More

    ನಿಧಾನಗತಿಯ ಕಾಮಗಾರಿಯಿಂದ ಸಂಚಾರಕ್ಕೆ ತೊಡಕು

    ಹುಣಸೂರು: ನಗರೋತ್ಥಾನ ಯೋಜನೆಯಡಿ ಕೈಗೊಂಡಿರುವ ರಸ್ತೆ ಅಭಿವೃದ್ಧಿ ಕಾಮಗಾರಿ ಆಮೆವೇಗದಲ್ಲಿ ನಡೆಯುತ್ತಿರುವುದರಿಂದ ಸಂಚಾರಕ್ಕೆ ತೊಡಕುಂಟಾಗಿದ್ದು, ಸಾರ್ವಜನಿಕರು ನಗರಸಭೆಗೆ ಹಿಡಿಶಾಪ ಹಾಕುತ್ತಿದ್ದಾರೆ.

    11 ಕೋಟಿ ರೂ. ವೆಚ್ಚದಲ್ಲಿ ನಗರದ ಸಿಟಿಆರ್‌ಐ ಬಡಾವಣೆ, ಐಕೆ ಕಲ್ಯಾಣ ಮಂಟಪದ ಗೋಕುಲ ಬಡಾವಣೆ ವ್ಯಾಪ್ತಿಯಲ್ಲಿ ಒಟ್ಟು ಆರು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಆರಂಭಗೊಂಡು 2 ತಿಂಗಳು ಕಳೆದರೂ ಕಾಮಗಾರಿ ಇನ್ನೂ ಮೆಟಲಿಂಗ್ ಹಂತದಲ್ಲೇ ಇದೆ. ಇದ್ದ ರಸ್ತೆಯನ್ನು ಅಗೆದು ಹಾಕಿದ ಗುತ್ತಿಗೆದಾರರು ಅತ್ತ ತಿರುಗಿ ಕೂಡ ನೋಡಿಲ್ಲ. ಗುಂಡಿ ರಸ್ತೆಯಲ್ಲೇ ಸಾರ್ವಜನಿಕರು ತಿರುಗಾಡುವ ಸನ್ನಿವೇಶ ಏರ್ಪಟ್ಟಿದೆ.

    ರಸ್ತೆ ಅಗೆದು ತಿಂಗಳ ನಂತರ ಜಲ್ಲಿಕಲ್ಲುಗಳನ್ನು ತಂದು ಹಾಕಲಾಗಿದ್ದು, ಮೆಟಲಿಂಗ್ ಕಾರ್ಯ ಪ್ರಾರಂಭಿಸಿ ತಿಂಗಳು ಕಳೆದರೂ ಕಾಮಗಾರಿ ಪೂರ್ಣಗೊಳ್ಳುವ ಲಕ್ಷಣ ಕಾಣುತ್ತಿಲ್ಲ. ನಗರಸಭೆ ಅಧಿಕಾರಿಗಳು ಗುತ್ತಿಗೆದಾರನಿಗೆ ಕರೆ ಮಾಡಿದರೆ ಆತ ಕರೆ ಸ್ವೀಕರಿಸುತ್ತಿಲ್ಲ. ಈಗಾಗಲೇ 3 ಬಾರಿ ನೊಟೀಸ್ ನೀಡಲಾಗಿದೆ ಆದರೂ ಯಾವುದೇ ರೀತಿಯ ಉತ್ತರ ಲಭಿಸಿಲ್ಲ ಎಂಬುದು ನಗರಸಭೆ ಅಧಿಕಾರಿಗಳ ಉತ್ತರ.

    ಹುಣಸೂರು ನಗರಸಭೆಯಲ್ಲಿ ಸಾರ್ವಜನಿಕರ ಸಮಸ್ಯೆಗೆ ಸ್ಪಂದಿಸುವವರು ಇಲ್ಲ ಎಂದು ಸ್ಥಳೀಯರು ದೂರಿದ್ದಾರೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಕಚೇರಿಗೆ ಬಂದರೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ತಮ್ಮ ತಮ್ಮ ಸಮಸ್ಯೆಯಲ್ಲೇ ಮುಳುಗಿರುತ್ತಾರೆ. ಒಂದು ರಸ್ತೆ ಅಭಿವೃದ್ಧಿಪಡಿಸಲು ಎರಡು ತಿಂಗಳಿಗೂ ಅಧಿಕ ಸಮಯ ತೆಗೆದುಕೊಳ್ಳುವುದು ನಗರಸಭೆಯ ಆಡಳಿತವೈಖರಿಗೆ ಹಿಡಿದ ಕೈಗನ್ನಡಿಯಾಗಿದೆ ಎಂದು ಗೋಕುಲ ಬಡಾವಣೆಯ ಮಂಜುನಾಥ್ ಹೇಳಿದ್ದಾರೆ.

    ಗುತ್ತಿಗೆದಾರನಿಗೆ ನೋಟಿಸ್ ನೀಡಲಾಗಿದೆ. ಇದೀಗ ಶೀಘ್ರ ಕಾಮಗಾರಿ ಆರಂಭಿಸುವುದಾಗಿ ತಿಳಿಸಿದ್ದು, ವಾರದೊಳಗೆ ಎಲ್ಲ 6 ರಸ್ತೆಗಳ ಕಾಮಗಾರಿಗಳು ಪೂರ್ಣಗೊಳ್ಳಲಿವೆ ಎಂದು ನಗರಸಭೆ ಜೆಇ ಲೋಕೇಶ್ ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts