More

    ಸಾರಿಗೆ ಆದಾಯಕ್ಕೆ ಕರೊನಾ ಬರೆ

    | ಮಂಜುನಾಥ ಕೋಳಿಗುಡ್ಡ ಬೆಳಗಾವಿ

    ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳು ಆದಾಯ ಸೋರಿಕೆ, ಆರ್ಥಿಕ ಸಂಕಷ್ಟದಿಂದಾಗಿ ಸಂದಿಗ್ಧ ಪರಿಸ್ಥಿತಿಯಲ್ಲಿವೆ. ಈ ನಡುವೆಯೇ ಕರೊನಾ ವೈರಸ್ ಕಾರಣದಿಂದಾಗಿ ಕಳೆದ ನಾಲ್ಕೈದು ದಿನಗಳಲ್ಲಿ 1.88 ಕೋಟಿ ರೂ. ನಷ್ಟ ಎದುರಿಸುತ್ತಿವೆ. ಇದೀಗ ನಿತ್ಯವೂ 40 ಲಕ್ಷ ರೂ. ನಷ್ಟವಾಗುತ್ತಿದ್ದು, ಇದು ಸಾರಿಗೆ ವಿಭಾಗಗಳಿಗೆ ಗಾಯದ ಮೇಲೆ ಬರೆ ಎಳೆದಂತಾಗಿದೆ.

    ಬೆಳಗಾವಿ ಮತ್ತು ಚಿಕ್ಕೋಡಿ ವಿಭಾಗಗಳ ವ್ಯಾಪ್ತಿಯ 845 ಬಸ್‌ಗಳು 13 ತಾಲೂಕಿನ 189 ಗ್ರಾಮಗಳಿಗೆ ನಿತ್ಯ ಸಂಚಾರ ನಡೆಸುತ್ತಿವೆ. ಎರಡೂ ವಿಭಾಗಗಳಿಂದ 580 ಬಸ್‌ಗಳು ಬೆಂಗಳೂರು ಸೇರಿ ಮಹಾರಾಷ್ಟ್ರ, ಗೋವಾ, ಆಂಧ್ರ ಪ್ರದೇಶ, ತಮಿಳುನಾಡು ರಾಜ್ಯದ ವಿವಿಧ ನಗರಗಳಿಗೆ ತೆರಳುತ್ತಿದ್ದು, ಮಾಸಿಕ ಕನಿಷ್ಠ 1.25 ಕೋಟಿ ರೂ. ಆದಾಯ ಬರುತ್ತಿದೆ. ಇದೀಗ ನಾಲ್ಕೈದು ದಿನಗಳ ಅವಧಿಯಲ್ಲಿ ಕರೊನಾ ವೈರಸ್ ಪರಿಣಾಮದಿಂದಾಗಿ ಲಕ್ಷಾಂತರ ರೂ. ಆದಾಯ ನಷ್ಟವಾಗಿದೆ.

    ಲಕ್ಷದಿಂದ ಸಾವಿರಕ್ಕೆ ಇಳಿಕೆ: ಮಹಾರಾಷ್ಟ್ರ, ಗೋವಾ ಸೇರಿ ಉತ್ತರ ಕರ್ನಾಟಕ ಭಾಗದಲ್ಲಿಯೇ ಅತಿ ಹೆಚ್ಚು ಹಳ್ಳಿಗಳಿಗೆ, ಜಿಲ್ಲೆಗಳಿಗೆ ಬೆಳಗಾವಿ ಮತ್ತು ಚಿಕ್ಕೋಡಿ ಸಾರಿಗೆ ವಿಭಾಗವು ಸಂಪರ್ಕ ಸೇವೆ ಹೊಂದಿದೆ. ಇದೀಗ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮಾ. 14ರಿಂದ ಕನಿಷ್ಠ ಪ್ರಯಾಣಿಕರಿದ್ದರೂ ನಿತ್ಯ ದೂರದ ಊರುಗಳಿಗೆ 580 ಬಸ್‌ಗಳನ್ನು ಓಡಿಸಲಾಗುತ್ತಿದೆ. ಹೀಗಾಗಿ ಲಕ್ಷಾಂತರ ರೂ. ಆದಾಯ ಬರುತ್ತಿದ್ದ ಮಾರ್ಗದಲ್ಲಿ ಸದ್ಯ 5ರಿಂದ 10 ಸಾವಿರ ರೂ. ಆದಾಯ ಬರುತ್ತಿದೆ.

    ಬಸ್ ಸಂಚಾರ ಸ್ಥಗಿತ: ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯಗಳಲ್ಲಿ ಕರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಬೆಳಗಾವಿ ಜಿಲ್ಲಾಡಳಿತವು ಮಾ. 20ರಿಂದ ಆ ರಾಜ್ಯಕ್ಕೆ ಸಂಚರಿಸುವ ಎಲ್ಲ ರೀತಿ ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಸಂಚಾರ ರದ್ದು ಪಡಿಸಿದೆ. ಈ ಎರಡು ವಿಭಾಗಗಳಿಂದ ಪ್ರತಿನಿತ್ಯ ಮಹಾರಾಷ್ಟ್ರದ ಮುಂಬೈ, ಔರಂಗಾಬಾದ್, ನಾಸಿಕ್, ಪಿಂಪ್ರಿ, ಸೊಲ್ಲಾಪುರ, ಪುಣೆ, ಮಿರಜ್, ಕೊಲ್ಲಾಪುರ ಸೇರಿ ವಿವಿಧ ನಗರ-ಪ್ರದೇಶಗಳಿಗೆ ಚಿಕ್ಕೋಡಿ ವಿಭಾಗದಿಂದ ನಿತ್ಯ 195 ಬಸ್‌ಗಳು, ಬೆಳಗಾವಿ ವಿಭಾಗದಿಂದ 250 ಬಸ್‌ಗಳು ತೆರಳುತ್ತಿದ್ದವು. ಇದೀಗ ಈ ಮಾರ್ಗವಾಗಿ ತೆರಳುತ್ತಿದ್ದ ಎಲ್ಲ ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ನಿತ್ಯ 35 ರಿಂದ 40 ಲಕ್ಷ ರೂ. ಆದಾಯಕ್ಕೆ ಹೊಡೆತ ಬಿದ್ದಿದೆ ಎಂದು ಸಾರಿಗೆ ಅಧಿಕಾರಿಗಳು ತಿಳಿಸಿದ್ದಾರೆ.

    ಬೆಳಗಾವಿಗೆ ಮಹಾರಾಷ್ಟ್ರ ರಾಜ್ಯದಿಂದ 280 ಬಸ್ ಹಾಗೂ ಗೋವಾ ರಾಜ್ಯದಿಂದ 122 ಬಸ್‌ಗಳು ಬೆಳಗಾವಿ ಜಿಲ್ಲೆಗೆ ಆಗಮಿಸುತ್ತಿದ್ದು, ಸದ್ಯ ಅವುಗಳ ಸಂಚಾರವನ್ನೂ ನಿಷೇಧಿಸಲಾಗಿದೆ.

    ಕರೊನಾ ವೈರಸ್‌ನಿಂದ ವಿಭಾಗಕ್ಕೆ ನಿತ್ಯ ಲಕ್ಷಾಂತರ ರೂ. ನಷ್ಟ ಉಂಟಾಗುತ್ತಿದೆ. ಮಹಾರಾಷ್ಟ್ರ, ಗೋವಾಕ್ಕೆ ಬೆಳಗಾವಿ ವಿಭಾಗದಿಂದ ಹೋಗುತ್ತಿದ್ದ 251 ಬಸ್ ಸಂಚಾರ ಸ್ಥಗಿತಗೊಳಿಸಲಾಗಿದೆ. ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಉದ್ಭವಿಸಲಿದೆ.
    | ಎಂ.ಆರ್. ಮುಂಜಿ ಸಾರಿಗೆ ವಿಭಾಗೀಯ ನಿಯಂತ್ರಣಾಧಿಕಾರಿ

    ನೆರೆಯ ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದಲ್ಲಿ ಕರೊನಾ ವೈರಸ್ ಸೋಂಕಿತ ಪ್ರಕರಣಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಹಾಗಾಗಿ ಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಸರ್ಕಾರಿ, ಖಾಸಗಿ ಬಸ್‌ಗಳು ಹಾಗೂ ಲಾರಿ ಇತರ ವಾಹನಗಳ ಸಂಚಾರ ರದ್ದುಪಡಿಸಲಾಗಿದೆ. ಸಾರ್ವಜನಿಕರು ಸಹಕರಿಸಬೇಕು.
    | ಡಾ. ಎಸ್.ಬಿ. ಬೊಮ್ಮನಹಳ್ಳಿ ಜಿಲ್ಲಾಧಿಕಾರಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts