More

    ಅಡಿಗರ ಹೆಸರಿನಲ್ಲಿ ಪುರಭವನ

    ಬೈಂದೂರು: ಪಟ್ಟಣ ಪಂಚಾಯಿತಿ ಆಗಿ ಪರಿವರ್ತನೆಯಾಗಿರುವ ಬೈಂದೂರಿನಲ್ಲಿ ಸಾರ್ವಜನಿಕ ಕಾರ್ಯಕ್ರಮ ನಡೆಸಲು ಪುರಭವನ ನಿರ್ಮಾಣಕ್ಕೆ ನಿರ್ಧರಿಸಲಾಗಿದ್ದು, ಅದಕ್ಕೆ ಕವಿ ಮೊಗೇರಿ ಗೋಪಾಲಕೃಷ್ಣ ಅಡಿಗರ ಹೆಸರಿಡಲು ಚಿಂತನೆ ನಡೆದಿದೆ.

    ಬೈಂದೂರು ಸಮೀಪದ ಕೆರ್ಗಾಲು ಗ್ರಾಮದ ಮೊಗೇರಿ ಗೋಪಾಲಕೃಷ್ಣ ಅಡಿಗರ ಹುಟ್ಟೂರು. ಮೊಗೇರಿ ಹಾಗೂ ಬೈಂದೂರಿನಲ್ಲಿ ಅಡಿಗರು ಆರಂಭಿಕ ಶಿಕ್ಷಣ ಪಡೆದಿದ್ದರು. ಮುಂದೆ ರಾಜ್ಯದ ವಿವಿಧೆಡೆ ಪ್ರಾಧ್ಯಾಪಕರಾಗಿ, ಪ್ರಾಂಶುಪಾಲರಾಗಿದ್ದರು. ಕನ್ನಡದ ನವೋದಯದ ಕಾಲದಲ್ಲಿ ಸಾಹಿತ್ಯ ರಚನೆಗೆ ತೊಡಗಿ, ಮುಂದೆ ನವ್ಯ ಪಂಥ ಹುಟ್ಟು ಹಾಕಿ ಏಳು ದಶಕ ಸೃಜನಶೀಲತೆ ಮೆರೆದಿದ್ದರು. ಅಡಿಗರ ಹುಟ್ಟೂರಿನಲ್ಲಿ ಅವರ ನೆನಪಿಗಾಗಿ ಸ್ಮಾರಕ ಇಲ್ಲ. ಅದನ್ನು ನಿವಾರಿಸಲು ಪ್ರತಿಷ್ಠಾನ ಸ್ಥಾಪಿಸಲಾಗಿದೆ ಎಂದು ಶಾಸಕ ಬಿ.ಎಂ ಸುಕುಮಾರ ಶೆಟ್ಟಿ ತಿಳಿಸಿದ್ದಾರೆ.

    ಬೆಂಗಳೂರು ಜಯನಗರದ ಒಂದು ರಸ್ತೆಗೆ, ಜಾಲಹಳ್ಳಿ ವೃತ್ತಕ್ಕೆ ಅವರ ಹೆಸರಿಡಲಾಗಿದೆ. ಆದರೆ ಹುಟ್ಟೂರಿನಲ್ಲಿ ಅವರನ್ನು ಶಾಶ್ವತವಾಗಿ ಸ್ಮರಿಸುವ ಕೆಲಸ ಆಗಿಲ್ಲ. ಈ ಹಿನ್ನೆಲೆಯಲ್ಲಿ ಶಾಸಕ ಬಿ.ಎಂ.ಸುಕುಮಾರ ಶೆಟ್ಟಿ ಮತ್ತು ಹಲವು ಹಿರಿಯ, ಕಿರಿಯ ಸಾಹಿತ್ಯಾಸಕ್ತರು ಮುಂದಾಗಿದ್ದು, ಈ ಬಗ್ಗೆ ಸಂಸದರಲ್ಲಿ ಪ್ರಸ್ತಾಪಿಸಿದ್ದಾರೆ. ಬೈಂದೂರಿನಲ್ಲಿ ಸೂಕ್ತ ನಿವೇಶನ ಗುರುತಿಸಿ ಅಲ್ಲಿ ಅವರ ಹೆಸರಿನ ಪುರಭವನ ನಿರ್ಮಿಸಲಾಗುವುದು. ಅದರೊಂದಿಗೆ ಅಲ್ಲಿ ಅವರ ಸ್ಮಾರಕ ಗ್ಯಾಲರಿ, ಕೃತಿಗಳ ಅಧ್ಯಯನ ಕೇಂದ್ರ ಆರಂಭಿಸಲೂ ಕ್ರಮ ಕೈಗೊಳ್ಳಲಾಗುವುದು ಎಂದು ಸಂಸದರು ತಿಳಿಸಿದ್ದಾರೆ.

    ಬೈಂದೂರಿನಲ್ಲಿ ಗೋಪಾಲಕೃಷ್ಣ ಅಡಿಗರ ಹೆಸರಿನಲ್ಲಿ ಪುರಭವನ ನಿರ್ಮಿಸುವ ವಿಚಾರ ಸ್ವಾಗತಾರ್ಹ. ವಿದ್ಯಾರ್ಥಿಯಾಗಿದ್ದಾಗ ಕನ್ನಡ ಬಾಲ ಎಂಬ ಕೈಬರಹ ಪತ್ರಿಕೆ ಆರಂಭಿಸಿದ್ದರು. ಅದರ ಪ್ರಥಮ ಸಂಚಿಕೆಯಲ್ಲಿ ಮೊದಲ ನುಡಿ (1932) ಎಂಬ ತಮ್ಮ ಪ್ರಥಮ ಕವನ ಪ್ರಕಟಿಸಿದ್ದರು. ಆ ಶಾಲೆ ಇದ್ದ ಪರಿಸರದಲ್ಲೇ ಉದ್ದೇಶಿತ ಅಡಿಗ ಸ್ಮಾರಕ ಪುರಭವನ ನಿರ್ಮಾಣ ಮಾಡಲು ಸಾಧ್ಯವೇ ಎಂಬ ಚಿಂತನೆ ನಡೆಯಲಿ.
    -ಮೊಗೇರಿ ಜಯರಾಮ ಅಡಿಗ, ಹಿರಿಯ ಪತ್ರಕರ್ತ, ಅಡಿಗರ ಕುಟುಂಬ ಸದಸ್ಯ

    ಅಡಿಗರ ಹುಟ್ಟೂರಿನಲ್ಲಿ ಸ್ಮಾರಕ ಇಲ್ಲ ಎನ್ನುವುದು ಲೋಪ. ಅದನ್ನು ನಿವಾರಿಸಲು ಪ್ರತಿಷ್ಠಾನ ಹುಟ್ಟು ಹಾಕಲಾಗಿದೆ. ಅದು ಕೆರ್ಗಾಲಿನ ಸೂಕ್ತ ಸ್ಥಳದಲ್ಲಿ ಅಡಿಗ ಸ್ಮಾರಕ ನಿರ್ಮಿಸುವ ಪ್ರಯತ್ನದಲ್ಲಿ ತೊಡಗಿದೆ. ಬೈಂದೂರಿನ ಪುರಭವನದ ಜತೆಗೆ ಈ ಕಾರ್ಯಕ್ಕೂ ಅಗತ್ಯ ಬೆಂಬಲ ನೀಡಲು ನಾನು ಮತ್ತು ಸಂಸದರು ಬದ್ಧ.
    -ಬಿ.ಎಂ.ಸುಕುಮಾರ ಶೆಟ್ಟಿ, ಶಾಸಕರು

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts