More

    ಇಂದು ಈದ್-ಮಿಲಾದ್|ಸಹಬಾಳ್ವೆಯ ಪವಿತ್ರ ಉತ್ಸವ…

    | ಇಮಾಮಹುಸೇನ್ ಗೂಡುನವರ

    ಇಸ್ಲಾಂ ಧರ್ಮದ ಕೊನೆಯ ಪ್ರವಾದಿ ಮುಹಮ್ಮದ್ ಪೈಗಂಬರ್ ಜನ್ಮದಿನ ಇಂದು. ಪ್ರತಿವರ್ಷ ಈ ದಿನದಂದು ಮುಸ್ಲಿಮರು ಸಂಭ್ರಮದಿಂದ ಈದ್- ಮಿಲಾದ್ ಆಚರಿಸುತ್ತಾರೆ. ಈ ಸಲ ಕರೊನಾ ವೈರಸ್ ಸೃಷ್ಟಿಸಿದ ಆತಂಕ ಹಬ್ಬದ ಸಂಭ್ರಮವನ್ನೇ ಕಸಿದಿದೆ. ಹಾಗಾಗಿ ಸರಳವಾಗಿ ಈದ್-ಮಿಲಾದ್ ಆಚರಣೆ ನಡೆಯಲಿದೆ.

    ಅದು 6ನೇ ಶತಮಾನ. ಆಗ, ಜನ್ಮ ತಳೆದ ಹೆಣ್ಣುಮಕ್ಕಳನ್ನು ಜೀವಂತವಾಗಿ ಹೂಳಲಾಗುತ್ತಿತ್ತು. ಎಲ್ಲ ರಂಗಗಳಲ್ಲಿ ಅಧರ್ಮ, ಅನ್ಯಾಯ ಎಲ್ಲೆ ಮೀರಿತ್ತು. ಪ್ರಬಲರ ಮುಂದೆ ದುರ್ಬಲ ವರ್ಗದ ಜನರು ಜೀವನ ನಡೆಸಲು ಹೆಣಗಾಡು ತ್ತಿದ್ದರು. ಮಹಿಳೆಯರ ಮೇಲಿನ ತಾರತಮ್ಯವೂ ಹೆಚ್ಚಿತ್ತು. ಇಂಥದ್ದೊಂದು ಕಾಲಘಟ್ಟದಲ್ಲಿ ನೊಂದವರು, ಶೋಷಿತರ ಪರವಾಗಿ ಗಟ್ಟಿಯಾಗಿ ದನಿ ಎತ್ತಿ ಹೋರಾಡಿದ ಪ್ರವಾದಿ ಮುಹಮ್ಮದ್ ಪೈಗಂಬರ್, ಹತ್ತಾರು ಕ್ರಾಂತಿಕಾರಿ ಬದಲಾವಣೆಗಳನ್ನೇ ತಂದು ಶೋಷಣೆಮುಕ್ತ ಸಮಾಜ ನಿರ್ವಿುಸಿದರು. ಹೆಜ್ಜೆ-ಹೆಜ್ಜೆಗೂ ಕಷ್ಟ ಎದುರಿಸುತ್ತ, ಕಣ್ಣೀರಲ್ಲೇ ಕೈತೊಳೆಯುತ್ತಿದ್ದ ಮಹಿಳೆಯರು ಸಂಭ್ರಮದ ಕ್ಷಣಗಳಿಗೆ ಸಾಕ್ಷಿಯಾಗುವ ಮತ್ತು ಸ್ವಾಭಿಮಾನದಿಂದ ಬದುಕುವ ವಾತಾವರಣ ನಿರ್ವಿುಸಿದರು. ಧಾರ್ವಿುಕ ಚಟುವಟಿಕೆಯಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಅವರ ವ್ಯಕ್ತಿತ್ವ ಇಡೀ ಮಾನವ ಕುಲಕ್ಕೆ ಆದರ್ಶಪ್ರಾಯದಂತಿತ್ತು.

    ಅವಮಾನದಿಂದ ಧೃತಿಗೆಡಲಿಲ್ಲ: ಮುಹಮ್ಮದ್ ಪೈಗಂಬರ್ ಬಾಲ್ಯದಲ್ಲೇ ಹೆತ್ತವರನ್ನು ಕಳೆದುಕೊಂಡರು. ಚಿಕ್ಕಪ್ಪನ ಆಶ್ರಯದಲ್ಲಿ ಬೆಳೆಯುತ್ತ, ಕುರಿ ಮೇಯಿಸುತ್ತ ಸಂಕಷ್ಟದ ದಿನಗಳನ್ನು ದೂಡುತ್ತಿದ್ದ ಅವರಿಗೆ ಬಾಲ್ಯದಲ್ಲೇ ಇಸ್ಲಾಂ ಧರ್ಮದ ತತ್ತ್ವಗಳ ಕುರಿತು ಅಪಾರವಾದ ಸೆಳೆತವಿತ್ತು. ಪ್ರೌಢಾವಸ್ಥೆ ತಲುಪಿದ್ದೇ ತಡ, ಇಸ್ಲಾಂ ಧರ್ಮ ಪ್ರಸಾರದ ಕಾಯಕದಲ್ಲಿ ತೊಡಗಿದರು. ಆಗ, ಹಲವರು ಮನಬಂದಂತೆ ಮಾತನಾಡಿ ಪೈಗಂಬರ್ ಮನ ನೋಯಿಸಿದರು. ಅವರ ಕಾರ್ಯಶೈಲಿ ಟೀಕಿಸಿ ಅವಮಾನಿಸಿದರು. ಆದರೆ, ಪೈಗಂಬರ್ ಮಾತ್ರ ಇದಕ್ಕೆ ಕಿವಿಗೊಡಲಿಲ್ಲ. ಇನ್ನಷ್ಟು ಆತ್ಮವಿಶ್ವಾಸದೊಂದಿಗೆ ತಮ್ಮ ಕೆಲಸ ಮುಂದುವರಿಸಿ, ಇಸ್ಲಾಂ ಧರ್ಮದ ಆಶಯಗಳನ್ನು ಜನರಿಗೆ ಮನವರಿಕೆ ಮಾಡಿಕೊಟ್ಟರು. ಅವರ ವ್ಯಕ್ತಿತ್ವಕ್ಕೆ ಬೆರಗಾದ ಸಾವಿರಾರು ಜನರು ಅನುಯಾಯಿಗಳಾದರು. ಅಲ್ಲಾಹ್​ನ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತಿದ್ದ ಪೈಗಂಬರ್, ವಿಶ್ವಾದ್ಯಂತ ಇಸ್ಲಾಂ ಧರ್ಮ ಪ್ರಸಾರ ಮಾಡಿದರು. ತಾವು ನಿತ್ಯ ಜನರಿಗೆ ನೀಡುತ್ತಿದ್ದ ಉಪದೇಶದಂತೆ ಮಾದರಿಯಾಗಿ ಬದುಕಿ, ಜನರ ಪ್ರೀತಿಗೆ ಪಾತ್ರರಾದರು. ಇಸ್ಲಾಂ ಧರ್ಮದ ಪವಿತ್ರ ಗ್ರಂಥ ‘ಕುರಾನ್’ ಅವರ ಕಾಲದಲ್ಲೇ ಅವತೀರ್ಣಗೊಂಡಿದೆ ಎಂಬುದು ಇನ್ನೊಂದು ವಿಶೇಷ.

    ಸರಳ ಜೀವನಶೈಲಿ: ಪ್ರವಾದಿ ಮುಹಮ್ಮದ್ ಪೈಗಂಬರ್ ಸರಳ ಜೀವನಶೈಲಿ ರೂಢಿಸಿಕೊಂಡಿದ್ದರು. ಕೆಲವೊಮ್ಮೆ ಎರಡ್ಮೂರು ದಿನಗಳವರೆಗೆ ಮನೆಯಲ್ಲಿ ಊಟಕ್ಕೆ ಆಹಾರ ಪದಾರ್ಥ ಇಲ್ಲದಿದ್ದಾಗ, ‘ಅಲ್ಲಾಹ್’ನ ಹೆಸರಿನಲ್ಲಿ ಖರ್ಜೂರ ವನ್ನಷ್ಟೇ ಸೇವಿಸಿ ದಿನ ದೂಡುತ್ತಿದ್ದರು. ಬಡವರ ಕಲ್ಯಾಣಕ್ಕಾಗಿ ದಣಿವರಿಯದೆ ದುಡಿಯುತ್ತಿದ್ದರು. ‘ಆರ್ಥಿಕವಾಗಿ ಸಶಕ್ತರಾಗಿರುವವರು ಬಡವರಿಗೆ ಸಹಾಯಹಸ್ತ ಚಾಚಬೇಕು. ಬಡವರ ಹಸಿವು ನೀಗಿಸಬೇಕು. ಆಗ, ನಿಮ್ಮ ಸಂಪತ್ತು ಶುದ್ಧವಾಗುತ್ತದೆ. ಮನಸ್ಸಿಗೂ ಸಂತೃಪ್ತಭಾವ ದೊರೆಯುತ್ತದೆ’ ಎಂದು ಸಾರಿದರು. ‘ಕೆಟ್ಟ ವಿಚಾರಗಳಿಂದ ದೂರವಿರಬೇಕು. ಎಂದೂ ಮದ್ಯ ಸೇವಿಸಬಾರದು. ಗಲಾಟೆ-ಗದ್ದಲಗಳಿಂದ ಅಂತರ ಕಾಯ್ದುಕೊಳ್ಳಬೇಕು’ ಎಂದು ಜನರಲ್ಲಿ ತಿಳಿವಳಿಕೆ ಮೂಡಿಸಿದರು. ಅನ್ಯಾಯದ ಹಾದಿಯಲ್ಲಿ ಸಾಗುತ್ತಿದ್ದವರನ್ನು ಸನ್ಮಾರ್ಗದತ್ತ ಕರೆತಂದು, ಮನಃ ಪರಿವರ್ತನೆ ಮಾಡಿದ ಹೆಗ್ಗಳಿಕೆ ಅವರದ್ದು.

    ಅಲ್ಲದೆ, ಕಾರ್ವಿುಕರ ಮೇಲೆ ನಡೆಯುತ್ತಿದ್ದ ಶೋಷಣೆಗೂ ಅವರು ಕಡಿವಾಣ ಹಾಕಿದರು. ಕಾರ್ವಿುಕರು- ಮಾಲೀಕರ ಮಧ್ಯೆ ಸೌಹಾರ್ದ ಸಂಬಂಧ ಬೆಸೆಯುವಲ್ಲಿ ಯಶ ಕಂಡರು. ಮಹಿಳೆಯರ ಸಮಾನತೆಗಾಗಿ ಹೋರಾಡುವ ಜತೆಗೆ, ಅನಾಥ ಮಕ್ಕಳು, ವಿಧವೆಯರ ನೆರವಿಗೆ ನಿಂತರು. ಸಾಲದೆಂಬಂತೆ 25ನೇ ವಯಸ್ಸಿನಲ್ಲೇ ಸ್ವತಃ ತಾವೇ 40 ವರ್ಷದ ವಿಧವೆಯೊಂದಿಗೆ ವಿವಾಹ ವಾದರು. ‘ವಿಧವೆಯೊಂದಿಗೆ ವಿವಾಹವಾದರೆ ‘ಅಲ್ಲಾಹ್’ನಿಂದ ಹೆಚ್ಚಿನ ಆಶೀರ್ವಾದ ಪ್ರಾಪ್ತವಾಗುತ್ತದೆ’ ಎಂಬ ಸಂದೇಶವನ್ನು ಜಗತ್ತಿಗೆ ಸಾರಿದರು.

    ಆಗ ತಾನೇ ಜನಿಸಿದ ಹೆಣ್ಣುಮಕ್ಕಳನ್ನು ಜೀವಂತವಾಗಿ ಹೂಳಬೇಡಿ. ಬದಲಿಗೆ, ಆ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಿ. ಅವರಿಗೂ ಬದುಕುವ ಹಕ್ಕು ಕಲ್ಪಿಸಿ ಎಂದು ಪಾಲಕರಲ್ಲಿ ಜಾಗೃತಿ ಮೂಡಿಸಿದರು. ಸಮಾಜದಲ್ಲಿ ಮಹಿಳೆಯರಿಗೆ ಅಭಿವ್ಯಕ್ತಿ ಸ್ವಾತಂತ್ರ್ಯ ಕಲ್ಪಿಸಿದರು. ಪುರುಷರಂತೆ ಅವರನ್ನು ಗೌರವಿಸಿ. ಆಸ್ತಿಯಲ್ಲಿ ಮಹಿಳೆಯರಿಗೂ ಸಮಾನವಾದ ಪಾಲು ನೀಡಿ ಎಂದು ದನಿ ಎತ್ತಿದರು. ಹೀಗೆ ಹತ್ತಾರು ಮಹತ್ವದ ಹೆಜ್ಜೆಗಳನ್ನಿಡುವ ಮೂಲಕ ಮಹಿಳೆಯರ ಮೇಲೆ ನಡೆಯುತ್ತಿದ್ದ ತಾರತಮ್ಯ ನಿವಾರಣೆಗೆ ಶ್ರಮಿಸಿದರು. ಅಂತಹ ಮಹಾ ಮಾನವತಾವಾದಿ ಮುಹಮ್ಮದ್ ಪೈಗಂಬರ್. ಅವರ ಆದರ್ಶಗಳು ನಮ್ಮೆಲ್ಲರಿಗೆ ದಾರಿ ದೀಪವಾದರೆ ಎಲ್ಲವೂ ಸಾರ್ಥಕ.

    ಮೆರವಣಿಗೆ ಬೇಡ

    ಇಂದು ಈದ್-ಮಿಲಾದ್|ಸಹಬಾಳ್ವೆಯ ಪವಿತ್ರ ಉತ್ಸವ...

    ಪ್ರತಿವರ್ಷ ಈದ್-ಮಿಲಾದ್ ಹಬ್ಬದ ದಿನದಂದು ರಾಜ್ಯದ ಹಲವೆಡೆ ಮೆರವಣಿಗೆ ನಡೆಸಲಾಗುತ್ತಿತ್ತು. ಸಾವಿರಾರು ಜನರು ಇದರಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಿದ್ದರು. ಸರ್ವಧರ್ವಿುಯರು ಭಾಗಿಯಾಗಿ ಭಾವೈಕ್ಯತೆ ಸಾರುತ್ತಿದ್ದರು. ಪ್ರವಾದಿ ಮುಹಮ್ಮದ್ ಪೈಗಂಬರ್ ಅವರ ಸಂದೇಶಗಳನ್ನು ಇಸ್ಲಾಂ ಧರ್ಮಗುರುಗಳು ಸಾರುತ್ತಿದ್ದರು. ಆದರೆ, ಕರೊನಾ ಆತಂಕದ ಹಿನ್ನೆಲೆಯಲ್ಲಿ ಈಗ ಪ್ರತಿಯೊಬ್ಬರೂ ದೈಹಿಕ ಅಂತರ ಕಾಪಾಡಿಕೊಳ್ಳಬೇಕಿದೆ. ಆರೋಗ್ಯವೇ ನಮ್ಮೆಲ್ಲರ ಆದ್ಯತೆಯಾಗಿದೆ. ಹಾಗಾಗಿ ಈ ಪರಿಸ್ಥಿತಿಯಲ್ಲಿ ಯಾರೂ ಮೆರವಣಿಗೆ ನಡೆಸಬಾರದು.

    ಮಸೀದಿ ಮತ್ತು ಮನೆಗಳಲ್ಲಿ ನಡೆಯುವ ಧಾರ್ವಿುಕ ಚಟುವಟಿಕೆಯಲ್ಲಿ ತೊಡಗಬೇಕು. ಎಂದಿನಂತೆ ಐದು ಹೊತ್ತು ನಮಾಜ್ (ಪ್ರಾರ್ಥನೆ) ಮಾಡಬೇಕು. ಕರೊನಾ ಸಂಕಷ್ಟದ ದಿನಗಳು ಬೇಗ ದೂರವಾಗಲಿ. ಕರೊನಾ ಸೋಂಕಿತರು ಗುಣಮುಖರಾಗಿ, ಎಂದಿನಂತೆ ಸಂತಸದಿಂದ ಬದುಕಲಿ ಎಂದು ‘ಅಲ್ಲಾಹ್’ನಲ್ಲಿ ಪ್ರಾರ್ಥಿಸಬೇಕು. ಪವಿತ್ರ ಗ್ರಂಥ ಕುರಾನ್ ಪಠಿಸಬೇಕು. ಆಗ, ಅಲ್ಲಾಹ್ ನಮ್ಮ ಕನಸುಗಳನ್ನು ಸಾಕಾರವಾಗಿಸುತ್ತಾನೆ. ನಮ್ಮ ತಪ್ಪುಗಳನ್ನು ಮನ್ನಿಸಿ, ಯಶಸ್ಸಿನ ಪಥದಲ್ಲಿ ಸಾಗಲು ಆಶೀರ್ವದಿಸುತ್ತಾನೆ.

    | ಹಜರತ್ ಅಕ್ಬರ್​ಬೇಗ್ ಜಮಾಲ್​ಬೇಗ್ ಮುಲ್ಲಾ ಧರ್ಮಗುರುಗಳು, ನರಗುಂದ

    ಶುಚಿತ್ವ ಕಾಪಾಡಿಕೊಳ್ಳಲು ಒತ್ತು

    ಇಂದು ಈದ್-ಮಿಲಾದ್|ಸಹಬಾಳ್ವೆಯ ಪವಿತ್ರ ಉತ್ಸವ...

    ಮಹಾಮಾರಿ ಕರೊನಾ ವೈರಸ್ ವಕ್ಕರಿಸಿದ ಹಿನ್ನೆಲೆಯಲ್ಲಿ ಜಗತ್ತೇ ಸ್ವಚ್ಛತೆ ಮಂತ್ರ ಜಪಿಸುತ್ತಿದೆ. ಕೈಗಳನ್ನು ಆಗಾಗ ತೊಳೆದುಕೊಳ್ಳುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ. ಪ್ರವಾದಿ ಮುಹಮ್ಮದ್ ಪೈಗಂಬರ್ 1,400 ವರ್ಷಗಳ ಹಿಂದೆಯೇ ಸ್ವಚ್ಛತೆ ಸಂದೇಶ ಸಾರಿದ್ದಾರೆ. ಇದೇ ಕಾರಣಕ್ಕೆ ನಿತ್ಯ ಐದು ಹೊತ್ತು ನಮಾಜ್(ಪ್ರಾರ್ಥನೆ) ಮಾಡುವ ಮುನ್ನ, ಮುಸ್ಲಿಮರು ‘ವಝುೂ’ ಮಾಡಿಕೊಳ್ಳುತ್ತಾರೆ. ಪ್ರಸ್ತುತ ಕಾಲಘಟ್ಟದಲ್ಲಂತೂ ಪ್ರತಿಯೊಬ್ಬರೂ ಶುಚಿತ್ವಕ್ಕೆ ಇನ್ನಷ್ಟು ಒತ್ತು ನೀಡಬೇಕು. ಆಗ ಶರೀರದ ಜತೆಗೆ, ಮನಸ್ಸು ಶುದ್ಧವಾಗುತ್ತದೆ.

    ಅಲ್ಲದೆ, ಈದ್-ಮಿಲಾದ್ ಆಚರಣೆ ವೇಳೆ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು. ಜನರಿಂದ ದೈಹಿಕ ಅಂತರ ಕಾಪಾಡಿಕೊಳ್ಳಬೇಕು. ಫ್ಯಾಷನ್ ಗೀಳಿನಿಂದ ಹೊರಬರಬೇಕು. ವರ್ಷದಲ್ಲಿ ಒಂದು ದಿನ ಸಂಭ್ರಮದಿಂದ ಈದ್- ಮಿಲಾದ್ ಆಚರಿಸಿದರೆ ಸಾಲದು. ಬದಲಿಗೆ, ಪ್ರವಾದಿ ಮುಹಮ್ಮದ್ ಪೈಗಂಬರ್ ತತ್ತ್ವಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡು, ನಿತ್ಯವೂ ಹಬ್ಬ ಆಚರಿಸುವಂತಾಗಬೇಕು. ಸರ್ವಧರ್ಮಗಳ ಜನರೊಂದಿಗೆ ಸಹಬಾಳ್ವೆಯಿಂದ ಬಾಳುತ್ತ, ಅಲ್ಲಾಹ್​ನ ಆಜ್ಞೆಯನ್ನು ಕಟ್ಟುನಿಟ್ಟಾಗಿ ಪಾಲಿಸುತ್ತ ಸನ್ಮಾರ್ಗದಲ್ಲಿ ಸಾಗುವುದಾಗಿ ಹಬ್ಬದ ದಿನದಂದೇ ಸಂಕಲ್ಪ ತೊಡಬೇಕು.

    | ಹಜರತ್ ಅಬ್ದುಲ್ ವಹಾಬ್​ಸಾಬ್ ಖಾಝಿ ಅಲ್ ಮಝಾಹಿರಿ ಧರ್ಮಗುರುಗಳು, ಬೀಳಗಿ, ಬಾಗಲಕೋಟೆ

    ಬಡವರ ಹಸಿವು ನೀಗಿಸಿ

    ಇಂದು ಈದ್-ಮಿಲಾದ್|ಸಹಬಾಳ್ವೆಯ ಪವಿತ್ರ ಉತ್ಸವ...

    ಪ್ರತಿ ವರ್ಷ ಈದ್-ಮಿಲಾದ್ ಹಬ್ಬವನ್ನು ಸಡಗರದಿಂದ ಆಚರಿಸುತ್ತಿದ್ದೆವು. ಹಬ್ಬದ ಆಚರಣೆಗಾಗಿ ಸಾವಿರಾರು ರೂ. ವ್ಯಯಿಸುತ್ತಿದ್ದೆವು. ಈಗ ನಾವೆಲ್ಲ ಕರೊನಾ ಸಂಕಷ್ಟ ಕಾಲದಲ್ಲಿದ್ದೇವೆ. ನಾವು ಸುರಕ್ಷಿತವಾಗಿರುವ ಜತೆಗೆ, ಸಂಕಷ್ಟದಲ್ಲಿ ಇರುವವರಿಗೆ ನೆರವಾಗುವುದು ಇಂದಿನ ತುರ್ತು ಅಗತ್ಯ.

    ಕಷ್ಟದಲ್ಲಿರುವ ಬಡವರಿಗೆ ಆರ್ಥಿಕ ನೆರವು ನೀಡಬೇಕು ಎಂಬುದು ಇಸ್ಲಾಂ ಧರ್ಮದ ಆಶಯವೂ ಹೌದು. ‘ತನ್ನ ನೆರೆ ಮನೆಯವನು ಹಸಿದ ಹೊಟ್ಟೆಯಲ್ಲಿ ಮಲಗಿರುವಾಗ ಸತ್ಯವಿಶ್ವಾಸಿಯಾದವನು ತಾನು ಹೊಟ್ಟೆ ತುಂಬ ಊಟ ಮಾಡಿ ಮಲಗುವುದಿಲ್ಲ’ ಎಂದು ಪ್ರವಾದಿ ಮುಹಮ್ಮದ್ ಪೈಗಂಬರ್ ಹೇಳಿದ್ದಾರೆ. ಇದನ್ನು ಪಾಲಿಸಿ, ನಮ್ಮ ಬದುಕು ಸಾರ್ಥಕವಾಗಿಸಿಕೊಳ್ಳಬೇಕು. ಬಡವರಿಗೆ ನೆರವಾಗುವ ಕಾಯಕದಲ್ಲೇ ನಮ್ಮ ಖುಷಿ ಕಾಣಬೇಕು.

    ಕರೊನಾ ಹಿನ್ನೆಲೆಯಲ್ಲಿ ಎಷ್ಟೋ ಕುಟುಂಬಗಳೀಗ ಬೀದಿಗೆ ಬಂದಿವೆ. ಹಬ್ಬಕ್ಕೆ ವ್ಯಯಿಸುತ್ತಿದ್ದ ಹಣವನ್ನು ಅಂತಹವರಿಗೆ ನೀಡಿ ಮಾನವೀಯತೆ ಮೆರೆಯಬೇಕು. ಮನೆಯಲ್ಲಿ ತಯಾರಿಸಿದ ಅಡುಗೆಯನ್ನು ಬಡವರಿಗೂ ಹಂಚಿ ಹಸಿವು ನೀಗಿಸಬೇಕು. ಕರೊನಾ ಮಹಾಮಾರಿಯಿಂದ ಎಲ್ಲರನ್ನೂ ಪಾರಾಗಿಸುವಂತೆ ಸರ್ವಶ್ರೇಷ್ಠ ‘ಅಲ್ಲಾಹ್’ನಲ್ಲಿ ಭಕ್ತಿಯಿಂದ ಪ್ರಾರ್ಥಿಸಬೇಕು. ಮುಹಮ್ಮದ್ ಪೈಗಂಬರ್ ಹಾಕಿಕೊಟ್ಟ ಸನ್ಮಾರ್ಗದಲ್ಲಿ ಸಾಗುವ ಮೂಲಕ ಸಮಾಜಕ್ಕೆ ‘ನಾವೆಲ್ಲರೂ ಒಂದೇ’ ಎನ್ನುವ ಸಂದೇಶ ಸಾರಬೇಕು.

    |ಖಾರಿ ಜಾಕೀರ್​ಹುಸೇನ್ ಆರೀಫ್ ಖಾನ್ ಧರ್ಮಗುರುಗಳು, ಬೆಳಗಾವಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts