More

    ತಂಬಾಕುಮುಕ್ತ ಅಪಾರ್ಟ್‌ಮೆಂಟ್, ಪೈಲಟ್ ಯೋಜನೆಗೆ ಉಡುಪಿ ಜಿಲ್ಲೆ ಆಯ್ಕೆ

    ಉಡುಪಿ: ದೇಶದಲ್ಲಿ ಕಂಡುಬರುವ ಶೇ.27ರಷ್ಟು ಕ್ಯಾನ್ಸರ್ ಪ್ರಕರಣಗಳಿಗೆ ತಂಬಾಕು ಬಳಕೆ ಪ್ರಮುಖ ಕಾರಣ. ಕ್ಯಾನ್ಸರ್‌ನಿಂದ 10 ಲಕ್ಷ ಮಂದಿ ಮೃತಪಟ್ಟರೆ, ಆ ಪೈಕಿ 2 ಲಕ್ಷ ಜನರ ಸಾವಿಗೆ ತಂಬಾಕು ಬಳಕೆಯೇ ಕಾರಣ. ಹೀಗಾಗಿ ಜನರಲ್ಲಿ ಜಾಗೃತಿ ಮೂಡಿಸಿ ತಂಬಾಕು ಉತ್ಪನ್ನಗಳನ್ನು ಸೇವಿಸದಂತೆ ತಡೆಯುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯನ್ನಿಟ್ಟಿದೆ.

    ನೂರಾರು ಕುಟುಂಬಗಳು ಒಂದೇ ಕಡೆ ವಾಸಿಸುವ ವಸತಿ ಸಮುಚ್ಚಯಗಳನ್ನು ಗುರುತಿಸಿ ‘ತಂಬಾಕುಮುಕ್ತ ಅಪಾರ್ಟ್‌ಮೆಂಟ್’ ಆಗಿ ಪರಿವರ್ತಿಸುವ ಗುರಿಯನ್ನು ಈ ಯೋಜನೆ ಹೊಂದಿದೆ. ರಾಜ್ಯದಲ್ಲಿ ಈ ಪೈಲಟ್ ಯೋಜನೆ ಜಾರಿಗೆ ಉಡುಪಿ ಜಿಲ್ಲೆ ಆಯ್ಕೆಯಾಗಿದೆ.

    ಉಡುಪಿ-ಮಣಿಪಾಲದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ವಲಸೆ ಬಂದ ಕುಟುಂಬಗಳು, ವಿದ್ಯಾರ್ಥಿಗಳು, ನೌಕರರು ವಾಸ ಮಾಡುತ್ತಿದ್ದಾರೆ. ಇಲ್ಲಿನ ಯಾವುದೇ ಸಮುಚ್ಚಯಗಳಲ್ಲಿ ತಂಬಾಕು ಮತ್ತು ಧೂಮಪಾನ ಮುಕ್ತಗೊಳಿಸುವ ಚಟುವಟಿಕೆ ನಡೆದಿಲ್ಲ. ಆದ್ದರಿಂದ ಈ ಭಾಗದ ವಸತಿ ಸಮುಚ್ಚಯಗಳನ್ನು ತಂಬಾಕುಮುಕ್ತ ಮಾಡುವ ಪೈಲಟ್ ಯೋಜನೆ ರೂಪಿಸಲಾಗುತ್ತಿದೆ.

    ಅದು ಯಶಸ್ವಿಯಾದಲ್ಲಿ ಈ ಯೋಜನೆಯನ್ನು ರಾಜ್ಯಕ್ಕೆ ವಿಸ್ತರಿಸುವ ಆಶಯವಿದೆ. ಉಡುಪಿ ಜಿಲ್ಲಾ ಸರ್ವೇಕ್ಷಣಾ ಘಟಕದಿಂದ ಪ್ರಾಯೋಗಿಕ ಯೋಜನೆ ಅನುಷ್ಠಾನಗೊಳ್ಳಲಿದ್ದು, ವಸತಿ ಸಮುಚ್ಚಯಗಳ ಸಮೀಕ್ಷೆ ಮತ್ತು ಯೋಜನೆ ಅನುಷ್ಠಾನಕ್ಕೆ ಪೂರ್ವ ಸಿದ್ಧತೆ ಕೈಗೊಳ್ಳಲಾಗಿದೆ.

    ವಸತಿ ಸಮುಚ್ಚಯಗಳಲ್ಲಿ ತಂಬಾಕು ಉತ್ಪನ್ನ ಬಳಸುವುದನ್ನು ಅಲ್ಲಿನ ನಿವಾಸಿಗಳೇ ಸ್ವಯಂ ಪ್ರೇರಣೆಯಿಂದ ನಿರ್ಬಂಧಿಸಿ ತಂಬಾಕುಮುಕ್ತ ವಸತಿ ಸಮುಚ್ಚಯವನ್ನಾಗಿ ನಿರ್ಮಿಸಬಹುದಾದ ಯೋಜನೆಗೆ ಪ್ರಾಯೋಗಿಕ ಚಾಲನೆ ನೀಡಲಾಗುತ್ತಿದೆ.

    ಈ ಗ್ರಾಮಗಳಲ್ಲಿಲ್ಲ ತಂಬಾಕು ಬಳಕೆ: ಉಡುಪಿ ತಾಲೂಕಿನ ಕೋಡಿಬೆಂಗ್ರೆ ಗ್ರಾಮವನ್ನು ಈಗಾಗಲೇ ತಂಬಾಕುಮುಕ್ತ ಗ್ರಾಮವನ್ನಾಗಿ ಘೋಷಣೆ ಮಾಡಲಾಗಿದೆ. ಇದೀಗ ಕಾರ್ಕಳದ ರೆಂಜಾಳ ಮತ್ತು ಕುಂದಾಪುರದ ಕೊರ್ಗಿ ಗ್ರಾಮಗಳನ್ನು ತಂಬಾಕುಮುಕ್ತ ಮಾಡುವ ನಿಟ್ಟಿನಲ್ಲಿ ಜಿಲ್ಲಾಡಳಿತ ಕಾರ್ಯಪ್ರವೃತ್ತ ವಾಗಿದೆ.

    ಸ್ವಯಂಪ್ರೇರಣೆಯಿಂದ ನಿಲ್ಲಿಸಲು ಪ್ರೋತ್ಸಾಹ: ತಂಬಾಕು ಮತ್ತು ಧೂಮಪಾನ ಉತ್ಪನ್ನಗಳ ನೇರ ಸೇವನೆಯಿಂದ ಮೃತಪಡುವವರಿಗಿಂತ ಬಳಕೆದಾರರ ಕುಟುಂಬದವರು ಮತ್ತು ಸಮೀಪವರ್ತಿಗಳೇ ಹೆಚ್ಚಿನ ಸಂಖ್ಯೆಯಲ್ಲಿ ಮೃತಪಡುತ್ತಾರೆ ಎಂದು ಸಂಶೋಧನೆಗಳಿಂದ ತಿಳಿದುಬಂದಿದೆ. ಇದನ್ನು ತಪ್ಪಿಸಲು ತಂಬಾಕು ಮತ್ತು ಧೂಮಪಾನ ಬಳಕೆ ವಿರುದ್ಧ ಹಲವು ನಿರ್ಬಂಧಗಳನ್ನು ಸರ್ಕಾರ ವಿಧಿಸಿದ್ದರೂ ನಿರೀಕ್ಷಿತ ಪ್ರಮಾಣದಲ್ಲಿ ಯಶಸ್ಸು ಲಭಿಸುತ್ತಿಲ್ಲ.

    ಹೀಗಾಗಿ ಜನರೇ ಸ್ವಯಂಪ್ರೇರಣೆಯಿಂದ ತಂಬಾಕು ಬಳಕೆ ನಿಲ್ಲಿಸಲು ಪ್ರೋತ್ಸಾಹ ನೀಡಲಾಗುತ್ತದೆ. ಈ ಯೋಜನೆಯಿಂದ ವಸತಿ ಸಮುಚ್ಚಯಗಳಲ್ಲಿ ವಾಸಿಸುವವರಿಗೆ ಧೂಮಪಾನ ರಹಿತ ಶುದ್ಧಗಾಳಿಯ ಸೇವನೆ ಜತೆಗೆ ಆರೋಗ್ಯವಂತ ಜೀವನ ನಡೆಸಲು ಅನುವು ಮಾಡಿಕೊಡಲು ತಂಬಾಕುಮುಕ್ತ ವಸತಿ ಸಮುಚ್ಚಯ ನಿರ್ಮಾಣವಾಗಲಿದೆ. ತಂಬಾಕುಮುಕ್ತ ವಸತಿ ಸಮುಚ್ಚಯಗಳನ್ನು ನಿರ್ಮಿಸಲು ಈಗಾಗಲೇ ಅಲ್ಲಿನ ನಿವಾಸಿಗಳ ಸರ್ವೇ ನಡೆಸಲಾಗಿದೆ. ಫ್ಲಾೃಟ್‌ನಲ್ಲಿ ಧೂಮಪಾನ ಮತ್ತು ತಂಬಾಕು ಬಳಸುವವರ ಮತ್ತು ಬಳಸದವರ ಪಟ್ಟಿ ತಯಾರಿಸಲಾಗುತ್ತಿದೆ. ಮನೆಯನ್ನು ಧೂಮಪಾನದಿಂದ ಮುಕ್ತಗೊಳಿಸುವ ಬಗ್ಗೆ ಅರಿವು ಮೂಡಿಸುವ ಕಾರ್ಯ ನಡೆಯುತ್ತ್ತಿದೆ.

    ಈ ಬಗ್ಗೆ ವಿಜಯವಾಣಿಗೆ ಮಾಹಿತಿ ನೀಡಿದ ಉಡುಪಿ ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ನಾಗರತ್ನ, ಜಿಲ್ಲೆಯ ಎಲ್ಲ ಸರ್ಕಾರಿ ಕಚೇರಿಗಳನ್ನು ತಂಬಾಕುಮುಕ್ತ ಕಚೇರಿಗಳೆಂದು ಘೋಷಿಸಲು ಕ್ರಮ ಕೈಗೊಂಡು ದೃಢೀಕರಣ ಪತ್ರ ಪಡೆಯಲು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ತಿಳಿಸಲಾಗಿದೆ. ರಾಜ್ಯ ಸರ್ಕಾರ ಸೂಚಿಸಿರುವ ತಂಬಾಕುಮುಕ್ತ ವಸತಿ ಸಮುಚ್ಚಯದ ಪೈಲಟ್ ಯೋಜನೆಗೆ ಉಡುಪಿ ಜಿಲ್ಲೆ ಆಯ್ಕೆಯಾಗಿದ್ದು, ಯೋಜನೆ ಅನುಷ್ಠಾನಕ್ಕೆ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಹೇಳಿದ್ದಾರೆ.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts