More

    ವಾಹನಗಳಿಗೆ ಟೋಲ್ ದರ ಬಿಸಿ, 24 ದಿನ ಬಳಿಕ ಪ್ಲಾಜಾಗಳ ಕಾರ್ಯಾಚರಣೆ ಆರಂಭ

    ಪಡುಬಿದ್ರಿ/ಸಾಸ್ತಾನ: ಲೌಕ್‌ಡೌನ್ ಹಿನ್ನೆಲೆಯಲ್ಲಿ 24 ದಿನಗಳಿಂದ ಸ್ಥಗಿತಗೊಂಡಿದ್ದ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಐದು ಟೋಲ್ ಪ್ಲಾಜಾಗಳಲ್ಲಿ ದರ ಪರಿಷ್ಕರಣೆಯೊಂದಿಗೆ ಸುಂಕ ಸಂಗ್ರಹ ಸೋಮವಾರ ಆರಂಭಗೊಂಡಿದೆ.
    ಟೋಲ್ ದರ ಹೆಚ್ಚಳ ಆದೇಶ ಲಾಕ್‌ಡೌನ್ ಅವಧಿಯಲ್ಲಿ ಆಗಿತ್ತು. ಈಗ ಸಂಗ್ರಹ ಆರಂಭವಾಗುವುದರೊಂದಿಗೆ ವಾಹನಗಳಿಗೆ ಬಿಸಿ ತಟ್ಟಿದ್ದು, ಸಾರ್ವಜನಿಕರಿಗೆ ನಿಧಾನವಾಗಿ ಅನುಭವಕ್ಕೆ ಬರಲಿದೆ. ಮೊದಲ ದಿನ ವಾಹನಗಳ ಸಂಖ್ಯೆ ಕಡಿಮೆ ಇದ್ದು, ಎಲ್ಲೂ ದರ ಪರಿಷ್ಕರಣೆ ಬಗ್ಗೆ ಗೊಂದಲಗಳು ನಡೆದಿಲ್ಲ.

    ನವಯುಗದ ತಲಪಾಡಿ, ಹೆಜಮಾಡಿ ಮತ್ತು ಸಾಸ್ತಾನ ಟೋಲ್‌ಗೇಟ್‌ಗಳಲ್ಲಿ 6 ಲಕ್ಷ ರೂ. ಸಂಗ್ರಹವಾಗಿದೆ. ಲಾಕ್‌ಡೌನ್‌ಗಿಂತ ಮೊದಲು ಪ್ರತಿ ಪ್ಲಾಜಾದಲ್ಲಿ ದಿನವಹಿ 25 ಲಕ್ಷ ರೂ. ಸುಂಕ ಸಂಗ್ರಹವಾಗುತ್ತಿತ್ತು. ಸೋಮವಾರ ಹೆಜಮಾಡಿಯಲ್ಲಿ ಹೆಚ್ಚಿನ ಸುಂಕ ಸಂಗ್ರಹವಾಗಿದ್ದು, 3 ಪ್ಲಾಜಾಗಳಲ್ಲಿ ಶೇ.80 ಫಾಸ್ಟ್ಯಾಗ್ ಮೂಲಕ ಪಾವತಿಯಾಗಿದೆ. ಸರಕು ಸಾಗಣೆ ವಾಹನಗಳ ಸಂಚಾರವೇ ಹೆಚ್ಚಾಗಿತ್ತು ಎಂದು ಸಿಬ್ಬಂದಿ ತಿಳಿಸಿದ್ದಾರೆ.

    ತಲಪಾಡಿ ಟೋಲ್‌ನಲ್ಲಿ ಕೇರಳದಿಂದ ಸರಕು ಸಾಗಣೆ ವಾಹನ ಹೊರತು ಇತರ ವಾಹನಗಳ ಸಂಚಾರ ಸ್ಥಗಿತಗೊಂಡಿದೆ. ಜಿಲ್ಲಾ ಗಡಿ ಸೀಲ್‌ಡೌನ್‌ನಿಂದ ತಲಪಾಡಿ ಹಾಗೂ ಹೆಜಮಾಡಿಯಲ್ಲಿ ವಾಹನಗಳ ತಪಾಸಣಾ ಕೇಂದ್ರವೂ ಟೋಲ್ ಸಮೀಪದಲ್ಲಿಯೇ ಇರುವುದರಿಂದ ವಾಹನಗಳ ಒತ್ತಡಕ್ಕೆ ಅವಕಾಶವಿಲ್ಲ.

    ಸಾಸ್ತಾನದಲ್ಲಿ ವಾಹನ ಸಾಲು: ಸಾಸ್ತಾನ ಟೋಲ್‌ಗೇಟ್‌ನಲ್ಲಿ ಮಧ್ಯಾಹ್ನ ವಾಹನಗಳ ಸರತಿ ಸಾಲು ಅರ್ಧ ಕಿ.ಮೀ.ವರೆಗೆ ಕಂಡುಬಂತು. ಎರಡೂ ದಿಕ್ಕಿನಲ್ಲಿ ಕೋಟ ಪೊಲೀಸರ ಚೆಕ್ಕಿಂಗ್ ನಡುವೆ ಟೋಲ್ ವಸೂಲಾತಿ ಪ್ರಾರಂಭಗೊಂಡಿತು. ವಾಹನಗಳ ದಟ್ಟಣೆ ನಿಯಂತ್ರಿಸಲು ಪೊಲೀಸರು ಸಾಕಷ್ಟು ಶ್ರಮಿಸಬೇಕಾಯಿತು.
    ಸುರತ್ಕಲ್‌ನ ಎನ್‌ಐಟಿಕೆ ಮತ್ತು ಬಂಟ್ವಾಳದ ಬ್ರಹ್ಮರಕೂಟ್ಲುವಿನಲ್ಲೂ ಸುಂಕ ಸಂಗ್ರಹ ಆರಂಭಗೊಂಡಿದೆ. ಎನ್‌ಐಟಿಕೆಯಲ್ಲಿ ಪ್ರತಿದಿನ 10 ಲಕ್ಷ ರೂ. ಆಸುಪಾಸಿನಲ್ಲಿದ್ದ ಸಂಗ್ರಹ ಸೋಮವಾರ ಒಂದು ಲಕ್ಷವನ್ನೂ ಮೀರಿಲ್ಲ.

    ಕರೊನಾ ನಿಗ್ರಹ ವಾಹನಗಳಿಗೂ ಸುಂಕ: ಕೊವಿಡ್ 19 ನಿಗ್ರಹ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವ ವಾಹನಗಳಿಗೂ ಶುಲ್ಕದಿಂದ ವಿನಾಯಿತಿ ನೀಡಲು ಸಾಸ್ತಾನ ಟೋಲ್‌ಗೇಟ್ ಸಿಬ್ಬಂದಿ ನಿರಾಕರಿಸಿದ್ದಾರೆ. ಕೋಟ ಪಿಡಿಒ, ಕೊವಿಡ್ ಅಧಿಕಾರಿ ಸುರೇಶ್ ಅವರಿದ್ದ ವಾಹನ ಅಡ್ಡಗಟ್ಟಿ ಸುಮಾರು ಅರ್ಧ ತಾಸು ಸರತಿ ಸಾಲಿನಲ್ಲಿ ನಿಲ್ಲಿಸಿ 45 ರೂ. ಶುಲ್ಕ ತೆತ್ತ ಬಳಿಕವೇ ಬಿಟ್ಟಿದ್ದಾರೆ. ಇದರಿಂದ ಸರ್ಕಾರಿ ಕಿಟ್ ವಿತರಿಸುವ ಕಾರ್ಯಕ್ರಮ ವಿಳಂಬಗೊಂಡಿತು. ಟೋಲ್‌ಪ್ಲಾಜಾ ಸಿಬ್ಬಂದಿ ಉಡಾಫೆಯಿಂದ ವರ್ತಿಸಿ ಹಣ ವಸೂಲಿ ಮಾಡಿದ್ದಾರೆ. ಸರ್ಕಾರಿ ವಾಹನಗಳಿಗೆ ರಿಯಾಯಿತಿ ಸಿಗಬೇಕು. ಇಂಥ ಸಂದರ್ಭದಲ್ಲಿ ಟೋಲ್‌ಗೇಟ್ ಸಿಬ್ಬಂದಿ ಈ ರೀತಿ ಮಾಡುವುದು ಸಮಂಜಸವಲ್ಲ ಎಂದು ಪಿಡಿಒ ಸುರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ. ನಮಗೆ ಮೂರು ಗೇಟ್ ತೆರೆಯಲು ಅವಕಾಶವಿದ್ದು, ಕರೊನಾ ಪೊಲೀಸ್ ಚೆಕ್ಕಿಂಗ್ ಇದ್ದ ಕಾರಣ ಒಂದೇ ಗೇಟ್‌ನಲ್ಲಿ ಬಿಡಲಾಗಿದೆ. ಇದರಿಂದ ವಿಳಂಬವಾಗಿದೆ ಎಂದು ಟೋಲ್‌ಗೇಟ್ ಸಿಬ್ಬಂದಿ ತಿಳಿಸಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts