More

    ಮಂಡ್ಯದಲ್ಲಿ ಎತ್ತಿನಗಾಡಿ ಓಟದ ಸ್ಪರ್ಧೆ ವೇಳೆ ದುರಂತ: ಸ್ಥಳದಲ್ಲೇ ರೈತ ಸಾವು, ಬಾಲಕನ ಸ್ಥಿತಿ ಗಂಭೀರ

    ಮಂಡ್ಯ: ತಾಲೂಕಿನ ಚಿಕ್ಕಮಂಡ್ಯ ಗ್ರಾಮದಲ್ಲಿ ಭಾನುವಾರ ಆಯೋಜಿಸಿದ್ದ ಎತ್ತಿನಗಾಡಿ ಓಡಿಸುವ ಸ್ಪರ್ಧೆಯಲ್ಲಿ ದುರಂತ ಸಂಭವಿಸಿದೆ. ಸ್ವರ್ಧೆ ವೇಳೆ ಪ್ರೇಕ್ಷಕರ ಕಡೆಗೆ ಎತ್ತಿನಗಾಡಿ ನುಗ್ಗಿದ ಪರಿಣಾಮ ರೈತರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. 10 ವರ್ಷದ ಬಾಲಕನ ಸ್ಥಿತಿ ಗಂಭೀರವಾಗಿದೆ.

    ಕೀಲಾರ ಗ್ರಾಮದ ಜಾನಪದ ಕಲಾವಿದ, ರೈತ ಸಂಘದ ಕಾರ್ಯಕರ್ತ ನಾಗರಾಜು(55) ಮೃತರು. ಹುಲಿವಾನ ಗ್ರಾಮದ ಋತ್ವಿಕ್​(10) ತೀವ್ರವಾಗಿ ಗಾಯಗೊಂಡಿದ್ದಾನೆ. ಈತನ ಎದೆಯ ಭಾಗದಲ್ಲಿ ಗಂಭೀರ ಗಾಯಗಳಾಗಿದ್ದು, ನಗರದ ಮಿಮ್ಸ್​ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

    ಹಳ್ಳಿಕೇಶ್ವರ ಬೋರೇಶ್ವರ ಹಾಗೂ ರೈತ ಮಿತ್ರ ಬಳಗದ ವತಿಯಿಂದ ಚಿಕ್ಕಮಂಡ್ಯ ಗ್ರಾಮದ ಬಳಿ 8ನೇ ವರ್ಷದ ಅಂತರ ರಾಜ್ಯ ಮಟ್ಟದ ಜೋಡಿ ಎತ್ತಿನಗಾಡಿ ಓಟದ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧೆಡೆಗಳಿಂದ 84 ತಂಡ ಭಾಗವಹಿಸಿದ್ದವು. ಶನಿವಾರವೇ ಸ್ಪರ್ಧೆ ಪ್ರಾರಂಭವಾಗಿದ್ದು, ಭಾನುವಾರ ಅಂತಿಮ ಪಂದ್ಯಗಳು ನಡೆಯುತ್ತಿದ್ದವು. ಸ್ಪರ್ಧೆ ನೋಡಲು ಸುತ್ತಮುತ್ತಲ ಗ್ರಾಮಸ್ಥರು ಆಗಮಿಸಿದ್ದರು. ಒಂದು ಕಡೆಯಿಂದ ಪ್ರಾರಂಭವಾದ ಓಟದ ಸ್ಪರ್ಧೆ ಮತ್ತೊಂದು ತುದಿ ತಲುಪಿದ್ದವು. ಈ ವೇಳೆ ಜೋಡಿ ಎತ್ತಿನ ಗಾಡಿಯೊಂದು ನಿಯಂತ್ರಣಕ್ಕೆ ಸಿಗದೆ ಗೆಲುವಿನ ಗುರುತಿಗೆ ಹಾಕಿದ್ದ ಗೆರೆಯನ್ನೂ ದಾಟಿ ಎದುರು ನಿಂತಿದ್ದ ಸಾರ್ವಜನಿಕರತ್ತ ನುಗ್ಗಿದೆ. ಈ ಸಂದರ್ಭದಲ್ಲಿ ಜನರು ದಿಕ್ಕಾಪಾಲಾಗಿ ಓಡಿದ್ದಾರೆ. ಸ್ಪರ್ಧೆ ನೋಡುತ್ತಿದ್ದ ನಾಗರಾಜುಗೆ ಗಾಡಿಯ ಮುಂಭಾಗ ಗುದ್ದಿದ ಪರಿಣಾಮ ನೆಲಕ್ಕೆ ಬಿದ್ದಿದ್ದಾರೆ. ಈ ವೇಳೆ ಅವರ ಮೇಲೆ ಚಕ್ರ ಹರಿದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ. ಇತ್ತ ಕೆಳಗೆ ಬಿದ್ದ ಬಾಲಕ ಋತ್ವಿಕ್​ ಸಹ ಕಾಲ್ತುಳಿತಕ್ಕೊಳಗಾಗಿ ಗಾಯಗೊಂಡಿದ್ದಾನೆ. ತಕ್ಷಣ ಬಾಲಕನನ್ನು ಮಿಮ್ಸ್​ಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.
    ಘಟನೆ ಸಂಬಂಧ ಮಂಡ್ಯ ಸೆಂಟ್ರಲ್​ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ಸ್ಪರ್ಧೆಗೆ ಇರಲಿಲ್ಲ ಅನುಮತಿ: ಎತ್ತಿನಗಾಡಿ ಓಟದ ಸ್ಪರ್ಧೆಗೆ ತಾಲೂಕು ಆಡಳಿತ ಹಾಗೂ ಪೊಲೀಸ್​ ಇಲಾಖೆಯಿಂದ ಯಾವುದೇ ಅನುಮತಿ ಪಡೆದಿರಲಿಲ್ಲ. ಇನ್ನು ಕಂದಾಯ ನಿರೀಕ್ಷಕರು ಜಾನುವಾರುಗಳಿಗೆ ಗಂಟುರೋಗ ಇರುವುದರಿಂದ ಸ್ಪರ್ಧೆ ಮುಂದೂಡುವಂತೆ ನೋಟಿಸ್​ ನೀಡಿದ್ದರೂ ಅದನ್ನು ಸ್ವೀಕರಿಸಿರಲಿಲ್ಲ ಎನ್ನುವ ಆರೋಪ ಕೇಳಿಬಂದಿದೆ. ಇದರಿಂದ ಅಸಮಾಧಾನಗೊಂಡ ಅಧಿಕಾರಿಗಳು ಜಿಲ್ಲಾಧಿಕಾರಿಗೆ ದೂರು ಸಲ್ಲಿಸುವುದಾಗಿ ತಿಳಿಸಿ ವಾಪಸ್ಸಾಗಿದ್ದರು.

    ಬಹುಮಾನವಾಗಿ ಬುಲೆಟ್ ಬೈಕ್​: ಸ್ಪರ್ಧಿಗಳಿಂದ ತಲಾ 4 ಸಾವಿರ ರೂ.ಗಳಂತೆ ಪ್ರವೇಶ ಶುಲ್ಕ ವಸೂಲಿ ಮಾಡಲಾಗಿತ್ತು. ಗೆದ್ದವರಿಗೆ ಬುಲೆಟ್​, ಪಲ್ಸರ್​, ಹೋಂಡಾ ಶೈನ್​ ಸೇರಿ ಆರು ದ್ವಿಚಕ್ರ ವಾಹನಗಳ ಬಹುಮಾನ ಪ್ರಕಟಿಸಲಾಗಿತ್ತು. ಈ ನಡುವೆ ಸ್ಪರ್ಧೆಯಲ್ಲಿ ಕೆಲವರು ಗಾಯಗೊಂಡು ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದುಕೊಂಡಿದ್ದರು. ಶನಿವಾರ ಮನೆ ಮುಂದೆ ನಿಲ್ಲಿಸಿದ್ದ ಚಿಕ್ಕಮಂಡ್ಯ ಉಮೇಶ್​ ಅವರಿಗೆ ಸೇರಿದ ಡಿಸ್ಕವರ್​ ಬೈಕ್​ ಮೇಲೆ ಎತ್ತಿನಗಾಡಿ ಹರಿದು ಜಖಂಗೊಂಡಿತ್ತು. ಆಯೋಜಕರು ಅದಕ್ಕೆ ಪರಿಹಾರ ಕೊಡುವುದಾಗಿಯೂ ಒಪ್ಪಿಕೊಂಡಿದ್ದರು ಎಂದು ಉಮೇಶ್​ ತಿಳಿಸಿದ್ದಾರೆ.

    ಒಡತಿಗಾಗಿ 4 ದಿನ ಆಸ್ಪತ್ರೆಯ ಬಾಗಿಲು ಕಾದ ಪಪ್ಪಿ… ಒಡತಿ ಬದುಕಿ ಬರಲೇ ಇಲ್ಲ… ಶಿವಮೊಗ್ಗದಲ್ಲಿ ಮನಕಲಕುವ ಘಟನೆ

    https://www.vijayavani.net/santro-ravis-criminal-history/

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts