More

    ಆರನೇ ಬಾರಿಗೆ ಪ್ರಮಾಣ ವಚನ

    ನವದೆಹಲಿ: ಆರನೇ ಬಾರಿಗೆ ಬಿಹಾರದ ಸಿಎಂ ಆಗಲಿರುವ ನಿತೀಶ್ ಕುಮಾರ್ (70), ಹಿಂದುಳಿದ ವರ್ಗದ ನೇತಾರ. ಅತ್ಯಂತ ಹಿಂದುಳಿದ ವರ್ಗವಾದ ಕುರ್ವಿು ಸಮುದಾಯದ ಕುಟುಂಬದಲ್ಲಿ ಜನಿಸಿದ ನಿತೀಶ್, ಓದಿದ್ದು ಮೆಕಾನಿಕಲ್ ಇಂಜಿನಿಯರಿಂಗ್. ಕೆಲ ಕಾಲ ರಾಜ್ಯ ವಿದ್ಯುತ್ ನಿಗಮದಲ್ಲಿ ಕೆಲಸ ಮಾಡಿ ನಂತರ ಜತನಾ ಪಕ್ಷದ ಮೂಲಕ ರಾಜಕೀಯ ಪ್ರವೇಶಿಸಿದರು. ಜಯಪ್ರಕಾಶ್ ನಾರಾಯಣ, ರಾಮ ಮನೋಹರ ಲೋಹಿಯಾ ಗರಡಿಯಲ್ಲಿ ಸಮಾಜವಾದಿ ಸಿದ್ಧಾಂತದಲ್ಲಿ ಬೆಳೆದರು. ತುರ್ತಪರಿಸ್ಥಿತಿ ವೇಳೆ ನಡೆದ ಜೆಪಿ ಚಳವಳಿಯಲ್ಲಿ ಸಕ್ರಿಯರಾಗಿದ್ದರು.

    ಆರನೇ ಬಾರಿಗೆ ಪ್ರಮಾಣ ವಚನ ವಾಜಪೇಯಿ ನೇತೃತ್ವದ ಎನ್​ಡಿಎ ಸರ್ಕಾರದಲ್ಲಿ ರೈಲ್ವೆ, ಭೂಸಾರಿಗೆ ಮತ್ತು ಕೃಷಿ ಸಚಿವರಾಗಿದ್ದ ಅವರು, ಗೈಸಾಲ್ ರೈಲು ದುರಂತದ ನೈತಿಕ ಹೊಣೆ ಹೊತ್ತು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದರು. ಕಡಿಮೆ ಅವಧಿಗೆ ರೈಲ್ವೆ ಸಚಿವರಾಗಿದ್ದರೂ, ಆನ್​ಲೈನ್ ಟಿಕೆಟ್ ಬುಕಿಂಗ್, ಮುಗಂಡ ಟಿಕೆಟ್ ಕಾದಿರಿಸುವ ಕೌಂಟರ್ ಹೆಚ್ಚಳ, ತತ್ಕಾಲ್ ಯೋಜನೆಯನ್ನು ಪರಿಚಯಿಸಿದರು. 2000ದಲ್ಲಿ ಅವಿಭಜಿತ ಬಿಹಾರಕ್ಕೆ ಮೊದಲ ಬಾರಿಗೆ ಸಿಎಂ ಆದ ನಿತೀಶ್, ಬಹುಮತ ಸಾಬೀತು ಪಡಿಸುವುದಕ್ಕೂ ಮುನ್ನ ಏಳೇ ದಿನದಲ್ಲಿ ರಾಜೀನಾಮೆ ನೀಡಿದರು.

    ಜಾರ್ಖಂಡ್ ಒಳಗೊಂಡಿದ್ದ ಬಿಹಾರದ ವಿಧಾನಸಭೆ 324 ಸದಸ್ಯ ಬಲಹೊಂದಿತ್ತು. ಸರಳ ಬಹುಮತಕ್ಕೆ 163 ಬೇಕಿತ್ತು. ಆದರೆ, ಎನ್​ಡಿಎ 151 ಸ್ಥಾನಹೊಂದಿತ್ತು. 2005ರಲ್ಲಿ ಎನ್​ಡಿಎ ಜತೆ ಸೇರಿ ಮೊದಲ ಅವಧಿಗೆ ಮುಖ್ಯಮಂತ್ರಿ ಕಾರ್ಯಾಲಯ ಪ್ರವೇಶಿಸಿದರು. 2010ರಲ್ಲಿ ಎನ್​ಡಿಎ 206 ಸ್ಥಾನ ಗೆಲ್ಲುವ ಮೂಲಕ ಮತ್ತೆ ಸಿಎಂ ಆದರು. 2014ರ ಲೋಕಸಭಾ ಚುನಾವಣೆಯಲ್ಲಿ ಜೆಡಿಯು ಕೇವಲ ಎರಡು ಸ್ಥಾನ ಗೆದ್ದಕಾರಣ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡಿದರು.

    ನಾವು ಒಂದು ಸ್ಥಾನಗಳಿಸಿರಬಹುದು. ಆದರೆ, ಚುನಾವಣೆಯಲ್ಲಿ ಏನು ಮಾಡಬೇಕಿತ್ತೋ ಅದನ್ನು ಮಾಡಿದ್ದೇವೆ. ಹೆಚ್ಚಿನ ಸ್ಥಾನಗಳಿಸುವ ಆಶಯ ಇತ್ತಾದರೂ, ಬಿಜೆಪಿಯನ್ನು ಬಲಿಷ್ಠಗೊಳಿಸುವುದೇ ನಮ್ಮ ಉದ್ದೇಶವಾಗಿತ್ತು. ಇದನ್ನು ಸಾಧಿಸಿರುವುದಕ್ಕೆ ಸಂತಸ ಇದೆ.
    ಚಿರಾಗ್ ಪಾಸ್ವಾನ್, ಎಲ್​ಜೆಪಿ ಮುಖ್ಯಸ್ಥ

    ಆಗ ಜಿತಿನ್ ರಾಮ್ ಮಾಂಝಿ ಸಿಎಂ ಆದರು. 2015ರ ವಿಧಾನಸಭಾ ಚುನಾವಣೆಯ ಹೊತ್ತಿಗೆ ಎನ್​ಡಿಎ ತೊರೆದಿದ್ದ ಅವರು, ಆರ್​ಜೆಡಿ, ಕಾಂಗ್ರೆಸ್ ಜತೆ ಸೇರಿ ಚುನಾವಣೆ ಗೆದ್ದು ಮತ್ತೆ ಸಿಎಂ ಆದರು. ಆದರೆ, ಈ ಬಾಳ್ವೆ 2017ರ ಜುಲೈಗ 25ಕ್ಕೆ ಮುರಿದು ಬಿತ್ತು. ಕೆಲವೇ ತಾಸಿನಲ್ಲಿ ಮತ್ತೆ ಎನ್​ಡಿಎ ಸೇರಿದ ನಿತೀಶ್, ಪುನಃ ಸಿಎಂ ಆದರು. 1973ರಲ್ಲಿ ಮಂಜು ಕುಮಾರಿ ಸಿನ್ಹಾರನ್ನು ವಿವಾಹವಾದ ಅವರಿಗೆ ಓರ್ವ ಪುತ್ರ ಇದ್ದಾನೆ. ಮಂಜು 2007ರಲ್ಲಿ ನಿಮೋನಿಯಾದಿಂದ ನಿಧನರಾದರು.

    ನಿತೀಶ್ ನಮ್ಮ ಸಿಎಂ
    ‘ಚುನಾವಣೆಯಲ್ಲಿ ಬಿಜೆಪಿ ಹೆಚ್ಚಿನ ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದರೂ, ಮೈತ್ರಿಕೂಟದಲ್ಲಿ ನಾವು ಸಮಾನ ಪಾಲುದಾರರು. ಜೆಡಿಯು ಕಡಿಮೆ ಗಳಿಸಿದ್ದರೂ ನಿತೀಶ್ ಕುಮಾರ್ ಅವರೇ ನಮ್ಮ ಸಿಎಂ ಆಗಿರುತ್ತಾರೆ. ಇದು ನಮ್ಮ ಬದ್ಧತೆ’ ಎಂದು ಉಪಮುಖ್ಯಮಂತ್ರಿ ಸುಶೀಲ್ ಕುಮಾರ್ ಮೋದಿ ಬುಧವಾರ ಹೇಳಿದ್ದಾರೆ. ನಿತೀಶ್ ನಾಲ್ಕನೇ ಅವಧಿಗೆ ಸಿಎಂ ಆದರೂ ಹಿಂದಿನಂತೆ ಅಧಿಕಾರ ಹಂಚಿಕೆ ಮೊದಲಿನಂತೆ ಇರುವುದಿಲ್ಲ. ಬಿಜೆಪಿ ಕೈ ಮೇಲಾಗಬಹುದು ಎಂದು ಮೂಲಗಳು ತಿಳಿಸಿವೆ.

    12 ಮತಗಳ ಅಂತರದಿಂದ ಜಯ!
    ಬಿಹಾರದ ಹಿಲ್ಸಾ ಕ್ಷೇತ್ರದಲ್ಲಿ ಜೆಡಿಯು ಅಭ್ಯರ್ಥಿ 12 ಮತಗಳ ಅಂತರದಿಂದ ಆರ್​ಜೆಡಿ ಉಮೇದುವಾರನ ವಿರುದ್ಧ ಜಯ ದಾಖಲಿಸಿದ್ದಾರೆ. ಆದರೆ, ಆರ್​ಜೆಡಿ ಇದು ವಿವಾದಾತ್ಮಕ ಫಲಿತಾಂಶ ಎಂದು ಆರೋಪಿಸಿದೆ. ಉಭಯ ಅಭ್ಯರ್ಥಿಗಳ ಮಧ್ಯೆ ತೀವ್ರ ಪೈಪೋಟಿ ಇದ್ದ ಕಾರಣ ಮಂಗಳವಾರ ಮಧ್ಯರಾತ್ರಿಯವರೆಗೂ ಮತ ಎಣಿಕೆ ನಡೆಯಿತು. ಜೆಡಿಯು ಅಭ್ಯರ್ಥಿ ಕೃಷ್ಣಮುರಾರಿ ಶರಣ್ 61,848 ಮತಗಳಿಸಿದರು. ಆರ್​ಜೆಡಿಯ ಅತ್ರಿ ಮುನಿ ಅಲಿಯಾಸ್ ಶಕ್ತಿ ಸಿಂಗ್ ಯಾದವ್ 61,836 ಮತ ಪಡೆದರು. ಕಡಿಮೆ ಅಂತರವಿದ್ದ ಕಾರಣ ಚುನವಣಾ ಆಯೋಗ ವೆಬ್​ಸೈಟಿನಲ್ಲಿ ಎಣಿಕೆ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದೇ ತೋರುತ್ತಿತ್ತು. ಇದನ್ನು ಟೀಕಿಸಿದ ಆರ್​ಜೆಡಿ, ನಮ್ಮ ಅಭ್ಯರ್ಥಿ 547 ಮತಗಳ ಅಂತರದಲ್ಲಿ ಜಯಗಳಿಸಿದ್ದಾರೆಂದು ಕ್ಷೇತ್ರದ ಚುನಾವಣಾಧಿಕಾರಿ ಹೇಳಿದ್ದರು, ಪ್ರಮಾಣ ಪತ್ರಕ್ಕಾಗಿ ಕಾಯುವಂತೆ ತಿಳಿಸಿದ್ದರು. ಆದರೆ, ಸಿಎಂ ನಿವಾಸದಿಂದ ದೂರವಾಣಿ ಕರೆ ಬಂದ ನಂತರ ಅವರು ಉಲ್ಟಾ ಹೊಡೆದರು. ಆರ್​ಜೆಡಿ ಅಭ್ಯರ್ಥಿ 12 ಮತಗಳಿಂದ ಸೋತಿದ್ದಾರೆ. ಅಂಚೆ ಮತಪತ್ರಗಳನ್ನು ರದ್ದು ಮಾಡಲಾಗಿದೆ ಎಂದರು ಎಂದು ಆರ್​ಜೆಡಿ ಟ್ವೀಟ್ ಮಾಡಿದೆ. ಸಿಎಂ ಒತ್ತಡದಿಂದ ಅನೇಕ ಕಡೆ ನಮ್ಮ ಪಕ್ಷಕ್ಕೆ ಪ್ರತಿಕೂಲವಾಗಿದೆ. ಮಹಾಘಟಬಂಧನದ ಅಭ್ಯರ್ಥಿಗಳು 119ರಲ್ಲಿ ಜಯಗಳಿಸಿದ್ದಾರೆ. ಆದರೆ, ಆಯೋಗ 110 ಎಂದು ಹೇಳಿದೆ ಎಂದು ಆರ್​ಜೆಡಿ ಆಪಾದಿಸಿದೆ. ಈ ಆರೋಪವನ್ನು ತಳ್ಳಿಹಾಕಿರುವ ಚುನಾವಣಾ ಆಯೋಗ, ನಾವು ಯಾವುದೇ ಒತ್ತಡಕ್ಕೆ ಒಳಗಾಗಿಲ್ಲ. ಪಾರದರ್ಶಕವಾಗಿ ಕರ್ತವ್ಯ ನಿರ್ವಹಿಸಿರುವುದಾಗಿ ತಡರಾತ್ರಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ಸ್ಪಷ್ಟ ಪಡಿಸಿದೆ.

    ತಂದೆ ಕ್ಷೇತ್ರದಲ್ಲಿ ಮಗ ಆಯ್ಕೆ
    ಬಿಹಾರದ ವಾಲ್ಮೀಕಿ ನಗರ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜೆಡಿಯುನ ಸುನಿಲ್ ಕುಮಾರ್ 22,500ಕ್ಕೂ ಹೆಚ್ಚು ಮತಗಳ ಅಂತರದಲ್ಲಿ ಕಾಂಗ್ರೆಸ್​ನ ಪ್ರವೇಶ್ ಕುಮಾರ್ ಮಿಶ್ರಾರನ್ನು ಪರಾಭವಗೊಳಿಸಿದ್ದಾರೆ. ಈ ಕ್ಷೇತ್ರದಿಂದ ಜೆಡಿಯುನಿಂದ ಚುನಾಯಿತರಾಗಿದ್ದ ಸುನಿಲ್ ಕುಮಾರ್​ರ ತಂದೆ ಬೈದ್ಯನಾಥ ಮಹತೊ ನಿಧನದ ಕಾರಣ ಇಲ್ಲಿ ಉಪಚುನಾವಣೆ ನಡೆದಿತ್ತು.

    ಬಿಹಾರದ ಜಾತಿ ಸಮೀಕರಣ
    ಬಿಹಾರ ಚುನಾವಣೆ ಬಹುತೇಕ ನಡೆಯುವುದೇ ಜಾತಿ ಆಧಾರದಲ್ಲಿ ಆಯಾ ಕಾಲಘಟ್ಟಕ್ಕೆ ತಕ್ಕಂತೆ ಜಾತಿ ಸಮೀಕರಣದಲ್ಲಿ ಯಶಸ್ವಿಯಾದವರು ಅಧಿಕಾರದ ಗದ್ದುಗೆ ಏರಿದ್ದಾರೆ. ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ಡಿ ದೇವಿ ಕಾಲದಲ್ಲಿ ಯಾದವರು, ನಿತೀಶ್ ಕುಮಾರ್ ಅವಧಿಯಲ್ಲಿ ಅತಿ ಹಿಂದುಳಿದ ಜಾತಿ (ಇಬಿಸಿ) ನಿರ್ಣಾಯಕ ಪಾತ್ರ ವಹಿಸಿವೆ. ಶೇ. 32ರಷ್ಟಿರುವ ಹಿಂದುಳಿದ ಮತ್ತು ಅತಿ ಹಿಂದುಳಿದ ವರ್ಗಗಳು ಜೆಡಿಯು ಮೂಲಕ ಎನ್​ಡಿಎ ಪರ ನಿಂತಿದೆ.

    ಟ್ಯಾಕ್ಸ್ ಟೆರರಿಸಮ್​ನಿಂದ ಟ್ಯಾಕ್ಸ್ ಟ್ರಾನ್ಸಪರೆನ್ಸಿಗೆ ಬದಲಾಗಿದೆ ಭಾರತ- ಪ್ರಧಾನಿ ನರೇಂದ್ರ ಮೋದಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts