More

    ಇ-ಖಾತೆ ಕೊಡುವಾಗಲೇ ಅನಧಿಕೃತ! : ಅಮಾಯಕ ಬಡ ಜನತೆಗೆ ನಗರಸಭೆ ಪೌರಾಯುಕ್ತರಿಂದ ಅನ್ಯಾಯ ; ಸಾಮಾನ್ಯ ಸಭೆಯಲ್ಲಿ ಸದಸ್ಯರ ಆಕ್ರೋಶ

    ತಿಪಟೂರು: ಎಂಎಆರ್-19 ದಾಖಲೆಯಲ್ಲಿ ಲಭ್ಯವಿರುವ ಆಸ್ತಿಗಳನ್ನು ಅಧಿಕೃತ ಆಸ್ತಿ ಎಂದು ಗುರುತಿಸುವಂತೆ ಪೌರಾಡಳಿತ ನಿರ್ದೇಶನಾಲಯ ಸುತ್ತೋಲೆ ಹೊರಡಿಸಿದ್ದರೂ, ಸ್ಥಳೀಯ ನಗರಸಭೆಯಲ್ಲಿ ಇ-ಖಾತೆ ಕೊಡುವಾಗ ಆಸ್ತಿ ಅನಧಿಕೃತ ಎಂದು ಕೊಡುತ್ತಿದ್ದು, ಅಮಾಯಕ ಬಡ ಜನತೆಗೆ ಪೌರಾಯುಕ್ತರು ಅನ್ಯಾಯ ಮಾಡುತ್ತಿದ್ದಾರೆ ಎಂದು ನಗರಸಭೆ ಸದಸ್ಯ ಟಿ.ಎನ್.ಪ್ರಕಾಶ್ ಗಂಭೀರ ಆರೋಪ ಮಾಡಿದರು.

    ನಗರಸಭೆ ಅಧ್ಯಕ್ಷ ಪಿ.ಜೆ.ರಾಮಮೋಹನ್ ಅಧ್ಯಕ್ಷತೆಯಲ್ಲಿ ನಗರಸಭೆ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಸಾಮಾನ್ಯ ಸಭೆಯಲ್ಲಿ ಮಾತನಾಡಿದ ಅವರು, ಬಡ ಜನರ ಮನೆ ದುರಸ್ತಿ ಅಥವಾ ಹೊಸ ಮನೆ ನಿರ್ಮಾಣಕ್ಕೆ ಕಡಿಮೆ ಬಡ್ಡಿಯ ಬ್ಯಾಂಕ್ ಸಾಲ ಪಡೆಯಲು ಇ-ಖಾತೆ ಸಲ್ಲಿಸುವುದು ಕಡ್ಡಾಯ, ಆದರೆ ನಗರಸಭೆಯಿಂದ ಕೊಡಲಾಗುತ್ತಿರುವ ಇ-ಖಾತೆಯಲ್ಲಿ ಸ್ವತ್ತಿನ ವಿವರದಲ್ಲಿ ಅನಧಿಕೃತ ಎಂದು ನಮೂದಿಸಿ ಇ-ಖಾತೆ ಕೊಡಲಾಗುತ್ತಿದ್ದು, ಸಾಲ ಕೊಡುವ ಬ್ಯಾಂಕುಗಳು ಇದನ್ನು ಮಾನ್ಯ ಮಾಡದೇ ಇರುವುದರಿಂದ ಬಡ ಜನತೆಗೆ ಸಾಲ ಸಿಗದೆ, ಮನೆ ಕಟ್ಟುವ ಕನಸು ಕನಸಾಗೆ ಉಳಿದಿದೆ. ಪೌರಾಡಳಿತದ ಆದೇಶವನ್ನು ಸ್ಪಷ್ಟವಾಗಿ ಉಲ್ಲಂಘಿಸುತ್ತಿರುವ ಪೌರಾಯುಕ್ತರು, ಬಡ ಜನತೆಯ ಮೇಲೆ ಗದಾ ಪ್ರಹಾರ ಮಾಡಲು ಹೊರಟಿದ್ದಾರೆ ಎಂದು ಆರೋಪಿಸಿದರು.

    ಪೌರಾಡಳಿತ ನಿರ್ದೇಶನಾಲಯದ ಪತ್ರ ಸಂಖ್ಯೆ ಡಿಎಂಎ-29 ಪಿಟಿಐಎಸ್-2015-16 ಪ್ರಕಾರ, ನಿರ್ಮಲ ನಗರ/ಕರ್ನಾಟಕ ಪೌರ ಸುಧಾರಣಾ ಯೋಜನೆಯಡಿ ಮಾಡಿರುವ ಆಸ್ತಿಗಳ ಸರ್ವೇ ಸಮಯದಲ್ಲಿ ಎಂಎಆರ್-19 ದಾಖಲೆಗಳಲ್ಲಿ ಲಭ್ಯವಿದ್ದ ಆಸ್ತಿಗಳನ್ನು ಅಧಿಕೃತ ಆಸ್ತಿಗಳೆಂದು ಪರಿಗಣಿಸಲಾಗಿದ್ದು, ಇ-ಆಸ್ತಿ ತಂತ್ರಾಂಶದಲ್ಲಿಯೂ ಇವುಗಳನ್ನು ಅಧಿಕೃತ ಆಸ್ತಿಗಳೆಂದೇ ಪರಿಗಣಿಸಲಾಗಿದೆ. ಈ ಆಸ್ತಿಗಳಿಗೆ ಯಾವುದೇ ದಾಖಲಾತಿಗಳನ್ನು ಇ-ಆಸ್ತಿ ತಂತ್ರಾಂಶದಲ್ಲಿ ಅಪ್ ಲೋಡ್ ಮಾಡುವ ಅವಶ್ಯಕತೆ ಇರುವುದಿಲ್ಲ, ಸರ್ವೇ ಆದ ನಂತರ ಆಸ್ತಿಗಳ ಮಾಹಿತಿಯಲ್ಲಿ ಬದಲಾವಣೆ ಆಗಿದ್ದಲ್ಲಿ ಸೂಕ್ತ ದಾಖಲೆಗಳೊಂದಿಗೆ ಇ-ಆಸ್ತಿ ತಂತ್ರಾಂಶದಲ್ಲಿ ಮಾಡಲು ಅವಕಾಶವಿದೆ ಎಂದು ಸ್ಪಷ್ಟವಾಗಿ ತಿಳಿಸಲಾಗಿದೆ.

    ಸರ್ಕಾರದ ಈ ಆದೇಶ ಪಾಲಿಸುವಂತೆ ಹಿಂದಿನ ನಗರಸಭೆ ಸಭೆಯಲ್ಲಿ ಅನುಮೋದಿಸಿ, ಸಭಾ ನಿರ್ಣಯ ಕೂಡಾ ಕೈಗೊಳ್ಳಲಾಗಿದೆ. ಆದಾಗ್ಯೂ, ನಗರಾಯುಕ್ತರು ಇ-ಖಾತೆ ಕೊಡುವಾಗ, ಅನಧಿಕೃತ ಎಂದು ನಮೂದಿಸುತ್ತಿರುವುದರ ಉದ್ದೇಶ ಅರ್ಥವಾಗುತ್ತಿಲ್ಲ. ಇದಕ್ಕೆ ಆಯುಕ್ತರು ಸೂಕ್ತ ಸಮಜಾಯಿಷಿ ಕೊಡಲೇಬೇಕು ಎಂದು ಪಟ್ಟು ಹಿಡಿದರು.

    ವಿಷಯವನ್ನು ಗಂಭೀರವಾಗಿ ಪರಿಗಣಿಸಿದ ಅಧ್ಯಕ್ಷ ಪಿ.ಜೆ.ರಾಮಮೋಹನ್, ಪಕ್ಕದಲ್ಲೇ ಇದ್ದ ಆಯುಕ್ತ ಉಮಾಕಾಂತ್‌ಗೆ ಉತ್ತರಿಸುವಂತೆ ಸೂಚಿಸಿದಾಗ, ಖಾತೆ ಬದಲಾವಣೆ ಬಗ್ಗೆ ಉಂಟಾಗಿರುವ ಗೊಂದಲ ನಿವಾರಿಸಲು ಸದ್ಯದಲ್ಲೇ ಜಿಲ್ಲಾಧಿಕಾರಿ ಸಭೆ ನಡೆಯಲಿದೆ ಎಂದರು. ಆಯುಕ್ತರ ತದ್ವಿರುದ್ದ ಹೇಳಿಕೆಗೆ ಆಕ್ರೋಶ ವ್ಯಕ್ತಪಡಿಸಿದ ಪ್ರಕಾಶ್, ನಾವು ಕೇಳುತ್ತಿರುವುದು ಇ-ಖಾತೆ ವಿಷಯ. ನೀವು ಖಾತೆ ಬದಲಾವಣೆ ವಿಷಯ ಹೇಳುವ ಮೂಲಕ ಸಭೆಯ ದಿಕ್ಕು ತಪ್ಪಿಸುವ ಪ್ರಯತ್ನ ಮಾಡುತ್ತಿದ್ದೀರಿ, ವಿಷಯ ಅರಿತು ಉತ್ತರಿಸಿ ಎಂದಾಗ, ಆಯುಕ್ತರ ಬಳಿ ತಕ್ಷಣಕ್ಕೆ ಸೂಕ್ತ ಉತ್ತರ ಇರಲಿಲ್ಲ.

    ನೀರು ನಿಲ್ಲಿಸಿದ ಉದ್ದೇಶವೇನು? :  ನಗರದ ಗಾಂಧೀನಗರ ಬಡಾವಣೆಯಲ್ಲಿ ಗಣಪತಿ ಹಬ್ಬದಂದು ಹೇಮಾವತಿ ನೀರು ಸರಬರಾಜು ನಿಲ್ಲಿಸಿದ್ದನ್ನು ಪ್ರಶ್ನಿಸಿ ಸದಸ್ಯರಾದ ಹೂರ್ ಭಾನು, ಆಸಿಫಾ ಭಾನು, ಮುನ್ನಾ ಸಭೆಯಲ್ಲೇ ಆಕ್ರೋಶ ಹೊರಹಾಕಿದರು. ನಗರದೆಲ್ಲೆಡೆ 24*7 ನೀರು ಸರಬರಾಜು ಯೋಜನೆಯಲ್ಲಿ ಹೇಮಾವತಿ ನೀರು ಬಿಡಲಾಗುತ್ತಿದೆ ಎನ್ನುತ್ತೀರಿ, ಆದರೆ ಗಾಂಧಿನಗರ ಬಡಾವಣೆಯಲ್ಲಿ 10-12 ದಿನಕ್ಕೊಮ್ಮೆ ಹೇಮಾವತಿ ನೀರು ಬರುತ್ತಿದೆ. ಹೇಳಿಕೇಳಿ ಗಣೇಶನ ಹಬ್ಬದಂದೇ ನೀರು ನಿಲ್ಲಿಸುವ ಉದ್ದೇಶವಾದರೂ ಏನು? ಗಾಂಧಿನಗರವನ್ನು ಬೇರ್ಪಡಿಸುವ ರೈಲ್ವೆ ಗೇಟಿನ ಆಚೆಗೊಂದು ನ್ಯಾಯ, ಗೇಟಿನ ಇನ್ನೊಂದು ಬದಿಯಲ್ಲಿರುವ ಇತರ ಬಡಾವಣೆಗಳಿಗೆ ಇನ್ನೊಂದು ನ್ಯಾಯವೇ? ಅಲ್ಲಿಯವರ‌್ಯಾರೂ ತೆರಿಗೆ ಕಟ್ಟಲ್ಲವೇ ಎಂದು ಖಾರವಾಗಿ ಪ್ರಶ್ನಿಸಿದರು. ಸಭೆಯಲ್ಲಿ ನಗರಸಭೆ ಉಪಾಧ್ಯಕ್ಷ ಸೊಪ್ಪು ಗಣೇಶ್, ಸದಸ್ಯರು, ಅಧಿಕಾರಿಗಳು ಇದ್ದರು.

    ಶಿಕ್ಷಣ ಮತ್ತು ಸಕಾಲ ಮಂತ್ರಿಗಳೂ ಆದ ಬಿ.ಸಿ.ನಾಗೇಶ್ ಅವರ ತವರಿನಲ್ಲೇ ಸಕಾಲದ ಅರ್ಜಿಗಳಿಗೆ ಮಾನ್ಯತೆ ಇಲ್ಲ. ಇನ್ನು ಉಳಿದ ಕಡೆ ಹೇಗಿರಬೇಕು?. ತಕ್ಷಣ ಸಚಿವರು ಸೂಕ್ತ ಕ್ರಮ ವಹಿಸಬೇಕು.
    ಟಿ.ಎನ್.ಪ್ರಕಾಶ್ ನಗರಸಭೆ ಸದಸ್ಯ ತಿಪಟೂರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts