More

    6 ತಿಂಗಳಿಗೊಮ್ಮೆ ಸಾರಿಗೆ ಅದಾಲತ್: ಶಾಸಕ ಸಂಜೀವ ಮಠಂದೂರು

    ಪುತ್ತೂರು: ಕೆಎಸ್‌ಆರ್‌ಟಿಸಿ ಸೌಲಭ್ಯ ಅಭಿವೃದ್ಧಿಪಡಿಸುವ ನಿಟ್ಟಿನಲ್ಲಿ ಪ್ರತೀ 6 ತಿಂಗಳಿಗೊಮ್ಮೆ ಕೆಎಸ್‌ಆರ್‌ಟಿಸಿ ಪುತ್ತೂರು ಮತ್ತು ಮಂಗಳೂರು ವಿಭಾಗವನ್ನು ಸೇರಿಸಿ ಪುತ್ತೂರು ನಗರದಲ್ಲಿ ಸಾರಿಗೆ ಅದಾಲತ್ ನಡೆಸಲಾಗುವುದು. ಇಲ್ಲಿ ಪ್ರಯಾಣಿಕರಿಂದ ಬಂದ ಸಲಹೆ, ಸೂಚನೆಗಳನ್ನು ಶೇ.85ರಷ್ಟನ್ನು ಕಾಲ ಮಿತಿಯೊಳಗೆ ಅನುಷ್ಠಾನಗೊಳಿಸಬೇಕು ಎಂದು ಶಾಸಕ ಸಂಜೀವ ಮಠಂದೂರು ಅಧಿಕಾರಿಗಳಿಗೆ ಸೂಚನೆ ನೀಡಿದರು.
    ಬುಧವಾರ ಕೆಎಸ್‌ಆರ್‌ಟಿಸಿ ಪುತ್ತೂರು ಮತ್ತು ಮಂಗಳೂರು ವಿಭಾಗ ಮಟ್ಟದ ಸಾರಿಗೆ ಅದಾಲತ್‌ನ ಅಧ್ಯಕ್ಷತೆ ವಹಿಸಿದ್ದರು.
    ಜನರಿಗೆ ಅಗತ್ಯವಿರುವ ಸ್ಥಳದಲ್ಲಿ ಬಸ್‌ಗಳಿಗೆ ನಿಲುಗಡೆ ನೀಡಬೇಕು. ಖಾಸಗಿ ಬಸ್‌ಗಳು ನಿಲುಗಡೆ ನೀಡುವ ಮೂಲಕ ಪ್ರಯಾಣಿಕರಿಗೆ ಅನುಕೂಲ ಮಾಡಿಕೊಡುತ್ತದೆ. ಕೆಎಸ್‌ಆರ್‌ಟಿಸಿ ಶಟಲ್ ಬಸ್‌ಗಳಲ್ಲೂ ಈ ರೀತಿಯ ಪದ್ಧತಿ ಜಾರಿಗೆ ಬರಬೇಕು ಎಂದರು.
    ಪುತ್ತೂರು, ಸುಳ್ಯ, ಕಡಬ ಭಾಗದಲ್ಲಿ ಸಾಕಷ್ಟು ಸಂಖ್ಯೆಯಲ್ಲಿ ಉತ್ತರ ಕರ್ನಾಟಕದ ವಲಸೆ ಕಾರ್ಮಿಕರಿದ್ದಾರೆ. ಅವರ ಊರುಗಳಿಗೆ ತೆರಳಲು ಅನುಕೂಲವಾಗುವಂತೆ ಪುತ್ತೂರಿನಿಂದ ಉತ್ತರ ಕರ್ನಾಟಕದ ಭಾಗಗಳಿಗೆ ಚಾರ್ಮಾಡಿ ಘಾಟ್ ರಸ್ತೆ ಮೂಲಕ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ಓಡಿಸಬೇಕು. ಇದು ಸಾಧ್ಯವಾಗದಿದ್ದರೆ ಧರ್ಮಸ್ಥಳದಿಂದ ಉತ್ತರ ಕರ್ನಾಟಕದ ಊರುಗಳಿಗೆ ತೆರಳುವ ಮಾರ್ಗಸೂಚಿಯ ಬಸ್‌ಗಳ ಮಾರ್ಗಸೂಚಿಗಳನ್ನು ಪುತ್ತೂರುವರೆಗೆ ವಿಸ್ತರಿಸಿ ಇಲ್ಲಿಂದ ಆ ಬಸ್‌ಗಳು ಉತ್ತರ ಕರ್ನಾಟಕದ ಭಾಗಗಳಿಗೆ ತೆರಳುವಂತೆ ವ್ಯವಸ್ಥೆ ಮಾಡಬೇಕು ಎಂದು ಕೆಎಸ್‌ಆರ್‌ಟಿಸಿಯ ಪುತ್ತೂರು ವಿಭಾಗ ಸಾರಿಗೆ ಸಂಚಲನಾಧಿಕಾರಿಗೆ ಶಾಸಕರು ಸೂಚಿಸಿದರು.
    ತಾಪಂ ಅಧ್ಯಕ್ಷ ಕೆ.ರಾಧಾಕೃಷ್ಣ ಬೋರ್ಕರ್, ನಗರಸಭಾ ಅಧ್ಯಕ್ಷ ಕೆ.ಜೀವಂಧರ ಜೈನ್, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ ನಿಯಂತ್ರಣಾಧಿಕಾರಿ ಅರುಣ್ ಕುಮಾರ್ ಎ.ಎಸ್. ಉಪಸ್ಥಿತರಿದ್ದರು. ಕೆಎಸ್‌ಆರ್‌ಟಿಸಿ ಪುತ್ತೂರು ವಿಭಾಗ ನಿಯಂತ್ರಣಾಧಿಕಾರಿ ಜಯಕರ ಶೆಟ್ಟಿ ಸ್ವಾಗತಿಸಿದರು. ಕೆಎಸ್‌ಆರ್‌ಟಿಸಿ ಪುತ್ತೂರು ಘಟಕದ ಸ್ಥಾಪಕ ಇಸ್ಮಾಯಿಲ್ ವಂದಿಸಿದರು.

    ಈಶ್ವರಮಂಗಲ ಕ್ರಾಸ್‌ನಲ್ಲಿ ನಿಲುಗಡೆ: ಪುತ್ತೂರು- ಸುಳ್ಯ ಮಾರ್ಗದಲ್ಲಿರುವ ಕೌಡಿಚ್ಚಾರು ಮತ್ತು ಈಶ್ವರಮಂಗಲ ಕ್ರಾಸ್‌ನಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳಿಗೆ ಕಡ್ಡಾಯವಾಗಿ ನಿಲುಗಡೆ ನೀಡಿ ಗೆಜ್ಜೆಗಿರಿ ಕ್ಷೇತ್ರ ಮತ್ತು ಹನುಮಗಿರಿ ಕ್ಷೇತ್ರದ ಭಕ್ತರಿಗೆ ಅನುಕೂಲ ಮಾಡಿಕೊಡಬೇಕು ಎಂದು ಶಾಸಕರು ಸೂಚಿಸಿದರು. ಕೆಎಸ್‌ಆರ್‌ಟಿಸಿಯ ಹೊಸ ಮಾರ್ಗಸೂಚಿಗಳ ಆರಂಭದ ಕುರಿತಂತೆ 130 ಮಾರ್ಗಸೂಚಿಗಳಿಗೆ ಅನುಮತಿ ಕೋರಿ ಸಮಗ್ರ ಪ್ರಾದೇಶಿಕ ಪರವಾನಗಿ ಅರ್ಜಿಯನ್ನು ಜಿಲ್ಲಾಧಿಕಾರಿಗಳಿಗೆ ಕಳುಹಿಸಲಾಗಿದೆ. ಪುತ್ತೂರು ಕೆಎಸ್‌ಆರ್‌ಟಿಸಿ ವಿಭಾಗದಿಂದ ಈಗ ಶೇ.95 ರಷ್ಟು ಬಸ್‌ಗಳ ಓಡಾಟ ಆರಂಭವಾಗಿದೆ ಎಂದು ಪುತ್ತೂರು ವಿಭಾಗ ಸಾರಿಗೆ ಸಂಚಲನಾಧಿಕಾರಿ ಮುರಳೀಧರ ಆಚಾರ್ ಮಾಹಿತಿ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts