More

    ಹಾಲಿ- ಮಾಜಿಗಳ ಮಧ್ಯೆ ವರ್ಗಾವಣೆ ಗುದ್ದಾಟ

    ಮಾಜಿ ಶಾಸಕ ಭೀಮಾನಾಯ್ಕ ಶಿಫಾರಸ್ಸಿಗೆ ಸರ್ಕಾರ ಮಣೆ
    ಶಾಸಕದ್ವಯರಿಗೆ ಸಿಗದ ಮನ್ನಣೆ

    ವೀರೇಂದ್ರ ನಾಗಲದಿನ್ನಿ
    ಹೊಸಪೇಟೆ: ಸರ್ಕಾರಿ ನೌಕರರು ಮತ್ತು ಅಧಿಕಾರಿಗಳ ವರ್ಗಾವಣೆ ವಿಚಾರವಾಗಿ ಜಿಲ್ಲೆಯ ಕಾಂಗ್ರೆಸ್‌ನ ಮಾಜಿ ಹಾಗೂ ಹಾಲಿ ಶಾಸಕರ ಶೀಥಲ ಸಮರಕ್ಕೆ ಕಾರಣವಾಗಿದೆ. ಒಬ್ಬರು ವರ್ಗಾವಣೆಗೆ ಪ್ರಯತ್ನಿಸಿದರೆ, ಮತ್ತೊಬ್ಬರು ಅದೇ ಸ್ಥಾನದಲ್ಲಿ ಮುಂದುವರಿಸುವAತೆ ಸರ್ಕಾರಕ್ಕೆ ಶಿಫಾರಸ್ಸು ಮಾಡುತ್ತಿದ್ದಾರೆ. ಮಾಜಿಗಳ ಹಸ್ತಕ್ಷೇಪ ಹಾಲಿ ಶಾಸಕರಲ್ಲಿ ಬೇಸರ ತರಿಸಿದೆ. ಅದರೊಂದಿಗೆ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ವರ್ಗಾವಣೆ ದಂಧೆಯಾಗಿದೆ ಎಂಬ ವಿಪಕ್ಷಗಳ ಆರೋಪಕ್ಕೆ ಪುಷ್ಠಿ ಸಿಕ್ಕಂತಾಗಿದೆ.

    ಸಹಕಾರ ಇಲಾಖೆಯ ಹೊಸಪೇಟೆ ಉಪವಿಭಾಗದ ಸಹಕಾರ ಸಂಘಗಳ ಸಹಾಯಕ ನಿಬಂಧಕ ಬಿರೇಂದ್ರ ಅವರನ್ನು ಅದೇ ಸ್ಥಾನದಲ್ಲಿ ಮುಂದುವರಿಸುವAತೆ ಕಳೆದ ಜೂನ್ ೬ ರಂದು ವಿಜಯನಗರ ಕ್ಷೇತ್ರದ ಕಾಂಗ್ರೆಸ್ ಶಾಸಕ ಎಚ್.ಆರ್. ಗವಿಯಪ್ಪ ಹಾಗೂ ಕೂಡ್ಲಿಗಿ ಶಾಸಕ ಡಾ.ಎನ್.ಟಿ.ಶ್ರೀನಿವಾಸ ಶಿಪಾರಸು ಪತ್ರ ನೀಡಿದ್ದರು. ಕೊಪ್ಪಳದಲ್ಲಿ ಸಹಾಯಕ ನಿಬಂಧಕರಾಗಿದ್ದ ಟಿ.ಎಸ್.ರವಿಕುಮಾರ್ ಅವರನ್ನು ಹೊಸಪೇಟೆಗೆ ವರ್ಗಾಯಿಸುವಂತೆ ಹಗರಿಬೊಮ್ಮನಹಳ್ಳಿ ಮಾಜಿ ಶಾಸಕ ಭೀಮಾನಾಯ್ಕ ಅದೇ ದಿನ ಪತ್ರ ಬರೆದು, ವರ್ಗಾವಣೆ ಮಾಡಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇತರೆ ಅಧಿಕಾರಿಗಳ ವರ್ಗಾವಣೆಯಲ್ಲೂ ಹಸ್ತಕ್ಷೇಪ ಮಾಡುತ್ತಿರುವುದು ಸ್ಥಳೀಯ ಶಾಸಕರ ಅಸಮಾಧಾನ ಮೂಡಿಸಿದೆ ಎಂಬ ಮಾತು ಕೇಳಿ ಬಂದಿದೆ.

    ಹಾಲಿ- ಮಾಜಿಗಳ ಮಧ್ಯೆ ವರ್ಗಾವಣೆ ಗುದ್ದಾಟ

    ಕಳೆದ ವಿಧಾನಸಭೆ ಚುನಾವಣೆಯಲ್ಲಿ ಹಗರಿಬೊಮ್ಮನಹಳ್ಳಿ ಕ್ಷೇತ್ರದಿಂದ ಸೋಲುಂಡಿರುವ ಭೀಮಾನಾಯ್ಕ ಸರ್ಕಾರ ಮಟ್ಟದಲ್ಲಿ ತಮ್ಮ ಪ್ರಭಾವ ಹೆಚ್ಚಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಆಪ್ತರಾಗಿರುವ ಭೀಮಾನಾಯ್ಕ ಅವರನ್ನು ಕೆಎಂಎಫ್ ಅಧ್ಯಕ್ಷ ಸ್ಥಾನಕ್ಕೆ ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು. ಹೀಗಾಗಿ ಸರ್ಕಾರದ ಮಟ್ಟದಲ್ಲಿ ಭೀಮಾನಾಯ್ಕ ಪ್ರಭಾವ ಹೆಚ್ಚುತ್ತಿದೆ. ಭೀಮಾನಾಯ್ಕ ಶಿಫಾರಸ್ಸಿನ ಮೇರೆಗೆ ವಿಜಯನಗರ ಜಿಲ್ಲಾ ಆರೋಗ್ಯಾಧಿಕಾರಿ ಹಾಗೂ ಜಿಲ್ಲಾ ಕುಷ್ಟರೋಗ ನಿಯಂತ್ರಣಾಧಿಕಾರಿಗಳನ್ನು ಬದಲಾಯಿಸಲಾಗುತ್ತಿದೆ. ವಿಜಯನಗರ ಮಾತ್ರವಲ್ಲದೇ ಇತರೆ ಜಿಲ್ಲೆಗಳಲ್ಲೂ ತಮಗೆ ಬೇಕಾದ ಅಧಿಕಾರಿಗಳನ್ನು ಆಯಕಟ್ಟಿನ ಸ್ಥಾನಕ್ಕೆ ತಂದು ಸರ್ಕಾರದಲ್ಲಿ ವರ್ಚಸ್ಸು ವೃದ್ಧಿಸಿಕೊಳ್ಳುವ ಪ್ರಯತ್ನದಲ್ಲಿದ್ದಾರೆ ಎನ್ನಲಾಗುತ್ತಿದೆ. ಈ ಕುರಿತು ಮಾಜಿ ಶಾಸಕ ಭೀಮಾನಾಯ್ಕ ಅವರನ್ನು ಮಾತನಾಡಿಸಲು ಹಲವು ಬಾರಿ ಫೋನ್ ಮಾಡಿದರೂ, ಕರೆ ಸ್ವೀಕರಿಸಲಿಲ್ಲ.

    ತೆರೆಮರೆಯಲ್ಲಿ ಪ್ರಕ್ರಿಯೆ
    ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಸರ್ವತ್ರಿಕ ವರ್ಗಾವಣೆಗೆ ಅವಕಾಶ ನೀಡಿದೆ. ಜೂನ್ ೧ ರಿಂದ ೧೫ರ ಒಳಗಾಗಿ ವರ್ಗಾವಣೆ ಪೂರ್ಣಗೊಳಿಸಬೇಕು. ಇಲಾಖೆಯ ಒಟ್ಟು ಸಿಬ್ಬಂದಿಯನ್ನು ಆಯಾ ವೃಂದದ ಜೇಷ್ಠತೆಯಲ್ಲಿ ಶೇ.೬ ರಷ್ಟು ಮೀರದಂತೆ ವರ್ಗಾವಣೆ ಮಾಡಲು ಆಯಾ ಇಲಾಖೆಯ ಸಚಿವರಿಗೆ ಅಧಿಕಾರ ನೀಡಲಾಗಿದೆ ಎಂದು ನೀಡಿ ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಆದೇಶಿಸಿತ್ತು. ಅದರಂತೆ ಕೆಲ ಅಧಿಕಾರಿಗಳು ವರ್ಗಾವಣೆಯಾಗಿದ್ದು, ಇನ್ನೂ ಅನೇಕ ಅಧಿಕಾರಿಗಳ ವರ್ಗಾವಣೆ ಬಾಕಿಯಿದೆ. ಬಜೆಟ್ ಅಧಿವೇಶನದ ಬಳಿಕ ಅಧಿಕಾರಿಗಳ ವರ್ಗಾವಣೆಯ ಆದೇಶ ಹೊರ ಬೀಳುವ ಸಾಧ್ಯತೆಗಳಿದ್ದು, ಅಲ್ಲಿವರೆಗೆ ತೆರೆಮರೆಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಯುತ್ತದೆ ಎಂಬುದು ಸರ್ಕಾರಿ ನೌಕರರ ಸಂಘಟನೆಗಳ ಪದಾಧಿಕಾರಿಗಳ ಮಾತು.

    ಹರಿದಾಡುತ್ತಿರುವ ಸಂದೇಶಗಳು: ಮಾಜಿ ಶಾಸಕ ಭೀಮಾ ನಾಯ್ಕ ನಡೆಗೆ ಪಕ್ಷದ ಕಾರ್ಯಕರ್ತ ಸಿಡಿದೆದ್ದಾರೆ. ಭೀಮಾನಾಯ್ಕ ತಮ್ಮ ಅಹಂಕಾರ, ಭ್ರಷ್ಟಾಚಾರ, ದುರಾಡಳಿತ ಕಾರಣಕ್ಕೆ ಮತದಾರರಿಂದ ತಿರಸ್ಕಾರಗೊಂಡಿದ್ದಾರೆ. ಇದೀಗ ರಾಜ್ಯ ವಿವಿಧ ಜಿಲ್ಲೆಗಳ ವರ್ಗಾವಣೆ ದಂಧೆಯಲ್ಲಿ ತೊಡಗಿರುವ ಆರೋಪಗಳಿವೆ. ಅವರಿಂದ ಪಕ್ಷಕ್ಕೆ ಕೆಟ್ಟ ಹೆಸರು ಬರುವ ಜತೆಗೆ ಮುಂಬರುವ ಜಿ.ಪಂ., ತಾ.ಪಂ. ಹಾಗೂ ಲೋಕಸಭೆ ಚುನಾವಣೆಯಲ್ಲೂ ಪಕ್ಷದ ಸೋಲಿಗೆ ಕಾರಣವಾಗಲಿದೆ. ತಕ್ಷಣ ಪಕ್ಷದಿಂದ ಉಚ್ಛಾಟಿಸಬೇಕು ಎಂಬ ಸಂದೇಶಗಳು ಕಾಂಗ್ರೆಸ್ ಜಿಲ್ಲಾಧ್ಯಕ್ಷರು, ಪ್ರಮುಖರು ಇರುವ ವಾಟ್ಸಪ್ ಗ್ರುಪ್‌ಗಳಲ್ಲಿ ಹರಿದಾಡುತ್ತಿರುವುದು ಗಮನಾರ್ಹ.

    ಹಾಲಿ- ಮಾಜಿಗಳ ಮಧ್ಯೆ ವರ್ಗಾವಣೆ ಗುದ್ದಾಟ

    ಕ್ಷೇತ್ರ, ಜಿಲ್ಲೆಯ ಅಭಿವೃದ್ಧಿ ದೃಷ್ಟಿಯಿಂದ ಸರ್ಕಾರಿ ನೌಕರರು, ಅಧಿಕಾರಿಗಳ ವರ್ಗಾವಣೆಗೆ ಸ್ಥಳೀಯ ಶಾಸಕರ ಶಿಫಾರಸ್ಸಿಗೆ ಆದ್ಯತೆ ನೀಡಲಾಗುತ್ತದೆ. ಆದರೆ, ಸಹಕಾರ ಇಲಖೆಗೆ ಸಂಬAಧಿಸಿ ನಮ್ಮ ಮನವಿ ಮೀರಿ ಮತ್ಯಾರನ್ನೋ ನಿಯೋಜಿಸಲಾಗಿದೆ. ಇದರಲ್ಲಿ ಕಾಣದ ಕೈಗಳು ಕೆಲಸ ಮಾಡುತ್ತಿದ್ದು, ಈ ಬಗ್ಗೆ ಮುಖ್ಯಮಂತ್ರಿಗಳೊAದಿಗೆ ಚರ್ಚಿಸುತ್ತೇನೆ.

    – ಎಚ್.ಆರ್.ಗವಿಯಪ್ಪ, ವಿಜಯನಗರ ಶಾಸಕ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts