More

    ಒತ್ತುವರಿಗೆ ತೆರವಿಗೆ ಒತ್ತಾಯ

    ಹನೂರು: ಶೌಚಗೃಹ ನಿರ್ಮಾಣದ ಅನುದಾನ ಬಿಡುಗಡೆ ಮಾಡಬೇಕು. ಮುಖ್ಯ ರಸ್ತೆಯ ವಿದ್ಯುತ್ ಕಂಬದಲ್ಲಿ ದೀಪ ಅಳವಡಿಸಬೇಕು. ಒತ್ತುವರಿ ಆಗಿರುವ ಅಂಗನವಾಡಿ ಕೇಂದ್ರದ ಜಾಗವನ್ನು ತೆರವುಗೊಳಿಸಬೇಕು. ಶಿಥಿಲಗೊಂಡಿರುವ ಬಸ್ ನಿಲ್ದಾಣದ ಕಟ್ಟಡವನ್ನು ರಿಪೇರಿ ಮಾಡಿಸಬೇಕು ಹಾಗೂ ಜಾತ್ರಾ ಮಾಳದಲ್ಲಿ ಕುಡಿಯುವ ನೀರಿನ ತೊಂಬೆ ನಿರ್ಮಿಸಬೇಕು.

    ಇದು ತಾಲೂಕಿನ ಎಲ್ಲೇಮಾಳ ಗ್ರಾಮ ಪಂಚಾಯಿತಿ ಆವರಣದಲ್ಲಿ ಬುಧವಾರ 2022-23ನೇ ಸಾಲಿನ ನರೇಗಾ ಯೋಜನೆಯ ಸಾಮಾಜಿಕ ಲೆಕ್ಕ ತಪಾಸಣೆ ಹಾಗೂ 15ನೇ ಹಣಕಾಸು ಯೋಜನೆ ಅನುಷ್ಠಾನದ ಸಂಬಂಧ ಆಯೋಜಿಸಿದ್ದ ಗ್ರಾಮಸಭೆಯಲ್ಲಿ ಗ್ರಾಮಸ್ಥರಿಂದ ಕೇಳಿಬಂದ ಒತ್ತಾಯಗಳು.

    ಸಭೆಯಲ್ಲಿ ಗ್ರಾಮದ ಗೋವಿಂದ ಮಾತನಾಡಿ, ಗ್ರಾಪಂ ವ್ಯಾಪ್ತಿಯಲ್ಲಿ 8 ಕುಟುಂಬಗಳು ಶೌಚಗೃಹ ನಿರ್ಮಿಸಿ ಮೂರು ವರ್ಷ ಕಳೆದಿದೆ. ಆದರೆ ಇದುವರೆಗೂ ಅನುದಾನ ನೀಡಿಲ್ಲ. ಇತ್ತ ಮುಖ್ಯ ರಸ್ತೆಯ ವಿದ್ಯುತ್ ಕಂಬವೊಂದರಲ್ಲಿ ವಿದ್ಯುತ್ ದೀಪ ದುರಸ್ತಿಗೊಂಡು 8 ತಿಂಗಳು ಕಳೆದಿದೆ. ಆದರೆ ಯಾವುದೇ ಕ್ರಮವಾಗಿಲ್ಲ . ಆದ್ದರಿಂದ ಈ ಬಗ್ಗೆ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರೆ, ಗುಳ್ಯ (ಬಿ.ಎಂ ಹಳ್ಳಿ) ಗ್ರಾಮದ ಮಹದೇವಸ್ವಾಮಿ ಎಂಬುವರು ಗ್ರಾಮದ ಮಹದೇಶ್ವರಸ್ವಾಮಿ ದೇಗುಲದ ಮುಂಭಾಗದ ಜಾತ್ರೆ ಮಾಳದಲ್ಲಿ ಕುಡಿಯುವ ನೀರಿನ ತೊಂಬೆ ನಿರ್ಮಿಸಿಲ್ಲ. ಇದರಿಂದ ಆಗಮಿಸುವ ಭಕ್ತರು ತೊಂದರೆ ಅನುಭವಿಸುವಂತಾಗಿದೆ. ಆದ್ದರಿಂದ ತೊಂಬೆ ಜತೆಗೆ ನೀರಿನ ತೊಟ್ಟಿಯನ್ನು ನಿರ್ಮಿಸಿಕೊಡಬೇಕು ಎಂದು ಒತ್ತಾಯಿಸಿದರು.

    ಇನ್ನು ಗ್ರಾಪಂ ಸದಸ್ಯ ರಮೇಶ್ ಮಾತನಾಡಿ, ಚಂಗವಾಡಿ ಗ್ರಾಮದ ಅಂಗನವಾಡಿ ಕೇಂದ್ರ 1ರಲ್ಲಿ ಕೆಲವರು ಜಾಗವನ್ನು ಅತಿಕ್ರಮಿಸಿದ್ದು, ಮನೆ ನಿರ್ಮಿಸಿಕೊಂಡಿದ್ದಾರೆ. ಇದರಿಂದ ಮಕ್ಕಳ ಆಟೋಟಗಳಿಗೆ ತೊಡುಕಾಗಿ ಪರಿಣಮಿಸಿದೆ. ಆದ್ದರಿಂದ ಒತ್ತುವರಿ ತೆರವುಗೊಳಿಸುವುದರ ಜತೆಗೆ ಕಾಂಪೌಂಡ್ ನಿರ್ಮಿಸಿ ಕೊಡಬೇಕು. ಅಲ್ಲದೆ ತೊಂಬೆಗೆ ನೀರಿನ ವ್ಯವಸ್ಥೆ ಕಲ್ಪಿಸಬೇಕು. ಇನ್ನು ಗ್ರಾಮದಲ್ಲಿ ಶಿಥಿಲಗೊಂಡಿರುವ ಬಸ್ ನಿಲ್ದಾಣದ ಕಟ್ಟಡವನ್ನು ರಿಪೇರಿ ಮಾಡಿಸಬೇಕು. ಜತೆಗೆ ಗ್ರಾಮದಲ್ಲಿ ಸಿಸಿ ರಸ್ತೆ ಹಾಗೂ ಚರಂಡಿ ನಿರ್ಮಾಣವಾಗಬೇಕು ಎಂದು ಸಭೆಯಲ್ಲಿ ತಿಳಿಸಿದರು.

    ಬಳಿಕ ಸಭೆಯಲ್ಲಿ ನೋಡೆಲ್ ಅಧಿಕಾರಿಯಾದ ತಾಲೂಕು ಮಹಿಳಾ ಮತ್ತು ಮಕ್ಕಳ ಕಲ್ಯಾಣಾಧಿಕಾರಿ ನಂಜಮಣಿ ಮಾತನಾಡಿ, ಶೌಚಗೃಹ ನಿರ್ಮಾಣದ ಅನುದಾನ ಬಿಡುಗಡೆ ಸೇರಿದಂತೆ ಸಭೆಯಲ್ಲಿ ಕೇಳಿ ಬಂದಿರುವ ದೂರುಗಳಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ವಹಿಸಬೇಕು. ಮೂಲಸೌಕರ್ಯಕ್ಕೆ ಹೆಚ್ಚಿನ ಆದ್ಯತೆ ನೀಡುವುದರ ಮೂಲಕ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ಹಿಂದಿನ ಅವಧಿಯಲ್ಲಿದ್ದ ಪಿಡಿಒ ಅವರಿಂದ ನಡೆದಿರುವ ಅವ್ಯವಹಾರದ ಹಣದ ಪಾವತಿಗೆ ಕ್ರಮವಹಿಸಬೇಕು ಎಂದು ಪಿಡಿಒ ಅಶ್ವಿನಿ ಅವರಿಗೆ ಸೂಚಿಸಿದರು.

    ಇದಕ್ಕೂ ಮುನ್ನ ತಾಲೂಕು ನರೇಗಾ ಸಂಯೋಜಕ ಸಿದ್ದಪ್ಪಾಜಿ ಅವರು, ನರೇಗಾ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿ ವಿವರವನ್ನು ಮಂಡಿಸಿದರು. ಜತೆಗೆ ಹಿಂದಿನ ಅವಧಿಯಲ್ಲಿ ನಡೆದಿರುವ ಹಣದ ಅವ್ಯವಹಾರದ ಬಗ್ಗೆ ಮಾಹಿತಿ ನೀಡಿದರು. ಜತೆಗೆ 15ನೇ ಹಣಕಾಸು ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಯ ಮಾಹಿತಿಯನ್ನು ಒದಗಿಸಿದರು. ಸಭೆಯಲ್ಲಿ ಗ್ರಾಪಂ ಅಧ್ಯಕ್ಷೆ ಕಮಲಮ್ಮ, ಉಪಾಧ್ಯಕ್ಷ ಮಹದೇವಪ್ಪ, ಸದಸ್ಯರಾದ ಇಂತಿಯಾಸ್ ಬೇಗಂ, ಸಮಿಯಾಖಾನಂ, ಸೈಯದ್ ನಜಿರುಲ್ಲಾ, ಗೋವಿಂದ, ಮಂಜುಳಾ, ಪ್ರಿಯದರ್ಶಿನಿ, ರಮೇಶ್, ರಾಧ, ಚಿನ್ನವೆಂಕಟಯ್ಯ ಮತ್ತಿತರರಿದ್ದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts