More

    ಅಧಿಕಾರ ಸೂತ್ರ, ತ್ರಿಪಕ್ಷಗಳ ತಂತ್ರ: ಇಂದು ಫಲಿತಾಂಶ, ವಿವಿಧ ಲೆಕ್ಕಾಚಾರ; ಕುರುಡು ಅಂದಾಜಿನಲ್ಲಿ ನೇತಾರರ ನಡೆ

    ಬೆಂಗಳೂರು: ವಿದ್ಯುನ್ಮಾನ ಮತಯಂತ್ರದಲ್ಲಿ ಜನತಾ ಜನಾರ್ದನರು ಬರೆದಿಟ್ಟಿರುವ ರಾಜ್ಯ ವಿಧಾನಸಭಾ ಚುನಾವಣೆಯ ತೀರ್ಪು ಶನಿವಾರ ಪ್ರಕಟವಾಗಲಿದೆ. ಅದಕ್ಕೂ ಮುನ್ನವೇ ಸಂಭಾವ್ಯ ಅಧಿಕಾರ ಸೂತ್ರ ಹಿಡಿಯಲು ಪ್ರಮುಖ ತ್ರಿಪಕ್ಷಗಳು ತೆರೆಮರೆ ತಂತ್ರ ರೂಪಿಸುವ ಕಾರ್ಯದಲ್ಲಿ ಮಗ್ನವಾಗಿವೆ.

    ‘ಭವಿಷ್ಯ ವಾಣಿ’ಗಳು ಪ್ರತಿಪಕ್ಷ ಕಾಂಗ್ರೆಸ್​ನಲ್ಲಿ ತುಸು ಹೆಚ್ಚು ಉಮೇದಿ ತುಂಬಿವೆ. ಆಡಳಿತ ‘ಕೈ’ವಶವಾಗುವ ಉತ್ಸಾಹದಲ್ಲಿ ಭೂಮಿಕೆ ಸಜ್ಜುಗೊಳಿಸುತ್ತಿದ್ದಾರೆ. ಬದಲಾವಣೆ ಬಯಸಿದ ಜನರು ನಿಚ್ಚಳ ಆದೇಶ ನೀಡಿದ್ದಾರೆ ಎಂದು ಕಾಂಗ್ರೆಸ್ ನಾಯಕರು ಮೇಲ್ನೋಟಕ್ಕೆ ಹೇಳಿಕೊಳ್ಳುತ್ತಿದ್ದು, ಆಂತರಿಕವಾಗಿ ‘ರಕ್ಷಣಾತ್ಮಕ’ ದಾಳಗಳನ್ನು ಉರುಳಿಸುತ್ತಿದ್ದಾರೆ. ಗೌಪ್ಯತೆ ಕಾಯ್ದುಕೊಳ್ಳುವಲ್ಲಿ ಮತದಾರ ಪ್ರಭುವಿಗಿಂತ ಆಡಳಿತರೂಢ ಬಿಜೆಪಿ ಒಂದು ಹೆಜ್ಜೆ ಮುಂದಿರುವಂತಿದ್ದು, ಹೊರಗಿನವರಿಗೆ ಸಣ್ಣ ಸುಳಿವೂ ಸಿಗದ ರೀತಿಯಲ್ಲಿ ಹೆಜ್ಜೆಯಿಟ್ಟಿದೆ. ಈ ಬಾರಿಯೂ ನಾವೇ ‘ಕಿಂಗ್ ಮೇಕರ್’ ಎಂದು ಜೆಡಿಎಸ್ ಭಾವಿಸಿದೆ. ಭೂತ, ವರ್ತಮಾನ ಮತ್ತು ಭವಿಷ್ಯತ್ತಿನ ಆಯಾಮಗಳಲ್ಲಿ ಚಿಂತನಾಮಗ್ನವಾಗಿದೆ.

    ವಿವಿಧ ಲೆಕ್ಕಾಚಾರ: ರಣಕಣದಲ್ಲಿ ಯಾವುದೇ ಅಲೆಯಿದ್ದಿಲ್ಲ, ವಿಷಯಾಧಾರಿತ ಗಂಭೀರ ಚರ್ಚೆಗಳಾಗಿಲ್ಲ. ಆದರೆ ಹಲವು ತಿರುವುಗಳು, ಹಠಾತ್ ಬೆಳವಣಿಗೆಗಳಿಂದ ಮತದಾರ ಗುಟ್ಟುಬಿಟ್ಟುಕೊಟ್ಟಿಲ್ಲ. ಸ್ಪರ್ಧಿಸಿದ ಅಭ್ಯರ್ಥಿಗಳು, ದುಡಿದ ಕಾರ್ಯಕರ್ತರು, ವಿವಿಧ ‘ನೆಟ್​ವರ್ಕ್’ಗಳ ಮಾಹಿತಿ ಅನ್ವಯ ಪಕ್ಷಗಳ ಪಡಸಾಲೆಯಲ್ಲಿ ವಿವಿಧ ಲೆಕ್ಕಾಚಾರಗಳು ಮುಂದುವರಿದಿವೆ. ಅಭ್ಯರ್ಥಿಗಳು ಮತ್ತು ಎರಡನೇ ಹಂತದ ಮುಖಂಡರ ಜತೆಗೆ ನಿಕಟ ಸಂಪರ್ಕ, ಸಂವಹನವನ್ನು ಮೂರೂ ಪಕ್ಷಗಳ ಹಿರಿಯ ನಾಯಕರು ಜಾರಿಯಲ್ಲಿಟ್ಟಿದ್ದಾರೆ. 50ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ ತುರುಸು, ಬಹುಕೋನ ಸ್ಪರ್ಧೆಯಿಂದಾಗಿ ನಿಖರ ಮಾಹಿತಿ ಪಡೆಯುವುದು ಎರಡೂ ರಾಷ್ಟ್ರೀಯ ಪಕ್ಷಗಳಿಗೆ ದುಸ್ತರವಾಗಿದೆ.

    ಕುರುಡು ಅಂದಾಜಿನ ನಡೆ: ಪಕ್ಷದ ನೀತಿ-ನಿರ್ಧಾರಗಳು, ಅಭ್ಯರ್ಥಿಗಳ ಆಯ್ಕೆ, ನಾಯಕರ ನಡೆ-ನುಡಿ, ಭರವಸೆಗಳು ಎಲ್ಲಕ್ಕಿಂತ ಮುಖ್ಯವಾಗಿ ಸ್ಥಳೀಯ ಕಾರಣಗಳು ತೀರ್ಪಿನಲ್ಲಿ ನಿರ್ಣಾಯಕ ಪಾತ್ರವಹಿಸಿವೆ. ಚುನಾವಣೆ ಪೂರ್ವ, ಮತದಾನೋತ್ತರ ಸಮೀಕ್ಷೆಗಳು ತಮ್ಮ ಪರವಾಗಿ ನುಡಿದ ಭವಿಷ್ಯದ ಬಗ್ಗೆ ಕೈ ನಾಯಕರಲ್ಲಿ ಆಂತರಿಕವಾಗಿ ನಂಬಿಕೆಯಿಲ್ಲ. ಅಧಿಕಾರದ ಕಾರ್ಯತಂತ್ರದ ಭಾಗವಾಗಿ ಸಕಾರಾತ್ಮಕ ಸಂದೇಶ ರವಾನೆ, ಕಾರ್ಯಕರ್ತರಲ್ಲಿ ಹೆಚ್ಚಿನ ಉತ್ಸಾಹ ತುಂಬುವುದಕ್ಕೆ ಪ್ರಕಟಿತ ಮಾಹಿತಿ ಬಳಸಿಕೊಳ್ಳುತ್ತಿದ್ದಾರೆ. ಬಿಜೆಪಿಯ ಎಲ್ಲ ಹಂತದ ನಾಯಕರು ಪೂರ್ವ, ನಂತರದ ಸಮೀಕ್ಷೆ ವರದಿಗಳನ್ನು ಸುತಾರಾಂ ಒಪ್ಪಿಲ್ಲ, ನಮ್ಮದೇ ಅಧಿಕಾರವೆಂಬ ವಿಶ್ವಾಸದ ನುಡಿಗಳನ್ನಾಡಿದ್ದಾರೆ. ಸ್ಥಾನ ಗಳಿಕೆಯಲ್ಲಿ ಸುಧಾರಣೆ ಕಾಣದಿದ್ದರೂ ನಿರ್ಣಾಯಕ ಸ್ಥಾನದಲ್ಲಿರುತ್ತೇವೆ ಎಂಬ ಸಂತೃಪ್ತಿಯು ದಳಪತಿಗಳ ಪಾಳೆಯದಲ್ಲಿ ಮನೆ ಮಾಡಿದೆ. ಸದ್ಯಕ್ಕೆ ಮೂರು ಪಕ್ಷಗಳ ನಾಯಕರು ‘ಕುರುಡು ಅಂದಾಜು’ ಆಧಾರದಲ್ಲಿ ಮುಂದಿನ ನಡೆಯ ಬಗ್ಗೆ ರ್ಚಚಿಸುತ್ತಿದ್ದು, ಫಲಿತಾಂಶ ಹೊರಬಿದ್ದ ನಂತರ ಈ ಕಾರ್ಯಸ್ವರೂಪ ಬದಲಾಗುವುದು ನಿಶ್ಚಿತ.

    ಪಕ್ಷೇತರರಿಗೆ ಗಾಳ: ಅಖಾಡದಲ್ಲಿ ಪ್ರಬಲ ಪೈಪೋಟಿ ನೀಡಿದ, ಗೆಲ್ಲುವ ಸಂಭವವಿರುವ ಅಭ್ಯರ್ಥಿಗಳಿಗೆ ಗಾಳ ಹಾಕುವ ವಿಷಯದಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ಮಧ್ಯೆ ಪೈಪೋಟಿ ಏರ್ಪಡುವ ಲಕ್ಷಣಗಳಿವೆ. ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕೆಲವರಿಗೆ ಸ್ವತಃ ಕರೆ ಮಾಡಿ ಉಭಯಕುಶಲೋಪರಿ ಕೇಳಿದ್ದು, ಆ ಮೂಲಕ ನಮ್ಮೊಂದಿಗಿರಿ ಎಂಬ ಪರೋಕ್ಷ ಸಂದೇಶ ರವಾನಿಸಿದ್ದಾರೆ.

    ಮತ್ತೊಂದೆಡೆ, ಬಿಜೆಪಿ ಕೆಲವು ನಾಯಕರು ಗೆಲುವಿನ ಸಂಭಾವ್ಯತೆ ಹೆಚ್ಚಿರುವ ಸ್ವತಂತ್ರ ಹುರಿಯಾಳುಗಳ ಜತೆ ಸಂಪರ್ಕದಲ್ಲಿದ್ದು, ವರಿಷ್ಠರ ಸೂಚನೆಯಂತೆ ಈ ಪ್ರಯತ್ನವೇ ಎನ್ನುವುದು ಖಚಿತವಾಗಿಲ್ಲ. ದಳಪತಿಗಳು ಈ ವಿಷಯದಲ್ಲಿ ನಿಶ್ಚಿಂತರಾಗೇನೂ ಇಲ್ಲ. ಜಯದ ಲಕ್ಷಣಗಳಿರುವ ಸ್ವಪಕ್ಷದವರನ್ನು ಜತನವಾಗಿಟ್ಟುಕೊಳ್ಳುವ ಕಸರತ್ತು ನಡೆಸಿದ್ದಾರೆ.

    ವರಿಷ್ಠರಿಗೆ ಕರೆ ಮಾಡಿ ರಾಜ್ಯದ ವಸ್ತುಸ್ಥಿತಿ ವಿವರಿಸಿದ್ದು, ಅವರೂ ವಿಶ್ವಾಸದಲ್ಲಿದ್ದಾರೆ. ನಾನು ಮೊದಲಿನಿಂದ ಹೇಳಿದಂತೆ ಪಕ್ಷಕ್ಕೆ ಸ್ಪಷ್ಟ ಬಹುಮತ ಲಭಿಸಲಿದೆ. ಮ್ಯಾಜಿಕ್ ನಂಬರ್ ತಲುಪಲಿದ್ದು, ನಮ್ಮ ಮುಂದೆ ಮೈತ್ರಿಯ ಪ್ರಶ್ನೆಯಿಲ್ಲ.

    | ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ.

    ಕಾಂಗ್ರೆಸ್ ಪರವಾಗಿ ದೊಡ್ಡ ಅಲೆಯಿದೆ. ಎಕ್ಸಿಟ್ ಪೋಲ್ ಸಮಿಕ್ಷೆಗಿಂತ ಕಾಂಗ್ರೆಸ್ ಹೆಚ್ಚಿನ ಸ್ಥಾನ ಪಡೆಯಲಿದೆ ಹೊರತು ಕಡಿಮೆಯಾಗಲ್ಲ. ಡಬಲ್ ಇಂಜಿನ್ ಸರ್ಕಾರದ ದುರಾಡಳಿತ ಗಮನಿಸಿರುವ ಜನರು ತಮ್ಮ ನಿರ್ಧಾರ ಬದಲಿಸಿಲ್ಲ.

    | ಡಿ.ಕೆ. ಶಿವಕುಮಾರ್, ಕೆಪಿಸಿಸಿ ಅಧ್ಯಕ್ಷ

    ಅತಂತ್ರ ಸರ್ಕಾರ ಬಂದರೆ ನಾವು ಕುಳಿತು ರ್ಚಚಿಸುತ್ತೇವೆ. ಸಮ್ಮಿಶ್ರ ಸರ್ಕಾರ ರಚನೆ ಬಗ್ಗೆ ಪಕ್ಷದ ವರಿಷ್ಠರು ತೀರ್ವನಿಸುತ್ತಾರೆ. ಅತಂತ್ರ ಪರಿಸ್ಥಿತಿ ಸೃಷ್ಟಿಯಾದರೆ ಮತ್ತೆ ಚುನಾವಣೆಗೆ ಹೋಗಬೇಕು ಎನ್ನುವುದು ನನ್ನ ಅಭಿಪ್ರಾಯ.

    | ಸಿ.ಎಂ. ಇಬ್ರಾಹಿಂ, ಜೆಡಿಎಸ್ ರಾಜ್ಯಾಧ್ಯಕ್ಷ

    ಅಧಿಕಾರ ಸೂತ್ರ, ತ್ರಿಪಕ್ಷಗಳ ತಂತ್ರ: ಇಂದು ಫಲಿತಾಂಶ, ವಿವಿಧ ಲೆಕ್ಕಾಚಾರ; ಕುರುಡು ಅಂದಾಜಿನಲ್ಲಿ ನೇತಾರರ ನಡೆಮೈತ್ರಿಗೆ ಪರ-ವಿರೋಧ

    ಕಾಂಗ್ರೆಸ್ ಪಕ್ಷ ಅಗತ್ಯವಿರುವ ಬಲ ಪಡೆದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾದರೆ ತಮ್ಮ ಪಕ್ಷ ಬೆಂಬಲಿಸಲಿದೆ ಎಂದು ಚುನಾವಣೆ ಪೂರ್ವದಲ್ಲಿ ಕಲ್ಯಾಣ ರಾಜ್ಯ ಪ್ರಗತಿಪಕ್ಷದ ಸಂಸ್ಥಾಪಕ, ಮಾಜಿ ಮಂತ್ರಿ ಜನಾರ್ದನ ರೆಡ್ಡಿ ಹೇಳಿಕೆ ನೀಡಿದ್ದರು. ಮತದಾನದ ದಿನವೂ ಹೇಳಿಕೆಯನ್ನು ಪುನರುಚ್ಚರಿಸಿದ್ದು, ಈ ಬಗ್ಗೆ ಕಾಂಗ್ರೆಸ್ ನಾಯಕರು ಮೌನಕ್ಕೆ ಶರಣಾಗಿದ್ದು, ಕಾದು ನೋಡುವ ತಂತ್ರ ಅನುಸರಿಸುವ ಸಾಧ್ಯತೆಗಳಿವೆ. ಬೆಂಗಳೂರಿನಿಂದ ಬಳ್ಳಾರಿವರೆಗೆ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ಪಾದಯಾತ್ರೆ ಫಲವಾಗಿ 2013ರಲ್ಲಿ ಕಾಂಗ್ರೆಸ್ ಅಧಿಕಾರದ ಗದ್ದುಗೆ ಏರಿತೆಂಬುದು ಪಕ್ಷ ಮರೆತಿಲ್ಲ ಎಂದು ಮೂಲಗಳು ಹೇಳುತ್ತವೆ. ಮತ್ತೊಂದೆಡೆ, ಜೆಡಿಎಸ್ ಜತೆಗೆ ಮೈತ್ರಿ ಮಾಡಿಕೊಳ್ಳುವ ವಿಚಾರದಲ್ಲಿ ಕಾಂಗ್ರೆಸ್​ನಲ್ಲಿ ಅಪಸ್ವರ ಕೇಳಿಬರುತ್ತಿದ್ದು, ಮಾಜಿ ಶಾಸಕ ಚಲುವರಾಯಸ್ವಾಮಿ ಬಹಿರಂಗವಾಗಿ ಆಕ್ಷೇಪವೆತ್ತಿದ್ದಾರೆ.

    ಕುತೂಹಲಕ್ಕಿಂದು ತೆರೆ, ಮಧ್ಯಾಹ್ನದೊಳಗೆ ಸ್ಪಷ್ಟ ಚಿತ್ರಣ ಲಭ್ಯ

    ಬೆಂಗಳೂರು: ದೇಶವೇ ಕಾತುರದಿಂದ ಕಾಯುತ್ತಿರುವ ರಾಜ್ಯ ವಿಧಾನಸಭೆ ಚುನಾವಣೆ ಫಲಿತಾಂಶ ಶನಿವಾರ ಪ್ರಕಟವಾಗಲಿದ್ದು, ಘಟಾನುಘಟಿಗಳ ಭವಿಷ್ಯ ಹೊರಬೀಳಲಿದೆ. ಮುಂದಿನ ಐದು ವರ್ಷ ರಾಜ್ಯದ ಚುಕ್ಕಾಣಿ ಯಾರು ಹಿಡಿಯಲಿದ್ದಾರೆ ಎಂಬ ಕುತೂಹಲಕ್ಕೂ ತೆರೆ ಬೀಳಲಿದೆ.

    ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯ, ಜಗದೀಶ್ ಶೆಟ್ಟರ್, ಎಚ್.ಡಿ. ಕುಮಾರಸ್ವಾಮಿ ಸೇರಿದಂತೆ 2,615 ಅಭ್ಯರ್ಥಿಗಳು ಕಣದಲ್ಲಿದ್ದು, ಗೆದ್ದು ವಿಧಾನಸೌಧದ ಮೆಟ್ಟಿಲು ತುಳಿಯಲಿರುವ 224 ಶಾಸಕರು ಯಾರು ಎಂಬುದು ತಿಳಿದು ಬರಲಿದೆ. ಬೆಳಗ್ಗೆ 8 ರಿಂದ ಮತ ಎಣಿಕೆ ಆರಂಭವಾಗಲಿದ್ದು, ಆಯಾ ಜಿಲ್ಲಾ ಚುನಾವಣಾಧಿಕಾರಿಗಳು ಸೂಕ್ತ ವ್ಯವಸ್ಥೆ ಮಾಡಿದ್ದಾರೆ. ಮತ ಎಣಿಕೆ ಕೇಂದ್ರದ 100 ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ವ್ಯಾಪಕ ಬಂದೋಬಸ್ತ್ ಏರ್ಪಡಿಸಲಾಗಿದೆ. 5ಕ್ಕೂ ಹೆಚ್ಚು ಜನ ಗುಂಪು ಸೇರುವುದನ್ನು ನಿಷೇಧಿಸಲಾಗಿದೆ.

    ಪ್ರತಿ ಟೇಬಲ್​ಗೂ ವಿಡಿಯೋ ಕ್ಯಾಮರಾ ಅಳವಡಿಸಿ ಎಣಿಕೆ ಪ್ರಕ್ರಿಯೆಯನ್ನು ಸಂಪೂರ್ಣ ರೆಕಾರ್ಡ್ ಮಾಡಲಾಗುತ್ತದೆ. ಮೊದಲು ಅಂಚೆ ಮತಗಳ ಎಣಿಕೆ ನಡೆಯಲಿದೆ. ಬಳಿಕ ಇವಿಎಂಗಳ ಮತ ಎಣಿಕೆ ಪ್ರಾರಂಭವಾಗಿ ಬಹುತೇಕ ಮಧ್ಯಾಹ್ನ 2 ಗಂಟೆಯೊಳಗೆ ಸ್ಪಷ್ಟ ಚಿತ್ರಣ ಸಿಗಲಿದೆ.

    ಮದ್ಯ ಮಾರಾಟ ನಿಷೇಧ: ಮತ ಎಣಿಕೆ ಕಾರಣ ರಾಜ್ಯಾದ್ಯಂತ ಶನಿವಾರ ಬೆಳಗ್ಗೆ 6 ರಿಂದ ರಾತ್ರಿ 12 ವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಬಾರ್ ಅಂಡ್ ರೆಸ್ಟೋರೆಂಟ್​ಗಳಲ್ಲಿ ಊಟಕ್ಕೆ ಮಾತ್ರ ಅವಕಾಶವಿದೆ.

    73.19 ದಾಖಲೆ ಮತದಾನ: ಈ ಬಾರಿ ದಾಖಲೆಯ ಶೇ.73.19 ಮತದಾನವಾಗಿರುವುದರಿಂದ ರಾಜಕೀಯ ಪಕ್ಷಗಳಲ್ಲಿ ನಾನಾ ರೀತಿಯ ಲೆಕ್ಕಾಚಾರಕ್ಕೆ ಇಂಬು ಮಾಡಿಕೊಟ್ಟಿದೆ. ಹೆಚ್ಚಿನ ಪ್ರಮಾಣದಲ್ಲಿ ಮತದಾನ ಆಗಿರುವುದು ನಮಗೆ ಲಾಭ ತಂದುಕೊಡಲಿದೆ ಎಂದು ಬಿಜೆಪಿ ನಾಯಕರ ವಾದ. ಆದರೆ, ಅತಿ ಕಡಿಮೆ ಮತದಾನವಾದಾಗಲೂ ಬಿಜೆಪಿ ಹೆಚ್ಚು ಸ್ಥಾನ ಗೆದ್ದಿರುವ ಉದಾಹರಣೆಗಳಿವೆ. ಅಂತೆಯೇ, ಅತೀ ಹೆಚ್ಚು ಮತದಾನವಾದಾಗಲೂ ಬಿಜೆಪಿಗೆ ಲಾಭವಾಗದಿರುವ ದಾಖಲೆಗಳೂ ನಮ್ಮ ಮುಂದಿವೆ. ಹೀಗಾಗಿ ಈ ಬಾರಿಯ ಫಲಿತಾಂಶ ಊಹೆಗೆ ನಿಲುಕದಂತಾಗಿದೆ.

    ಎಲ್ಲೆಲ್ಲಿ ಮತ ಎಣಿಕೆ?: ರಾಣಿ ಪಾರ್ವತಿ ದೇವಿ ಕಾಲೇಜು ಬೆಳಗಾವಿ, ತೋಟಗಾರಿಕೆ ವಿಶ್ವವಿದ್ಯಾಲಯ, ಬಾಗಲಕೋಟೆ, ಸೈನಿಕ ಶಾಲೆ, ವಿಜಯಪುರ, ಸರ್ಕಾರಿ ಪಿಯು ಕಾಲೇಜು ಯಾದಗಿರಿ, ಕಲಬುರಗಿ ವಿಶ್ವವಿದ್ಯಾಲಯ, ಕಲಬುರಗಿ, ಬಿ.ವಿ.ಬಿ. ಕಾಲೇಜು ಬೀದರ್, ಎಸ್​ಆರ್​ಪಿಎಸ್ ಪಿಯು ಕಾಲೇಜು ರಾಯಚೂರು, ಶ್ರೀ ಗವಿಸಿದ್ದೇಶ್ವರ ಕಾಲೇಜು ಕೊಪ್ಪಳ, ಶ್ರೀ ಜಗದದ್ಗುರು ತೋಂಟದಾರ್ಯ ಕಲೆ, ವಿಜ್ಞಾನ, ವಾಣಿಜ್ಯ ಕಾಲೇಜು ಗದಗ, ಕೃಷಿ ವಿಶ್ವವಿದ್ಯಾಲಯ ಧಾರವಾಡ, ಡಾ.ಎ.ವಿ. ಬಾಳಿಗ ಕಲೆ, ವಿಜ್ಞಾನ ಕಾಲೇಜು ಕುಮಟಾ(ಉತ್ತರ ಕನ್ನಡ), ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾವೇರಿ, ಪ್ರೌಢ ದೇವರಾಯ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಹೊಸಪೇಟೆ(ವಿಜಯನಗರ ಜಿಲ್ಲೆ), ರಾವ್ ಬಹುದ್ದೂರ್ ವೈ. ಮಹಾಬಲೇಶ್ವರಪ್ಪ ಎಂಜಿನಿಯರಿಂಗ್ ಕಾಲೇಜು ಬಳ್ಳಾರಿ, ಸರ್ಕಾರಿ ವಿಜ್ಞಾನ ಕಾಲೇಜು ಚಿತ್ರದುರ್ಗ, ಶಿವಗಂಗೋತ್ರಿ ವಿಶ್ವವಿದ್ಯಾಲಯ ದಾವಣಗೆರೆ, ಸಹ್ಯಾದ್ರಿ ಕಲಾ ಕಾಲೇಜು ಶಿವಮೊಗ್ಗ, ಸೇಂಟ್ ಸೆಸಿಲೀಸ್ ಗ್ರೂಪ್ ಆಫ್ ಇನ್​ಸ್ಟಿಟ್ಯೂಟ್ಸ್ ಉಡುಪಿ, ಐಡಿಎಸ್​ಜಿ ಸರ್ಕಾರಿ ಕಾಲೇಜು ಚಿಕ್ಕಮಗಳೂರು, ತುಮಕೂರು ವಿಶ್ವವಿದ್ಯಾಲಯ ತುಮಕೂರು, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಚಿಕ್ಕಬಳ್ಳಾಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಕೋಲಾರ, ಬಿಎಂಎಸ್ ಮಹಿಳಾ ಕಾಲೇಜು ಬಸವನಗುಡಿ (ಬೆಂಗಳೂರು ಕೇಂದ್ರ), ಮೌಂಟ್ ಕಾರ್ವೆಲ್ ಪಿಯು ಕಾಲೇಜು(ಬಿಬಿಎಂಪಿ ಉತ್ತರ), ಎಸ್​ಎಸ್​ಎಂಆರ್​ವಿ ಪಿಯು ಕಾಲೇಜು ಜಯನಗರ (ಬೆಂಗಳೂರು ದಕ್ಷಿಣ), ಸೇಂಟ್ ಜೋಸೆಫ್ ಇಂಡಿಯನ್ ಹೈಸ್ಕೂಲ್ ಮತ್ತು ಕಾಂಪೋಜಿಟ್ ಪಿಯು ಕಾಲೇಜು(ಬೆಂಗಳೂರು ನಗರ), ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ರಾಮನಗರ, ಮಂಡ್ಯ ವಿಶ್ವವಿದ್ಯಾಲಯ ಮಂಡ್ಯ, ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಹಾಸನ, ನ್ಯಾಷನಲ್ ಇನ್​ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ ಸೂರತ್ಕಲ್(ದಕ್ಷಿಣ ಕನ್ನಡ), ಸೇಂಟ್ ಜೋಸೆಫ್ ಕಾನ್ವೆಂಟ್ ಕೊಡಗು, ಸರ್ಕಾರಿ ಮಹಾರಾಣಿ ಮಹಿಳಾ ವಾಣಿಜ್ಯ ಮತ್ತು ಮ್ಯಾನೇಜ್​ವೆುಂಟ್ ಕಾಲೇಜು ಮೈಸೂರು ಮತ್ತು ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಚಾಮರಾಜನಗರ ಗಳಲ್ಲಿ ಮತ ಎಣಿಕೆ ನಡೆಯಲಿದೆ.

    2,615 ಅಭ್ಯರ್ಥಿಗಳ ಭವಿಷ್ಯ ಬಹಿರಂಗ

    ಬಿಜೆಪಿ, ಕಾಂಗ್ರೆಸ್, ಜೆಡಿಎಸ್, ಎಎಪಿ, ಸಿಪಿಐಎಂ ಹಾಗೂ ಪಕ್ಷೇತರರು ಸೇರಿದಂತೆ 2,430 ಪುರುಷರು, 184 ಮಹಿಳೆಯರು, 1 ತೃತೀಯ ಲಿಂಗಿ ಒಟ್ಟು 2,615 ಅಭ್ಯರ್ಥಿಗಳ ಹಣೆಬರಹ ಶನಿವಾರ ಬಹಿರಂಗಗೊಳ್ಳಲಿದೆ. ಮತದಾನೋತ್ತರ ಸಮೀಕ್ಷೆಗಳು ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ತೀವ್ರ ಚರ್ಚೆಗೆ ಹುಟ್ಟು ಹಾಕಿದ್ದು, ಈ ಬಾರಿ ಸ್ವತಂತ್ರ ಸರ್ಕಾರವೋ? ಅತಂತ್ರವೋ ಎಂಬುದಕ್ಕೂ ಉತ್ತರ ಸಿಗಲಿದೆ. ರಾಜ್ಯದ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕಾರಣಕ್ಕೂ ಹೊಸ ಸಂದೇಶವನ್ನು ನೀಡಲಿದೆ ಎಂದು ರಾಜಕೀಯ ವಲಯದಲ್ಲಿ ವ್ಯಾಖ್ಯಾನಿಸಲಾಗುತ್ತಿದೆ.

    36 ಎಣಿಕೆ ಕೇಂದ್ರ: ಬೆಂಗಳೂರಿನ ನಾಲ್ಕು ಕೇಂದ್ರಗಳು ಸೇರಿ ರಾಜ್ಯದಲ್ಲಿ ಒಟ್ಟು 36 ಕಡೆಗಳಲ್ಲಿ ಮತ ಎಣಿಕೆ ನಡೆಯಲಿದೆ. 306 ಹಾಲ್ ಹಾಗೂ 4,256 ಟೇಬಲ್​ಗಳನ್ನು ಅಳವಡಿಸಲಾಗಿದೆ. ಈ ಕೇಂದ್ರಗಳಿಗೆ ಒಟ್ಟಾರೆ 224 ಆರ್​ಒಗಳು, 317 ಎಆರ್​ಒಗಳು, 4,256 ಸೂಪರ್ ವೈಸರ್ಸ್, 5,256 ಕೌಂಟಿಂಗ್ ಅಸಿಸ್ಟೆಂಟ್ಸ್, 4,256 ಸೂಕ್ಷ್ಮ ವೀಕ್ಷಕರು, 450 ಹೆಚ್ಚುವರಿ ಎಆರ್​ಒಗಳನ್ನು ನಿಯುಕ್ತಿ ಮಾಡಲಾಗಿದೆ.

    ಮತ ಚಲಾಯಿಸಿದ ಬೆನ್ನಿಗೇ ‘ಕರೆಂಟ್ ಶಾಕ್​’: ಏ. 1ರಿಂದಲೇ ಜಾರಿಗೆ ಬರುವಂತೆ ವಿದ್ಯುತ್ ದರ ಏರಿಕೆ!

    ಹನ್ನೊಂದರ ಈ ಹುಡುಗಿ ಐನ್​ಸ್ಟೀನ್​-ಸ್ಟೀಫನ್ ಹಾಕಿಂಗ್​ಗಿಂತಲೂ ಬುದ್ಧಿವಂತೆ!

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts