವುಳ್ಳ ಲಕ್ಕವಳ್ಳಿಯ ಹಿರೇಕೆರೆ, 21 ಎಕರೆ ವಿಸ್ತೀರ್ಣದ ಬಸವನಹಳ್ಳಿ ಬೆಳ್ಳುಳ್ಳಿ ಬಸಪ್ಪನಕೆರೆ ಬಹುಪಾಲು ಒತ್ತುವರಿದಾರರ ಪಾಲಾಗಿದೆ. ಪ್ರಭಾವಿಗಳೇ ಹೆಚ್ಚಾಗಿ ಕೆರೆ ಒತ್ತುವರಿ ಮಾಡಿ ಭತ್ತದ ಗದ್ದೆ, ಅಡಕೆ ತೋಟ ನಿರ್ವಿುಸುತ್ತಿದ್ದಾರೆ.

    ಅಧಿಕಾರಿಗಳ ಕೈಚಳಕದಿಂದ ಖಾತೆ: ಲಕ್ಕವಳ್ಳಿ ಹೋಬಳಿ ಹಲವು ಗ್ರಾಮಗಳಲ್ಲಿ ಕೆರೆಯಂಗಳವೇ ಭತ್ತದ ಗದ್ದೆ, ಅಡಕೆ ತೋಟಗಳಾಗಿ ಮಾರ್ಪಟ್ಟಿವೆ. ಗಂಜಿಗೆರೆಯ ಸ.ನಂ 63ರಲ್ಲಿರುವ 7 ಎಕರೆ ವಿಸ್ತೀರ್ಣದ ಕೆರೆಯಂಗಳ ಓರ್ವನ ಹೆಸರಿಗೆ 25 ವರ್ಷಗಳ ಹಿಂದೆಯೇ ಖಾತೆಯಾಗಿದೆ. ಉಳಿದಂತೆ ಗೋಪಾಲ ಗ್ರಾಮದ ಕೆರೆ, ಹಿರಗಾಪುರ ಸ.ನಂ 9ರಲ್ಲಿರುವ 14 ಎಕರೆಯಷ್ಟು ವಿಸ್ತೀರ್ಣದ ಕೆರೆಯಂಗಳವನ್ನು ಕೆಲವರು ಪ್ರಭಾವ ಬಳಸಿ ಖಾತೆ ಮಾಡಿಸಿಕೊಂಡಿದ್ದಾರೆ. ಕೆರೆಗೆ ಖಾತೆ ಮಾಡುವ ನಿಯಮ ಇಲ್ಲದಿದ್ದರೂ ಅಧಿಕಾರಿಗಳು ಕಾನೂನು ಮೀರಿ ಖಾತೆ ಮಾಡಿದ್ದಾರೆ.

    ಅನುದಾನದ ಕೊರತೆ: ತಾಲೂಕಿನಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯ 131 ಕೆರೆಗಳಿದ್ದು, ಪ್ರಸ್ತುತ ಶೇ.60 ರಷ್ಟು ಕೆರೆಗಳಲ್ಲಿ ನೀರಿಲ್ಲ. ಇವುಗಳಲ್ಲಿ ಬಹುತೇಕ ಕೆರೆಗಳು ಅತಿಕ್ರಮಿಸಲ್ಪಟ್ಟಿದ್ದು, 40 ಕೆರೆ ಸರ್ವೆ ಮಾಡಿಸಲಾಗಿದೆ. 23 ಕೆರೆಗಳು ಭಾಗಶಃ ಒತ್ತುವರಿಯಾಗಿವೆ. ಅಗತ್ಯ ಅನುದಾನದ ಕೊರತೆಯಿಂದ ಯಾವುದೂ ತೆರವುಗೊಳಿಸಲಾಗಿಲ್ಲ. ಉಳಿದ 91 ಕೆರೆಗಳನ್ನು ಹಂತ, ಹಂತವಾಗಿ ಸರ್ವೆ ಮಾಡಿಸಲು ಯೋಜನೆ ರೂಪಿಸಲಾಗಿದ್ದು, ಕೆರೆಗಳ ಪುನರುಜ್ಜೀವನಕ್ಕೆ ಸುಮಾರು 3 ಲಕ್ಷ ರೂ. ಅನುದಾನ ಬಿಡುಗಡೆಯಾಗಿದೆ. ಕೆಲವು ಗ್ರಾಪಂಗಳಲ್ಲಿ ನರೇಗಾ ಯೋಜನೆ ಮೂಲಕ ಕೆರೆ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದ್ದು, ಸದ್ಯದಲ್ಲೇ ಕ್ರಿಯಾ ಯೋಜನೆ ತಯಾರಿಸಿ ಸಣ್ಣಪುಟ್ಟ ಕೆಲಸ ನಿರ್ವಹಿಸಲಾಗುವುದು ಎನ್ನುತ್ತಾರೆ ಪಿಆರ್​ಡಿ ಎಇಇ ಎಚ್.ಬಿ.ರವಿ.

    ಕರ್ನಾಟಕ ನೀರಾವರಿ ನಿಗಮದ ವ್ಯಾಪ್ತಿಯಲ್ಲಿ 35 ಕೆರೆ: ಕರ್ನಾಟಕ ನೀರಾವರಿ ನಿಗಮದ ಸುಪರ್ದಿಯಲ್ಲಿ ಲಕ್ಕವಳ್ಳಿ ಹೋಬಳಿ ವ್ಯಾಪ್ತಿಯ ಹುಣಸನಹಳ್ಳಿ, ಮಾಳಿಕೊಪ್ಪ, ಕೆಂಚಿಕೊಪ್ಪ, ಹಲಸೂರು, ಮುಡುಗೋಡು, ಸಾಲೇಬೋರನಹಳ್ಳಿ, ಬಸವನಹಳ್ಳಿ, ಬಾವಿಕೆರೆ, ಗಂಜಿಗೆರೆ, ಸಿದ್ಲಿಪುರ, ಗೋಪಾಲ ಹಾಗೂ ಕರಕುಚ್ಚಿ ಗ್ರಾಮಗಳಲ್ಲಿ 35 ಕೆರೆಗಳಿದ್ದು, ಅವುಗಳೂ ಒತ್ತುವರಿಯಾಗಿವೆ.

    ಕೆರೆ ಒತ್ತುವರಿ ತೆರವುಗೊಳಿಸಲು ಸದ್ಯದಲ್ಲೇ ದಿನ ನಿಗದಿಪಡಿಸಲಾಗುವುದು. ನಂದಿಕೆರೆ, ಹಿರೇಕಾತೂರು ದೊಡ್ಡಕೆರೆ, ಚಿಕ್ಕೆರೆ, ದೋರನಾಳು ಸುಣ್ಣದಹಳ್ಳಿ ಕೆರೆ, ಹಾದಿಕೆರೆ ದೊಡ್ಡಕೆರೆ ಸೇರಿ 8 ಕೆರೆಗಳ ಪುನರುಜ್ಜೀವನಕ್ಕೆ ಕೆರೆ ಸಂಜೀವಿನಿ ಯೋಜನೆಯಡಿ 1.12 ಕೋಟಿ ರೂ. ಅನುದಾನ ಬಿಡುಗಡೆ ಮಾಡಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎನ್ನುತ್ತಾರೆ ಶಾಸಕ ಡಿ.ಎಸ್.ಸುರೇಶ್.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts