More

    ಬೆಳೆಗಾರನ ಪಾಲಿಗೆ ‘ಹುಳಿ’ಯಾದ ದ್ರಾಕ್ಷಿ

    ತೆಲಸಂಗ: ಅಥಣಿ ತಾಲೂಕಿನಲ್ಲಿ ದ್ರಾಕ್ಷಿ ಬೆಳೆಗೆ ಲಾಕ್‌ಡೌನ್ ಸಂದರ್ಭದಲ್ಲಿ ಸೂಕ್ತ ಬೆಲೆ ಸಿಗದೆ ಕಂಗಾಲಾಗಿದ್ದ ರೈತನಿಗೆ ಪ್ರಸಕ್ತ ಸಾಲಿನಲ್ಲಾದರೂ ಉತ್ತಮ ಇಳುವರಿ ಪಡೆಯಬಹುದೆನ್ನುವ ನಿರೀಕ್ಷೆ ಹುಸಿಯಾಗಿದೆ. ಬೆಲೆ ಸಿಗದೆ, ಮಾರುಕಟ್ಟೆ ಇಲ್ಲದೆ ಕಂಗಾಲಾಗಿದ್ದ್ದ ಬೆಳೆಗಾರರು ಈ ಬಾರಿ ಸುರಿದ ಧಾರಾಕಾರ ಮಳೆಯಿಂದ ಅರ್ಧ ಬೆಳೆ ಕಳೆದುಕೊಂಡಿದ್ದಾರೆ.

    ಅಲ್ಪ ಬೆಳೆಗೂ ರೋಗ ಭೀತಿ: ಕಳೆದ ವರ್ಷ ಬಾಧಿಸಿದ್ದ ಎಲೆ ಉದುರುವಿಕೆ ರೋಗ ಪ್ರಸಕ್ತ ವರ್ಷವೂ ಮುಂದುವರಿದಿದೆ. ಸೆಪ್ಟೆಂಬರ್ ಮಾಸಾಂತ್ಯ ಮತ್ತು ಅಕ್ಟೋಬರ್ ಎರಡನೇ ವಾರದವರೆಗೆ ನಡೆಯುವ ದ್ರಾಕ್ಷಿ ಬೆಳೆ ಚಾಟ್ನಿ ಸಮಯದಲ್ಲಿ ಹಳೆಯ ರೋಗ ಮತ್ತೆ ವಕ್ಕರಿಸಿದೆ. ಈ ಬೆಳೆ ರಕ್ಷಣೆಗೆ ಸತತ ಔಧ ಸಿಂಪಡಿಸಬೇಕಿದೆ. ಆದರೆ ಸೂರ್ಯನ ದರ್ಶನಕ್ಕೂ ಅವಕಾಶ ನೀಡದ ಮಳೆ ಸಿಂಪಡಿಸಿದ ಔಷಧ ಹೊಳೆಯಲ್ಲಿ ಹುಣಸೆ ಹಣ್ಣು ತೊಳೆದಂತೆ ಮಾಡುತ್ತಿದೆ. ಇದರಿಂದ ರೈತರ ಗಾಯದ ಮೇಲೆ ಬರೆ ಎಳೆದಂತಾಗಿದೆ ಎಂದು ರೈತರು ಅಸಮಾಧಾನ ತೊಡಿಕೊಂಡರು.

    ಉತ್ತರ ಕರ್ನಾಟಕದ ಬೆಳಗಾವಿ, ವಿಜಯಪುರ, ಬಾಗಲಕೋಟೆ ಜಿಲ್ಲೆಯಲ್ಲಿಯೇ ಶೇ.80 ಬೆಳೆ ಬೆಳೆದರೆ, ತೆಲಸಂಗ ಹೋಬಳಿಯಲ್ಲಿಯೇ 4500 ಹೆಕ್ಟೇರ್ ದ್ರಾಕ್ಷಿ ಬೆಳೆಯಲಾಗುತ್ತಿದೆ. ಬೆಳಗಾವಿ ಜಿಲ್ಲೆಯಲ್ಲಿಯೇ ಅತಿ ಹೆಚ್ಚು ದ್ರಾಕ್ಷಿ ಬೆಳೆಯುವ ಅಥಣಿ ತಾಲೂಕಿನ ಬೆಳೆಗಾರರ ಸಂಕಷ್ಟಕ್ಕೆ ಸಿಲುಕಿದ್ದಾನೆ.

    ಮನೆ ಮಾರುವ ಪರಿಸ್ಥಿತಿ: ಒಂದೆಡೆ ವಾತಾವರಣದ ಏರುಪೇರು ಇನ್ನೊಂದೆಡೆ ಬೆಂಬಿಡದೆ ಸುರಿದ ಮಳೆಯಿಂದ ಅಥಣಿ ತಾಲೂಕಿನ ದ್ರಾಕ್ಷಿ ಬೆಳೆಗಾರರ ನಸೀಬು ಕೆಟ್ಟಂತಾಗಿದೆ. ತೆಲಸಂಗ ಹೋಬಳಿಯಲ್ಲಷ್ಟೇ ಶೇ. 90 ಬೆಳೆ ನಾಶವಾಗಿದೆ. ಸಾಲಗಾರನಾಗಿರುವ ರೈತನ ಕೈ ಹಿಡಿಯದಿದ್ದರೆ ಹೊಲ ಮನೆ ಮಾರಿಕೊಂಡು ಊರು ಬಿಡುವ ಪರಿಸ್ಥಿತಿ ಒಂದೇ ನಮಗಿರುವ ದಾರಿ. ರೈತರ ನೋವನ್ನು ಸರ್ಕಾರ ಅರ್ಥ ಮಾಡಿಕೊಳ್ಳಬೇಕು ಎಂದು ಬೆಳೆಗಾರರು ಅಳಲು ತೋಡಿಕೊಂಡಿದ್ದಾರೆ.

    ಕಳೆದ ವರ್ಷ ಅಷ್ಟಿಷ್ಟು ಫಸಲು ಬಂದಿದ್ದು, ಲಾಕ್‌ಡೌನ್ ಪರಿಣಾಮ ಮಾರಾಟವಾಗಲಿಲ್ಲ. ಅಲ್ಪ ಸ್ವಲ್ಪ ಇದ್ದ ಒಣ ದ್ರಾಕ್ಷಿ ಇನ್ನೂ ಮಾರಾಟವಾಗದೆ ಕೋಲ್ಡ್ ಸ್ಟೋರೇಜ್‌ನಲ್ಲೇ ಬಿದ್ದಿದೆ. ಸ್ಟೋರೇಜ್ ಬಾಡಿಗೆ ಕೊಡುತ್ತಿದ್ದೇವೆಯೇ ಹೊರತು ಮಾರಾಟ ಆಗುತ್ತಿಲ್ಲ. ಸರ್ಕಾರ ಪರಿಹಾರ ನೀಡದಿದ್ದರೆ ನಮ್ಮ ಪರಿಸ್ಥಿತಿ ತೀರಾ ಹದಗೆಡಲಿದೆ.
    | ರಾಮು ಬಳ್ಳೊಳ್ಳಿ ದ್ರಾಕ್ಷಿ ಬೆಳೆಗಾರ, ತೆಲಸಂಗ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts