More

    ಟೊಮ್ಯಾಟೊ ದರ ಕುಸಿತ: ಹೂವಿನಹಡಗಲಿಯಲ್ಲಿ ದನ-ಕುರಿಗಳಿಗೆ ಮೇಯಲು ಬಿಟ್ಟ ರೈತರು

    ಹೂವಿನಹಡಗಲಿ: ಟೊಮ್ಯಾಟೊ ದರ ಕುಸಿತದಿಂದ ಕಂಗಾಲಾಗಿರುವ ತಾಲೂಕಿನ ರೈತರು, ದನ ಕುರಿಗಳಿಗೆ ಮೇಯಲು ಬಿಟ್ಟಿದ್ದಾರೆ.

    ತಾಲೂಕಿನಲ್ಲಿ ಹಿಂಗಾರು ಹಂಗಾಮಿನಲ್ಲಿ 50 ಹೆಕ್ಟೇರ್‌ನಲ್ಲಿ ಟೊಮ್ಯಾಟೊ ಬೆಳೆಯಲಾಗಿತ್ತು. ಆ ಸಮಯದಲ್ಲಿ ಅಲ್ಪ ಸ್ವಲ್ಪ ಬೆಲೆ ಸಿಕ್ಕಿತ್ತು. ಆದರೆ ಬೇಸಿಗೆಯಲ್ಲಿ ದರ ಮತ್ತಷ್ಟು ಹೆಚ್ಚಬಹುದೆಂಬ ನಿರೀಕ್ಷೆಯಲ್ಲಿ 15 ಹೆಕ್ಟೇರ್‌ನಲ್ಲಿ ಬೆಳೆದಿದ್ದ ಬೆಳೆ ಸಂಪೂರ್ಣ ದನ ಕುರಿಗಳ ಪಾಲಾಗುತ್ತಿದೆ. ಇದರಿಂದ ತೀವ್ರ ಸಂಕಷ್ಟಕ್ಕೆ ಒಳಗಾದ ತಾಲೂಕಿನ ಹಿರೇಹಡಗಲಿ, ಹೂವಿನಹಡಗಲಿ, ತುಂಬಿನಕೇರಿ, ಕೆ.ವೀರಾಪುರ, ಮಿರಾಕೊರನಹಳ್ಳಿ, ದಾಸನಹಳ್ಳಿ ಭಾಗದ ರೈತರು, ಸೂಕ್ತ ಪರಿಹಾರ ನೀಡಬೇಕೆಂದು ತೋಟಗಾರಿಕೆ ಇಲಾಖೆಯನ್ನು ಒತ್ತಾಯಿಸಿದ್ದಾರೆ.

    ಮಾರುಕಟ್ಟೆಯಲ್ಲಿ ಪ್ರತಿ ಕೆಜಿಗೆ 10 ರೂ.ನಂತೆ ಮಾರಾಟವಾಗುವ ಟೊಮ್ಯಾಟೊವನ್ನು ರೈತರಿಂದ ಒಂದು ಬಾಕ್ಸ್‌ಗೆ ಕೇವಲ 50 ರೂ. ನೀಡಿ ಪಡೆಯಲಾಗುತ್ತಿದೆ. ಒಂದು ಎಕರೆಯಲ್ಲಿ ಟೊಮ್ಯಾಟೊ ಬೆಳೆಯಲು 10 ರಿಂದ 15 ಸಾವಿರ ರೂ. ಖರ್ಚಾಗುತ್ತದೆ. ಹೀಗಾಗಿ ಕಡಿಮೆ ದರಕ್ಕೆ ಫಸಲು ಮಾರುವ ಬದಲು ದನ-ಕುರಿಗಳಿಗೆ ಆಹಾರವಾದರೂ ಆಗಲಿ ಎಂದು ಮೇಯಲು ಬಿಟ್ಟಿದ್ದಾರೆ.

    ಹೂವಿನಹಡಗಲಿ ತಾಲೂಕಿನಲ್ಲಿ ಮುಂಗಾರು ಮತ್ತು ಹಿಂಗಾರು ಹಂಗಾಮಿನಲ್ಲಿ ಬೆಳೆದ ಟೊಮ್ಯಾಟೊಗೆ ಸೂಕ್ತ ಬೆಲೆ ಸಿಕ್ಕಿಲ್ಲ. ಮೇ ನಂತರ ದರ ಹೆಚ್ಚುವ ಸಾಧ್ಯತೆ ಇದೆ. ಸತತವಾಗಿ ಬೆಲೆ ಕುಸಿತದಿಂದ ರೈತರು ಸಂಕಷ್ಟದಲ್ಲಿದ್ದಾರೆ.
    | ಚಂದ್ರಕುಮಾರ್, ತಾಂತ್ರಿಕ ಸಹಾಯಕ ಅಧಿಕಾರಿ, ತೋಟಗಾರಿಕೆ ಇಲಾಖೆ ಹೂವಿನಹಡಗಲಿ

    ಈ ಬಾರಿ ನಾನು ಒಂದೂವರೆ ಎಕರೆಯಲ್ಲಿ ಟೊಮ್ಯಾಟೊ ಬೆಳೆದಿದ್ದೆ. ಸೂಕ್ತ ಬೆಲೆ ಸಿಗದ ಕಾರಣ ಹಣ್ಣನ್ನು ಜಮೀನಿನಲ್ಲೇ ಕೊಳೆಯಲು ಬಿಟ್ಟಿದ್ದೇನೆ.
    | ಬಸವರಾಜ್, ಹೂವಿನಹಡಗಲಿ ರೈತ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts